Cini NewsSandalwood

ಅಪ್ಪ ಮಗನ ಬಾಂಧವ್ಯದ “ಸಮಯ”ಚಿತ್ರದ ಟ್ರೇಲರ್ ಬಿಡುಗಡೆ

ಸದಭಿರುಚಿಯ ಸಿನಿಮಾಗಳನ್ನು ನೀಡುತ್ತಾ ಬಂದಿರುವ ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕನೆಂದು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಎಸ್.ಆರ್.ಪ್ರಮೋದ್ ಐದನೇ ಪ್ರಯತ್ನದ ಫಲ ’ಸಮಯ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡುತ್ತಾ ಯಾವುದೇ ಸಿನಿಮಾವನ್ನು ಸಣ್ಣದು, ದೊಡ್ಡ ಬಜೆಟ್ ಅಂತ ವಿಂಗಡಣೆ ಮಾಡಬಾರದು. 90ರ ದಶಕದಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಕೆ.ವಿ.ಜಯರಾಂ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿಕೊಂಡು, ಕನಿಷ್ಟ ಹಣದಲ್ಲಿ ’ರಂಜಿತಾ’ ಸಿನಿಮಾ ಮಾಡಿದರು. ಅದು ಸೂಪರ್ ಹಿಟ್ ಆಯಿತು.

ನಾವು ಯಾವ ರೀತಿಯ ಕಂಟೆಂಟ್ ಕೊಡುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ಆಗ ಬಜೆಟ್ ಅಥವಾ ಸ್ಟಾರ್ ನಟ ಎಂದು ನೋಡುವುದಿಲ್ಲ. ನಿರ್ದೇಶಕರು ಒಳ್ಳೆಯ ಪ್ರಯತ್ನದಿಂದ ಉತ್ತಮ ಕಥೆ ಇಟ್ಟುಕೊಂಡು ಚಿತ್ರ ಮಾಡಿದರೆ ಖಂಡಿತವಾಗಿಯೂ ಗೆಲ್ಲುತ್ತದೆ. ನೋಡುಗರು ಇಷ್ಟಪಡುತ್ತಾರೆ.

ಅದೇ ರೀತಿಯಲ್ಲಿ ಪ್ರಮೋದ್‌ರವರು ಸಿನಿಮಾ ಮೇಲೆ ಪ್ರೀತಿ ಇಟ್ಟು ಮಾಡಿರುವುದರಿಂದ ಗೆಲುವು ಕಾಣುತ್ತಾರೆ ಎಂಬ ನಂಬಿಕೆ ಮೂಡಿದೆ. ಅವರು ಈ ವರ್ಷ ಮೂರು ಸಿನಿಮಾಗಳನ್ನು ಸೆನ್ಸಾರ್ ಮಾಡಿಸಿ, ಎರಡು ಸಿನಿಮಾಗಳಿಗೆ ಚಿತ್ರಕಥೆ ಬರೆಯುವುದರಲ್ಲಿ ಬ್ಯುಸಿ ಇದ್ದಾರೆ. ಇವರ ಶ್ರಮ ನೋಡಿದಾಗ ಭವಿಷ್ಯದಲ್ಲಿ ಉತ್ತುಂಗಕ್ಕೆ ಬರುತ್ತಾರೆ ಎನ್ನುವ ಭರವಸೆ ಇದೆ. ಒಳ್ಳೆಯದಾಗಲಿ ಎಂದರು.

ಸಿನಿಮಾಕ್ಕೆ ರಚನೆ, ನಿರ್ದೇಶನ, ಪ್ರಮೋದ್ ಪಿಕ್ಚರ‍್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಹಾಗೂ ನಾಯಕನಟನಾಗಿ ಅಭಿನಯಸಿರುವ ಎಸ್.ಆರ್.ಪ್ರಮೋದ್ ಹೇಳುವಂತೆ ಇದೊಂದು ತಂದೆ ಮಗನ ನಡುವಿನ ಬಾಂಧವ್ಯವನ್ನು ಹೇಳಲಿದೆ. ಅಪ್ಪನಾದವನು ಕಷ್ಟಪಟ್ಟು, ಸಾಲ ತೆಗೆದುಕೊಂಡು, ಸರ್ವಸ್ವವನ್ನು ತ್ಯಾಗ ಮಾಡಿ, ಪುತ್ರನ ವಿದ್ಯಾಭ್ಯಾಸ ಮಾಡಿಸಲು ಮುಂದಾಗುತ್ತಾರೆ. ಆದರೆ ಪುಂಡ ಮಗ ಓದದೆ ಕುಟುಂಬದ ನೆಮ್ಮದಿ ಹಾಳು ಮಾಡುತ್ತಾನೆ.

ಕ್ಲೈಮಾಕ್ಸ್‌ದಲ್ಲಿ ಆತ ಸರಿ ಹೋಗುತ್ತಾನಾ? ಮನೆಯ ಪರಿಸ್ಥಿತಿ ಏನಾಗುತ್ತದೆ? ಪ್ರೀತಿಸಿದವಳು ಏನಾಗುತ್ತಾಳೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಮಾಧ್ಯಮದವರು ಪ್ರೋತ್ಸಾಹ ಕೊಡಬೇಕೆಂದು ಕೋರಿಕೊಂಡರು.

ನವ ಪ್ರತಿಭೆ ರಮ್ಯ ನಾಯಕಿ. ಖಳನಾಗಿ ಭೀಮಣ್ಣನಾಯ್ಕ್. ಇವರೊಂದಿಗೆ ಕಿಟ್ಟಿ, ಚಂದ್ರಶೇಖರ್, ಮಂಜು ಮಡಬ, ಬನ್ನೂರು ರಂಗಸ್ವಾಮಿ ಮುಂತಾದವರು ಬಣ್ಣ ಹಚ್ಚಿದ್ದಾರೆ. ಮಲ್ಲೇಶ್.ಪಿ.ವಿಜ್ಜು ಸಾಹಿತ್ಯದ ಎರಡು ಹಾಡುಗಳಿಗೆ ಕೇವೀನ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಗಿರೀಶ್.ಶಿ, ಸಂಕಲನ ಆಯುರ್, ಸಾಹಸ ಅಲ್ಟಿಮೇಟ್ ಶಿವು, ಸಂಭಾಷಣೆ ಹೇಮಂತ್‌ಕುಮಾರ್.ಸರ್‌ನಾಯಕ್-ಸತೀಶ್‌ಕುಮಾರ್, ಕಲರಿಸ್ಟ್ ಕಿಶೋರ್‌ಕುಮಾರ್ ಅಕಾನ ಅವರದಾಗಿದೆ. ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ಸುಂದರ ಸಮಯದಲ್ಲಿ ನಿರ್ದೇಶಕರುಗಳಾದ ಸಬಾಸ್ಟಿಯನ್ ಡೇವಿಡ್, ವಿಕ್ಟರಿವಾಸು, ಮಂಡ್ಯನಾಗರಾಜು, ಅತಿಥಿಗಳಾದ ಕಮಲ್,ಅನಿಲ್ ಉಪಸ್ತಿತರಿದ್ದರು. ಸೆನ್ಸಾರ್‌ನಿಂದ ಪ್ರಶಂಸೆ ಪಡೆದುಕೊಂಡು ’ಯುಎ’ ಪ್ರಮಾಣಪತ್ರ ಹೊಂದಿರುವ ಚಿತ್ರವು ಮುಂದಿನ ತಿಂಗಳು ತೆರೆ ಕಾಣಲಿದೆ.

error: Content is protected !!