Cini NewsSandalwood

ವೀರ ಮದಕರಿ ಬಾಲನಟಿ ಈಗ ನಾಯಕಿ.. ಸ್ಮೈಲ್ ಗುರು ರಕ್ಷಿತ್ ಗೆ ಜೋಡಿಯಾದ ಜೆರುಶಾ.

ಮಹೇಶ್ ಬಾಬು ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ. ಆಕಾಶ್, ಅರಸು, ಪರಮೇಶ ಪಾನ್ ವಾಲ ಮುಂತಾದ ಸ್ಟಾರ್ ಸಿನಿಮಾಗಳನ್ನು ಮಾಡಿರುವ ಅವರು, ಈಗ ಮತ್ತೊಂದು ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.. ಇತ್ತೀಚೆಗಷ್ಟೇ ಅಪರೂಪ ಎಂಬ ಸಿನಿಮಾ ಮೂಲಕ ಯುವ ಪ್ರತಿಭೆಗಳನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಿದ್ದ ಅವರೀಗ ಸ್ಮೈಲ್ ಗುರು ರಕ್ಷಿತ್ ನ್ನು ನಾಯಕನಾಗಿ ಕನ್ನಡ ಸಿನಿಮಾಪ್ರೇಮಿಗಳ ಎದುರು ತರುತ್ತಿದ್ದಾರೆ.

ಮಹೇಶ್ ಬಾಬು ಹಾಗೂ ರಕ್ಷಿತ್ ಹೊಸ ಸಿನಿಮಾ ಈಗಾಗಲೇ ಅನೌನ್ಸ್ ಆಗಿದೆ. ಇದೀಗ ಹೊಸ ಸಮಾಚಾರ ಏನಂದರೆ ಈ ಚಿತ್ರದ ಮೂಲಕ ಮತ್ತೊಬ್ಬ ಯುವ ನಟಿಯನ್ನು ಲಾಂಚ್ ಮಾಡುತ್ತಿದ್ದಾರೆ ಮಹೇಶ್. ಮೆರವಣಿಗೆ ಸಿನಿಮಾ ಮೂಲಕ ಐಂದ್ರಿತಾ ರೇ , ಚಿರು ಸಿನಿಮಾ ಮೂಲಕ ಕೃತಿ ಕರಬಂದ, ಅಜಿತ್ ಚಿತ್ರದ ಮೂಲಕ ನಿಕ್ಕಿ ಗಲ್ರಾನಿ , ಕ್ರೇಜಿ ಬಾಯ್ ಮೂಲಕ ಆಶಿಕಾ ರಂಗನಾಥ್ ಮತ್ತು ಅಪರೂಪದ ಮೂಲಕ ಹೃತಿಕಾ ಶ್ರೀನಿವಾಸ್ ಹೀಗೆ ಹಲವಾರು ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕ ಮಹೇಶ್ ಬಾಬು ಇದೀಗ ಹೊಸ ಮುಖ ಜೆರುಶಾರನ್ನು ನಾಯಕಿಯಾಗಿ ಲಾಂಚ್ ಮಾಡುತ್ತಿದ್ದಾರೆ.

ಅಂದಹಾಗೇ ಜೆರುಶಾ ಕ್ಯಾಮೆರಾ ಹೊಸದೇನಲ್ಲ. ಈಗಾಗಲೇ ಸುದೀಪ್ ಅಭಿನಯದ ವೀರ ಮದಕರಿ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಜಾಹೀರಾತುಗಳು ಮತ್ತು ರಂಗಭೂಮಿ ಹಿನ್ನೆಲೆ ಹೊಂದಿರುವ ಜೆರುಶಾ ಇದೀಗ ಮಹೇಶ್ ಬಾಬು ನಿರ್ದೇಶನದ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳಲು ಹೆಸರಾಗಿರುವ ಸ್ಮೈಲ್ ಗುರು ರಕ್ಷಿತ್ ಗೆ ಜೋಡಿಯಾಗಿ ಜೆರುಶಾ ಮಿಂಚಲಿದ್ದಾರೆ. ಮಹೇಶ್ ಬಾಬು ಅವರು ಪ್ರಮುಖ ಪಾತ್ರವೊಂದಕ್ಕೆ ಮತ್ತೊಬ್ಬ ಪ್ರತಿಭಾವಂತ ನಟಿ ಆಯ್ಕೆಯಲ್ಲಿ ತೊಡಗಿದ್ದು, ಅದರ ವಿವರಗಳನ್ನು ಶೀಘ್ರದಲ್ಲೇ ಅನಾವರಣಗೊಳಿಸಲಾಗುವುದು.

ಅಂದಹಾಗೇ ಮಹೇಶ್ ಬಾಬು ಹೊಸ ಕಥೆಗೆ ಸದ್ಯ ಶೀರ್ಷಿಕೆ ಫೈನಲ್ ಆಗಿಲ್ಲ. ಯೂತ್ಫುಲ್ ಎಂಟರ್ ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಚೇತನ್ ಮತ್ತು ಅನುರಾಗ್ ಬಂಡವಾಳ ಹೂಡಲಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಮತ್ತು ಸತ್ಯ ಛಾಯಾಗ್ರಾಹಣವಿರಲಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ಮೇ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

error: Content is protected !!