ನಟಿ ರಾಗಿಣಿ ಅಭಿನಯದ “ಮದನಿಕ” ಚಿತ್ರದ ಟೀಸರ್ ಹಾಗೂ ಆಡಿಯೋ ಬಿಡುಗಡೆ.
ಇಲ್ಲಿಯವರೆಗೆ ಗ್ಲಾಮರಸ್ ಮತ್ತು ಆ್ಯಕ್ಷನ್ ಪಾತ್ರಗಳ ಮೂಲಕ ಕನ್ನಡ ಸಿನಿಪ್ರಿಯರ ಗಮನ ಸೆಳೆದಿರುವ ನಟಿ ರಾಗಿಣಿ ದ್ವಿವೇದಿ ಈ ಬಾರಿ ‘ಮದನಿಕ’ ಎಂಬ ಪಿರಿಯಾಡಿಕ್ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ‘ಮದನಿಕ’ ಎಂಬುದು ದೇವಾಲಯಗಳಲ್ಲಿ ಕಾಣುವಂಥ ಶಿಲ್ಪಕಲೆಯ ಒಂದು ಪ್ರಾಕಾರವಾಗಿದ್ದು, ಚಿತ್ರದ ಕಥೆಗೆ ಸೂಕ್ತವೆಂಬ ಕಾರಣಕ್ಕೆ ಚಿತ್ರತಂಡ ಈ ಹೆಸರನ್ನು ತಮ್ಮ ಚಿತ್ರಕ್ಕೆ ಇಟ್ಟುಕೊಂಡಿದೆ. ಈಗಾಗಲೇ ಸದ್ದಿಲ್ಲದೆ ‘ಮದನಿಕ’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಚಿತ್ರತಂಡ ‘ಮದನಿಕ’ ಚಿತ್ರದ ಟೀಸರ್ ಮತ್ತು ಆಡಿಯೋವನ್ನು ಬಿಡುಗಡೆಗೊಳಿಸಿದೆ.

‘ಎಸ್.ಪಿ.ಆರ್ ಪ್ರೊಡಕ್ಷನ್ಸ್’ ಮತ್ತು ‘ಸಖರ್ಥ್ ಡಿಜಿಟಲ್ ಹೌಸ್’ ಬ್ಯಾನರಿನಲ್ಲಿ ಸುಜಾತ ಲಕ್ಷ್ಮೀ, ಕುಮಾರಸ್ವಾಮಿ ನಿರ್ಮಿಸಿರುವ ‘ಮದನಿಕ’ ಚಿತ್ರಕ್ಕೆ ಬಿ. ಎಸ್. ಸಂಜಯ್ ನಿರ್ದೇಶನವಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಹಾಜರಿದ್ದು, ‘ಮದನಿಕ’ ಚಿತ್ರದ ಟೀಸರ್ ಮತ್ತು ಹಾಡನ್ನು ಬಿಡುಗಡೆಗೊಳಿಸಿ ಚಿತ್ರದ ಬಗ್ಗೆ ಮಾತನಾಡಿದರು. ಮೊದಲಿಗೆ ‘ಮದನಿಕ’ ಬಗ್ಗೆ ಮಾತನಾಡಿದ ಚಿತ್ರದ ನಿರ್ದೇಶಕ ಬಿ. ಎಸ್. ಸಂಜಯ್, ‘ಇದೊಂದು ಕಾಲ್ಪನಿಕ ಕಥೆ. ಸುಮಾರು ನಾಲ್ಕು ನೂರು ವರ್ಷಗಳ ಹಿಂದಿನಲ್ಲಿ ನಡೆಯುವಂಥ ಕಥೆಯಿದು. ಸಿನಿಮಾದಲ್ಲಿ ಎರಡು ಕಾಲಘಟ್ಟದ ಹಿನ್ನೆಲೆಯಲ್ಲಿ ಈ ಕಥೆ ತೆರೆದುಕೊಳ್ಳುತ್ತದೆ. ಹಳೇ ಗನ್ನಡ ಮತ್ತು ಹೊಸ ಕನ್ನಡ ಎರಡೂ ಶೈಲಿಯನ್ನೂ ಸಂದರ್ಭಕ್ಕೆ ತಕ್ಕಂತೆ ಈ ಸಿನಿಮಾದ ಸಂಭಾಷಣೆಯಲ್ಲಿ ಬಳಸಿಕೊಂಡಿದ್ದೇವೆ. ಸುಮಾರು ಎರಡು ವರ್ಷಗಳ ಕಾಲ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳಿಗೆ ಸಮಯ ತೆಗೆದುಕೊಂಡಿದ್ದೇವೆ’ ಎಂದರು.

‘ಸಿನಿಮಾದ ಕಥೆಗೆ ತಕ್ಕಂತೆ ಸುಮಾರು ಹತ್ತು ಹಾಡುಗಳು ಈ ಸಿನಿಮಾದಲ್ಲಿದೆ. ಎಲ್ಲಾ ಹಾಡುಗಳು ಕೂಡ ಶಾಸ್ತ್ರೀಯವಾಗಿ ಮೂಡಿಬಂದಿದೆ. ಹಳೆಗನ್ನಡದ ಮತ್ತು ಹೊಸಕನ್ನಡ ಶೈಲಿಯಲ್ಲಿ ಸಾಹಿತ್ಯವಿದೆ’ ಎಂದು ಚಿತ್ರದ ಹಾಡುಗಳು ಮತ್ತು ಸಾಹಿತ್ಯದ ಬಗ್ಗೆ ಮಾಹಿತಿ ನೀಡಿದರು ಸಂಗೀತ ನಿರ್ದೇಶಕ ಸಲಾಂ ವೇರೋಲಿ. ‘ಮದನಿಕ’ ಚಿತ್ರದ ಬಗ್ಗೆ ಮಾತನಾಡಿ ನಟಿ ರಾಗಿಣಿ ದ್ವಿವೇದಿ, ‘ಇದೊಂದು ಟೈಂ ಟ್ರಾವೆಲ್ ಸಿನಿಮಾ. ಎರಡು ಕಾಲಘಟ್ಟದಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ನನಗೂ ಕೂಡ ಈ ಸಿನಿಮಾದಲ್ಲಿ ಎರಡು ಥರದ ಶೇಡ್ ಇರುವಂಥ ಪಾತ್ರವಿದೆ. ಲವ್, ಆ್ಯಕ್ಷನ್, ಥ್ರಿಲ್ಲರ್, ಕ್ಲಾಸಿಕಲ್ ಮ್ಯೂಸಿಕ್ ಎಲ್ಲವೂ ಈ ಸಿನಿಮಾದಲ್ಲಿದೆ. ಇದು ನಮ್ಮ ನೇಟಿವಿಟಿಯನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಕಲಾವಿದರಿಗೆ ತಮ್ಮ ವೃತ್ತಿ ಜೀವನದಲ್ಲಿ ಬಹಳ ಅಪರೂಪಕ್ಕೆ ಇಂಥ ಪಾತ್ರಗಳು ಸಿಗುತ್ತದೆ. ಅಂಥ ಅಪರೂಪದ ಪಾತ್ರ ಈ ಸಿನಿಮಾದಲ್ಲಿ ನನಗೆ ಸಿಕ್ಕಿದೆ. ‘ಮದನಿಕ’ ಸಿನಿಮಾದಲ್ಲಿ ಅಭಿನಯಿಸಿದ್ದು, ತುಂಬ ಒಳ್ಳೆಯ ಅನುಭವ. ಆದಷ್ಟು ಬೇಗ ಸಿನಿಮಾ ತೆರೆಗೆ ಬರಲಿದ್ದು, ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯಿದೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.

‘ಮದನಿಕ’ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಅವರೊಂದಿಗೆ ಧರ್ಮ ಕೀರ್ತಿರಾಜ್, ದೇವ್ ಗಿಲ್, ಹರೀಶ್ ರಾಜ್, ರಾಜ್ವಿ, ಶಶಿಕುಮಾರ್ ಮೊದಲಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಮದನಿಕ’ ಚಿತ್ರಕ್ಕೆ ಆರ್. ಗಿರಿ ಛಾಯಾಗ್ರಹಣ, ಚಿತ್ರದಲ್ಲಿ ಒಟ್ಟು ಹತ್ತು ಹಾಡುಗಳಿದ್ದು ಶಾಸ್ತ್ರೀಯ ಶೈಲಿಯಲ್ಲಿರುವ ಈ ಹಾಡುಗಳಿಗೆ ಸಲಾಂ ವೇರೋಲಿ ಸಂಗೀತ ಸಂಯೋಜಿಸಿದ್ದು, ಕೆ. ಕಲ್ಯಾಣ್, ಡಾ. ದೇವಾನಂದ್ ಮೊದಲಾದವರು ಸಾಹಿತ್ಯ ಒದಗಿಸಿದ್ದಾರೆ. ಮದನ್ ಹರಿಣಿ, ತ್ರಿಭುವನ್ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಅಂದಹಾಗೆ ಇದೇ ಜುಲೈ ವೇಳೆಗೆ ‘ಮದನಿಕ’ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.