Cini NewsSandalwood

ಮುಗ್ಧ ಪ್ರೇಮಿಗಳ “ಮುಕ್ತ ಮನಸು”.

ಹೊಸಬರೇ ಸೇರಿಕೊಂಡು ’ಮುಕ್ತ ಮನಸು’ ಎನ್ನುವ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ’ಕೇಳದೆ ನಿಮಗೀಗ’ ಎಂಬ ಅಡಿಬರಹವಿದೆ. ಎಸ್.ಎಲ್.ಜೆ. ಪ್ರೋಡಕ್ಷನ್ಸ್ ಅಡಿಯಲ್ಲಿ ಮೈಸೂರು ಮೂಲದ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಬೋರೇಗೌಡ-ಲೋಕೇಶ್-ಜಿ.ಎನ್.ವೀಣಾ ನಿರ್ಮಾಣದಲ್ಲಿ ಪಾಲುದಾರರು.

ರಚನೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನ ಮಾಡಿರುವುದು ಆರ್.ಸಿ.ರಂಗಶೇಖರ್. ಪ್ರಚಾರದ ಮೊದಲ ಹಂತವಾಗಿ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ನಾನು ರಂಗಭೂಮಿ ಕಲಾವಿದ. ಸತತ 25 ವರ್ಷಗಳ ಕಾಲ ರಂಗಾಯಣದಲ್ಲಿ ಕೆಲಸ ಮಾಡಿ, ಡಾ.ರಾಜ್‌ಕುಮಾರ್ ಫಿಲಿಂ ಶಾಲೆಯಲ್ಲಿ ಕೋರ್ಸ್ ಮಾಡಿದ್ದೇನೆ.

ಇದೆಲ್ಲಾ ಅನುಭವದಿಂದ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದೇನೆ. ಪ್ರೇಮಿಗಳು ಯಾರೇ ಆಗಿರಲಿ. ಮುಕ್ತವಾಗಿ ಯಾವುದೇ ತರಹದ ಕಲ್ಮಶ ಇಲ್ಲದ ಪ್ರೀತಿಯು ಹೇಗೆ ಕೊನೆ ತನಕ ಉಳಿದುಕೊಳ್ತದೆ. ಅದು ಹೇಗಿರುತ್ತದೆ. ಹಳ್ಳಿಯಿಂದ ಪಟ್ಟಣಕ್ಕೆ ಓದಲು ಬರುವ ಆಕೆಗೆ ಪಯಣದಲ್ಲಿ ಒಬ್ಬನೊಂದಿಗೆ ಲವ್ ಬೆಸೆಯುತ್ತದೆ.

ಮನೆಯಲ್ಲಿ ವಿರೋದ ಎದುರಾದಾಗ ಮುಕ್ತ ಮನಸುಗಳ ಪ್ರೀತಿ ಯಾವ ಹಂತಕ್ಕೆ ತಲುಪುತ್ತದೆ. ಕೊನೆಗೆ ಇಬ್ಬರು ಒಂದಾಗುತ್ತಾರಾ? ಎಂಬುದನ್ನು ಕಮರ್ಷಿಯಲ್ ರೀತಿಯಲ್ಲಿ ತೋರಿಸಲಾಗಿದೆ. ಅಲ್ಲದೆ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದೆನೆಂದು ಸಿನಿಮಾದ ವ್ಯಾಖ್ಯಾನ ನೀಡಿದರು.

ಹೈದರಬಾದ್‌ನಲ್ಲಿ ನಡೆದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-5ರ ಸ್ಪರ್ಧಿಯಾಗಿದ್ದ ಮೈಸೂರಿನ ಮೋಹನ್‌ರಂಗನಾಥ್ ನಾಯಕನಾಗಿ ಆಟೋ ಚಾಲಕನ ಪಾತ್ರವನ್ನು ನಿಭಾಯಿಸಿದ್ದಾರೆ. ಕ್ಲಾಸಿಕಲ್ ಡ್ಯಾನ್ಸರ್ ಆಗಿರುವ ಬೆಂಗಳೂರಿನ ಮಾನ್ಯ, ಮನಸ್ಸು ಹೆಸರಿನಲ್ಲಿ ನಾಯಕಿಯಾಗಿ ಮೂರನೇ ಅವಕಾಶ.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣಗೌಡ ಹೇಳುವಂತೆ ತುಣುಕುಗಳನ್ನು ನೋಡಿದಾಗ ಕಲಾವಿದರ ಅಭಿನಯ ಕೊರತೆ ಕಾಣುತ್ತಿಲ್ಲ. ಅನ್ನದಾತರು ಕಂಜೂಸು ಮಾಡದೆ ಖರ್ಚು ಮಾಡಿದ್ದಾರೆ. ಅದಕ್ಕೆ ಗುಣಮಟ್ಟ ಚೆನ್ನಾಗಿ ಮೂಡಿ ಬಂದಿದೆ. ಇದೆಲ್ಲಾವನ್ನು ನಿರ್ದೇಶಕರು ಸದ್ಬಳಿಕೆ ಮಾಡಿಕೊಂಡಿದ್ದಾರೆ. ಅವರುಗಳ ಪ್ರಯತ್ನ ಮುಗಿದಿದೆ.

ಇನ್ನು ಮಾಧ್ಯಮದವರು ಚಿತ್ರವನ್ನು ಕನ್ನಡದ ಮನಸುಗಳಿಗೆ ತಲುಪಿಸುವ ಕೆಲಸ ಮಾಡಬೇಕು. ಈಗ ದೇಶದಲ್ಲಿ ಎಲ್ಲಾ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಇದೆ. ಸದ್ಯ ಸಾಮಾಜಿಕ ಜಾಲತಾಣಗಳ ಸದ್ದು ಜೋರಾಗಿದೆ. ನೀವುಗಳು ಹೊಸಬರ ಚಿತ್ರಗಳಿಗೆ ಉತ್ತಮ ರೀತಿಯಲ್ಲಿ ಪೋಸ್ಟ್ ಮಾಡಿದರೆ ಲಕ್ಷಾಂತರ ಜನರು ನೋಡುತ್ತಾರೆ.

ಗೆದ್ದ ಸಿನಿಮಾಗಳು ಒಳ್ಳೆಯದಾಗಿರುವುದಿಲ್ಲ. ಸೋತ ಚಿತ್ರಗಳು ಕೆಟ್ಟದ್ದು ಅಂತ ಹೇಳಲಾಗದು. ಯಾವುದೋ ಕಾರಣಕ್ಕೆ ಗೆಲುವು ಅಥವಾ ಸೋತಿರಬಹುದು. ಮಾಧ್ಯಮದವರು ಕನ್ನಡ ಚಿತ್ರಗಳನ್ನು ಅದರಲ್ಲೂ ಹೊಸಬರನ್ನು ಪ್ರೋತ್ಸಾಹಿಸುವ ಕಾಯಕ ಈಗಲೂ ಮುಂದುವರೆಸಬೇಕೆಂದು ಕೋರಿಕೊಂಡರು.

ತಾರಾಗಣದಲ್ಲಿ ಶೋಭರಾಜ್, ರಮೇಶ್‌ಪಂಡಿತ್, ಅಪರ್ಣ, ನಾಗರತ್ನ, ಸೆಂಚೂರಿಗೌಡ, ಜಾನು, ಮಂಜುಬಿಳಿಗೆರೆ, ಮಧು ಮುಂತಾದವರು ನಟಿಸಿದ್ದಾರೆ. ಐದು ಹಾಡುಗಳಿಗೆ ವಿನುಮನಸು ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರವಿ, ಸಾಹಸ ಕೌರವವೆಂಕಟೇಶ್, ನೃತ್ಯ ಪ್ರಮೋದ್-ಸತ್ಯ ಅವರದಾಗಿದೆ. ಮೈಸೂರು, ಮಂಡ್ಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್‌ನಿಂದ ಪ್ರಶಂಸೆ ಪಡೆದುಕೊಂಡಿರುವ ಚಿತ್ರವು ಇದೇ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ.

error: Content is protected !!