Cini NewsSandalwood

ಏಪ್ರಿಲ್ 12 ರಂದು “ದಾಸವರೇಣ್ಯ ಶ್ರೀ ವಿಜಯದಾಸರು” ಚಿತ್ರ ರಿಲೀಸ್

ಖ್ಯಾತ ಹರಿದಾಸರಾದ ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರ ಕುರಿತಾದ “ದಾಸವರೇಣ್ಯ ಶ್ರೀ ವಿಜಯದಾಸರು” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರ ಏಪ್ರಿಲ್ 12 ರಂದು ತೆರೆಗೆ ಬರಲಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು. “ಶ್ರೀ ಜಗನ್ನಾಥದಾಸರು” ಚಿತ್ರ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ನಂತರ ಕಳೆದವರ್ಷ “ಶ್ರೀಪ್ರಸನ್ನವೆಂಕಟದಾಸರು” ಚಿತ್ರ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಈಗ ಕರ್ನಾಟಕದ ಮತ್ತೊಬ್ಬ ಶ್ರೇಷ್ಠ ಹರಿದಾಸರಾದ ವಿಜಯದಾಸರ ಕುರಿತಾದ “ದಾಸವರೇಣ್ಯ ಶ್ರೀವಿಜಯದಾಸರು” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಏಪ್ರಿಲ್ 12 ರಂದು ಚಿತ್ರ ತೆರೆಗೆ ಬರಲಿದೆ. ಎಸ್ ಪಿ ಜೆ ಮೂವೀಸ್ ಲಾಂಛನದಲ್ಲಿ ತ್ರಿವಿಕ್ರಮ ಜೋಶಿ ಅವರು ಈ ಚಿತ್ರವನ್ನು ನಿರ್ಮಿಸುವುದರೊಂದಿಗೆ ವಿಜಯದಾಸರ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ವಿಜಯದಾಸರ ಪತ್ನಿ ಅರಳಮ್ಮನ ಪಾತ್ರದಲ್ಲಿ ಶ್ರೀಲತ ಅಭಿನಯಿಸಿದ್ದಾರೆ. ಪ್ರಭಂಜನ ದೇಶಪಾಂಡೆ, ವಿಜಯಾನಂದ ನಾಯಕ್, ಮಾಜಿ ಶಾಸಕರಾದ ಬಸವನಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ. ವಿಜಯಕೃಷ್ಣ ಸಂಗೀತ ನೀಡದ್ದಾರೆ. ಜೆ.ಎಂ.ಪ್ರಹ್ಲಾದ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಹಂಪಿ, ಕನಕಗಿರಿ ಮುಂತಾದ ಕಡೆ ಚಿತ್ರೀಕರಣ ನಡೆದಿದೆ ಎಂದು ನಿರ್ದೇಶಕ ಮಧುಸೂದನ್ ಹವಾಲ್ದಾರ್ ತಿಳಿಸಿದರು.

ಕನ್ನಡದಲ್ಲಿ “ನವಕೋಟಿ ನಾರಾಯಣ”, ” ಭಕ್ತ ಕನಕದಾಸ” ಚಿತ್ರದ ನಂತರ ಹರಿದಾಸರ ಕುರಿತಾದ ಯಾವುದೇ ಚಿತ್ರ ಬಂದಿರಲಿಲ್ಲ. ಸುಮಾರು ವರ್ಷಗಳ ನಂತರ ‘ಶ್ರೀಜಗನ್ನಾಥದಾಸರು” ಚಿತ್ರ ತೆರೆಗೆ ಬಂತು. ಆನಂತರ “ಶ್ರೀಪ್ರಸನ್ನವೆಂಕಟದಾಸರು”, ಈಗ ” ದಾಸವರೇಣ್ಯ ಶ್ರೀ ವಿಜಯದಾಸರು” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ನಾನು ಮೂಲತಃ ಇಂಜಿನಿಯರ್ ಹಾಗೂ ಉದ್ಯಮಿ.

ಹಲವು ವರ್ಷಗಳಿಂದ ರಾಜಕೀಯದಲ್ಲೂ ಸಕ್ರಿಯನಾಗಿದ್ದೇನೆ. “ದಾಸವರೇಣ್ಯ ಶ್ರೀ ವಿಜಯದಾಸರು” ಚಿತ್ರವನ್ನು ನಿರ್ಮಾಣ ಮಾಡಿ, ವಿಜಯದಾಸರ ಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ. ದುಡ್ಡು ಮಾಡುವ ಚಿತ್ರ ಮಾಡದೇ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರ ನೀಡುವ ಹಂಬಲದಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ.

ಶ್ರೀಜಗನ್ನಾಥದಾಸರು ಚಿತ್ರ ತೆರೆಕಂಡಾಗ ಜನರು ಭಕ್ತಿಪರವಶರಾಗಿ ಚಿತ್ರ ನೋಡಿದ್ದನ್ನು ಕಂಡಿದ್ದೇನೆ. ಈ ಚಿತ್ರಕ್ಕೂ ಈಗಾಗಲೇ ವಿದೇಶದಲ್ಲಿ ಟಿಕೇಟ್ ಬುಕ್ಕಿಂಗ್ ಆರಂಭವಾಗಿದೆ. ಈ ಚಿತ್ರಕ್ಕೆ ತಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ‌ ಹಾಗೂ ನಟ ತ್ರಿವಿಕ್ರಮ ಜೋಶಿ. ಚಿತ್ರದಲ್ಲಿ ಅಭಿನಯಿಸಿರುವ ಶ್ರೀಲತ, ವಿಜಯಾನಂದ ನಾಯಕ್ ಹಾಗೂ ವಿತರಕರಾದ ರಾಜು ಮತ್ತು ಆನಂದ್ ಚಿತ್ರದ ಕುರಿತು ಮಾಹಿತಿ ನೀಡಿದರು

error: Content is protected !!