Cini NewsSandalwood

25 ದಿನ ಪೂರೈಸಿದ “ರಾಜಯೋಗ” ಚಿತ್ರದ ಥಿಯೇಟರ್ ಸಂಖ್ಯೆ ಹೆಚ್ಚಳ‌

ಬೆಳ್ಳಿ ಪರದೆಯ ಮೇಲೆ ಒಂದು ಸದಭಿರುಚಿಯ ಕೌಟುಂಬಿಕ ಕಥಾಹಂದರ ಚಿತ್ರವಾಗಿ ಹೊರಬಂದು ಯಶಸ್ವಿ 25 ದಿನವನ್ನು ಪೂರೈಸಿರುವಂತಹ ಚಿತ್ರ “ರಾಜಯೋಗ”. ಪೋಷಕ ನಟ ಧರ್ಮಣ್ಣ ಕಡೂರು ಮೊದಲ ಬಾರಿಗೆ ನಾಯಕನಾಗಿ ನಟಿಸಿದ ರಾಜಯೋಗ ಚಿತ್ರವೀಗ ಯಶಸ್ವೀ ದಿನಗಳನ್ನು ಕಂಡಿದೆ. ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಮಗ ಐಎಎಸ್ ಅಧಿಕಾರಿಯಾಗುವ ಮೂಲಕ ಇಡೀ ಹಳ್ಳಿಗೆ ಕೀರ್ತಿ ತಂದ ಕಥೆ ಹೊಂದಿದ್ದ ರಾಜಯೋಗ ಚಿತ್ರಕ್ಕೆ ರಾಜ್ಯಾದ್ಯಂತ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕರೂ ನಿರೀಕ್ಷಿಸಿದ ಗಳಿಕೆ ಬರುತ್ತಿಲ್ಲ. ಆದರೂ ನಮ್ಮ ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರಲ್ಲ ಎನ್ನುವ ಧನ್ಯತಾಭಾವ ಚಿತ್ರತಂಡಕ್ಕಿದೆ. ಚಿತ್ರ 25 ದಿನಗಳನ್ನು ಪೂರೈಸಿದ ಖುಷಿಯನ್ನು ಹಂಚಿಕೊಳ್ಳಲು ಮಾಧ್ಯಮದ ಮುಂದೆ ಹಾಜರಾಗಿ ಒಂದಷ್ಟು ಮಾಹಿತಿ ನೀಡಿದೆ.

ನಿರ್ಮಾಪಕ‌ ಕುಮಾರ ಕಂಠೀರವ ಮಾತನಾಡುತ್ತಾ ಕಾಂಪಿಟೇಶನ್ ನಡುವೆ ಹೋಪ್ ಇಟ್ಟುಕೊಂಡು ಚಿತ್ರವನ್ನು ಬಿಡುಗಡೆ ಮಾಡಿದ್ದೆವು. ಪತ್ರಕರ್ತರು ಉತ್ತಮ ಚಿತ್ರ ಎಂದಾಗ ನಾವು ಗದ್ದೆವು ಅನಿಸಿತು. ಸಂಕಷ್ಟಗಳನ್ನು ಎದುರಿಸಿ ಸಿನಿಮಾನ ನಿಲ್ಲಿಸಿದೆವು. ಕೂತಿರುವಷ್ಟು ವೇಳೆ ಜನರನ್ನು ಹಿಡಿದು ಕೂರಿಸುವ ಶಕ್ತಿ ನಮ್ಮ ಚಿತ್ರಕ್ಕಿತ್ತು. ಪೂರ್ತಿ ಗೆದ್ದಿಲ್ಲ. ಆದರೆ ಒಳ್ಳೆ ಸಿನಿಮಾ ಮಾಡಿದ ತೃಪ್ತಿಯಿದೆ. ಈಗ 2 ಥಿಯೇಟರುಗಳಲ್ಲಿ ಮಾತ್ರ ಸಿನಿಮಾ ಇದೆ. ಈ ವಾರದಿಂದ ಇನ್ನೂ ಹತ್ತು ಥೇಟರುಗಳಲ್ಲಿ ಸಿನಿಮಾ ಹಾಕುತ್ತಿದ್ದೇವೆ ಎಂದು ಹೇಳಿದರು.

ನಾಯಕ ಧರ್ಮಣ್ಣ ಮಾತನಾಡಿ ನಾನು ಏನು ಹೇಳಿದ್ದೆನೋ ಅದನ್ನು ಉಳಿಸಿಕೊಂಡಿದ್ದೇನೆ. ನಮ್ಮ ಚಿತ್ರವನ್ನು ಕಡಿಮೆ ಜನ ನೋಡಿದರೂ ಯಾರೊಬ್ಬರೂ ನೆಗೆಟಿವ್ ರಿಯಾಕ್ಷನ್ ಕೊಟ್ಟಿಲ್ಲ. ನಮ್ಮ ಕಡೂರಿನಲ್ಲಿ ೫ ನೇ ವಾರಕ್ಕೆ ಬೇರೆ ಸಿನಿಮಾ ಬಿಟ್ಟು ನಮ್ಮ ಚಿತ್ರವನ್ನು ಮತ್ತೆ ಹಾಕುತ್ತಿದ್ದಾರೆ. ಅಲ್ಲಿನ ಕಾಲೇಜ್ ಪ್ರಿನ್ಸಿಪಾಲರೇ ಒತ್ತಾಯ ಮಾಡಿ ಹಾಕಿಸುತ್ತಿದ್ದಾರೆ ಎಂದು ಹೇಳಿದರು. ನಾಯಕಿ ನಿರೀಕ್ಷಾರಾವ್ ಮಾತನಾಡಿ ನಾನು ಮೂಲತಃ ಆಂಧ್ರದವಳು, ಹೈದರಾಬಾದ್ ನಿಂದ ನನ್ನ ಸ್ನೇಹಿತೆಯರೆಲ್ಲ ಬಂದು ಸಿನಿಮಾ ನೋಡಿ ಮೆಚ್ಚಿಕೊಂಡರು ಎಂದು ಹೇಳಿದರು.

ಲಿಂಗರಾಜ ಉಚ್ಚಂಗಿದುರ್ಗ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಶ್ರೀರಾಮರತ್ನ ಪ್ರೊಡಕ್ಷನ್ಸ್ ಮೂಲಕ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆಎನ್, ನೀರಜ್ ಗೌಡ ಧರ್ಮಣ್ಣ ಕಡೂರು ನಿರ್ಮಿಸಿದ್ದಾರೆ.
ಅಕ್ಷಯ್ ರಿಶಭ್ ಅವರ ಸಂಗೀತ, ವಿಷ್ಣುಪ್ರಸಾದ್ ಅವರ ಕ್ಯಾಮೆರಾ, ಬಿ.ಎಸ್. ಕೆಂಪರಾಜು ಅವರ ಸಂಕಲನ ಈ ಚಿತ್ರಕ್ಕಿದೆ,

ನಾಗೇಂದ್ರ ಶಾ, ಕೃಷ್ಣ ಮೂರ್ತಿ ಕವುತಾರ್, ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ. ಇನ್ನು ಈ ವಾರದಿಂದ ಮತ್ತಷ್ಟು ಚಿತ್ರಮಂದಿರಗಳಲ್ಲಿ ರಾಜಯೋಗ ಪ್ರದರ್ಶನವಾಗಲ್ಲಿದ್ದು , ಪ್ರೇಕ್ಷಕರು ಯಾವ ರೀತಿ ಚಿತ್ರವನ್ನು ಕರೆದುಕೊಂಡು ಹೋಗುತ್ತಾರೆ ಎಂಬುದನ್ನು ನೋಡಬೇಕಿದೆ

error: Content is protected !!