ಗ್ರಾಮೀಣ ಸೊಗಡಿನ ಸ್ನೇಹ , ಪ್ರೀತಿ , ಕೌಟುಂಬಿಕ ಕಥಾನಕ… “ಹುಲಿಬೀರ” (ಚಿತ್ರವಿಮರ್ಶೆ -ರೇಟಿಂಗ್ : 3.5 /5)

Spread the love

ರೇಟಿಂಗ್ : 3.5 /5
ಚಿತ್ರ : ಹುಲಿಬೀರ
ನಿರ್ದೇಶಕ : ಮದರಂಗಿ ಮಲ್ಲಿಕಾರ್ಜುನ
ನಿರ್ಮಾಪಕರು : ದಾವಲ ಸಾಹೇಬ, ಅಶೋಕ್ ಎನ್ , ಸುಜಾತ ಗಿರೀಶ್
ಸಂಗೀತ : ವೀರಸಮರ್ಥ
ಛಾಯಾಗ್ರಹಣ : ಸನಾತನ
ತಾರಾಗಣ: ರೂರಲ್ ಹೀರೋ ಅಂಜನ್, ಚೈತ್ರ ತೋಟದ, ವನು ಪಾಟೀಲ್, ರಂಗಾಯಣ ರಘು, ಮಲ್ಲು ರಾಜೇಂದ್ರ ಕಾರಂತ್, ಸಂತೋಷ್ ಕೇರಿ, ರೇವಣ್ಣ ಹಾಗೂ ಮುಂತಾದವರು…

ಸಂಪೂರ್ಣ ಉತ್ತರ ಕರ್ನಾಟಕದ ಗ್ರಾಮೀಣ ಸೊಗಡಿನ ಬದುಕು , ಬವಣೆಯ ನೋವು , ಖುಷಿ , ಗೆಳೆತನ, ದ್ವೇಷ , ಮೋಸ ಪ್ರೀತಿಯ ನಡುವೆ ದೈವ್ಯಾಚರಣೆ ,ಸಂಬಂಧಗಳ ಮೌಲ್ಯ , ಮನುಷ್ಯತ್ವದ ರೂಪಕವಾಗಿ ದಿನನಿತ್ಯ ಕಾಣುವ ಕಥಾವಸ್ತುವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಹುಲಿಬೀರ”.

ಹುಲಿ ಗುಡ್ಡದ ತಪ್ಪಲಿನಲ್ಲಿರುವ ಗ್ರಾಮದ ಜನರು ತಾವಾಯಿತು ತಮ್ಮ ಬದುಕು ಎನ್ನುತ್ತಾ ಸಾಗುತ್ತಾರೆ. ಇದರ ನಡುವೆ ಬಾಲ್ಯದಿಂದಲೂ ವಿದ್ಯೆಗೆ ನೈವೇದ್ಯ ಹೇಳುತ್ತಾ ಹುಡುಗರ ಜೊತೆ ಆಟವಾಡುತ್ತಾ ಬೆಳೆಯುವ ಬೀರ ಹುಡುಗಿಯ ಸಹವಾಸಕ್ಕೆ ಮನೆಯವರ ಕೈಯಲ್ಲಿ ಒದೆ ತಿನ್ನುತ್ತಾನೆ.ಇನ್ನೂ 25 ಎಕ್ಕರೆ ಇದ್ದ ಮನೆಯ ಹಿರಿಯ ಜೀವ ಬೀರಪ್ಪ (ರಂಗಾಯಣ ರಘು) ತನ್ನ ತಂಗಿ ಮಗ ಬಸಪ್ಪ (ರಾಜೇಂದ್ರ ಕಾರಂತ್) ನಿಂದ ಮೋಸ ಹೋಗಿದ್ದರು ಮಗ , ಸೊಸೆ ಸಂಬಂಧಿಕರ ಜೊತೆ ನೆಮ್ಮದಿ ಬದುಕು ನಡೆಸುತ್ತಾರೆ.

ಇವರ ನಡುವೆ ಸಂಬಂಧಿಕರ ಮಕ್ಕಳು ಓದಿ ವಿದ್ಯಾವಂತರ ಹಾದಿ ಹಿಡಿದರೆ , ಮೊಮ್ಮಗ ಬೀರ ( ಅಂಜನ್) ಮಾತ್ರ ಊರಿನ ಜನರಿಗೆ ಸಹಾಯ ಮಾಡುತ್ತಾ ಹುಲಿಯಂತೆ ಓಡಾಡಿಕೊಂಡು ಕಾಲ ಕಳೆಯುತ್ತಾನೆ. ಇದರ ನಡುವೆ ಮಾವನ ಮಗಳು ಶೈಲು ( ಚೈತ್ರ ತೋಟದ) ಗೂ ಬೀರನ ಕಂಡರೆ ಪ್ರೀತಿ.

ಇದರ ನಡುವೆ ಜಿಲ್ಲಾ ಪಂಚಾಯತಿಯಲ್ಲಿ ಚೇರ್ಮನ್ ಕೈಗೊಂಬೆಯಂತೆ ಅಧಿಕಾರಿಗಳು ಕೆಲಸ ಮಾಡುತ್ತಾ ಜನರಿಗೆ ಸಿಗಬೇಕಾದ ಸೌಲಭ್ಯ ನುಂಗಿ ಹಾಕುತ್ತಾರೆ. ಇನ್ನು ಕುರಿ ಮೈಸಿಕೊಂಡು ತನ್ನ ಗೆಳೆಯರೊಟ್ಟಿಗೆರುವ ಬೀರ ನಿಗೆ ಈ ವಿಚಾರ ತಿಳಿದು , ಪ್ರಶ್ನಿಸಲು ಮುಂದಾದಾಗ ಮಾತಿನ ಚಿಕ್ಕಮಕಿ ನಡುವೆ ಹೊಡೆದಾಟಕ್ಕೆ ಕಾರಣವಾಗುತ್ತದೆ. ಮುಂದೆ ಒಂದೊಂದೇ ಸಮಸ್ಯೆ ಎದುರಾಗಿ ಕುಟುಂಬದಲ್ಲೂ ಪ್ರೀತಿಸುವ ಹುಡುಗಿ ದೂರವಾಗುವಂತಹ ಸ್ಥಿತಿ ಎದುರಾಗುತ್ತದೆ.

ವಿದ್ಯೆ ಇಲ್ಲದ ಬೀರ ಪ್ರೀತಿ , ವಿಶ್ವಾಸ , ಮಾನವೀಯತೆಯಲ್ಲಿ ಸದಾ ಮುಂದಾಗಿ ಕಾಣುತ್ತಾನೆ. ಸರಿ ತಪ್ಪು ಅರಿವಾಗುವ ಹಾದಿಯಲ್ಲಿ ಬದುಕು ಬೇರೆಯದೆ ದಾರಿಯನ್ನ ತಿಳಿಸುತ್ತಾ ಸಾಗುತ್ತದೆ. ಬೀರ ಎದುರಿಸುವ ಸಮಸ್ಯೆ ಏನು… ಯಾರ ಪ್ರೀತಿ ಬೀರ ನಿಗೆ ಸಿಗುತ್ತೆ… ಜನರ ಕಷ್ಟಕ್ಕೆ ಪರಿಹಾರ ಸಿಗುತ್ತಾ… ಕ್ಲೈಮಾಕ್ಸ್ ಹೇಳುವ ಉತ್ತರ ಏನು… ಇದಕ್ಕೆಲ್ಲ ಉತ್ತರ ಒಮ್ಮೆ ನೀವು ಚಿತ್ರವನ್ನು ನೋಡಬೇಕು.

ನಿರ್ದೇಶಕ ಮಲ್ಲಿಕಾರ್ಜುನ್ ಕಥಾವಸ್ತುವಿನಲ್ಲಿ ಜನರ ಬದುಕು , ಬವಣೆ , ಜಿಲ್ಲಾ ಪಂಚಾಯತಿನ ಅವ್ಯವಹಾರ , ಜನಸಾಮಾನ್ಯರಿಗೆ ಸಿಗಬೇಕಾದ ಸೌಲಭ್ಯ ಸೇರಿದಂತೆ ಒಂದಷ್ಟು ಸೂಕ್ಷ್ಮ ಅಂಶದ ಜೊತೆಗೆ ಸಂಬಂಧ , ಪ್ರೀತಿ , ಸ್ನೇಹದ ಸುತ್ತ ಗ್ರಾಮೀಣ ಸೊಗಡನ್ನ ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದು, ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತ ಮಾಡಬೇಕಿತ್ತು ಅನಿಸುತ್ತದೆ.

ಆದರೂ ಕ್ಲೈಮಾಕ್ಸ್ ಸನ್ನಿವೇಶ ಚಿತ್ರದ ಹೈಲೈಟ್ ಎನ್ನುವಂತಿದೆ. ಇಂತಹ ಹಳ್ಳಿ ಸೊಗಡಿನ ಚಿತ್ರಕ್ಕೆ ಬಂಡವಾಳ ಹಾಕಿರುವ ನಿರ್ಮಾಪಕರ ಧೈರ್ಯ ಮೆಚ್ಚಲೇಬೇಕು , ಚಿತ್ರದ ಸಂಗೀತ , ಹಿನ್ನೆಲೆ ಸಂಗೀತ ಉತ್ತಮವಾಗಿದೆ. ಛಾಯಾಗ್ರಾಹಕರ ಕೈಚಳಕ ಅಚ್ಚುಕಟ್ಟಾಗಿದೆ. ತಾಂತ್ರಿಕವಾಗಿ ಇನ್ನಷ್ಟು ಶ್ರಮ ಬೇಕಿತ್ತು ಅನಿಸುತ್ತದೆ.

ಇನ್ನು ನಾಯಕ ನಟ ಅಂಜನ್ ತಮ್ಮ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಲು ಶ್ರಮ ಪಟ್ಟಿದ್ದಾರೆ. ಹಾಗೆಯೇ ಕ್ಲೈಮಾಕ್ಸ್ ನಲ್ಲಿ ಬರುವ ದೈವಶಕ್ತಿಯ ದೃಶ್ಯ ಅದ್ಭುತವಾಗಿ ನಿಭಾಯಿಸಿದ್ದಾರೆ. ಎಂದಿನಂತೆ ಹಿರಿಯ ನಟ ರಂಗಾಯಣ ರಘು ಮನೆಯ ಹಿರಿಜೀವದ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿ ಎಲ್ಲರೂ ಗಮನ ಸೆಳೆದಿದ್ದಾರೆ.

ಇನ್ನು ನಾಯಕನ ತಾಯಿಯ ಪಾತ್ರ ಮಾಡಿರುವವರು ಕೂಡ ಪಾತ್ರದಲ್ಲಿ ಜೀವಿಸಿದ್ದಾರೆ. ನಾಯಕಿಯರು ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿ ಅಭಿನಯಿಸಿದ್ದಾರೆ. ಒಟ್ಟಾರೆ ಸೆಂಟಿಮೆಂಟ್ , ಮನರಂಜನೆಯ ಜತೆಗೆ ಒಂದೊಳ್ಳೆ ಮೆಸೇಜ್ ಇರುವ ಈ ಚಿತ್ರವನ್ನು ಕುಟುಂಬ ಸಮೇತ ಕುಳಿತು ನೋಡಬಹುದು.

 

 

Visited 1 times, 1 visit(s) today
error: Content is protected !!