Cini NewsSandalwood

ತೆರೆಮೇಲೆ ‘ಆಡೇ ನಮ್ God’ ಅನಾವರಣ

ಆಡನ್ನು ದೇವರಾಗಿ ಪೂಜೆ ಮಾಡಿದಾಗ ಏನೆಲ್ಲಾ ಆಗುತ್ತದೆ ಎನ್ನುವ ಕಥಾಹಂದರ ಹೊಂದಿರುವ ‘ಆಡೇ ನಮ್ God’ ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ. ಒಂದೊಳ್ಳೆ ಸಂದೇಶದೊಂದಿಗೆ ಹಾಸ್ಯಮಯವಾಗಿ ಕಥೆ ಹೆಣೆದಿದ್ದಾರೆ ಹಿರಿಯ ನಿರ್ದೇಶಕ ಪಿ.ಎಚ್.ವಿಶ್ವನಾಥ್. ಪ್ರೊ.ಬಿ.ಬಸವರಾಜ್ ಹಾಗೂ ರೇಣುಕಾ ಬಸವರಾಜ್ ‘ಆಡೇ ನಮ್ God’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡ ಸಾಕಷ್ಟು ಮಾಹಿತಿ ಹಂಚಿಕೊಂಡಿದೆ.

ನಿರ್ದೇಶಕ ಪಿ.ಎಚ್.ವಿಶ್ವನಾಥ್ ಮಾತನಾಡಿ, ಸಿನಿಮಾ ಮಾಡಿದ ಮೇಲೆ ಸಿನಿಮಾದ ಮೇಲೆ ನಿರ್ದೇಶಕರು ಮಾತನಾಡುವುದು ಏನೂ ಇರುವುದಿಲ್ಲ. ಸಿನಿಮಾ ಏನಾದರೂ ಹೇಳಬೇಕು. ಇವತ್ತಿನ ಟ್ರೆಂಡ್ ಗೆ ಸರಿಯಾಗುವಂತಹ ಸಿನಿಮಾ ಇದು. ಇವತ್ತಿನ ಆಡಿಯನ್ಸ್ ಗೆ ಕಥೆ ಇಷ್ಟವಾಗುತ್ತದೆ. ಗಂಭೀರವಾದ ವಿಷಯವನ್ನು ಲಘು ಹಾಸ್ಯದೊಂದಿಗೆ ಹೇಳಿದ್ದೇವೆ. ಹೊಸ ಹುಡುಗರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಇವರು ಏನು ಮಾಡಿದ್ದಾರೆ ಎಂಬ ಕುತೂಹಲಕ್ಕಾಗಿ ಜನ ಬಂದು ನೋಡಬೇಕು ಎಂದು ತಿಳಿಸಿದರು.

ನಟರಾಜ್ ಮಾತನಾಡಿ, ನನ್ನದು ಒಬ್ಬ ಮಧ್ಯವರ್ತಿಯ ಪಾತ್ರ. ಅವನು ಮಾಡದ ಕೆಲಸವಿಲ್ಲ. ಸರ್ ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ನಿಯತ್ತನ್ನು ನಂಬಿಕೊಂಡಿರುವ ಪಾತ್ರ ಇದು. ಒಂದೊಳ್ಳೆ ಪಾತ್ರ ಕೊಟ್ಟಿದ್ದಕ್ಕೆ ನಿರ್ದೇಶಕರಾದ ಪಿ.ಎಚ್.ವಿಶ್ವನಾಥ್ ಸರ್ ಗೆ ಧನ್ಯವಾದ. ಸಂಭಾಷಣೆ ಬರೆಯಲು ಸಹ ಅವಕಾಶ ಸಿಕ್ಕಿದೆ. ತುಂಬಾ ಖುಷಿ ಕೊಟ್ಟ ಜರ್ನಿ ಎಂದರು.

ನಿರ್ಮಾಪಕ ಪ್ರೊ ಬಿ ಬಸವರಾಜ್ ಮಾತನಾಡಿ, ನಾನು ರಿಟೈಡ್ ಪ್ರೊಫೆಸರ್. ನಿರ್ದೇಶಕ ಪಿ.ಎಚ್.ವಿಶ್ವನಾಥ್ ಅವರ ಪರಿಚಯವಾದಾಗ ಹೊಸ ಆಸೆ ಹುಟ್ಟಿತ್ತು. ಸಿನಿಮಾ ಮಾಡಬೇಕು ಎಂದು ಅನಿಸಿತು. ಅಕ್ಟೋಬರ್ 6ಕ್ಕೆ ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬಹಳ ಸಂತೋಷವಾಗುತ್ತಿದೆ. ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ಕೊಟ್ಟರೆ ನನ್ನ ವೃತ್ತಿ ಜೀವನಕ್ಕೂ ಒಂದು ರೀತಿ ಸಾರ್ಥಕಥೆ ಮಾಡಿದಂತಾಗುತ್ತದೆ ಎನ್ನುವ ಉದ್ದೇಶದಿಂದ ಚಿತ್ರ ಮಾಡಿದ್ದೇನೆ. ಇಡೀ ತಂಡ ಸೇರಿ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ, ಜನ ಬೆಂಬಲಿಸಬೇಕು ಎಂದರು.

ರಾಮ ರಾಮ ರೇ ಸಿನಿಮಾ ಖ್ಯಾತಿಯ ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಅನೂಪ್ ಶೂನ್ಯ, ಸಾರಿಕ ರಾವ್, ಬಿ ಸುರೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಪಿ.ಕೆ.ಎಚ್ ದಾಸ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಅಕ್ಷಯ್ ವಿಶ್ವನಾಥ್ ಚಿತ್ರಕಥೆ-ಸಹ ನಿರ್ದೇಶನ ‘ಆಡೇ ನಮ್ God’ ಚಿತ್ರಕ್ಕಿದೆ.

ಆರ್.ಕೆ. ಸ್ವಾಮಿನಾಥನ್ ಸಂಗೀತ, ಶಶಿಕುಮಾರ್ ಎಸ್ ಹಿನ್ನೆಲೆ ಸಂಗೀತದ ಹಾಡುಗಳಿಗೆ ಹೃದಯ ಶಿವ-ನಿತಿನ್ ನಾರಾಯಣ್ ಸಾಹಿತ್ಯ ಬರೆದಿದ್ದು, ರವೀಂದ್ರ ಸೊರಗಾವಿ-ಚೇತನ್ ನಾಯಕ್ ಧ್ವನಿಯಾಗಿದ್ದಾರೆ. ಬಿ.ಬಿ.ಆರ್ ಫಿಲಂಸ್ ಹಾಗೂ ಎವೆರೆಸ್ಟ್ ಇಂಡಿಯಾ ಎಂಟರ್ ಟೈನರ್ಸ್ ಬ್ಯಾನರ್ ನಡಿ ಪ್ರೊ.ಬಿ. ಬಸವರಾಜ್ ಹಾಗೂ ರೇಣುಕಾ ಬಸವರಾಜ್ ನಿರ್ಮಾಣ ಮಾಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಪಂಚಮವೇದ, ಶ್ರೀಗಂಧ, ಅರಗಿಣಿ, ಅರುಣೋದಯ, ರಂಗೋಲಿ, ಅಂಡಮಾನ್, ಮುಂಜಾನೆ ಮಂಜು, ಮುಸುಕು ಅಂತಹ ಹಿಟ್ ಸಿನಿಮಾಗಳನ್ನು ಕೊಟ್ಟ ಪಿ.ಎಚ್. ವಿಶ್ವನಾಥ್. ಅಂಬರೀಶ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್ ಅಂತಹ ಸ್ಟಾರ್ ನಟರಿಗೆ ಸಿನಿಮಾ ನಿರ್ದೇಶನ ಮಾಡಿ ಸಕ್ಸಸ್ ಕಂಡಿರುವ ಇವರು ವರ್ಷಗಳ ಬಳಿಕ ವಿಭಿನ್ನ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ. ಇದೇ ತಿಂಗಳ 6ರಂದು ‘ಆಡೇ ನಮ್ God’ ಸಿನಿಮಾ ತೆರೆಗೆ ಬರ್ತಿದೆ

error: Content is protected !!