Cini NewsSandalwood

“chef ಚಿದಂಬರ” ಚಿತ್ರದ ಟ್ರೇಲರ್ ಅನಾವರಣ ಮಾಡಿದ ನಟ ರಮೇಶ್ ಅರವಿಂದ್.

ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಜನಪ್ರಿಯರಾಗಿರುವ ಅನಿರುದ್ದ್ ಜತಕರ್ ನಾಯಕನಾಗಿ ನಟಿಸಿರುವ, ರೂಪ ಡಿ.ಎನ್ ನಿರ್ಮಾಣದ ಹಾಗೂ ಆನಂದರಾಜ್ ಎಂ ನಿರ್ದೇಶಿಸಿರುವ “chef ಚಿದಂಬರ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಖ್ಯಾತ ನಟ ರಮೇಶ್ ಅರವಿಂದ್ ಟ್ರೇಲರ್ ಬಿಡುಗಡೆ ಮಾಡಿದರು. ಟ್ರೇಲರ್ ಗೆ ಮೆಚ್ಚುಗೆ ದೊರಕುತ್ತಿದ್ದು, ಇದೇ ಜೂನ್ 14 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಐದು ವರ್ಷಗಳ ನಂತರ ಅನಿರುದ್ದ್ ಅಭಿನಯಿಸಿರುವ ಚಿತ್ರ ತೆರೆಗೆ ಬರುತ್ತಿದೆ. ಟ್ರೇಲರ್ ಬಿಡುಗಡೆ ನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

ಡಾ||ವಿಷ್ಣುವರ್ಧನ್ ಹಾಗೂ ತಮ್ಮ ನಡುವಿವ ಒಡನಾಟವನ್ನು ನೆನಪಿಸಿಕೊಂಡು ಮಾತು ಆರಂಭಿಸಿದ ರಮೇಶ್ ಅರವಿಂದ್, ಅನಿರುದ್ದ್ ನನ್ನ ನಿರ್ದೇಶನದ “ರಾಮ ಶ್ಯಾಮ ಭಾಮ” ಸೇರಿದಂತೆ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಪ್ರತಿಭಾವಂತ ನಟ. ಈ ಚಿತ್ರದ ಟ್ರೇಲರ್ ಸಹ ಚೆನ್ನಾಗಿದೆ. ಡಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರದ ಟ್ರೇಲರ್ ಕುತೂಹಲ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ‌. ಚಿತ್ರತಂಡದ ಶ್ರಮ ಕಾಣುತ್ತಿದೆ. ಚಿತ್ರ ಯಶಸ್ವಿಯಾಗಲಿ ಎಂದರು.

ನಿರ್ಮಾಪಕಿ ರೂಪ ಅವರ ಪತಿ ಸರ್ವೋತಮ್ ಹಾಗೂ ನಾನು ಬಹಳ ವರ್ಷಗಳ ಸ್ನೇಹಿತರು. ಅವರು‌ ಚಿತ್ರ ಮಾಡೋಣ ಎಂದಾಗ ಸಾಕಷ್ಟು ಕಥೆಗಳನ್ನು ಕೇಳಿದ್ದೆ. ಆನಂದರಾಜ್ ಅವರು ಹೇಳಿದ ಈ ಕಥೆ ಇಷ್ಟವಾಯಿತು. ನಂತರ ಡಾ|ವಿಷ್ಣುವರ್ಧನ್ ಸ್ಮಾರಕದ ಬಳಿ ಸ್ಕ್ರಿಪ್ಟ್ ಪೂಜೆ ಮಾಡಲಾಯಿತು. ಮುಹೂರ್ತದ ದಿನ ಭಾರತಿ ವಿಷ್ಣುವರ್ಧನ್ ಅವರು ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದರು. ಕಿಚ್ಚ ಸುದೀಪ್ ಟೀಸರ್ ಗೆ ಧ್ವನಿ ನೀಡಿ ಪ್ರೋತ್ಸಾಹಿಸಿದರು. ಈಗ ರಮೇಶ್ ಅರವಿಂದ್ ಟ್ರೇಲರ್ ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ‌. ಜೂನ್ 14 ಚಿತ್ರ ಬಿಡುಗಡೆಯಾಗುತ್ತಿದೆ‌. ನೋಡಿ ಹಾರೈಸಿ ಎಂದರು ನಟ ಅನಿರುದ್ದ್.

ಈ ಚಿತ್ರದ ಚಿತ್ರೀಕರಣ ಚಿತ್ರತಂಡದ ಸಹಕಾರದಿಂದ ಕೇವಲ 29 ದಿನಗಳಲ್ಲಿ ಮುಕ್ತಾಯವಾಗಿದೆ. ಚಿತ್ರದಲ್ಲಿ ಮೂರು ಹಾಡುಗಳಿದೆ. ಅದರಲ್ಲಿ ಒಂದು ಹಾಡನ್ನು ಅನಿರುದ್ದ್ ಅವರೆ ಹಾಡಿದ್ದಾರೆ. ರೂಪ ಡಿ.ಎನ್ ಅವರು ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಡಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರ ಪ್ರೇಕ್ಷಕರಿಗೂ ಪ್ರಿಯವಾಗಲಿದೆ ಎನ್ನುತ್ತಾರೆ ನಿರ್ದೇಶಕ ಆನಂದರಾಜ್.

ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ರಮೇಶ್ ಅರವಿಂದ್ ಅವರಿಗೆ ಹಾಗೂ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ ನಿರ್ಮಾಪಕಿ ರೂಪ ಡಿ ಎನ್ ಅವರು ನಮ್ಮ ಚಿತ್ರವನ್ನು ಎಲ್ಲರು ನೋಡಿ. ಪ್ರೋತ್ಸಾಹ ನೀಡಿ ಎಂದರು.

ಚಿತ್ರದ ನಾಯಕಿಯರಾದ ನಿಧಿ ಸುಬ್ಬಯ್ಯ ಹಾಗೂ “ಲವ್ ಮಾಕ್ಟೇಲ್” ಖ್ಯಾತಿಯ ರೆಚೆಲ್ ಡೇವಿಡ್ ಅವರು ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ನಟ ಶಿವಮಣಿ ಅವರು ನಿರ್ದೇಶಕರೊಟ್ಟಿಗೆ ವಿಭಿನ್ನವಾಗಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್, ಛಾಯಾಗ್ರಾಹಕ ಉದಯ್ ಲೀಲ, ಸಂಕಲನಕಾರ ವಿಜೇತ್ ಚಂದ್ರ ಹಾಗೂ ಸಂಭಾಷಣೆ ಬರೆದಿರುವ ಗಣೇಶ್ ಪರಶುರಾಮ್ ಸೇರಿದಂತೆ ಮುಂತಾದ ತಂತ್ರಜ್ಞರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

error: Content is protected !!