Cini NewsSandalwood

“ಮತ್ಸ್ಯಗಂಧ” ಚಿತ್ರದಿಂದ ಸಂಗೀತ ನಿರ್ದೇಶಕನಾದ ನಟ ಪ್ರಶಾಂತ್ ಸಿದ್ದಿ

ಬೆಳ್ಳಿ ಪರದೆ ಮೇಲೆ ಹಾಸ್ಯ ನಟನೆಯ ಜೊತೆಗೆ ವಿಭಿನ್ನ ಮ್ಯಾನೇರಿಸಂ ಮೂಲಕ ಪ್ರೇಕ್ಷಕರ ಗಮನ ಸೆಳೆದಂತಹ ಪ್ರತಿಭೆ ಪ್ರಶಾಂತ್ ಸಿದ್ದಿ. ಸರಿಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದ ಈ ಪ್ರಶಾಂತ್ ಸಿದ್ದಿ ಈಗ ಸಂಗೀತ ನಿರ್ದೇಶಕನಾಗಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.

ಮೂಲತಃ ಪ್ರಶಾಂತ್ ಸಿದ್ದಿ ನೀನಾಸಂನ ರಂಗಭೂಮಿ ಪ್ರತಿಭೆ, ತಮ್ಮ ಪಯಣದ ಕುರಿತು ಮಾತನಾಡುತ್ತಾ ನಮ್ಮದು ಸಂಗೀತದ ಕುಟುಂಬ. ನಾಟಕ , ಸಂಗೀತ , ನೃತ್ಯ ಪ್ರತಿನಿತ್ಯ ನಮ್ಮ ಮನೆಯಲ್ಲಿ ಇದ್ದಿದ್ದೆ. ನನ್ನ ತಾಯಿಯು ನಾಟಕ , ಜಾನಪದ ಹಾಡುಗಳನ್ನು ಹಾಡುತ್ತಿದ್ದರು. ಹಾಗಾಗಿ ನನಗೆ ಹುಟ್ಟಿನಿಂದಲೇ ರಿದಂ ಮೈಗೂಡಿಸಿಕೊಂಡೆ. ಜೊತೆಗೆ ನನ್ನ ತಾಯಿ ನಾಟಕಗಳಲ್ಲಿ ಪಾತ್ರಗಳನ್ನು ಕೂಡ ಹಾಕಿಸುತ್ತಿದ್ದರು.

ಮುಂದೆ ಬೆಳೆಯುತ್ತಾ ಇದರ ಕಡೆ ಒಲವು ಹೆಚ್ಚಾಯಿತು. ಕಾಲೇಜು ಮುಗಿದ ನಂತರ ನೀನಾಸಂ ಸೇರಿದೆ. ಒಮ್ಮೆ ನಾಟಕ ಸಂಬಂಧ ಬೆಂಗಳೂರಿಗೆ ಬಂದಾಗ ಚಿತ್ರ ಸಾಹಿತಿ , ಬರಹಗಾರ ಜಯಂತ್ ಕಾಯ್ಕಿಣಿ ರವರು ನನ್ನ ಪ್ರತಿಭೆಯನ್ನು ಕಂಡು ಸಿನಿಮಾದಲ್ಲಿ ಅಭಿನಯಿಸುವ ಆಲೋಚನೆ ಇದೆಯಾ ಎಂದಾಗ , ಒಪ್ಪಿಕೊಂಡೆ ನಂತರ ಯೋಗರಾಜ್ ಭಟ್ಟರ ಭೇಟಿ ನಂತರ ಪುನೀತ್ ರಾಜಕುಮಾರ್ ಅಭಿನಯದ ಪರಮಾತ್ಮ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು , ತದನಂತರ ನಿರ್ದೇಶಕ ಸೂರಿ ರವರ ಅಣ್ಣ ಬಾಂಡ್ ಸೇರಿದಂತೆ ನನ್ನ ಪಯಣ ಮುಂದುವರೆದು ಹಲವು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆಯನ್ನು ಕೂಡ ಪಡೆದುಕೊಂಡು ಕನ್ನಡ ಸೇರಿದಂತೆ ತಮಿಳು ಚಿತ್ರದಲ್ಲಿ ಕೂಡ ಅಭಿನಯಿಸುತ್ತಿದ್ದಾನೆ. ಹಾಗೆಯೇ ನಾಟಕ , ನೃತ್ಯ ಸಂಗೀತದ ಕಡೆ ನನ್ನ ಒಲವು ನಿರಂತರವಾಗಿರುತ್ತದೆ ಎಂದರು.

ಈಗ ಪ್ರಶಾಂತ್ ಸಿದ್ದಿ ನಟನೆಯ ಜೊತೆಗೆ ಸಂಗೀತವನ್ನು ನೀಡುವ ಮೂಲಕ ತಮ್ಮ ಬಹುಮುಖ ಪ್ರತಿಭೆಯನ್ನು ಹೊರಹಾಕಲು ಮುಂದಾಗಿದ್ದಾರೆ. ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಬಿ.ಎಸ್ ವಿಶ್ವನಾಥ್ ನಿರ್ಮಾಣದಲ್ಲಿ ಯುವ ನಟ ಪೃಥ್ವಿ ಅಂಬರ್ ಅಭಿನಯಿಸುತ್ತಿರುವ ಈ ಚಿತ್ರವನ್ನು ದೇವರಾಜ್ ಪೂಜಾರಿ ನಿರ್ದೇಶನ ಮಾಡುತ್ತಿರುವ “ಮತ್ಸ್ಯಗಂಧ” ಚಿತ್ರಕ್ಕೆ ಸಂಗೀತ ಸಂಯೋಜಿಸೋ ಮೂಲಕ ಪ್ರಶಾಂತ್ ಸಿದ್ದಿ ಸಂಗೀತ ನಿರ್ದೇಶಕನಾಗಿದ್ದಾರೆ.

ಇತ್ತೀಚೆಗಷ್ಟೇ “ಮತ್ಸ್ಯಗಂಧ” ಚಿತ್ರದ ಭಾಗೀರಥಿ.. ಅನ್ನೋ ಡ್ಯಾನ್ಸಿಂಗ್ ನಂಬರ್ ನ ಹಾಡು ರಿಲೀಸ್ ಮಾಡಿರೋ ಚಿತ್ರತಂಡಕ್ಕೆ ಸಿನಿಪ್ರಿಯರಿಂದ ಈ ಹಾಡಿಗೆ ಅತತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದೆ. ಭಾಗೀರಥಿ ಹಾಡು ರಿಲೀಸ್ ಆದ ಮೊದಲನೇ ದಿನವೇ ಹಾಡು ಯೂಟ್ಯೂಬ್ ಟ್ರೆಂಡಿಂಗ್ ಲಿಸ್ಟಿಗೆ ಬಂದಿದ್ದು, ಮೂರೇ ದಿನದಲ್ಲಿ ಏಳು ಲಕ್ಷ ವೀವ್ಸ್ ದಾಟಿದ್ದು ಒಂದು ಮಿಲಿಯನ್ ವೀವ್ಸ್ ನತ್ತ ಮುನ್ನುಗ್ತಿದೆ.

ಈ ಸಂಭ್ರಮವನ್ನ ಹಂಚಿಕೊಳ್ಳಲು ಪತ್ರಿಕಾಗೋಷ್ಠಿ ಯನ್ನ ಕರೆದಿದ್ದ ಚಿತ್ರತಂಡ, ಚಿತ್ರದ ಬಗ್ಗೆ ಕಿರು ಮಾಹಿತಿಯನ್ನ ನೀಡುವುದರ ಜೊತೆಗೆ ಪ್ರಶಾಂತ್ ಸಿದ್ದಿಯವರನ್ನ ಸಂಗೀತ ನಿರ್ದೇಶಕನಾಗಿ ಪರಿಚಯಿಸಿರೋ ವಿಚಾರವನ್ನ ಹಂಚಿಕೊಂಡಿತ್ತು. “ಮತ್ಸ್ಯಗಂಧ” ಚಿತ್ರದ ಭಾಗೀರಥಿ.. ಹಾಡಿಗೆ ಸಾಹಿತ್ಯವನ್ನು ದೇವರಾಜ್ ಪೂಜಾರಿ ಬರೆದಿದ್ದು, ಇಂದು ನಾಗರಾಜ್ ಹಾಗೂ ಪ್ರಶಾಂತ್ ಸಿದ್ದಿ ಮತ್ತು ಸಂಗಡಿಗರು ಹಾಡಿದ್ದಾರೆ. ಈ ಹಾಡಲ್ಲಿ ಅಂಜಲಿ ಪಾಂಡೆ ಮೈ ಬಳುಕಿಸಿ, ಕುಲುಕಿಸಿದ್ರೆ, ಪೃಥ್ವಿ ಅಂಬರ್, ನಾಗರಾಜ್ ಬೈಂದೂರು ಜೊತೆಗೆ ಹೆಜ್ಜೆ ಹಾಕಿದ್ದಾರೆ. ಧನಂಜಯ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ.

ಇದೊಂದು ಕಡಲ ಕಿನಾರೆಯ ಮೀನುಗಾರರ ಕುಟುಂಬದ ಕಥೆಯಾಗಿದ್ದು , ಕುಂದಾಪುರ , ಬೈಂದೂರು ಸುತ್ತಮುತ್ತಿನಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ. ನಮ್ಮ ಚಿತ್ರ ಉತ್ತರ ಕನ್ನಡ ಸೊಗಡಿನಲ್ಲಿ ಸಾಗಲಿದ್ದು , ಪ್ರಶಾಂತ್ ಸಿದ್ದಿ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನಿರ್ದೇಶಕ ದೇವರಾಜ್ ಪೂಜಾರಿ ಮಾಹಿತಿಯನ್ನು ಹಂಚಿಕೊಂಡರು. ಉಳಿದಂತೆ ಚಿತ್ರದ ತಂತ್ರಜ್ಞಾನರು ಕೂಡ ಚಿತ್ರದ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡರು. ಈ ಹಾಡಿನೊಂದಿಗೆ ಪ್ರಚಾರ ಕಾರ್ಯವನ್ನಾರಂಭಿಸಿರೋ ಚಿತ್ರತಂಡ ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು , ಫೆಬ್ರುವರಿಗೆ ಪ್ರೇಕ್ಷಕರೆದುರಿಗೆ ಈ ಚಿತ್ರವನ್ನು ತರಲು ಚಿತ್ರತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆಯಂತೆ.

error: Content is protected !!