50ರ ಸಂಭ್ರಮದಲ್ಲಿ “ಅಯೋಗ್ಯ 2” ಚಿತ್ರತಂಡ.

Spread the love

ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ ಅಯೋಗ್ಯ 2 ಚಿತ್ರ 50 ದಿನಗಳನ್ನು ಪೂರೈಸಿದೆ. ಭರ್ಜರಿ ಓಪನಿಂಗ್ ಪಡೆದುಕೊಳ್ಳುವ ಮೂಲಕ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ‘ಅಯೋಗ್ಯ’, ಇದೀಗ ಕರ್ನಾಟಕದ ಸುಮಾರು 25ಕ್ಕೂ ಅಧಿಕ ಚಿತ್ರಮಂದಿರಗಳು ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನ ಕಂಡಿದೆ.

ಜನರು ಥಿಯೇಟರ್‌ನತ್ತ ಮುಖವೇ ಹಾಕುತ್ತಿಲ್ಲ ಎನ್ನುವ ಹೊತ್ತಿನಲ್ಲಿ ಜನರನ್ನು ಚಿತ್ರಮಂದಿರದೆಡೆಗೆ ಸೆಳೆದ ಈ ಸಿನಿಮಾಕ್ಕೆ ಈಗಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮೂಲಕ ಈ ವರ್ಷದ ಮೊದಲ 50ನೇ ದಿನ ಪೂರೈಸಿದ ಸಿನಿಮಾ ಎಂಬ ಖುಷಿಯಲ್ಲಿದೆ ಚಿತ್ರತಂಡ.

50 ದಿನಗಳನ್ನು ಪೂರೈಸಿದ ಖುಷಿಯಲ್ಲಿ ಮೈಸೂರಿನ ಲಿಡೋ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಹಾಗೂ ಅಭಿಮಾನಿಗಳೊಂದಿಗೆ ಸಂಭ್ರಮಿಸಿದ ನಟ ನೀನಾಸಂ ಸತೀಶ್, ನಿರ್ದೇಶಕ ಮಹೇಶ್ ಕುಮಾರ್ ಹಾಗೂ ಚಿತ್ರತಂಡ, ಕೇಕ್ ಕತ್ತರಿಸಿ ಖುಷಿ ಹಂಚಿಕೊಂಡರು.

‘ಸದ್ಯದ ಪರಿಸ್ಥಿತಿಯಲ್ಲಿ ಒಂದೆರಡು ವಾರ ಥಿಯೇಟರ್‌ನಲ್ಲಿ ಸಿನಿಮಾ ಉಳಿಯುವುದೇ ದೊಡ್ಡ ಸಾಹಸದ ಕೆಲಸ. ಹೀಗಿದ್ದೂ ನಮ್ಮ ಸಿನಿಮಾ ಬರೋಬ್ಬರಿ 50 ದಿನಗಳ ಪ್ರದರ್ಶನ ಕಾಣಲು ಸಹಕಾರಿಯಾದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ಆದಷ್ಟು ಬೇಗ ‘ಅಯೋಗ್ಯ-3’ ಮೂಲಕ ನಿಮ್ಮ ಮುಂದೆ ಬರುವ ಆಲೋಚನೆಯಿದೆ’ ಎನ್ನುತ್ತಾರೆ ಸತೀಶ್ ನೀನಾಸಂ. ಎಸ್.ವಿ.ಸಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎಂ.ಮುನೇಗೌಡ ನಿರ್ಮಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ರವಿಚಂದ್ರನ್, ರವಿಶಂಕರ್, ಸಾಧುಕೋಕಿಲ, ಶಿವರಾಜ್ ಕೆ.ಆರ್ ಪೇಟೆ, ಅರುಣಾ ಬಾಲರಾಜ್, ಗಿರಿ ಶಿವಣ್ಣ ಮುಂತಾದವರು ಈ ಚಿತ್ರದ ತಾರಾಗಣದಲ್ಲಿದ್ದಾರೆ.

Visited 1 times, 1 visit(s) today
error: Content is protected !!