ರಂಗಭೂಮಿಯ ನೆರಳಲ್ಲಿ ಸಿಡಿದೆಳುವ ಮಿಂಚು “ಟಾಸ್” (ಚಿತ್ರವಿಮರ್ಶೆ -ರೇಟಿಂಗ್ : 4/5)

Spread the love

ರೇಟಿಂಗ್ : 4/5

ಚಿತ್ರ : ಟಾಸ್
ನಿರ್ದೇಶಕ : ಅರ್ಜುನ್ ದೇವ್
ನಿರ್ಮಾಪಕರು : ಯಶ್ವಂತ್ ಕುಮಾರ್ , ಸಾಗರ್ ಪೂಜಾರಿ
ಸಂಗೀತ : ಮಣಿಕಾಂತ್ ಕದ್ರಿ
ಛಾಯಾಗ್ರಹಣ :ಜಿಯೋಲ್ ಶಮಣ್
ತಾರಾಗಣ : ಅರ್ಜುನ್ ದೇವ್ , ಸುತೇಜ್ ಶೆಟ್ಟಿ , ನವೀನ್ ಡಿ ಪಡೀಲ್, ಕೃತಿ ಬಿ ಶೆಟ್ಟಿ ಅರವಿಂದ್ ಬೋಳಾರ್, ಭೋಜರಾಜ್, ಪ್ರಕಾಶ್ ತುಮ್ಮಿನಾಡು , ಬಾಲಾಜಿ ಮನೋಹರ್ ಹಾಗೂ ಮುಂತಾದವರು…

ಕಲಾ ದೇವಿಯ ಸೇವೆ ಮಾಡುತ್ತಾ ರಂಗಭೂಮಿಯಲ್ಲಿ ತಮ್ಮ ಬದುಕನ್ನ ಕಟ್ಟಿಕೊಂಡಿರುವ ಜನರ ಮನಸ್ಸಿಗೆ ಹತ್ತಿರವಾಗಿ ಇಂದಿಗೂ ಸೇವೆ ಮಾಡುತ್ತಾ ಪ್ರಖ್ಯಾತಿಯನ್ನು ಪಡೆದ ಅದೆಷ್ಟೋ ಮಂದಿ ಇದ್ದಾರೆ. ಇಂಥದ್ದೇ ಕುಟುಂಬದಲ್ಲಿರುವ ಸಂಬಂಧ , ಪ್ರೀತಿ , ತಾಯಿಯ ಮಮತೆ , ಧೈರ್ಯ, ಆಸರೆಯ ನಡುವೆ ಸರಿ ತಪ್ಪುಗಳ ಲೆಕ್ಕಾಚಾರದ ಹಾದಿಯಲ್ಲಿ ಸಿಡಿದೆಳುವ ಹುಡುಗನ ಟಾಸ್ ಕಥಾನಕ ಈ ವಾರ ಪ್ರೇಕ್ಷಕರ ಮುಂದೆ ಬಂದಿದೆ.

ರಂಗಭೂಮಿಗೆ ಜೀವನ ಅದೇ ಉಸಿರೆಂದು ಜೀವನ ನಡೆಸುವ ವ್ಯಕ್ತಿ ನಾಟಕದ ರೂವಾರಿ ಆನಂದ್ ಮಾಸ್ಟರ್ (ನವೀನ್ ಡಿ ಪಡೀಲ್). ಶಾಂತ ಸ್ವಭಾವದ ವ್ಯಕ್ತಿಗೆ ಬೆನ್ನೆಲುಬಾಗಿ ನಿಲ್ಲುವ ಮಡದಿ ಭಾಗ್ಯ (ಕೃತಿ ಶೆಟ್ಟಿ) ಹಾಗೂ ಆತನ ಮಗ ಶಿವ (ಅರ್ಜುನ್‌ದೇವ್). ತನ್ನ ಕುಟುಂಬದ ವಿರುದ್ಧ ಯಾರೇ ಎದುರಾದರೂ ತೊಂದರೆ ಕೊಟ್ಟರೆ ಟಾಸ್ ಹಾಕುವ ಮೂಲಕ ತಕ್ಕ ಪಾಠ ಕಲಿಸುವ ಭಾಗ್ಯ ಅದನ್ನೇ ತನ್ನ ಮಗನಿಗೂ ಹೇಳಿಕೊಟ್ಟಿರುತ್ತಾರೆ.

ಚಿಕ್ಕ ವಯಸಿನಿಂದಲೇ ಮೂಗಿನ ತುದಿಯಲ್ಲಿ ಕೋಪ, ವರ್ಷಗಳು ಕಳೆದಂತೆ ಬದುಕಿನ ಪಯಣದಲ್ಲಿ ಆನಂದ್ ಮಾಸ್ಟರ್ ತಮ್ಮದೇ ತಂಡವನ್ನು ಕಟ್ಟಿಕೊಂಡು ಪ್ರಖ್ಯಾತರಾಗಿ ಒಂದು ನೆಲೆಯೊಂದಿಗೆ ಉತ್ತಮ ಹೆಸರನ್ನು ಗಳಿಸಿಕೊಂಡಿರುತ್ತಾರೆ. ಇನ್ನೂ ತನ್ನ ತಂದೆಯ ವೃತ್ತಿಯ ವಿಚಾರವಾಗಿ ಯಾರೇ ಧ್ವನಿ ಎತ್ತಿದರು ಶಿವು ಮನುಷ್ಯನೇ ಆಗಿರಲ್ಲ, ಅದಕ್ಕೆ ಪ್ರತ್ಯುತ್ತರ ಕೊಡುತ್ತಾನೆ. ಇದರ ನಡುವೆ ಆನಂದ್ ಮಾಸ್ಟರ್ ಹಾಗೂ ಶಿಷ್ಯಂದಿರಿಗೆ ಶಿವು ಮದುವೆಯ ಬಗ್ಗೆ ಪ್ರಸ್ತಾಪ ಮಾಡುತ್ತಾರೆ.

ಅದೇ ಸಮಯಕ್ಕೆ ತಂದೆಯ ಆರೋಗ್ಯದ ಚೆಕಪ್ ಸಮಯದಲ್ಲಿ ಕಾಣುವ ಡಾಕ್ಟರ್ ಸ್ವರ್ಣ ನಾಯರ್ (ಸುತೇಜ್ ಶೆಟ್ಟಿ) ನೋಟಕ್ಕೆ ಮನಸೋಲುತ್ತಾನೆ. ಕೇರಳ ಮೂಲದ ಈ ಚೆಲುವೆಯ ಪ್ರೀತಿ ಪಡೆಯಲು ಒಂದಷ್ಟು ಕಸರತ್ತು ಎದುರಾಗುತ್ತಾ ಹೋಗುತ್ತದೆ. ಇದನ್ನು ಗಮನಿಸುವ ಸ್ವರ್ಣಳ ಅಣ್ಣ (ಬಾಲಾಜಿ ಮನೋಹರ್) ಇವರಿಬ್ಬರ ಪ್ರೀತಿಯನ್ನ ನೋಡಿ ಒಪ್ಪಿಗೆ ಸೂಚಿಸುತ್ತಾನೆ. ಇದರ ನಡುವೆ ಮಾತು ಬಾರದ ಅಕ್ಕನ ಮದುವೆಯನ್ನ ಅದ್ದೂರಿ ಮಾಡಬೇಕೆಂಬ ಆಸೆಯೊಂದಿಗೆ ಗೆಳೆಯ ಚೇತನ್ ಜೊತೆ ಗುಣಕರ ನಾಟಕ ಮುಗಿಸಿಕೊಂಡು ಬೈಕ್ ನಲ್ಲಿ ಬರುವಾಗ ಆಕ್ಸಿಡೆಂಟ್ ಗೆ ಒಳಗಾಗಿ ಸಾವನ್ನಪ್ಪುತ್ತಾನೆ.

ಅಣ್ಣಾಜಿ (ಗರುಡ ರಾಮ್) ತಮ್ಮ ರೋಷನ್ ಕುಡಿದ ಮತ್ತಿನಲ್ಲಿ ಈ ಕೃತ್ಯ ಮಾಡಿ ಮೆರೆಯುತ್ತಾನೆ. ಈ ವಿಚಾರ ತುಳಿಯುವ ಆನಂದ ಮಾಸ್ಟರ್ ನ್ಯಾಯಕ್ಕಾಗಿ ಮಾಧ್ಯಮದ ಮುಂದೆ ಬರುತ್ತಾರೆ. ಅದರಿಂದ ಕುಪಿತಗೊಳ್ಳುವ ಅಣ್ಣಾಜಿ ಆನಂದ ಮಾಸ್ಟರ್ ಗೆ ಬಟ್ಟೆ ಬಿಚ್ಚಿ ನಡುರಸ್ತೆಯಲ್ಲಿ ಅವಮಾನಿಸುತ್ತಾನೆ. ತನ್ನ ತಂದೆಗೆ ಆದ ಅವಮಾನ ನೋಡುವ ಶಿವು ಮುಂದೆ ಯಾವ ರೀತಿ ಟಾಸ್ ಹಾಕಿ ಸಿಡಿದೆಳುತ್ತಾನೆ. ಶಿವನ ರೌದ್ರರೂಪ ಹೇಗಿರುತ್ತೆ… ಅಣ್ಣಾಜಿಯ ಕಥೆ ಏನು… ಡಾಕ್ಟರ್ ಸ್ವರ್ಣಳ ಪ್ರೀತಿ ಏನಾಗುತ್ತ… ರಂಗ ಪ್ರತಿಭೆಗಳ ಬದುಕು ಏನು… ಕ್ಲೈಮ್ಯಾಕ್ಸ್ ನೀಡುವ ಉತ್ತರ… ಹೇಗಿರುತ್ತೆ ಎಂಬುದಕ್ಕೆ ಒಮ್ಮೆ ಈ ಚಿತ್ರವನ್ನು ನೋಡಬೇಕು.

ಯುವ ನಟ , ನಿರ್ದೇಶಕ ಅರ್ಜುನ್ ದೇವ್ ಈ ಚಿತ್ರದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಂತಹ ಉತ್ತಮ ಚಿತ್ರವನ್ನು ನೀಡಿದ್ದಾರೆ. ಒಬ್ಬ ನಟನಿಗೆ ಇರಬೇಕಾದಂತ ಅರ್ಹತೆ ಹೊಂದಿರುವ ಅರ್ಜುನ್ ಆಕ್ಷನ್ , ಡ್ಯಾನ್ಸ್ ಹಾಗೂ ಸನ್ನಿವೇಶಗಳನ್ನು ಕೂಡ ಅದ್ಭುತವಾಗಿ ಮಿಂಚಿದ್ದಾರೆ.

ಅದೇ ರೀತಿ ನಿರ್ದೇಶಕನಾಗಿಯೂ ತಮ್ಮ ಸಮರ್ಥ್ಯವನ್ನು ಹೊರಹಾಕಿರುವ ಈ ಪ್ರತಿಭೆ ಚಿತ್ರೋದ್ಯಮಕ್ಕೆ ಅಗತ್ಯದ ಸಮಯಕ್ಕೆ ಬಂದಂತಿದೆ. ರಂಗಭೂಮಿಯಲ್ಲಿ ಬಣ್ಣ ಹಚ್ಚುವವರ ಬದುಕು ಬವಣೆ, ಜೀವನ ಶೈಲಿ, ಕುಟುಂಬಗಳು ಅನುಭವಿಸುವ ಸಂಕಷ್ಟಗಳ ಜೊತೆಗೆ ಸ್ನೇಹ , ಸಂಬಂಧ , ಪ್ರೀತಿಯ ಹಿನ್ನೆಲೆಯೊಂದಿಗೆ ಮಾಸ್ ಆಕ್ಷನ್ ಮೂಲಕ ಟಾಸ್ ಹಾಕಿ ಗಮನ ಸೆಳೆದಿದ್ದು , ಒಂದಷ್ಟು ಚಿತ್ರಕಥೆಯಲ್ಲಿ ಹಿಡಿತ ಮಾಡಬೇಕಿತ್ತು ಅನಿಸುತ್ತದೆ.

ನಿರ್ಮಾಪಕರ ಕರ್ಚು ತೆರೆಯ ಮೇಲೆ ಕಾಣುತ್ತದೆ. ಸಂಗೀತ ಸೊಗಸಾಗಿತ್ತು , ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿದೆ. ಅದೇ ರೀತಿ ತಾಂತ್ರಿಕವಾಗಿ ಚಿತ್ರ ಉತ್ತಮ ಎನಿಸುತ್ತದೆ. ದಕ್ಷಿಣ ಕನ್ನಡದ ಸುತ್ತಮುತ್ತ, ಅಲ್ಲಿನ ಭಾಷೆಯ ಸೊಗಡಿನ ನೈಜತೆ ತೆರೆಯ ಮೇಲೆ ಕಾಣುತ್ತದೆ.  ಇನ್ನು ಡಾಕ್ಟರ್ ಸ್ವರ್ಣ ಪಾತ್ರ ಮಾಡಿರುವ ನಟಿ ಸುತೇಜ್ ಶೆಟ್ಟಿ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರಂಗಭೂಮಿಯ ಮುಖಂಡನಾಗಿ ನಾಯಕನ ತಂದೆಯ ಪಾತ್ರದಲ್ಲಿ ನವೀನ್ ಡಿ ಪಡೀಲ್ ಅದ್ಭುತವಾಗಿ ಅಭಿನಯಿಸಿದ್ದಾರೆ.

ಇನ್ನು ನಾಯಕನ ತಾಯಿಯ ಪಾತ್ರದಲ್ಲಿ ಕೃತಿ ಬಿ ಶೆಟ್ಟಿ ಗಮನ ಸೆಳೆಯುವಂತ ಪಾತ್ರದ ಮೂಲಕ ನೆನಪಿನಲ್ಲಿ ಉಳಿಯುತ್ತಾರೆ. ವಿಲನ್ ಪಾತ್ರದಲ್ಲಿ ಗರುಡಾರಾಮ್ , ನಾಯಕಿಯ ಅಣ್ಣನಾಗಿ ಬಾಲಾಜಿ ಮನೋಹರ್ ಸೇರಿದಂತೆ ಅರವಿಂದ್ ಬೋಳಾರ್ , ದೀಪಕ್ ರೈ ಪಣಜಿ , ಪ್ರಕಾಶ್ ತುಮ್ಮಿ ನಾಡು ಸೇರಿದಂತೆ ಎಲ್ಲಾ ಪಾತ್ರಗಳು ಗಮನ ಸೆಳೆಯುವಂತೆ ಮೂಡಿಬಂದಿದೆ. ಒಟ್ಟಾರೆ ಮನೋರಂಜನೆಯ ಜೊತೆಗೆ ಮಾಸ್ ಕಂಟೆಂಟ್ ಹೊಂದಿರುವ ಈ ಚಿತ್ರವನ್ನು ಎಲ್ಲರೂ ನೋಡುವಂತಿದೆ.

Visited 1 times, 1 visit(s) today
error: Content is protected !!