ಸಿಟಿಯ ಕತ್ತಲ ಪ್ರಪಂಚದ ಕರಾಳ ದರ್ಶನ “ಸಿಟಿಲೈಟ್ಸ್” (ಚಿತ್ರವಿಮರ್ಶೆ – ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಸಿಟಿಲೈಟ್ಸ್
ನಿರ್ದೇಶಕ : ದುನಿಯಾ ವಿಜಯ್
ನಿರ್ಮಾಪಕ : ವಿಕ್ರಂ ಆರ್ಯ
ಸಂಗೀತ : ಚರಣ್ ರಾಜ್
ಛಾಯಾಗ್ರಹಣ : ಶಿವ ಸೇನಾ
ತಾರಾಗಣ : ವಿನಯ್ ರಾಜಕುಮಾರ್, ಮೋನಿಷಾ ವಿಜಯಕುಮಾರ್ , ಉಮಾಶ್ರೀ , ಗಿರಿರಾಜ್ , ಪುನೀತ್ , ವಿನೋದ ಮಾಸ್ಟರ್, ವೀರ , ವಸಂತ , ಕೃಷ್ಣಮೂರ್ತಿ , ಜಾಲಿ ಜಾಕ್ ಹಾಗೂ ಮುಂತಾದವರು…
ಬೆಂಗಳೂರಿನ ಹೃದಯ ಭಾಗದಲ್ಲಿ ಇರುವಂತಹ ಮೆಜೆಸ್ಟಿಕ್ ಸುತ್ತಮುತ್ತ ಕತ್ತಲೆ ಜಗತ್ತಿನಲ್ಲಿ ನಡೆಯುವ ಕರಾಳ ದಂಧೆ , ಡ್ರಗ್ಸ್ , ಟ್ಯಾಬ್ಲೆಟ್ಸ್ , ವೇಶ್ಯಾವಾಟಿಕೆ , ತೃತೀಯ ಲಿಂಗಿಗಳ ಜೀವನ , ಅಮಾಯಕ ಯುವಕರು, ಮುಗ್ಧ ಯುವತಿಯರನ್ನು ಮರುಳುಮಾಡಿ ಬಲೆಗೆ ಬೀಳಿಸಿಕೊಂಡು ಅವರನ್ನು ವೇಶ್ಯಾವಾಟಿಕೆ ಅಡ್ಡೆಗೆ ಕಮಿಷನ್ ಗಾಗಿ ಏಜೆಂಟ್ ಗಳು ಹೇಗೆ ತಳ್ಳುತ್ತಾರೆ ಎಂಬ ನಿಗೂಢ ಸತ್ಯದ ಅನಾವರಣ ಮಾಡುವಂತಹ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ ಸಿಟಿ ಲೈಟ್ಸ್ .
ಏರಿಯಾ ಎಂಎಲ್ಎ ತನ್ನ ಕಮಿಷನ್ ಗಾಗಿ ನೀಡಿರುವ ಟೆಂಡರ್ಗಳ ವಿಚಾರವಾಗಿ ತನ್ನ ರೌಡಿ ಗ್ಯಾಂಗ್ಗಳ ಸಮ್ಮುಖದಲ್ಲಿ ಕಾರ್ಪೊರೇಟರ್ ಹಾಗೂ ಪೊಲೀಸ್ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸುತ್ತಾನೆ. ನಂತರ ವೇಶ್ಯಾವಾಟಿಕೆ ನಡೆಸುವವರಿಗೆ ಪೊಲೀಸ್ ವ್ಯವಸ್ಥೆ, ರಾಜಕಾರಣಿಗಳು ಹಾಗೂ ರೌಡಿಗಳ ಅನುಕೂಲಕ್ಕೆ ದಾರಿ ಮಾಡಿಕೊಟ್ಟಿರುತ್ತಾನೆ. ಮತ್ತೊಂದೆಡೆ ತಂದೆ ತಾಯಿ ಇಲ್ಲದೆ ಮಾವನ ಆಸರೆಯಲ್ಲಿ ಬೆಳೆದ ಹುಡುಗ ಶಿವ (ವಿನಯ್ ರಾಜಕುಮಾರ್) ಅತ್ತೆಯ ಹಿಂಸೆಯ ನಡುವೆ ಬೇಸತ್ತು ಹಳ್ಳಿಯ ಸಹವಾಸವೇ ಬೇಡವೆಂದು ದುಡಿದು ಬದುಕು ಕಟ್ಟಿಕೊಳ್ಳುವ ಕನಸು ಹೊತ್ತು ಬೆಂಗಳೂರಿಗೆ ಗೆಳೆಯನನ್ನ ಹುಡುಕಿಕೊಂಡು ಬರುತ್ತೇನೆ.
ಹೋಟೆಲ್ ನಲ್ಲಿ ಗೆಳೆಯನ ಮೂಲಕ ಕೆಲಸ ಪಡೆಯುತ್ತಾನೆ. ಆದರೆ ಮೋಸ , ಅನ್ಯಾಯದ ವಿರುದ್ಧ ಹೊಡೆದಾಡುವ ಶಿವನ ನಡುವಳಿಕೆ ಒಂದಷ್ಟು ಎಡವಟ್ಟಿಗೆ ಕಾರಣವಾಗುತ್ತದೆ. ಇದರ ನಡುವೆ ಕಾಣೆಯಾದ ತಮ್ಮನನ್ನು ಹುಡುಕಿಕೊಂಡು ಸಕಲೇಶಪುರದಿಂದ ಬೆಂಗಳೂರಿಗೆ ಬರುವ ಮೋನಿಷಾ (ಮೋನಿಷಾ) ವೇಶ್ಯಾವಾಟಿಕೆ ಅಡ್ಡಕ್ಕೆ ಸಿಲುಕುತ್ತಾಳೆ. ಆದರೆ ವಿಧಿಯ ಆಟದಂತೆ ಶಿವು ಸಹಾಯದಿಂದ ತಪ್ಪಿಸಿಕೊಳ್ಳುವ ಮೊನಿಷಾ ಅಮ್ಮಾಜಿ (ಉಮಾಶ್ರೀ) ಯ ಆಸರೆಯೊಂದಿಗೆ ಸುರಕ್ಷಿತ ಸ್ಥಳಕ್ಕೆ ಸೇರುತ್ತಾಳೆ.

ಮುಂದೆ ಶಿವು ಹಾಗೂ ಮೋನಿಷಾಳ ಸ್ನೇಹ ಪ್ರೀತಿಯ ಕಡೆಗೆ ತಿರುಗುತ್ತದೆ, ತಮ್ಮನ ಹುಡುಕಾಟದಲ್ಲೂ ಗೆಲ್ಲುತ್ತಾಳೆ. ಜೀವನದಲ್ಲಿ ನೊಂದು ಬೆಂದು ವೇಶ್ಯಾವಾಟಿಕೆ ತಿಳಿದು ನೆಮ್ಮದಿ ಬದುಕು ನಡೆಸುವವರಿಗೆ ಹಾಗೂ ತೃತೀಯ ಲಿಂಗದವರಿಗೆ ಸಹಾಯ ಹಸ್ತವಾಗಿ ನಿಲ್ಲುವ ಅಮ್ಮಾಜಿ ಖಡಕ್ ಮಾತು ಎಂದರೆ ಎಂಎಲ್ಎ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಗಳಿಗೆ ಭಯ. ಆದರೆ ಪುಡಿ ರೌಡಿಗಳ ಗ್ಯಾಂಗಿಗೆ ಎಲ್ಲರನ್ನು ಹೊಡೆದು ಎದುರು ಹಾಕಿಕೊಳ್ಳುವ ಆತುರ.
ಒಂದಷ್ಟು ಆರ್ಭಟ , ಹೊಡೆದಾಟ , ಪ್ಲಾನ್ , ರಕ್ತಪಾತ , ಬುಲೆಟ್ ಸದ್ದಿನ ನಡುವೆ ಮಾಯಾ ನಗರಿಯ ಕರಾಳ ಮುಖಗಳ ದರ್ಶನವಾಗುತ್ತಾ ಹೋಗುತ್ತದೆ. ಏನದು ಕರಾಳ ದಂಧೆ… ಶಿವು ಹಾಗೂ ಮೋನಿಷಾ ಬದುಕು ಏನಾಗುತ್ತೆ… ಅಮ್ಮಜಿ ಹಾಗೂ ತಂಡದವರ ಬೆಂಬಲ ಏನು… ಕ್ಲೈಮಾಕ್ಸ್ ನೀಡುವ ಉತ್ತರ ಏನು… ಎಂಬುದಕ್ಕೆ ಈ ಚಿತ್ರವನ್ನು ಒಮ್ಮೆ ನೋಡಬೇಕು.
ನಿರ್ದೇಶಕ ದುನಿಯಾ ವಿಜಯ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ವಿಭಿನ್ನವಾಗಿದೆ. ಬೆಂಗಳೂರಿನ ಕತ್ತಲೆಯ ಪ್ರಪಂಚದ ನಿಗೂಢ ಸತ್ಯದ ಅನಾವರಣ ಗಮನ ಸೆಳೆಯುತ್ತದೆ. ಮೆಜೆಸ್ಟಿಕ್ ಏರಿಯಾದಲ್ಲಿ ನಡೆಯುವ ಡ್ರಗ್ , ಹೆಣ್ಣುಮಕ್ಕಳ ಅಪಹರಣ , ವೇಶ್ಯಾವಾಟಿಕೆ ದಂಧೆಯ ಬಗ್ಗೆ ಸೂಕ್ಷ್ಮವಾಗಿ ಎಚ್ಚರಿಸಿದ್ದಾರೆ. ರಿಯಲ್ ಲೊಕೇಶನ್‌ಗಳಲ್ಲೇ ಚಿತ್ರೀಕರಿಸಿ ಮೆಜೆಸ್ಟಿಕ್‌ನ ಮತ್ತೊಂದು ಕರಾಳ ಮುಖವನ್ನು ಅನಾವರಣ ಗೊಳಿಸಿದ್ದು , ನಿರೀಕ್ಷೆಯ ಮಟ್ಟಕ್ಕೆ ಚಿತ್ರ ಬಂದಂತಿಲ್ಲ ಅನಿಸುತ್ತದೆ. ಆದರೂ ನಿರ್ಮಾಪಕರ ಬೆಂಬಲ ನಿರ್ದೇಶಕರಿಗೆ ಸಮರ್ಥವಾಗಿ ಸಿಕ್ಕಂತಿದೆ.
ಇನ್ನೂ ಚಿತ್ರದ ಸಂಗೀತ , ಹಿನ್ನೆಲೆ ಸಂಗೀತ , ಛಾಯಾಗ್ರಹಣ , ಸಂಕಲನ ಉತ್ತಮವಾಗಿ ಮೂಡಿ ಬಂದಿದೆ. ಅದೇ ರೀತಿ ಮಾಸ್ತಿ ಮಂಜು ಸಂಭಾಷಣೆ ಕೂಡ ಖಡಕಾಗಿದೆ. ನಾಯಕ ನಟನಾಗಿ ವಿನಯ್ ರಾಜಕುಮಾರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಬಹಳಷ್ಟು ಶ್ರಮಪಟ್ಟಿದ್ದಾರೆ. ಅದೇ ರೀತಿ ನಟಿ ಮೋನಿಷಾ ಕೂಡ ಇನ್ನಷ್ಟು ತಾಲಿಮಾ ಪರಿಪಕ್ವತೆ ಕಾಣಬೇಕಿದೆ. ಇನ್ನು ಹಿರಿಯ ನಟಿ ಉಮಾಶ್ರೀ ತಮ್ಮ ಪಾತ್ರದಲ್ಲಿ ಅದ್ಭುತವಾಗಿ ಜೀವಿಸಿದ್ದಾರೆ. ಇನ್ಸ್ಪೆಕ್ಟರ್ ಪಾತ್ರದಲ್ಲಿ ವಿನೋದ್ ಮಾಸ್ಟರ್ ಗಮನ ಸೆಳೆಯುತ್ತಾರೆ.
ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಸಂಪತ್ ಮೈತ್ರೇಯ ಪಾತ್ರಗಳನ್ನು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಹೀಗೆಲ್ಲಾ ನಡೆಯುತ್ತಾ ಎಂಬ ಕುತೂಹಲ ಮೂಡಿಸುವ ಕಥೆಯನ್ನು ಒಳಗೊಂಡಿರುವ ಈ ಸಿಟಿ ಲೈಟ್ಸ್ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬೇಕು.
