Cini NewsMovie Review

ಭ್ರೂಣದ ಸುಳಿಯಲ್ಲಿ ಕೊಲೆಯೊ… ಆತ್ಮದ ಕಾಟವೊ… (ಕಾಂಗರೂ ಚಿತ್ರವಿಮರ್ಶೆ)-ರೇಟಿಂಗ್ : 3.5/5

ರೇಟಿಂಗ್ : 3.5/5

ಚಿತ್ರ : ಕಾಂಗರೂ
ನಿರ್ದೇಶಕ : ಕಿಶೋರ್ ಮೇಗಳಮನೆ
ನಿರ್ಮಾಣ ಆರೋಹ ಪ್ರೊಡಕ್ಷನ್ಸ್
ಸಂಗೀತ : ಸಾಧು ಕೋಕಿಲ
ಛಾಯಾಗ್ರಹಕ : ಉದಯ ಲೀಲಾ
ತಾರಾಗಣ : ಆದಿತ್ಯ , ರಂಜನಿ ರಾಘವನ್ , ಕರಿಸುಬ್ಬು , ಶಿವಮಣಿ , ಅಶ್ವಿನ್ ಹಾಸನ್ , ನಾಗೇಂದ್ರ ಅರಸ್ , ಶುಭಲಕ್ಷ್ಮಿ ಹಾಗೂ ಮುಂತಾದವರು…

ಪ್ರತಿಯೊಂದು ಜೀವರಾಶಿಗೂ ಬದುಕುವ ಹಕ್ಕಿದೆ. ಹಾಗೆಯೇ ಮನುಷ್ಯರಿಗೂ ಕೂಡ , ಜನ್ಮ ನೀಡುವ ಕೆಲವರು ಗಂಡು ಮಗು ಎಂದರೆ ಸಂಭ್ರಮಿಸುವುದು , ಹೆಣ್ಣು ಎಂದರೆ ಭ್ರೂಣ ಹತ್ಯೆದ ಕೆಲಸಕ್ಕೆ ಮುಂದಾಗುವವರ ಸಂಖ್ಯೆ ಹೆಚ್ಚಾಗಿ ಹೋಗಿದೆ. ಇದರ ಸುತ್ತ ಕುತೂಹಲದ ಕಥಾನಕವನ್ನು ಬೆಸೆದುಕೊಂಡು ರೆಸಾರ್ಟ್ ಒಂದರಲ್ಲಿ ಸ್ಟೇ ಮಾಡುವ ದಂಪತಿಗಳು , ಯುವಕ ಯುವತಿಯರ ನಿಗೂಢ ಕೊಲೆಗಳು , ನಾಪತ್ತೆಗಳ ಪ್ರಕರಣವನ್ನು ಭೇದಿಸಲು ಮುಂದಾಗುವ ದಕ್ಷ ಪೊಲೀಸ್ ಅಧಿಕಾರಿಯ ಕಾರ್ಯವೈಕರಿ , ಅದರ ಹಿಂದಿರುವ ರಹಸ್ಯ ಸುಳಿಯಲ್ಲಿ ಕೊಲೆಗಾರರ ಕೈವಾಡವೋ… ಆತ್ಮದ ಕಾಟವೋ ಎಂಬುದನ್ನು ಬಹಳ ಕುತೂಹಲಕಾರಿಯಾಗಿ ಈ ವಾರ ತೆರೆಯ ಮೇಲೆ ತಂದಿರುವಂತಹ ಚಿತ್ರ “ಕಾಂಗರೂ”.

ಚಿಕ್ಕಮಗಳೂರಿನಸುಂದರ ಪರಿಸರದ ನಡುವೆ ಇರುವ ಆಂಟೋನಿ ಕಾಟೇಜ್ ಸ್ಟೇ ಹೋಂಗೆ ಬರುವ ದಂಪತಿಗಳು ಮ್ಯಾನೇಜರ್ ಮೂಲಕ ರೂಮ್ ಪಡೆಯುತ್ತಾರೆ. ಆದರೆ ರಾತ್ರಿ ನಡೆವ ವಿಚಿತ್ರ ಘಟನೆಗಳ ಸುಳಿಯಲ್ಲಿ ಗಂಡ ನೇಣಿಗೆ ಶರಣಾಗಿರುತ್ತಾನೆ. ಆದರೆ ಆ ಕೇಸ್ ಏನಾಯಿತು ಎಂಬುದು ತಿಳಿಯುವುದಿಲ್ಲ.

ಕೆಲವು ವರ್ಷಗಳ ನಂತರ ಬೆಂಗಳೂರಿನ ದಕ್ಷ ಪೊಲೀಸ್ ಅಧಿಕಾರಿ ಪೃಥ್ವಿ (ಆದಿತ್ಯ) ಸೇವೆ ಸಲ್ಲಿಸುತ್ತಿದ್ದರೆ , ತನ್ನ ಮಡದಿ ಮೇಘನಾ (ರಂಜನಿ ರಾಘವನ್) ಗರ್ಭಿಣಿ ಆಗಿದ್ದರು , ತನ್ನ ವೃತ್ತಿಯಲ್ಲಿ ಸೈಕ್ಯಾಟ್ರಿಸ್ಟ್ ಡಾಕ್ಟರ್ ಆಗಿ ಜನರ ಸೇವೆ ಮಾಡುತ್ತಿರುತ್ತಾಳೆ. ಒಮ್ಮೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಚಿಕ್ಕಮಗಳೂರಿಗೆ ಟ್ರಾನ್ಸ್ಫರ್ ಆಗುವ ಪೃಥ್ವಿ ತನ್ನ ಮಡದಿಯನ್ನ ಬಿಟ್ಟು ತೆರಳುತ್ತಾನೆ.

ತನ್ನ ಸ್ಟೇಷನ್ ಲಿಮಿಟ್ ಸಮೀಪದಲ್ಲಿ ಇರುವ ಆಂಟೋನಿ ಸ್ಟೇ ಹೋಮ್ ಗೆ ಬರುವ ಜೋಡಿಗಳಿಗೆ ರೂಮಿನಲ್ಲಿ ಆಗುವ ವಿಚಿತ್ರ ಘಟನೆಗಳು ಜೀವ ಭಯ ತರುತ್ತದೆ. ಒಮ್ಮೆ ಪೃಥ್ವಿ ಬಳಿಯೂ ಈ ದಂಪತಿಗಳು ತಮಗಾದ ಅನುಭವವನ್ನು ಹೇಳುತ್ತಾ ಇದು ದೆವ್ವದ ಕಾಟ ಎನ್ನುತ್ತಾರೆ. ಇದನ್ನು ನಂಬದ ಇನ್ಸ್ಪೆಕ್ಟರ್ ಪೃಥ್ವಿ ಇದರ ಹಿಂದೆ ಇರುವ ಕೈವಾಡ ಹುಡುಕುತ್ತಾ ಹೋದಾಗ ಹಲವಾರು ಕೊಲೆ , ನಾಪತ್ತೆ ಪ್ರಕರಣಗಳು ಬೆಳಕಿಗೆ ಬರುತ್ತೆ.

ಇದು ಕೊಲೆಯೊ ಆತ್ಮದ ಕಾಟವೂ ಅನ್ನುವಷ್ಟರಲ್ಲಿ ಪೃಥ್ವಿಯ ಅಣ್ಣ ಅತ್ತಿಗೆಯ ಸಾವಿನ ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ. ಇದೆಲ್ಲವೂ ಒಂದಕ್ಕೊಂದು ಕೊಂಡಿಯಂತೆ ಸಾಗುವುದರ ನಡುವೆಯೇ ಪೃಥ್ವಿಗೆ ಪತ್ನಿ ಮೇಘನಾ ಕೂಡ ಸಲಹೆ ಸೂಚನೆಗಳನ್ನು ನೀಡುತ್ತಾ ಸಾಗುತ್ತಾಳೆ. ಇನ್ನೇನು ಸಾವಿನ ಸುಳಿ ತಿಳಿಯುತ್ತೆ ಅನ್ನುವಷ್ಟರಲ್ಲಿ ರೋಚಕ ತಿರುವು ಪಡೆದು ಕ್ಲೈಮಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ.
ಇದು ಕೊಲೆಯೊ… ಆತ್ಮದ ಕಾಟವೊ…
ಭ್ರೂಣ ಹತ್ಯದ ಸುಳಿಯೋ…
ಪೃಥ್ವಿಗೆ ಸಿಕ್ಕ ಸುಳಿವು ಏನು…
ಅಣ್ಣನ ಸಾವು ಹೇಗೆ…
ಕ್ಲೈಮಾಕ್ಸ್ ಹೇಳೋದು ಏನು…

ಈ ಚಿತ್ರದಲ್ಲಿ ನಿರ್ದೇಶಕ ಕಿಶೋರ್ ಮೇಗಳಮನೆ ಒಂದು ಅರ್ಥಪೂರ್ಣ ಸಂದೇಶವನ್ನು ನೀಡಿದ್ದಾರೆ. ತಾಯಿಯ ಮಡಿಲು ಮಕ್ಕಳಿಗೆ ಸೋಪಾನವಿದ್ದಂತೆ. ಮಗು ಯಾವುದೇ ಇರಲಿ ಅದನ್ನು ಪ್ರೀತಿಸಿ, ಪೋಷಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಆಗುವ ಅನಾಹುತ ಏನು ಎಂದು ಹೇಳಿದ್ದಾರೆ. ಹೋಂ ಸ್ಟೇಗೆ ಹೋಗುವ ಜೋಡಿಗಳ ಕೊಲೆಯ ಹಿಂದಿರುವ ರಹಸ್ಯ ಕಾರ್ಯಾಚರಣೆ ಬಹಳ ಗಿರಿಕಿ ಹೊಡೆದಂತಿದೆ.

ಚಿತ್ರಕಥೆ , ಓಟ ಇನ್ನಷ್ಟು ವೇಗ ಮಾಡಬಹುದಿತ್ತು. ಲಾಜಿಕ್ ಇಲ್ಲದಿದ್ದರೂ ಸಸ್ಪೆನ್ಸ್ , ಮರ್ಡರ್ ಮೇಷ್ಟ್ರಿಗೆ ಜೀವ ನೀಡಿದ್ದಾರೆ. ಇನ್ನು ಈ ಚಿತ್ರವನ್ನು ನಿರ್ಮಿಸಿರುವ ಚನ್ನಕೇಶವ , ನರಸಿಂಹ ಮೂರ್ತಿ, ರಮೇಶ್ ಬಂಡೆ, ಸ್ವಾಮಿ ಚಕ್ರಬಾವಿ , ರವಿ ಕೀಲಾರ , ಕೆ. ಜಿ .ಆರ್ ಗೌಡ ರವರ ಧೈರ್ಯವನ್ನು ಮೆಚ್ಚಲೇಬೇಕು.

ಬಹಳ ಗ್ಯಾಪ್ ನಂತರ ಸಾಧು ಕೋಕಿಲ ಸಂಗೀತ ಗಮನ ಸೆಳೆಯುತ್ತದೆ. ರೀ ರೆಕಾರ್ಡಿಂಗ್ ಕುತೂಹಲ ಮೂಡಿಸುತ್ತೆ , ಕ್ಲೈಮಾಕ್ಸ್ ನಲ್ಲಿ ಬರುವ ತಾಯಿ ಮಗುವಿನ ಮಮತೆಯ ಹಾಡನ್ನು ಸಾಧುಕೋಕಿಲ ಮನಮಿಡಿಯುವಂತೆ ಹಾಡಿದ್ದಾರೆ. ಅದೇ ರೀತಿ ಛಾಯಾಗ್ರಾಹಕ ಉದಯಲೀಲಾ ಕ್ಯಾಮೆರಾ ಕೈಚಳಕ ಅದ್ಭುತವಾಗಿದೆ. ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಿದೆ.

ನಾಯಕನಿಗೆ ಅಭಿನಯಿಸಿರುವ ಆದಿತ್ಯ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಕೊಲೆಗಳನ್ನು ಭೇದಿಸುವ ಪೊಲೀಸ್ ಅಧಿಕಾರಿಯಾಗಿ ಹಾಗೂ ಪ್ರೀತಿಯ ಗಂಡನಾಗಿ ಗಮನ ಸೆಳೆದಿದ್ದಾರೆ. ಇನ್ನು ನಾಯಕಿಯಾಗಿ ಅಭಿನಯಿಸಿರುವ ರಂಜನಿ ರಾಘವನ್ ಸೈಕ್ಯಾಟ್ರಿಸ್ಟ್ ಡಾಕ್ಟರ್ ಆಗಿ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಹೋಟೆಲ್ ಮ್ಯಾನೇಜರ್ ಆಗಿ ಕರಿಸುಬು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸೈಕ್ಯಾಟ್ರಿಸ್ಟ್ ಪಾತ್ರದಲ್ಲಿ ಶಿವಮಣಿ , ಪೊಲೀಸ್ ಅಧಿಕಾರಿ ಆಗಿ ಅಶ್ವಿನ್ ಹಾಸನ್ , ನಾಯಕನ ಕೌಟುಂಬಿಕ ಅಣ್ಣನಾಗಿ ನಾಗೇಂದ್ರ ಅರಸ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಸಸ್ಪೆನ್ಸ್ , ಥ್ರಿಲ್ಲರ್ , ಹಾರರ್ ಇಷ್ಟಪಡುವವರ ಜೊತೆ ಎಲ್ಲರೂ ಒಮ್ಮೆ ನೋಡುವಂತ ಚಿತ್ರ ಇದಾಗಿದೆ.

error: Content is protected !!