Cini NewsMovie Review

ಮಾಟಮಂತ್ರದ ಸುತ್ತ ಮಾರಕಾಸ್ತ್ರಗಳ ಅಬ್ಬರ (ಚಿತ್ರವಿಮರ್ಶೆ-ರೇಟಿಂಗ್ : 4/5)

ರೇಟಿಂಗ್ : 4/5
ಚಿತ್ರ : ಮಾರಕಾಸ್ತ್ರ
ನಿರ್ದೇಶಕ : ಗುರುಮೂರ್ತಿ ಸುನಾಮಿ
ನಿರ್ಮಾಪಕಿ : ಕೋಮಲ ನಟರಾಜ
ಸಂಗೀತ : ಮಿರಾಕಲ್ ಮಂಜು
ಛಾಯಾಗ್ರಹಕ : ಅರುಣ್
ತಾರಾಗಣ : ಮಾಲಾಶ್ರೀ , ವಿ.ಆರ್. ನಟರಾಜ , ಹರ್ಷಿಕಾ ಪೂಣಚ್ಚ , ಆನಂದ್ ಆರ್ಯ, ಅಯ್ಯಪ್ಪ. ಪಿ . ಶರ್ಮಾ, ಮೈಕೋ ನಾಗರಾಜ್ , ಭರತ್ ಸಿಂಗ್, ಉಗ್ರಂ ಮಂಜು ಹಾಗೂ ಮುಂತಾದವರು…

ಸಂಬಂಧ , ಸ್ನೇಹ , ಪ್ರೀತಿಗಿಂತ ಹಣ , ಆಸ್ತಿ ,ಐಶ್ವರ್ಯವೇ ಯಾರನ್ನ ಬೇಕಾದರೂ ಯಾವ ಸಂದರ್ಭದಲ್ಲಿ ಆದ್ರೂ ಬದಲಾಯಿಸುವ ಶಕ್ತಿ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಒಳ್ಳೆ ಉದ್ದೇಶ , ಸಮಾಜ ಸೇವೆ , ಸುಖ ,ನೆಮ್ಮದಿ, ಶಾಂತಿ ಬಯಸುವವರ ನಡುವೆ ಕೆಟ್ಟ ಆಲೋಚನೆ , ದುರುದ್ದೇಶ ಇರುವವರು ಮಾಡುವ ಮೋಸ , ಮಾಟ , ಮಂತ್ರ , ಕೊಲೆ ಇದನ್ನು ಭೇದಿಸಲು ಮುಂದಾಗುವ ಪೊಲೀಸರ ಹರಸಾಹಸ , ರಾಜಕೀಯ ವ್ಯಕ್ತಿಗಳ ಕುತಂತ್ರ , ನಿಧಿಗಾಗಿ ಸಂಚು ರೂಪಿಸುವ ಕುತಂತ್ರಿಗಳು ಹೀಗೆ ಹಲವು ವಿಚಾರಗಳನ್ನು ಬೆಸೆದುಕೊಂಡು ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಮಾರಕಾಸ್ತ್ರ”. ಬದುಕಿನಲ್ಲಿ ಉಜ್ವಲ ಭವಿಷ್ಯ ಕಾಣುವ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಹಾಡಿನ ಮೂಲಕ ದೇಶದ ಸುಂದರ ತಾಣಗಳ ಪರಿಚಯಿಸುತ್ತಾ ಮಾರ್ಗದರ್ಶನದ ಮೂಲಕ ಬೆಳಕು ಚೆಲ್ಲುವ ಪ್ರೊಫೆಸರ್ ಶಂಕರ್ (ವಿ .ಆರ್. ನಟರಾಜ).

ಪತ್ನಿ ಹಾಗೂ ಇಬ್ಬರು ಪುತ್ರಿರು ಹಾಗೂ ಒಬ್ಬ ಅನಾಥ ಹುಡುಗನನ್ನ ಬೆಳೆಸಿ ವಿದೇಶದಲ್ಲಿ ಡ್ಯಾನಿಯಲ್ (ಉಗ್ರಂ ಮಂಜು) ನನ್ನ ಓದಿಸುತ್ತಾ ಸುಖವಾಗಿ ಸುಂದರ ಸಂಸಾರದೊಂದಿಗೆ ಸಮಾಜ ಸೇವೆ ಮಾಡುತ್ತಿರುತ್ತಾರೆ. ಇನ್ನು ದುಷ್ಟ ವ್ಯಕ್ತಿಗಳ ಅಟ್ಟಹಾಸವನ್ನು ತನ್ನ ಟಿವಿ ವಾಹಿನಿಯಲ್ಲಿ ವರದಿ ಮಾಡುವ ವರದಿಗಾರ್ತಿ ನಂದಿನಿ (ಹರ್ಷಿಕಾ ಪೂಣಚ್ಚ). ಒಮ್ಮೆ ದುಷ್ಟರ ಕೈಗೆ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿ ಎದುರಾಗುವ ಸಮಯಕ್ಕೆ ತನ್ನ ಗೆಳೆಯ ಭರತ್ (ಆನಂದ್ ಆರ್ಯ) ಕರೆಸಿಕೊಂಡು ರೌಡಿಗಳನ್ನು ಮಟ್ಟ ಹಾಕಿಸಿಸುತ್ತಾಳೆ.

ಆತನ ಸಹಾಯ ಮಾಡುವ ಗುಣ, ನಡವಳಿಕೆಗೆ ಮನಸೋಲುವ ನಂದಿನಿ ಭರತನನ್ನು ಪ್ರೀತಿಸುತ್ತಾಳೆ. ಇದರ ನಡುವೆ ಭರತ್ ವೃದ್ದಾಶ್ರಮದಲ್ಲಿ ಹಲವಾರು ಹಿರಿ ಜೀವಗಳಿಗೆ ಆಸರೆಯಾಗುವ ಮೂಲಕ ಪುನೀತ್ ರಾಜ್‌ಕುಮಾರ್ ಅವರ ಆದರ್ಶಗಳನ್ನು ಮುಂದುವರೆಸಿಕೊಂಡು ಬಂದಿರುತ್ತಾನೆ. ಒಂದು ಸಂದರ್ಭದಲ್ಲಿ ಶಂಕರ್, ಭರತ್ ಭೇಟಿಯಾದಾಗ ಇಬ್ಬರ ನಡುವೆ ಸ್ನೇಹ, ವಿಶ್ವಾಸ ಬೆಳೆಯುತ್ತದೆ.

ಒಂದು ದಿನ ಶಂಕರ್ ದತ್ತು ಪುತ್ರ ಡ್ಯಾನಿಯಲ್ ವಿದೇಶದಲ್ಲಿರುವ ಸಂದರ್ಭದಲ್ಲಿ, ಶಂಕರ್ ಅವರ ಇಬ್ಬರು ಹೆಣ್ಣು ಮಕ್ಕಳ ಕೊಲೆಯಾಗುತ್ತದೆ, ಆ ಕೊಲೆಯನ್ನು ಶಂಕರ್ ದಂಪತಿಗಳೇ ಮಾಡಿದರೆಂಬ ಆರೋಪದ ಮೇಲೆ ಅವರಿಬ್ಬರೂ ಅರೆಸ್ಟ್ ಆಗುತ್ತಾರೆ. ವಿದೇಶದಿಂದ ವಾಪಸ್ ಬರುವ ಡ್ಯಾನಿಯಲ್ ತನ್ನ ತಂದೆಯ ವಿರುದ್ದ ಪಿತೂರಿ ನಡೆಸಿದವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿ, ಡಾಕ್ಟರ್, ಡಿಸಿ, ಲಾಯರ್, ಪೋಲಿಸ್ ಇನ್ಸ್ಪೆಕ್ಟರ್ ಹೀಗೆ ನಾಲ್ಕು ಜನರನ್ನು ಕೊಲೆ ಮಾಡುತ್ತಾನೆ, ನಂತರ ಶಾಸಕನನ್ನು ಜಾತ್ರೆಯೊಂದರಲ್ಲಿ ಕೊಲೆ ಮಾಡಲು ಟ್ರೈ ಮಾಡಿದಾಗ ಸ್ಪೆಷಲ್ ಆಫೀಸರ್ ಜಾಹ್ನವಿ (ಮಾಲಾಶ್ರೀ) ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ, ಇದಕ್ಕೂ ಮೊದಲು ಕೊಲೆಯಾದ ನಾಲ್ಕೂ ಜಾಗಗಳ ಸಿಸಿ ಟಿವಿ ದೃಶ್ಯಗಳಲ್ಲಿ ಭರತ್ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು, ಅದೇ ಸಮಯದಲ್ಲಿ ಈ ನಾಲ್ವರ ಕೊಲೆಯಾಗಿರುವುದು ಆತನ ಮೇಲೆ ಪೊಲೀಸರಿಗೆ ಅನುಮಾನ ಮೂಡಿಸುತ್ತದೆ, ಭರತ್‌ನನ್ನು ಕರೆದು ವಿಚಾರಿಸಿದಾಗ ಆತನ ಪಾತ್ರ ಇಲ್ಲವೆಂಬುದು ಗೊತ್ತಾಗುತ್ತದೆ.

ಇನ್ನು ಪ್ರೊಫೆಸರ್ ಶಂಕರ್ ಮಾವ ತನ್ನೆಲ್ಲ ಆಸ್ತಿಯನ್ನು ಶಂಕರ್ ಪತ್ನಿ ಪಾರ್ವತಿ ಗೆ ಬರೆದ ಕಾರಣ, ಆತನ ಮಗ(ಅಯ್ಯಪ್ಪ ಶರ್ಮ) ಆಸ್ತಿಯನ್ನು ಪಡೆಯಲು ಇನ್ನಿಲ್ಲದ ಹರಸಾಹಸ ಮಾಡುತ್ತಾ ಮಾಟ ಮಂತ್ರದ ಮೊರೆ ಹೋಗುತ್ತಾನೆ.ಮುಂದೆ ಹಲವು ಅಗೋಚರ ಶಕ್ತಿಗಳ ಕಾಟದ ನಡುವೆ ಪೊಲೀಸರ ಆಟ ಏನು ಎನ್ನುತ್ತಾ ಕ್ಲೈಮಾಕ್ಸ್ ಅಂತಕ್ಕೆ ಬಂದು ನಿಲ್ಲುತ್ತದೆ.

ಮಾಟಮಂತ್ರ ಕೈಗೂಡುತ್ತಾ…
ನಿಧಿಗಾಗಿ ಕೊಲೆಯೇ…
ನಿಜವಾದ ಅಪರಾಧಿ ಯಾರು..
ಪೊಲೀಸರ ತಂತ್ರ ಏನು? ಮಾರಕಾಸ್ತ್ರ ಉತ್ತರ…
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಬೇಕಾದರೆ ನೀವು ಈ ಚಿತ್ರ ನೋಡಬೇಕು.

ಒಂದು ಅದ್ದೂರಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕಿ ಕೋಮಲ ನಟರಾಜ ರವರ ಧೈರ್ಯ ಮೆಚ್ಚಬೇಕು. ಈ ಚಿತ್ರದ ರೂವಾರಿ ವಿ. ಆರ್. ನಟರಾಜ ಕಲಾವಿದರಾಗಿ , ಗಾಯಕರಾಗಿ ಈ ಚಿತ್ರದ ಮೂಲಕ ಬೆಳ್ಳಿ ಪರದೆ ಮೇಲೆ ಮಿಂಚಿದ್ದಾರೆ. ಆರಂಭದಲ್ಲಿ ಭಾರತದ ಸುಂದರ ತಾಣಗಳನ್ನು ಹಾಡಿನ ಮೂಲಕ ತೋರಿಸುತ್ತಾ , ಒಬ್ಬ ಪ್ರೊಫೆಸರ್ ಪಾತ್ರವನ್ನ ಶ್ರಮಪಟ್ಟು ನಿರ್ವಹಿಸಿ , ಚಿತ್ರದ ಅಂತ್ಯದಲ್ಲೂ ಭರ್ಜರಿ ಸ್ಟೆಪ್ ಹಾಕುವ ಮೂಲಕ ತಮ್ಮ ಬಹುದಿನದ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.

ಇನ್ನು ಎಂದಿನಂತೆ ನಟಿ ಮಾಲಾಶ್ರೀ ಒಬ್ಬ ಸ್ಪೆಷಲ್ ಪೊಲೀಸ್ ಅಧಿಕಾರಿಯಾಗಿ ಭರ್ಜರಿಯಾಗಿ ಸದ್ದು ಮಾಡುತ್ತಾ , ಫೈಟ್ ನಲ್ಲಿ ಮಿಂಚಿದ್ದಾರೆ. ಆದರೆ ಅವರ ಗತ್ತಿಗೆ ಡಬ್ಬಿಂಗ್ ಧ್ವನಿ ಮ್ಯಾಚ್ ಆಗುತ್ತಿಲ್ಲ ಅನಿಸುತ್ತದೆ. ಇನ್ನು ಯುವ ಪ್ರತಿಭೆ ಆನಂದ್ ಆರ್ಯ ನಟನೆ ಆಗಾಗ ಪುನೀತ್ ರಾಜಕುಮಾರ್ ರನ್ನ ನೆನಪಿಸುವಂತೆ ಮಾಡುತ್ತದೆ.

ಇನ್ನು ಈ ಚಿತ್ರದ ಹೈಲೈಟ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಉಗ್ರಂ ಮಂಜು ತನ್ನ ನಟನ ಸಾಮರ್ಥ್ಯವನ್ನು ಎತ್ತಿ ಹಿಡಿದಿದ್ದಾರೆ. ರಿಪೋರ್ಟರ್ ಆಗಿ ಹರ್ಷಿಕಾ ಪುಣಚ್ಚ , ವಿಲನ್ ಪಾತ್ರದಲ್ಲಿ ಅಯ್ಯಪ್ಪ. ಪಿ.ಶರ್ಮ ಸೇರಿದಂತೆ ಮಂತ್ರವಾದಿಯ ಪಾತ್ರದಾರಿ ಹಾಗೂ ಉಳಿದ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.

ಉಳಿದಂತೆ ಚಿತ್ರದ ಸಂಗೀತ , ಛಾಯಾಗ್ರಹಣ , ನೃತ್ಯ ಸಂಯೋಜನೆ , ಸಂಕಲನ ಎಲ್ಲವೂ ಚಿತ್ರಕ್ಕೆ ಪೂರಕವಾಗಿ ಮೂಡಿಬಂದಿದೆ. ಒಟ್ಟಾರೆ ಭರ್ಜರಿ ಆಕ್ಷನ್ , ಮಾಸ್ , ಲವ್ , ಫ್ಯಾಮಿಲಿ ಸೆಂಟಿಮೆಂಟ್ ಒಳಗೊಂಡಿರುವ ಈ ಚಿತ್ರವನ್ನು ಕುಟುಂಬ ಸಮೇತ ಎಲ್ಲರೂ ಒಮ್ಮೆ ನೋಡಬಹುದು.

 

error: Content is protected !!