ಕೌಟುಂಬಿಕ ಕಥಾನಕ “ಸರಳ ಸುಬ್ಬರಾವ್” ಚಿತ್ರದ ಹಾಡು ಬಿಡುಗಡೆ.
1971 ರ ಕಾಲಘಟ್ಟದ ಸುಂದರ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ “ಸರಳ ಸುಬ್ಬರಾವ್”. ರಿಯಾನ್ ಕ್ರಿಯೇಷನ್ಸ್ ಲಾಂಛನದಲ್ಲಿ ಲೋಹಿತ್ ನಂಜುಂಡಯ್ಯ ನಿರ್ಮಿಸಿರುವ, ಹಲವು ಸದಭಿರುಚಿ ಚಿತ್ರಗಳ ನಿರ್ದೇಶಕ ಮಂಜು ಸ್ವರಾಜ್ ನಿರ್ದೇಶನದಲ್ಲಿ ಅಜೇಯ್ ರಾವ್ ಹಾಗೂ ಮಿಶಾ ನಾರಂಗ್ ನಾಯಕ, ನಾಯಕಿಯಾಗಿ ನಟಿಸಿರುವ “ಸರಳ ಸುಬ್ಬರಾವ್” ಚಿತ್ರದ ಸುಮಧುರ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಯಿತು. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಹಾಡನ್ನು ಕವಿರಾಜ್ ಅವರು ಬರೆದಿದ್ದು, ಸಂಜಿತ್ ಹೆಗ್ಡೆ ಹಾಡಿದ್ದಾರೆ. ಸರಿಗಮ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡು ಲಭ್ಯವಿದೆ. ಈ ಸುಮಧುರ ಪ್ರೇಮಗೀತೆಯನ್ನು ಬಿಡುಗಡೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ ಚಿತ್ರತಂಡ, ನಂತರ ಚಿತ್ರದ ಕುರಿತು ಮಾತನಾಡಿತ್ತು.
“ಸರಳ ಸುಬ್ಬರಾವ್” ನಮ್ಮ ಚಿತ್ರದ ನಾಯಕ, ನಾಯಕಿಯ ಹೆಸರು. ಇದು 1971 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ರೆಟ್ರೊ ಶೈಲಿಯ ಕಥೆ ಕೂಡ. ಈ ಕಥೆಯನ್ನು ನಾನು ನಿರ್ಮಾಪಕ ಲೋಹಿತ್ ಅವರ ಮುಂದೆ ಹೇಳಿದಾಗ ಅವರು ಕೇಳಿ ತುಂಬಾ ಮೆಚ್ಚಿಕೊಂಡರು. ಜೊತೆಗೆ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡೋಣ ಎಂದರು. ಹೇಳಿದ ಹಾಗೆ ಚಿತ್ರವನ್ನು ಅದ್ದೂರಿಯಾಗಿ ಮಾಡಿ ಮುಗಿಸಿದ್ದಾರೆ. ಈ ಕಥೆಗೆ ಅಜೇಯ್ ರಾವ್ ಅವರೆ ಸೂಕ್ತ ನಾಯಕ ಎನಿಸಿತು. ಅವರು ಕೂಡ ಒಪ್ಪಿಕೊಂಡರು. ಇನ್ನೂ ನಮ್ಮ ಚಿತ್ರದ ನಾಯಕಿ ಪಂಜಾಬಿನ ಮಿಶಾ ನಾರಂಗ್. ನನ್ನ ಅಂದಾಜಿನ ಪ್ರಕಾರ ಕನ್ನಡದಲ್ಲಿ ತುಂಬಾ ವರ್ಷಗಳಿಂದ ಇಂತಹ ಕಥೆ ಬಂದಿಲ್ಲ. ಅಂತಹ ಅಪರೂಪದ ಕಥೆ ಇದು. ನಾಯಕ ಅಜೇಯ್ ರಾವ್ ಅವರ ಅಭಿನಯಕ್ಕೆ ಅವರೆ ಸಾಟಿ. ಪಂಜಾಬಿ ಹುಡುಗಿ ಮಿಶಾ ಕನ್ನಡ ಅರ್ಥ ಮಾಡಿಕೊಂಡು ಅಭಿನಯಿಸಿದ್ದು ನಿಜಕ್ಕೂ ಖುಷಿಯ ವಿಚಾರ. ರಂಗಾಯಣ ರಘು, ವೀಣಾ ಸುಂದರ್, ಶ್ರೀ, ರಘು ರಾಮನಕೊಪ್ಪ, ವಿಜಯ್ ಚಂಡೂರ್ ಹೀಗೆ ದೊಡ್ಡ ತಾರಾಬಳಗವೇ ನಮ್ಮ ಚಿತ್ರದಲ್ಲಿದೆ. ಅಂತರಾಷ್ಟ್ರೀಯ ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಪ್ರದೀಪ್ ಪದ್ಮಕುಮಾರ್ ಛಾಯಾಗ್ರಹಣ, ಬಸವರಾಜ್ ಅರಸ್ ಸಂಕಲನವಿರುವ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದು ನಿರ್ದೇಶಕ ಮಂಜು ಸ್ವರಾಜ್ ತಿಳಿಸಿದರು.
ಈ ಚಿತ್ರದಲ್ಲಿ ನಟಿಸಿರುವುದು ನನ್ನ ವೈಯ್ಯಕ್ತಿಕ ಹಾಗೂ ವೃತ್ತಿಜೀವನದ ಹೆಮ್ಮೆ. ಅಂತಹ ಒಂದು ಸುಂದರ ಸಾಂಸಾರಿಕ ಚಿತ್ರ “ಸರಳ ಸುಬ್ಬರಾವ್”. ಇನ್ನೂ ಈ ಚಿತ್ರ ಭಾರತೀಯ ಚಿತ್ರರಂಗದ ಸುವರ್ಣ ಯುಗಕ್ಕೆ ಟ್ರಿಬ್ಯುಟ್ ಎಂದರು ತಪ್ಪಾಗಲಾರದು. ನಾನು ಚಿಕ್ಕವಯಸ್ಸಿನಲ್ಲಿ ಸೂಪರ್ ಮ್ಯಾನ್ ಮುಂತಾದ ಚಿತ್ರಗಳನ್ನು ಹೆಚ್ಚು ನೋಡುತ್ತಿದ್ದೆ. ನಾನೇ ಸೂಪರ್ ಹೀರೋ ಅಂದುಕೊಳ್ಳುತ್ತಿದೆ. ಈ ಚಿತ್ರದಲ್ಲೂ ನಾನು ಸೂಪರ್ ಹೀರೊ. ಏಕೆಂದರೆ ಇದು 50 ವರ್ಷಗಳ ಹಿಂದೆ ನಡೆಯುವ ಕಥೆ. ಈ ಚಿತ್ರದಲ್ಲಿ ರೆಟ್ರೊ ಶೈಲಿಯ ಉಡುಗೆಗಳನ್ನು ಹಾಕಿದಾಗ ನಾನು ನನ್ನ ಪಾತ್ರದಲ್ಲಿ ಡಾ||ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್ ಅವರನ್ನು ನೋಡಿದ್ದೇನೆ. ಎಷ್ಟು ಜನಕ್ಕೆ ಸಿಗುತ್ತದೆ ಇಂತಹ ಅವಕಾಶ. ಇಂತಹ ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು ನಾಯಕ ಅಜೇಯ್ ರಾವ್.
ಮೊದಲ ಬಾರಿಗೆ ಇಂತಹ ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಟಿಸಿದ್ದು ಬಹಳ ಖುಷಿಯಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಾಯಕಿ ಮಿಶಾ ನಾರಂಗ್. ಮಂಜು ಸ್ವರಾಜ್ ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ಅಜೇಯ್ ರಾವ್ ಅವರ ಸಹಕಾರ ಅಪಾರ. ಇಡೀ ಚಿತ್ರತಂಡ ನನಗೆ ಪ್ರೋತ್ಸಾಹ ನೀಡಿದ್ದಾರೆ. ಅದರಿಂದ ಒಂದೊಳ್ಳೆ ಕೌಟುಂಬಿಕ ಚಿತ್ರ ನಿಮ್ಮ ಮುಂದೆ ಬರುತ್ತಿದೆ ಎಂದು ನಿರ್ಮಾಪಕ ಲೋಹಿತ್ ನಂಜುಂಡಯ್ಯ ತಿಳಿಸಿದರು.
ಚಿತ್ರದಲ್ಲಿ ಇಂದು ಬಿಡುಗಡೆಯಾಗಿರುವ ಗೀತೆ ಸೇರಿದಂತೆ ಐದು ಹಾಡುಗಳಿದೆ. ಒಂದಕ್ಕಿಂತ ಒಂದು ಚೆನ್ನಾಗಿದೆ ಎಂದರು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಚಿತ್ರದಲ್ಲಿ ನಟಿಸಿರುವ ಹಿರಿಯ ನಟ ರಂಗಾಯಣ ರಘು, ನಟ ಶ್ರೀ, ಚಿತ್ಕಲಾ ಬಿರಾದಾರ್ ವಿಜಯ್ ಚಂಡೂರ್, ರಘು ರಾಮನಕೊಪ್ಪ, ಛಾಯಾಗ್ರಾಹಕ ಪ್ರದೀಪ್ ಪದ್ಮಕುಮಾರ್, ಸಂಕಲನಕಾರ ಬಸವರಾಜ ಅರಸ್, ಕಲಾ ನಿರ್ದೇಶಕ ಅಮರ್, ನೃತ್ಯ ನಿರ್ದೇಶಕರಾದ ಮದನ್ ಹರಿಣಿ, ವಸ್ತ್ರವಿನ್ಯಾಸ ಮಾಡಿರುವ ರಂಜಿತ್ ಮುಂತಾದವರು “ಸರಳ ಸುಬ್ಬರಾವ್” ಚಿತ್ರದ ಕುರಿತು ಮಾತನಾಡಿದರು.