Cini NewsSandalwood

“ಪೌಡರ್‌” ಚಿತ್ರದ ಟೀಸರ್‌ ಬಿಡುಗಡೆ.

ಆಗಸ್ಟ್‌ ತಿಂಗಳಲ್ಲಿ ಕೆ.ಆರ್‌.ಜಿ ಮತ್ತು ಟಿ.ವಿ.ಎಫ್‌ ಘೋಷಿಸಿದ ಮೊದಲ ಚಿತ್ರವಾದ “ಪೌಡರ್”‌ ಇದೀಗ ತನ್ನ ಟೀಸರ್‌ ಬಿಡುಗಡೆ ಮಾಡಿದೆ. ಇಬ್ಬರು ಯುವಕರು ಒಂದು ನಿಗೂಢವಾದ “ಪೌಡರ್”‌ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ “ಪೌಡರ್”.‌

ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಹುವುದೇ? “ಪೌಡರ್”‌ ಹಿಂದಿನ “ಪವರ್”‌ ಅವರಿಗೆ ತಿಳಿಯುವುದೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಜುಲೈ ೧೨ ಚಿತ್ರಮಂದಿರಗಳಲ್ಲಿ ಸಿಗಲಿದೆ. ಈಗಾಗಲೇ ತನ್ನ ಟೀಸರ್‌ ಮೂಲಕ “ಪೌಡರ್”‌ ಎಲ್ಲೆಡೆ ನಗೆ ಚಟಾಕಿ ಹತ್ತಿಸಿದ್ದು, ಚಿತ್ರ ಬಿಡುಗಡೆಯ ನಂತರ ಈ ಹಾಸ್ಯ, ನಗು ದುಪ್ಪಟ್ಟುಗೊಳ್ಳಲಿದೆ ಎಂದರೆ ಉತ್ಪ್ರೇಕ್ಷೆಯಲ್ಲ.

“ಪೌಡರ್”‌ ಚಿತ್ರವನ್ನು ಕೆ.ಆರ್‌.ಜಿ ಸ್ಟೂಡಿಯೋಸ್‌ ಮತ್ತು ಟಿ.ವಿ.ಎಫ್‌ ಮೋಷನ್‌ ಪಿಕ್ಚರ್ಸ್‌ ನ ಸಹಯೋಗದಲ್ಲಿ ಮೂಡಿ ಬಂದಿರುವ ಮೊದಲ ಚಿತ್ರವಾಗಿದೆ. ಚಿರಪರಿಚಿತ ಚಿತ್ರ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಕೆ ಆರ್ ಜಿ ಸ್ಟುಡಿಯೋಸ್ ವಿಭನ್ನ ಕಥಾವಸ್ತುವನ್ನು ಸಿನಿ ಪ್ರೇಕ್ಷಕರ ಮುಂದಿಡುವ ಗುರಿಯೊಂದಿಗೆ ಈಗಾಗಲೇ ಹಲವಾರು ಪ್ರಖ್ಯಾತ ಚಿತ್ರಗಳನ್ನು ನಿರ್ಮಿಸಿವೆ. ಇನ್ನು ಟಿ.ವಿ.ಎಫ್‌ ಮೋಷನ್‌ ಪಿಕ್ಚರ್ಸ್‌ ಹಲವಾರು ವೆಬ್‌ ಸೀರೀಸ್‌ ಗಳ ಮೂಲಕ ತನ್ನದೇ ಛಾಪನ್ನು ಮೂಡಿಸಿರುವ ಸಂಸ್ಥೆಯಾಗಿದ್ದು, ಇವರಿಬ್ಬರ ಸಹಯೋಗದಲ್ಲಿ ಮೂಡಿ ಬಂದಿರುವ “ಪೌಡರ್”‌ ಬಹುನಿರೀಕ್ಷಿತ ಚಿತ್ರವಾಗಿದೆ.

ಕೆ.ಆರ್‌.ಜಿ ಸ್ಟೂಡಿಯೋಸ್‌ ನ ಮಾಲಿಕ ಕಾರ್ತಿಕ್‌ ಗೌಡ ಮತ್ತು ಟಿ.ವಿ.ಎಫ್‌ ಮೋಷನ್‌ ಪಿಕ್ಚರ್ಸ್‌ ನ ಮಾಲಿಕ ಅರುನಭ್‌ ಕುಮಾರ್‌ ಮಾತನಾಡಿ, “ಯುವಕರಿಗೆ, ಸಿನಿ ಪ್ರೇಕ್ಷಕರಿಗೆ ಹೊಸ ರೀತಿಯ ಕಥೆಗಳನ್ನು, ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಚಿತ್ರಗಳನ್ನು ನೀಡುವುದು ನಮ್ಮ ಮುಖ್ಯ ಗುರಿಯಾಗಿದ್ದು, ಈ ನಿಟ್ಟಿನಲ್ಲಿ “ಪೌಡರ್”‌ ನಮ್ಮ ಸಹಯೋಗದ ಚೊಚ್ಚಲ ಪ್ರಯತ್ನ. ʼಮಡ್ಗಾನ್‌ ಎಕ್ಸ್‌ ಪ್ರೆಸ್‌ʼ , ʼಫುಕ್ರೇ” ,ʼಗೋ ಗೋವಾ ಗಾನ್‌ʼ, ʼಡೆಲ್ಲಿ ಬೆಲ್ಲಿʼ ನಂತಹ ಹಾಸ್ಯ ಚಿತ್ರಗಳ ಅಭಿಮಾನಿಗಳಾಗಿ ಕನ್ನಡದಲ್ಲಿ ಅಂತಹದ್ದೇ ನಗೆ ಚಟಾಕಿಯನ್ನು ಹತ್ತಿಸುವ ಚಿತ್ರವನ್ನು ನಿರ್ಮಿಸಿದ್ದೇವೆ ಎಂದು ನಂಬಿದ್ದೇವೆ. ಚಿತ್ರವನ್ನು ನೋಡಿ ಪ್ರೇಕ್ಷಕರು ತಮ್ಮ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ ಎಂಬ ಭರವಸೆ ನಮಗಿದೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಇನ್ನಷ್ಟು ವಿಭಿನ್ನ ಕಥೆಗಳನ್ನು ಈ ಸಹಯೋಗದ ಮೂಲಕ ಮುಂದಿಡಲು ಬಯಸುತ್ತೇವೆ.

ಟಿ.ವಿ.ಎಫ್‌ ಮೋಷನ್‌ ಪಿಕ್ಚರ್ಸ್‌ ಕುರಿತು:
ಸಂಸ್ಥೆಯ ಸಂಸ್ಥಾಪಕ ಅರುನಭ್‌ ಕುಮಾರ್‌ ಸಾರಥ್ಯದಲ್ಲಿ, ತನ್ನ ಆರಂಭದ ದಿನದಿಂದಲೂ, ಉತ್ತಮ ಗುಣ ಮಟ್ಟದ ಕಥೆಗಳ ಮೂಲಕ ಟಿ.ವಿ.ಎಫ್‌ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದೆ. ತನ್ನ ೧೦ ವರ್ಷಗಳ ಪಯಣದಲ್ಲಿ, ಹಲವಾರು “ಸ್ಟೀರಿಯೋ ಟೈಪ್”ಗಳನ್ನು ಭೇದಿಸಿದೆ. “ದಿ ವೈರಲ್‌ ಫೀವರ್” ಎಂಬ ಶೀರ್ಷಿಕೆಯೊಂದಿಗೆ ಸಾವಿರಾರು ಪ್ರೇಕ್ಷಕರ ಮನಮುಟ್ಟಿದೆ. ಈ ನಡುವೆ ಹಲವಾರು ನಿರ್ಮಾಣ ಸಂಸ್ಥೆಗಳು ಉಗಮವಾಗಿದ್ದರೂ, ಟಿ.ವಿ.ಎಫ್‌ ವೆಬ್‌ ಕಂಟೆಂಟ್‌ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿದೆ.

ಕೆ.ಆರ್.ಜಿ ಸ್ಟೂಡಿಯೋಸ್‌ ಕುರಿತು:
ಕಾರ್ತಿಕ್‌ ಗೌಡ ಮತ್ತು ಯೋಗಿ ಜಿ ರಾಜ್‌ ಸಾರಥ್ಯದಲ್ಲಿ ೭ ವರ್ಷಗಳ ಹಿಂದೆ ಆರಂಭಗೊಂಡ ಈ ಸಂಸ್ಥೆ ವಿಭಿನ್ನ ಕಥಾವಸ್ತುವನ್ನು ಹೊಂದಿರುವ ಚಿತ್ರಗಳನ್ನು ಕನ್ನಡ ಪ್ರೇಕ್ಷಕರಿಗೆ ಕೊಡುಗೆಯಾಗಿ ನೀಡುತ್ತಾ ಬಂದಿದೆ. ತನ್ನ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಾಗೂ ಸಿನಿ ಪ್ರೇಕ್ಷಕರ ಮನದಲ್ಲಿ ಮನೆ ಮಾಡಿದೆ, ಮತ್ತು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಇದೀಗ ಇಂತಹ ಅರ್ಥಪೂರ್ಣ ಸಹಯೋಗಗಳ ಮೂಲಕ ಕನ್ನಡ ಚಿತ್ರರಂಗವನ್ನು ಇನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದೆ

error: Content is protected !!