ಚಿತ್ರರಂಗದ ಸುತ್ತ ನಡೆಯೋ ಕಥೆ “18 ಎಕರೆ ಸಿನಿಮಾ ಲಕ್ಕಪ್ಪ”
ಈ ಹಿಂದೆ ಗಾಯತ್ರಿ, ಪ್ರೀತಿಯ ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ ವಿ.ಕುಮಾರ್ (ರಾಘವ ವಿನೋದ್ ಕುಮಾರ್) ,ಅವರೀಗ ಸದ್ದಿಲ್ಲದೆ ಮತ್ತೊಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ಆ ಚಿತ್ರದ ಹೆಸರು ’18 ಎಕ್ರೆ ಸಿನಿಮಾ ಲಕ್ಕಪ್ಪ’.

ಚಿತ್ರರಂಗದಲ್ಲಿ ತೆರೆಯ ಹಿಂದೆ ನಡೆಯುವ ಒಂದಷ್ಟು ಸತ್ಯಘಟನೆಗಳನ್ನು ಈ ಸಿನಮಾ ಮೂಲಕ ಹೇಳಹೊರಟಿದ್ದಾರೆ. ಸಿನಿಮಾರಂಗಕ್ಕೆ ಹೊಸದಾಗಿ ಬರೋ ನಾಯಕ, ನಾಯಕಿಯರ ಅನುಭವಗಳು, ಪ್ರೊಡಕ್ಷನ್ ಅನುಭವ ಇಲ್ಲದೆ ಚಿತ್ರರಂಗಕ್ಕೆ ಬರುವ ನಿರ್ಮಾಪಕರರನ್ನು ಮ್ಯಾನೇಜರ್ ಗಳು ಹೇಗೆಲ್ಲಾ ನಂಬಿಸಿ ಯಾಮಾರಿಸುತ್ತಾರೆ, ಕಲಾವಿದರಿಗೂ, ಜೀವನಕ್ಕೂ ‘ಸಿನಿಮಾ’ ಎನ್ನುವುದು ಕನ್ನಡಿ ಇದ್ದಹಾಗೆ ಎಂಬುದನ್ನು ಈ ಚಿತ್ರದ ಮೂಲಕ ಹೇಳೋ ಪ್ರಯತ್ನ ಮಾಡಿದ್ದಾರೆ. ಮಂಡ್ಯ, ಕೀಲಾರ, ಬೆಂಗಳೂರು, ಸಕಲೇಶಪುರ ಹಾಗೂ ಶ್ರವಣಬೆಳಗೊಳದ ಸುತ್ತಮುತ್ತ 45 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಕುಮಾರ್ ಮೂವೀಸ್ ಅಡಿ ದಯಾನಂದ್ ಕೆ, ಸುಬ್ರಮಣಿ ರಾಮಗೊಂಡನಹಳ್ಳಿ ಅಲ್ಲದೆ ಒಂದಷ್ಟು ಸ್ನೇಹಿತರೇ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿ.ಕುಮಾರ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ತಸೀ ರಂಗರಾಜನ್ ಅವರ ಸಂಗೀತ, ಅರುಣ್ ಅವರ ಕ್ಯಾಮೆರಾ, ದುರ್ಗಾಪ್ರಸಾದ್ ಅವರ ಸಂಕಲನ “18 ಎಕರೆ ಸಿನಿಮಾ ಲಕ್ಕಪ್ಪ”
ಚಿತ್ರಕ್ಕಿದೆ. ಈಗಾಗಲೇ ಚಿತ್ರಿಕರಣ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರಕ್ಕೆ ಸೆನ್ಸಾರ್ ನಿಂದ ಯು/ಎ ಸರ್ಟಿಫಿಕೇಟ್ ಕೂಡ ದೊರೆತಿದೆ.

ವಿಭಿನ್ನ ಟೈಟಲ್ ಜತೆಗೆ ಗಾಂಧಿನಗರದಲ್ಲಿ ನಡೆಯುತ್ತಿರುವ ಘಟನೆಗಳನ್ನೇ ಇಟ್ಟುಕೊಂಡು ನಿರ್ಮಿಸಲಾದ “18 ಎಕರೆ ಸಿನಿಮಾ ಲಕ್ಕಪ್ಪ” ಚಿತ್ರವನ್ನು ಮುಂದಿನ ತಿಂಗಳು ರಿಲೀಸ್ ಮಾಡೋ ಯೋಜನೆಯಿದೆ ಎಂದು ನಿರ್ದೇಶಕ ವಿ.ಕುಮಾರ್ ಅವರು ಹೇಳಿದ್ದಾರೆ. ಇನ್ನು “18 ಎಕರೆ ಸಿನಿಮಾ ಲಕ್ಕಪ್ಪ” ಚಿತ್ರದಲ್ಲಿ ಹರಿಚೇತು, ಸಂಜನಾ ನಾಯ್ಡು ಪ್ರಮುಖ ಪಾತ್ರಗಳಲ್ಲಿದ್ದು, ಉಳಿದಂತೆ ಸಂಗೀತ, ಸುಬ್ರಮಣಿ, ರಾಜಶೇಖರ, ದಯಾನಂದ, ಸತ್ಯಸಾಮ್ರಾಟ್, ಲಿಂಗೇಶ್, ನಯನಕೃಷ್ಣ ಮುಂತಾದವರು ನಟಿಸಿದ್ದಾರೆ. ಅಲ್ಲದೆ ಮೋಹನ್ ಜುನೇಜಾ, ದುಬೈ ರಫೀಕ್ ಅವರ ಕೊನೆಯ ಚಿತ್ರವೂ ಇದಾಗಿದೆ.