Cini NewsSandalwood

“ಮೌನರಾಗ” ಕಿರುಚಿತ್ರದ ಮೂಲಕ ನಿರ್ಮಾಪಕಿ-ನಿರ್ದೇಶಕಿಯಾದ ಪತ್ರಕರ್ತೆ ಸುನಯನಾ ಸುರೇಶ್

ಟೈಮ್ಸ್ ಆಫ್ ಇಂಡಿಯಾ, ಡಿಎನ್‌ಎ, ಡೆಕ್ಕನ್ ಕ್ರಾನಿಕಲ್ ಮತ್ತು ಮಿಡ್ ಡೇ ನಂತಹ ಪ್ರಮುಖ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡಿದ ಅನುಭವ ಇರುವ ಸುನಯನಾ ಸುರೇಶ್ ಇದೀಗ ನಿರ್ದೇಶನದತ್ತ ಧುಮುಕಿದ್ದಾರೆ. ಸಿನಿಮಾ ನಿರ್ಮಾಣಕ್ಕೆ ಹೊಸಬರಲ್ಲದ ಸುನಯನಾ, ಈ ಹಿಂದೆ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕಿಯಾಗಿದ್ದರು ಮತ್ತು ಕೆಲವು ಚಿತ್ರಗಳಿಗೆ ಸ್ಕ್ರಿಪ್ಟ್ ಕೆಲಸದಲ್ಲಿ, ಮೀಡಿಯಾ ಸ್ಟ್ರಾಟೆಜಿಸ್ಟ್ ಮತ್ತು ಕಾಸ್ಟಿಂಗ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. ಈಗ ಇದೇ ಸುನಯನಾ, ಮೌನ ರಾಗ ಎಂಬ ಕಿರುಚಿತ್ರಕ್ಕೆ ಬರಹಗಾರರಾಗಿ, ನಿರ್ಮಾಪಕಿ ಮತ್ತು ನಿರ್ದೇಶಕರಾಗುತ್ತಿದ್ದಾರೆ.

ಈ ಹೊಸ ಹೆಜ್ಜೆಯ ಬಗ್ಗೆ ಮಾತನಾಡುವ ಅವರು, “2000ರ ದಶಕದ ಆರಂಭದಲ್ಲಿ ಇಂಡೀ ಫಿಲ್ಮ್ ಮೇಕಿಂಗ್ ಅಲೆಯು ಸಿನಿಮಾ ಮತ್ತು ಸಿನಿಮಾ ನಿರ್ಮಾಣದ ಮೇಲಿನ ನನ್ನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿತು. ನಾಗೇಶ್ ಕುಕುನೂರ್ ಅವರಂತಹ ಹೆಸರುಗಳಿಂದ ಸಿನಿಮಾ ನನ್ನನ್ನು ಸೆಳೆಯಿತು. ಮಾಧ್ಯಮ ಪ್ರತಿನಿಧಿಯಾಗಿ ಮತ್ತು ಸಿನಿಮಾ ವಿಮರ್ಶಕಿಯಾಗಿ ಎರಡು ದಶಕಗಳ ಕಾಲ ಸಿನಿಮಾ ಮತ್ತು ಸಿನಿಮಾ ನಿರ್ಮಾಣವನ್ನು ಸೂಕ್ಷ್ಮವಾಗಿ ಗಮನಿಸಿದೆ ಎಂದಿದ್ದಾರೆ ಸುನಯನಾ.

ಮುಂದುವರಿದು ಮಾತನಾಡುವ ಅವರು, “ಕಳೆದೆರಡು ವರ್ಷಗಳಿಂದ ಸಿನಿಮಾ ನಿರ್ಮಾಣ, ಕಾಸ್ಟಿಂಗ್, ಸ್ಕ್ರಿಪ್ಟ್ ಡಾಕ್ಟರಿಂಗ್ ಮತ್ತು ಪಬ್ಲಿಸಿಟಿಯ ವಿವಿಧ ಆಯಾಮಗಳನ್ನು ಅವಲೋಕಿಸಿದೆ. ಅದರಂತೆ ಈಗ ಮೌನ ರಾಗದ ಮೂಲಕ ಚಿತ್ರನಿರ್ಮಾಪಕಿ ಯಾಗಿದ್ದೇನೆ, ಇದು ನಾನು ಪ್ರೀತಿಯಿಂದ ಬರೆದು ನಿರ್ದೇಶಿಸಿದ ಕಿರುಚಿತ್ರ” ಎಂದು ಸುನಯನಾ ಹೇಳಿದ್ದಾರೆ.

ಮೌನ ರಾಗ ಕಿರುಚಿತ್ರಕ್ಕೆ ಪ್ರೀತಾ ಜಯರಾಮನ್ ಛಾಯಾಗ್ರಾಹಕರಾಗಿದ್ದಾರೆ. ಶ್ರುತಿ ಹರಿಹರನ್ ನಾಯಕಿ. ಇವರಲ್ಲದೆ ಬಾದಲ್ ನಂಜುಂಡಸ್ವಾಮಿ ಅವರ ಕಲಾ ನಿರ್ದೇಶನ ಮತ್ತು ಆಲ್ ಓಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಚಿತ್ರದಲ್ಲಿ ಅಗ್ನಿವ್ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರದಲ್ಲಿ ನಟಿಯರಾದ ಸಂಯುಕ್ತಾ ಹೊರ್ನಾಡ್, ಸೂರಜ್ ಗೌಡ, ರಾಜಶ್ರೀ ಪೊನ್ನಪ್ಪ, ಅನಿರುದ್ಧ್ ಆಚಾರ್ಯ, ಹರ್ಷಿಲ್ ಕೌಶಿಕ್ ಮತ್ತು ಆಲ್ ಒಕೆ ನಟಿಸಲಿದ್ದಾರೆ

error: Content is protected !!