ಭೂಮಿ , ನ್ಯಾಯ , ಸಮಾನತೆಗಾಗಿ ಹೋರಾಡುವ ‘ಧೀರ ಭಗತ್ ರಾಯ್’ (ಚಿತ್ರ ವಿಮರ್ಶೆ -ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಧೀರ ಭಗತ್ ರಾಯ್
ನಿರ್ಮಾಪಕರು : ಅಶೋಕ್ ಕುಮಾರ್, ಪ್ರವೀಣ್ ಗೌಡ
ನಿರ್ದೇಶಕ : ಕರ್ಣನ್
ಸಂಗೀತ : ಪೂರ್ಣಚಂದ್ರ ತೇಜಸ್ವಿ
ಛಾಯಾಗ್ರಹಣ : ಸೆಲ್ಪಂ ಜಾನ್
ತಾರಾಗಣ : ರಾಕೇಶ್ ದಳವಾಯಿ , ಸುಚರಿತಾ , ಶರತ್ ಲೋಹಿತಶ್ವ , ನೀನಾಸಂ ಅಶ್ವಥ್, ಪ್ರವೀಣ್ ಗೌಡ , ಕೆ.ಎಂ. ಸಂದೇಶ್ ಮುರೋಳಿ ಹಾಗೂ ಮುಂತಾದವರು…
ಕಾಲಾನುಕಾಲಕ್ಕೂ ಈ ಸಮಾಜದಲ್ಲಿ ಮೇಲ್ವರ್ಗ , ಕೆಲವರ್ಗ ಎನ್ನುತ್ತಲೆ ಬದುಕು ಸಾಗುತ್ತಾ ಹೋಗಿದೆ. ಒಂದು ವರ್ಗ ಶ್ರಮ ಪಡುತ್ತದೆ , ಇನ್ನೊಂದು ವರ್ಗ ಸುಖ ಪಡುತ್ತದೆ. ಶಾಂತಿ , ನೆಮ್ಮದಿ , ಜಾತಿ , ಹಕ್ಕು , ಸಮಾನತೆಯ ನಡುವೆ ರಾಜಕೀಯ ಷಡ್ಯಂತರದ ಸುಳಿಯಲ್ಲಿ ಬದುಕೇ ಕಷ್ಟಕರ ಎನ್ನುವಂತಿದೆ.
ಇಂಥದ್ದೇ ವಿಚಾರಗಳ ಚಿತ್ರಗಳು ಬಹಳಷ್ಟು ಬಂದಿದ್ದು , ಈ ಹಿಂದೆ ನರಗುಂದ ಬಂಡಾಯ ಎಂಬ ಚಿತ್ರ ಕೂಡ ಇದೇ ಹಾದಿಯಲ್ಲಿ ಸಾಗಿದ್ದು , ಒಂದಷ್ಟು ಸೂಕ್ಷ್ಮ ವಿಚಾರಗಳೊಂದಿಗೆ ಈ ಕಥಾನಕ ಮೂಲಕ 70ರ ದಶಕದಲ್ಲಿ ಬಂದಂತ ಭೂ ಸುಧಾರಣಾ ಕಾಯ್ದೆಯ ಮಾರ್ಪಟ್ಟಿನಲ್ಲಿ ,ಉಳುವನೇ ಒಡೆಯ ಎಂಬ ಸರ್ಕಾರದ ಸುತ್ತೋಲೆಯಿಂದ ಶ್ರೀಮಂತರು ಹಾಗೂ ಬಡವರ ನಡುವೆ ನಡೆದಂತ ಹಲವು ಸಾವು , ನೋವು , ಹೊಡೆದಾಟದ ಘಟನೆಗಳು ಪ್ರತ್ಯಕ್ಷ ಸಾಕ್ಷಿಯಾಗಿ ತಮ್ಮ ಹಕ್ಕು , ನ್ಯಾಯಕ್ಕಾಗಿ , ಕಾನೂನಾತ್ಮಕವಾಗಿ ಹೋರಾಟ ನಡೆಸಿದ ನಿದರ್ಶನಗಳ ಪ್ರತಿರೂಪಕ ವಾಗಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಧೀರ ಭಗತ್ ರಾಯ್”.
ಸಾವಿರಾರು ಎಕರೆ ಭೂಮಿಯನ್ನ ಅಕ್ರಮವಾಗಿ ತನ್ನ ವಶ ಮಾಡಿಕೊಂಡು , ನರಗುಂದದಲ್ಲಿ ವಾಸ ಮಾಡುತ್ತಿರುವ ಬಡ ರೈತರ ಜಮೀನನ್ನು ಕೂಡ ಬರೆಸಿಕೊಳ್ಳುತ್ತಾ , ಅವರ ಮೇಲೆ ದಬ್ಬಾಳಿಕೆ ನಡೆಸುವ ವ್ಯಕ್ತಿ ವರದಪ್ಪ (ಶರತ್ ಲೋಹಿತಾಶ್ವ) ತನ್ನ ತಮ್ಮ , ಮಗ ಹಾಗೂ ಆತನ ಪಟಾಲಮ್ ಜೊತೆಗೆ ಪೋಲಿಸ್ ಇನ್ಸ್ಪೆಕ್ಟರ್ ಕರುಣಾಕರ ಸಹಾಯದ ಮೂಲಕ ತಾನು ಹಾಡಿದೆ ಆಟ ಎನ್ನುವಂತೆ ಬದುಕುತ್ತಾನೆ. ಅದೇ ಊರಿನ ಹಿರಿಯ ಜೀವ ಕೃಷ್ಣಪ್ಪ (ಮಠದ್) ಹಾಗೂ ಗ್ರಾಮಸ್ಥರು ವಿಧಿ ಇಲ್ಲದಂತೆ ಬದುಕು ನಡೆಸುತ್ತಾರೆ.
ಆ ಊರಿಗೆ ಬರುವ ಲಾಯರ್ ರಾಜನ್ (ರಾಕೇಶ್ ದಳವಾಯಿ) ಶ್ರಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ , ಭೂಕಬಳಿಕೆಯ ವಿಚಾರಕ್ಕೆ ಅಂತ್ಯ ಆಡುವ ನಿಟ್ಟಿನಲ್ಲಿ ಮುಂದಾಗುತ್ತಾನೆ. ಕೃಷ್ಣಪ್ಪನ ಮೂಲಕ ತನ್ನ ತಂದೆಯ ಹೋರಾಟದ ಬದುಕನ್ನು ತಿಳಿದುಕೊಳ್ಳುವ ರಾಜನ್ ಗ್ರಾಮಸ್ಥರಿಗೆ ನ್ಯಾಯ ಕೊಡಿಸಲು ಕಾನೂನಾತ್ಮಕವಾಗಿ ಮುಂದಾಗುತ್ತಾನೆ.
ಇದರ ನಡುವೆ ಕೃಷ್ಣಪ್ಪನ ಮಗಳು ಸಾವಿತ್ರಿ (ಸುಚರಿತಾ ಸಹಯಾರಾಜ್) ರಾಜನ್ ಮಾತು , ಗತ್ತು , ಜನರ ಪರ ಇರುವ ಕಾಳಜಿ ಕಂಡು ಇಷ್ಟಪಟ್ಟು ಮದುವೆಯಾಗಳು ನಿರ್ಧರಿಸುತ್ತಾಳೆ. ಇದರ ನಡುವೆ ವರದಪ್ಪನ ಗ್ಯಾಂಗ್ ದುಡಿದು ತಿನ್ನುವ ಬಡ ಜನರ ಮೇಲೆ ಪೊಲೀಸ್ ಮೂಲಕ ದೌರ್ಜನ್ಯವನ್ನು ನಡೆಸುತ್ತಿರುತ್ತಾನೆ, ಇದಕ್ಕೆ ಸೆಡ್ಡು ಹೊಡೆದು ನಿಲ್ಲುವ ಲಾಯರ್ ರಾಜನ್ ಹಿರಿಯ ಪೊಲೀಸ್ ಅಧಿಕಾರಿಗಳ ಮೂಲಕ ಅದಕ್ಕಲ್ಲ ಪ್ರತ್ಯುತ್ತರ ಕೊಡುತ್ತ ಬಂದರೂ , ಈ ದುಷ್ಟರನ್ನು ಎದುರಿಸುವುದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಶ್ರೀಮಂತರಿಂದ ಬಡವರಿಗೆ ನ್ಯಾಯ ಸಿಗಬೇಕು , ತಮ್ಮ ಹಕ್ಕು , ಭೂಮಿ , ಸಮಾನತೆಗಾಗಿ ಕಾನೂನಾತ್ಮಕವಾಗಿ ಹೋರಾಟ ಮಾಡುವ ರಾಜನ್ ಸಂವಿಧಾನದ ಅಡಿಯಲ್ಲಿ ಎಲ್ಲರೂ ಬದುಕಬೇಕು ಎಂಬ ಹೋರಾಟದ ಹಾದಿಯಲ್ಲಿ ಹಲವು ಸವಾಲುಗಳು ತೆರೆದುಕೊಳ್ಳುತ್ತಾ ಹೋಗುತ್ತದೆ.
ರಂಜನ್ ಶ್ರಮಕ್ಕೆ ಉತ್ತರ…
ದುಷ್ಟರ ಅಟ್ಟಹಾಸ…
ಸಾವಿತ್ರಿ ಪ್ರೀತಿ…
ಬಡವರ ಭೂಮಿ…
ಕೋರ್ಟ್ ನೀಡುವ ತೀರ್ಪು…
ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರಕ್ಕಾಗಿ ನೀವು ಎಲ್ಲರೂ ಈ ಚಿತ್ರವನ್ನು ನೋಡಬೇಕು.
ಸಂವಿಧಾನ ಶಿಲ್ಪಿ ಡಾ. ಬಿ . ಆರ್. ಅಂಬೇಡ್ಕರ್ ಹಾಕಿಕೊಟ್ಟಿರುವ ಸರ್ವರಿಗೂ ಸೂಕ್ತ ಎನ್ನುವಂತಹ ಸಂವಿಧಾನದ ಅಡಿಯಲ್ಲಿ ಸಾಗುವುದು ಸೂಕ್ತ ಎಂಬ ವಿಚಾರ. ಆದರೆ ಆ ದಾರಿಯಲ್ಲಿ ನಾವೆಷ್ಟು ಮುಂದುವರೆದಿದ್ದೇವೆ ಎಂಬ ಪ್ರಶ್ನೆ ಎದುರಾಗುತ್ತಿದೆ. ಆದರೆ ನಿರ್ದೇಶಕರು ತಮ್ಮ ಪ್ರಥಮ ಪ್ರಯತ್ನದಲ್ಲಿ ಶ್ರೀಮಂತರ ದಬ್ಬಾಳಿಕೆ , ಬಡವರ ಬದುಕು , ನೋವು , ಕಷ್ಟಗಳನ್ನು ಸೂಕ್ಷ್ಮವಾಗಿ ತೆರೆದಿಟ್ಟು , ಕಾನೂನಾತ್ಮಕವಾಗಿ ಇದಕ್ಕೆಲ್ಲ ಉತ್ತರ ಹೇಗೆ ಎಂಬುದನ್ನ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. 70ರ ದಶಕದ ಕಥೆ ಪ್ರಸ್ತುತಕೆ ಎಷ್ಟು ಸೂಕ್ತ ಎನ್ನುವಂತಿದೆ.
ಆಗಿನ ಕಾಲದ ವಾತಾವರಣ , ವೇಷಭೂಷಣದ ಜೊತೆಗೆ ಪಾತ್ರಧಾರಿಗಳ ಆಯ್ಕೆಯು ಅಚ್ಚುಕಟ್ಟಾಗಿದೆ. ಚಿತ್ರದ ಓಟ ಕಡಿತಗೊಳಿಸಬಹುದಿತ್ತು. ಆದರೂ ಪ್ರಯತ್ನ ಚೆನ್ನಾಗಿದೆ. ಜಾಗೃತಿ ಮೂಡಿಸುವ ಉದ್ದೇಶ ದೇಶದಿಂದ ನಿರ್ಮಿಸಿರುವ ನಿರ್ಮಾಪಕರಗಳ ಸಾಹಸ ಮೆಚ್ಚಲೇಬೇಕು. ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿದೆ. ಸಂಗೀತ ಹಾಗೂ ಹಿನ್ನೆಲೆ ಸಂಗೀತ ಮನ ಮುಟ್ಟುತ್ತದೆ. ಸಂಕಲನ , ಸಾಹಸ ಸೇರಿದಂತೆ ತಾಂತ್ರಿಕ ವರ್ಗದ ಕೆಲಸ ಅಚ್ಕಟ್ಟಾಗಿದೆ.
ಇನ್ನು ಪ್ರಧಾನ ನಾಯಕನ ಪಾತ್ರದಲ್ಲಿ ಮಾಡಿರುವ ರಾಕೇಶ್ ದಳವಾಯಿ ಇಡೀ ಚಿತ್ರವನ್ನು ಆವರಿಸಿಕೊಂಡು ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೋರಾಟದ ಮನೋಭಾವದ ಜೊತೆಗೆ ಕಾನೂನಾತ್ಮಕವಾಗಿ ಲಾಯರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು , ಸಾಹಸಕ್ಕೂ ಸೈ ಎಂದಿರುವ ಈ ರಂಗಭೂಮಿ ಪ್ರತಿಭೆ ಚಿತ್ರರಂಗಕ್ಕೆ ಉತ್ತಮ ಕಲಾವಿದನಾಗಿ ಸಿಕ್ಕಂತಿದೆ. ಇನ್ನು ನಾಯಕಿಯಾಗಿ ಸುಚರಿತಾ ಕೂಡ ಸಿಕ್ಕ ಅವಕಾಶವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಖಳನಾಯಕನಾಗಿ ಶರತ್ ಲೋಹಿತಾಶ್ವ ತಮ್ಮ ಗತ್ತು , ವರ್ಚಸ್ ನಲ್ಲಿ ಆಬ್ಬರಿಸಿದ್ದಾರೆ. ಹಿರಿಯ ನಟ ಮಠ ಕೊಪ್ಪಳ , ನೊಂದವರ ಪರ ದನಿ ಎತ್ತುವ ಹಿರಿಯ ಜೀವಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ನೀನಾಸಂ ಅಶ್ವಥ್ , ಪ್ರವೀಣ್ ಗೌಡ , ಹರಿ ರಾಮ್ , ಪಿ. ಮೂರ್ತಿ , ಕೆ.ಎಂ. ಸಂದೇಶ್ ಸೇರಿದಂತೆ ಎಲ್ಲಾ ಪಾತ್ರದಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಒಟ್ಟಾರೆ ಜಾಗೃತಿ ಮೂಡಿಸುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು.