ನಿಗೂಢ ಸಾವಿನ ಸುಳಿಯಲ್ಲಿ ಅನಾಥರ ಬದುಕು ಬವಣೆ “ಶ್ರೀಕೃಷ್ಣ” (ಚಿತ್ರವಿಮರ್ಶೆ-ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಶ್ರೀಕೃಷ್ಣ
ನಿರ್ದೇಶಕ : ಶಂಕರ್ ರಾಜ ವರ್ಮ
ನಿರ್ಮಾಪಕರು : ಶಂಕರ್ ರಾಜ, ಅಜಯ್ ಕುಮಾರ್
ಸಂಗೀತ : ತ್ಯಾಗರಾಜ್
ಛಾಯಾಗ್ರಹಣ : ಅನಿರುದ್ಧ್
ತಾರಾಗಣ : ಶಂಕರ್ ರಾಜ ವರ್ಮ, ಚೈತ್ರ ತೋಟದ , ಪ್ರದೀಪ್ ಪೂಜಾರಿ, ಭುವನ್ ಗೌಡ, ಸ್ನೇಹಾ, ಈಶ್ವರ್ ಶೆಟ್ಟಿ, ಮೋಹನ್ ಕುಮಾರ್ ಹಾಗೂ ಮುಂತಾದವರು…
ಬದುಕಿನ ಪಯಣವೇ ನಿಗೂಢ. ಯಾವಾಗ , ಹೇಗೆ , ಏನೆಲ್ಲಾ ಏರುಪೇರುಗಳು ಎದುರಾಗುತ್ತದೆ. ಅದನ್ನ ನಿಭಾಯಿಸಿಕೊಂಡು ಹೋಗುವುದು ಹೇಗೆ ಎಂಬುವುದೇ ಒಂದು ಪಾಠ. ಅನಾಥ ಹುಡುಗರ ಬಡ ಕುಟುಂಬದ ಜೀವನ , ಒಂಟಿ ಹೆಣ್ಣಿನ ಆತಂಕದ ಬದುಕು ಬವಣೆ, ಕಾಮುಕರ ಕಣ್ಣು , ಕಳ್ಳ ಪೋಲಿಸ್ ಆಟದ ನಡುವೆ ನಿಗೂಢ ಸಾವಿನ ಸುಳಿಯ ಸುತ್ತ ಚಾಣಾಕ್ಷತನದ ತಂತ್ರಗಾರಿಕೆಯ ಕಥಾನಕ ಮೂಲಕ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಶ್ರೀಕೃಷ್ಣ”.
ತನ್ನ ಸ್ನೇಹ , ಪ್ರೀತಿ , ಸಹಕಾರ , ಮಾತಿನ ಚಾಣಾಕ್ಷತನದಿಂದ ಎಲ್ಲರ ಪ್ರೀತಿಯೊಂದಿಗೆ ಸಣ್ಣ ಹೋಟೆಲ್ ನಡೆಸಿಕೊಂಡು ಬದುಕುವ ಅನಾಥ ಹುಡುಗ ಶಂಕರ(ಶಂಕರ್ ರಾಜ ವರ್ಮ). ಕ್ವಾಟ್ರಸ್ ನಲ್ಲಿ ಆತನ ಜೊತೆ ತನ್ನಿಬ್ಬರು ಗೆಳೆಯರು. ಇನ್ನು ಆಶ್ರಮದಿಂದ ತಪ್ಪಿಸಿಕೊಂಡು ಬಂದ ಅನಾಥ ಹುಡುಗಿ ಸರಸ್ವತಿ (ಚೈತ್ರ ತೋಟದ) ಕಾಮುಕನ ಕೈಗೆ ಸಿಕ್ಕಿಕೊಂಡಾಗ ಆಕೆಯನ್ನ ರಕ್ಷಿಸಿ ಕರೆದುಕೊಂಡು ತನ್ನ ತಾತನ ಬಳಿ ಬಂದು ವಿಷಯ ತಿಳಿಸಿ ತನ್ನೊಟ್ಟಿಗೆ ವಾಸಿಸಲು ಅವಕಾಶ ನೀಡುತ್ತಾನೆ. ನಂತರ ಅವರಿಬ್ಬರ ಸ್ನೇಹ ಪ್ರೀತಿಯ ಕಡೆಗೆ ಜಾರುತ್ತದೆ.
ಇನ್ನು ಅದೇ ಸ್ಥಳದ ಪೊಲೀಸ್ ಸ್ಟೇಷನ್ ಗೆ ಟೀ , ತಿಂಡಿಯನ್ನು ಕೊಡುವ ಶಂಕರ ಎಲ್ಲರ ವಿಶ್ವಾಸ , ಪ್ರೀತಿ ಗಳಿಸುತ್ತಾನೆ.

ಇನ್ನು ತನ್ನ ಕ್ವಾಟ್ರಸ್ ಏರಿಯಾ ದಲ್ಲಿರುವ ರೌಡಿ ಮೇಕೆ ಸೀನ ಹಾಗೂ ಆತನ ಮಗನ ಗ್ಯಾಂಗ್ ಹುಡುಗಿಯರಿಗೆ ಬಲೆ ಬೀಸಿ ಯಾಮಾರಿಸುವುದು ಕಾಯಕವಾಗಿರುತ್ತದೆ. ಇನ್ನೂ ಒಂದಷ್ಟು ಹುಡುಗಿಯರು ನಾಪತ್ತೆ ವಿಚಾರದಿಂದ ಪೊಲೀಸ್ ಕೂಡ ಹುಡುಕಾಟದಲ್ಲಿ ತೊಡಗುತ್ತದೆ. ಇನ್ನು ಶಂಕರ ಹಾಗೂ ರೌಡಿ ಗ್ಯಾಂಗ್ ನಡುವೆ ಒಂದಷ್ಟು ಮಾತಿನ ಚಿಕ್ಕಮಕಿ ಎದುರಾಗುತ್ತದೆ. ಇದರ ನಡುವೆ ಶಂಕರ ನ ಪ್ರೇಯಸಿ ಸರಸ್ವತಿ ಮನೆಯಲ್ಲಿ ಶವವಾಗಿ ಕಾಣುತ್ತಾಳೆ.
ಈ ಹುಡುಗಿಯ ರೇಪ್ ಆಪಾದನೆ ಶಂಕರ್ ಹಾಗೂ ಗೆಳೆಯರ ಮೇಲೆ ಬಂದು ಪೊಲೀಸ್ ಅರೆಸ್ಟ್ ಮಾಡುವ ಸ್ಥಿತಿಗೆ ಬರುತ್ತದೆ. ಮುಂದೆ ಎದುರಾಗುವ ಒಂದಷ್ಟು ಅನುಮಾನದ ರೋಚಕ ಸನ್ನಿವೇಶಗಳು ಕೊಲೆಯ ಹಿಂದಿರುವ ರಹಸ್ಯ ಬಯಲು ಮಾಡುತ್ತಾ ಹೋಗುತ್ತದೆ. ಅದು ಹೇಗೆ… ಏನು… ಎಂಬುದನ್ನು ನೀವು ಚಿತ್ರ ನೋಡಿ ತಿಳಿದುಕೊಳ್ಳಬೇಕು.
ಬಹುತೇಕ ಸ್ಥಳಗಳಲ್ಲಿ ಇಂತಹ ನಿಗೂಢ ಪ್ರಕರಣಗಳನ್ನು ಇಟ್ಟುಕೊಂಡು ನಿರ್ದೇಶಕ ಶಂಕರ್ ರಾಜ ವರ್ಮ ಮಾಡಿಕೊಂಡಿರುವ ಕಥೆ ಗಮನ ಸೆಳೆಯುತ್ತದೆ. ಒಂಟಿ ಹೆಣ್ಣು ಮಕ್ಕಳ ಬದುಕು , ನೋವಿನ ಜೀವನ , ನಿಗೂಢ ಸಾವಿನ ಸುತ್ತಾ ಅನಾಥರ ಸ್ಥಿತಿಗತಿಯನ್ನು ಅಸ್ತ್ರವಾಗಿಸಿಕೊಳ್ಳುವ ದುಷ್ಟ ವ್ಯಕ್ತಿಗಳ ಮಟ್ಟ ಹಾಕುವ ಶ್ರೀ ಕೃಷ್ಣನಂತೆ ಚಾಣಾಕ್ಷತನದ ಎಳೆ ವಿಭಿನ್ನವಾಗಿದೆ. ಆದರೆ ಚಿತ್ರಕಥೆ , ಪಾತ್ರ ಪೋಷಣೆ ಇನ್ನಷ್ಟು ಬಿಗಿ ಮಾಡಬೇಕಿತ್ತು.
ವಿಶೇಷವಾಗಿ ಹಾಡುಗಳು ಅರ್ಥಪೂರ್ಣವಾಗಿ ಸೊಗಸಾಗಿ ಮೂಡಿಬಂದಿದೆ. ಛಾಯಾಗ್ರಹಕಾರ ಕೆಲಸವು ಉತ್ತಮವಾಗಿದೆ. ಇನ್ನು ನಿರ್ದೇಶಕ ಶಂಕರ್ ರಾಜ ವರ್ಮ ನಾಯಕರಾಗಿ ಅಭಿನಯಿಸಿದ್ದು , ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ನಾಯಕಿಯಾಗಿ ಹುಬ್ಬಳ್ಳಿ ಮೂಲದ ಚೈತ್ರ ತೋಟದ ಸಿಕ್ಕ ಅವಕಾಶಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಅಭಿನಯಿಸಿರುವ ಪ್ರದೀಪ್ ಪೂಜಾರಿ, ಭುವನ್ ಗೌಡ, ಸ್ನೇಹಾ, ಈಶ್ವರ್ ಶೆಟ್ಟಿ ಹಾಗೂ ತಾತನ ಪಾತ್ರಧಾರಿ ಕೆ. ಎಸ್. ಮೋಹನ್ ಕುಮಾರ್ ಚಿತ್ರದ ಓಟಕ್ಕೆ ಪೂರಕವಾಗಿ ಕಾಣಿಸಿಕೊಂಡಿದ್ದಾರೆ. ಸಮಾಜದ ಸ್ಥಿತಿಗತಿಯ ಕೆಲವು ಅಂಶಗಳೊಂದಿಗೆ ಸಾಗಿರುವ ಈ ಕಥೆ ಕುತೂಹಲಕಾರಿಯಾಗಿದ್ದು , ಒಮ್ಮೆ ಚಿತ್ರವನ್ನು ನೋಡುವಂತಿದೆ.