ರೌಡಿಸಂ ಅಧ್ಯಾಯದ ಕರಾಳ ಸತ್ಯ “ಬಲರಾಮನ ದಿನಗಳು” (ಚಿತ್ರವಿಮರ್ಶೆ-ರೇಟಿಂಗ್ : 4/5)

Spread the love

ರೇಟಿಂಗ್ : 4/5
ಚಿತ್ರ : ಬಲರಾಮನ ದಿನಗಳು
ನಿರ್ದೇಶಕ : ಕೆ.ಎಂ ಚೈತನ್ಯ
ನಿರ್ಮಾಪಕ : ಪದ್ಮಾವತಿ ಜಯರಾಮ್ , ಶ್ರೇಯಸ್
ಸಂಗೀತ : ಸಂತೋಷ ನಾರಾಯಣನ್
ಛಾಯಾಗ್ರಹಣ : ಹೆಚ್. ಸಿ .ವೇಣು
ತಾರಾಗಣ : ವಿನೋದ್ ಪ್ರಭಾಕರ್ , ಪ್ರಿಯಾ ಆನಂದ್, ಆಶಿಶ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ರಮೇಶ್ ಇಂದಿರಾ, ಅವಿನಾಶ್, ಕೆ.ಎಸ್. ಶ್ರೀಧರ್ , ಆದಿತ್ಯ ಆಶ್ರಿ , ವಿನಯ್ ಗೌಡ ಹಾಗೂ ಮುಂತಾದವರು…

ಭೂಗತ ಜಗತ್ತಿನ ಮತ್ತೊಂದು ಕರಾಳ ಸತ್ಯದ ಅನಾವರಣ ಬೆಳ್ಳಿ ಪರದೆ ಮೇಲೆ ಮೂಡಿ ಬಂದಿದೆ. ಹೊಡಿ , ಬಡಿ , ಮುಚ್ಚುಲಾಂಗುಗಳ ನಡುವೆ ಬಾಂಬ್ ಗಳು ಹಾಗೂ ಗನ್ನು ಸದ್ದು ಮಾಡಿದಂತಹ ಕಾಲಘಟ್ಟವದು , 80 ಹಾಗೂ 90ರ ಆಸುಪಾಸಿನಲ್ಲಿ ನಡೆದಂತಹ ಕೆಲವು ಘಟನೆಗಳ ಸುತ್ತ ಬೆಸೆದುಕೊಂಡು ನೈಜಕ್ಕೆ ಪೂರಕವಾಗಿ ಚಿತ್ರೀಕರಿಸಿ , ಘಟಾನುಘಟಿಗಳ ಆರ್ಭಟ , ಪೊಲೀಸ್ ಇಲಾಖೆಯ ರಣತಂತ್ರ , ರಾಜಕೀಯ ಶೇಡ್ಯಂತ್ರದ ನಡುವೆ ಸ್ನೇಹ, ಪ್ರೀತಿ , ಪ್ರೇಮದ ಸುಳಿಯಲ್ಲಿ ಮನ ಮುಟ್ಟುವಂತೆ ಕಥಾನಕವನ್ನು ಮಾಡಿಕೊಂಡು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಬಲರಾಮನ ದಿನಗಳು”.

ಹಳ್ಳಿಯಿಂದ ಕೆಲಸವನ್ನು ಹುಡುಕುತ್ತಾ ಸಿಟ್ಟಿಗೆ ಬರುವ ಬಾಲ (ವಿನೋದ್ ಪ್ರಭಾಕರ್) ನ ಪರ್ಸ್ ಕದೆಯುವ ಹುಡುಗರಿಗೆ ಬುದ್ಧಿ ಕಲಿಸುವಾಗ ಗ್ಯಾಂಗ್ನ ಲೀಡರ್ ಬಿಂಡನ ಜೊತೆ ಹೊಡೆದಾಟ, ರೌಡಿಯ ಸಾವಿನಿಂದ ಜೈಲು ಸೇರುವ ಬಲರಾಮನಿಗೆ ಭೂಗತ ಜಗತ್ತಿನ ದೊರೆ ಜಯರಾಜ್ ಆಶ್ರಯ ಸಿಗುತ್ತೆ.

ಇನ್ನು ಕೊತ್ವಾಲ್ (ಶರತ್ ಲೋಹಿತಾಶ್ವ) ಹಾಗೂ ಜಯರಾಜ್(ಆಶಿಶ್ ವಿದ್ಯಾರ್ಥಿ) ಗ್ಯಾಂಗಿನ ಜಟಾಪಟಿ , ದಂಧೆ ನಡುವೆ ಪೊಲೀಸ್ ಇಲಾಖೆ ಸೂಕ್ತ ಸಮಯಕ್ಕಾಗಿ ರಣತಂತ್ರ ಮಾಡುತ್ತಿರುತ್ತದೆ. ರಿಟೈರ್ಡ್ ಮೇಜರ್ ದೇವಯ್ಯ (ಅವಿನಾಶ್) ಪುತ್ರಿ ಟೀಚರ್ ವೃತ್ತಿ ಮಾಡುವ ರೇವತಿ (ಪ್ರಿಯ ಆನಂದ್) ಆಕಸ್ಮಿಕವಾಗಿ ಬಲರಾಮನ ನೋಡುವ ಸಂದರ್ಭ ಎದುರಾಗುತ್ತದೆ.

ಇನ್ನು ಜಯರಾಜ್ ಗೆ ರಾಜಕೀಯ ನಾಯಕರ ಬೆಂಬಲ ನಿರಂತರವಾಗಿರುತ್ತದೆ. ಇದರ ನಡುವೆ ಮುಂಬೈ ನಂಟಿನ ಮುನ್ನಪ್ಪ ರೈ (ರಮೇಶ್ ಇಂದಿರಾ) ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳನ್ನು ತನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ಮುಂದಾಗುತ್ತಾನೆ. ಮೇಜರ್ ದೇವಯ್ಯ ಆಸ್ತಿ ವಿಚಾರದಲ್ಲಿ ಎದುರಾಗುವ ಸಮಸ್ಯೆಗೆ ಬಲರಾಮ ಮುಂದೆ ನಿಲ್ಲುತ್ತಾನೆ. ಆತನ ನೇರ ಮಾತು , ನಡುವಳಿಕೆಗೆ ಮನಸೋತ ರೇವತಿ ಬಲರಾಮನನ್ನು ಪ್ರೀತಿಸಲು ಮುಂದಾಗುತ್ತಾಳೆ.

ಒಂದು ಕಡೆ ಪ್ರೀತಿಯ ಪಯಣವಾದರೆ… ಮತ್ತೊಂದೆಡೆ ಗ್ಯಾಂಗ್ ಜೋರ್ ಆಗುತ್ತಾ ಹೋಗುತ್ತದೆ. ಎಲ್ಲದಕ್ಕೂ ಒಂದು ಅಂತ್ಯ ಇರ್ಲೇಬೇಕು, ಮುಂದೆ ಎದುರಾಗುವ ರೋಚಕ ಘಟನೆಗಳು ಒಂದಕ್ಕೊಂದು ಬೆಸೆದುಕೊಂಡು ಕ್ಲೈಮಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ. ಅದು ಹೇಗೆ… ಏನು… ಎಂಬುದನ್ನು ತಿಳಿಯಬೇಕಾದರೆ ಒಮ್ಮೆ ಈ ಚಿತ್ರವನ್ನು ನೋಡಬೇಕು.

ನಿರ್ದೇಶಕ ಕೆ.ಎಂ .ಚೈತನ್ಯ ಮಾಡಿಕೊಂಡಿರುವ ಕಥಾವಸ್ತುವಿನಲ್ಲಿ ಆ ದಿನಗಳು ಛಾಯೆ ಕಂಡರೂ ಬಲರಾಮನ ಹಾದಿ ಬೆಸೆದುಕೊಂಡಿರುವ ರೀತಿ ಗಮನ ಸೆಳೆಯುತ್ತದೆ. ಜೈಲಿನ ಚಟುವಟಿಕೆಗಳು , ಪೊಲೀಸ್ ಇಲಾಖೆಗಳ ಕಾರ್ಯರೂಪ , ರೌಡಿಗಳ ಅಟ್ಟಹಾಸದ ನಡುವೆ ಪ್ರೀತಿಯ ಮಿಡಿತವನ್ನು 80ರ ಕಾಲಘಟ್ಟಕ್ಕೆ ಸೂಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು. ದ್ವಿತೀಯ ಭಾಗ ಹೆಚ್ಚು ಸೆಳೆಯುವಂತಿದೆ.

ರೌಡಿಗಳ ಮಾತು , ವರ್ಚಸ್ಸು , ಗಂಭೀರವಾಗಿ ತೆರೆಯ ಮೇಲೆ ತಂದಿದ್ದು , ಎಲ್ಲರೂ ನೋಡುವಂತಿದೆ. ನಿರ್ಮಾಪಕರು ಹಾಕಿರುವ ಬಂಡವಾಳ ತೆರೆಯ ಮೇಲೆ ಕಾಣುತ್ತದೆ. ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿ ಮೂಡಿಬಂದಿದೆ. ಸಂಗೀತ ಗುನುಗುವಂತಿದ್ದು , ಹಿನ್ನೆಲೆ ಸಂಗೀತ ಅಬ್ಬರಿಸಿದೆ. ಕಲಾ ನಿರ್ದೇಶನ ಸೇರಿದಂತೆ ತಾಂತ್ರಿಕವಾಗಿ ಚಿತ್ರ ಉತ್ತಮವಾಗಿದೆ. ನಾಯಕನಾಗಿ ವಿನೋದ್ ಪ್ರಭಾಕರ್ ಅದ್ಭುತವಾಗಿ ಪಾತ್ರದಲ್ಲಿ ಜೀವಿಸಿದ್ದು , ಎಮೋಷನ್ ಹಾಗೂ ಆಕ್ಷನ್ ಎರಡನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಅದೇ ರೀತಿ ನಟಿ ಪ್ರಿಯಾ ಆನಂದ್ ಕೂಡ ಬಹಳ ನ್ಯಾಚುರಲ್ ಆಗಿ ಪಾತ್ರದಲ್ಲಿ ಮುದ್ದಾಗಿ ಮಿಂಚಿದ್ದಾರೆ. ಇನ್ನು ಎಂದಿನಂತೆ ಆಶಿಶ್ ವಿದ್ಯಾರ್ಥಿ , ಕೆ ಎಸ್ ಶ್ರೀಧರ್ , ಅವಿನಾಶ್ , ರಮೇಶ್ ಇಂದಿರಾ , ಅತುಲ್ ಕುಲಕರ್ಣಿ , ಅವಿನಾಶ್ , ವಿನಯ್ ಗೌಡ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿ ಮೂಡಿಬಂದಿದೆ. ಒಟ್ಟಾರೆ 80ರ ಕಾಲಘಟ್ಟದ ನೈಜ ಘಟನೆಗಳನ್ನ ತೆರೆ ಮೇಲೆ ತಂದಿರುವ ಈ ಚಿತ್ರವನ್ನು ಎಲ್ಲರೂ ನೋಡುವಂತಿದೆ.

Visited 1 times, 1 visit(s) today
error: Content is protected !!