ಅಧ್ಯಕ್ಷಗಿರಿಗಾಗಿ ಸೇವೆ ಹಾಗೂ ಸ್ವಾಹದ ನಡುವೆ ಕಿತ್ತಾಟ “ಅಯೋಗ್ಯ- 2” (ಚಿತ್ರವಿಮರ್ಶೆ-ರೇಟಿಂಗ್ : 3.5/5)

Spread the love

ರೇಟಿಂಗ್ : 3.5/5
ಚಿತ್ರ : ಅಯೋಗ್ಯ- 2
ನಿರ್ದೇಶಕ : ಎಸ್. ಮಹೇಶ್ ಕುಮಾರ್
ನಿರ್ಮಾಪಕ : ಎಂ . ಮುನೇಗೌಡ
ಸಂಗೀತ : ಅರ್ಜುನ್ ಜನ್ಯ
ಛಾಯಾಗ್ರಹಣ : ವಿಶ್ವಜಿತ್
ತಾರಾಗಣ : ನೀನಾಸಂ ಸತೀಶ್, ರಚಿತಾ ರಾಮ್, ರವಿಶಂಕರ್ , ಗಿರೀಶ್ ಶಿವಣ್ಣ , ಶಿವರಾಜ್ ಕೆ.ಆರ್. ಪೇಟೆ , ಸಾಧುಕೋಕಿಲ , ಅರುಣ ಬಾಲರಾಜ್ , ಸುಂದರ್ ರಾಜ್, ವಿಶೇಷ ಪಾತ್ರದಲ್ಲಿ ದೇವರಾಜ್ ರವಿಚಂದ್ರನ್ ಹಾಗೂ ಮುಂತಾದವರು…

ಒಂದು ಊರು ಅಂದಮೇಲೆ ಆಚಾರ , ವಿಚಾರ , ಸಂಸ್ಕೃತಿ , ಸಂಬಂಧ , ಸ್ನೇಹ , ಪ್ರೀತಿ ಮಾತುಕತೆ , ಗದ್ದಲ , ತರ್ಲೆ, ರಾಜಕೀಯ , ದ್ವೇಷ ಇದ್ದದ್ದೆ. ಇಂಥದ್ದೇ ಹಳ್ಳಿ ಸೊಗಡಿನ ನಡುವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗದ್ದುಗೆ ಎದುರಾಗುವ ಎರಡು ಗುಂಪಿನ ನಡುವಿನ ಗುದ್ದಾಟದ ಸುತ್ತ ಬೆಸೆದುಕೊಂಡು ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ ಅಯೋಗ್ಯ 2
ಮಾರಗೊಂಡನಹಳ್ಳಿಯ ಪಂಚಾಯತ್ ಸದಸ್ಯನಾಗಿ ಗೆದ್ದ ಸಿದ್ದೇಗೌಡ(ನೀನಾ ಸತೀಶ್) ಊರ ಜನರ ಆಶೀರ್ವಾದದೊಂದಿಗೆ ತನ್ನ ಪ್ರೀತಿಯ ನಂದಿನಿ(ರಚಿತಾ ರಾಮ್)ಯ ಕೈ ಹಿಡಿಯೋತ್ತಾನೆ. ಮುಂದುವರೆದ ಭಾಗವಾಗಿ ತೆರೆದುಕೊಳ್ಳುವ ಕಥಾನಕದಲ್ಲಿ ಸಿದ್ದನ ಉಂಡಾಡಿ ಬದುಕಿಗೆ ಬ್ರೇಕ್ ಹಾಕಲು ಹೋಗಿ ನಂದಿನಿ ಮನೆ ಬಿಡುವಂತಾಗುತ್ತದೆ. ಅತ್ತೆ ಭಾಗ್ಯಮ್ಮ(ಅರುಣ ಬಾಲರಾಜ್) ನಿಗೆ ಮಗ ಪಂಚಾಯತ್ ಅಧ್ಯಕ್ಷನಾಗಿ ಬಿಳಿ ವಸ್ತ್ರದಲ್ಲಿ ಮೆರೆಯಬೇಕೆಂಬ ಆಸೆ. ಆದರೆ ಇದಕ್ಕೆ ವಿರುದ್ಧವಾಗಿ ಸದಾ ದ್ವೇಷ ಕಾರುವ ಊರ ಮುಖಂಡ ಬಚ್ಚೇಗೌಡ (ರವಿಶಂಕರ್). ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ಮುಂದೆ ಎಮ್ಎಲ್ಎ ಆಗುವ ಕನಸು ಕಾಣುತ್ತಾನೆ.

ಇವನಿಗೆ ಬೆನ್ನೆಲುಬಾಗಿ ಮಂಡ್ಯ ಕ್ಷೇತ್ರದ ಎಂಎಲ್ಎ ಬೆಂಬಲ ಕೂಡ ಇರುತ್ತದೆ. ಇನ್ನು ಸಿದ್ಧನಿಗೆ ತನ್ನ ಗೆಳೆಯರಾದ ಬೆಣ್ಣೆ (ಗಿರಿ ಶಿವಣ್ಣ) ಮಟನ್ ( ಶಿವರಾಜ್ ಕೆ.ಆರ್. ಪೇಟೆ)
ಸಾತ್ ಇದ್ದೇ ಇರುತ್ತೆ. ಇವರ ಪ್ಲಾನ್ ಪ್ರಕಾರ ಅಧ್ಯಕ್ಷಗಿರಿಗಾಗಿ ರೆಸಾರ್ಟ್ ರಾಜಕಾರಣ , ಒಂದಷ್ಟು ಕಸರತ್ತು ಗೊಂದಲ ಎಡವಟ್ಟು ಮಾಡುತ್ತಾ ಹೋಗುತ್ತದೆ. ಮತ್ತೊಂದೆಡೆ ತಂತ್ರಕ್ಕೆ ಪ್ರತಿತಂತ್ರ ಮಾಡುವ ಬಚ್ಚೇಗೌಡ ಹಾಗೂ ಶಿಷ್ಯ ಹುಲಿಗೆ (ತಬಲಾ ನಾಣಿ). ಇದರ ನಡುವೆ ಭಾರತ್ ರೈತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗನ್ ಮೋಹನ್ ದಾಸ್ (ದೇವರಾಜ್) ಮೂಲಕ ಚುನಾವಣೆಗೆ ಅಭ್ಯರ್ಥಿ ಅವಕಾಶ ಬಂದರು ಗ್ರಾಮದ ಜನರ ಸೇವೆ ಮುಖ್ಯ ಎನ್ನುವ ಸಿದ್ದು. ಮುಂದೆ ಎದುರಾಗುವ ಒಂದಷ್ಟು ಘಟನೆಗಳು ಸಿದ್ದೇಗೌಡನ ತಂದೆಯ ಹಿನ್ನೆಲೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಕ್ಲೈಮ್ಯಾಕ್ಸ್ ಘಟ್ಟಕ್ಕೆ ಬಂದು ನಿಲ್ಲುತ್ತದೆ. ಸಿದ್ದು ಅಧ್ಯಕ್ಷನಾಗುತ್ತಾನ… ಹೆಂಡತಿ ಮನೆಗೆ ಬರ್ತಾಳ… ಫ್ಲಾಶ್ ಬ್ಯಾಕ್ ಕತೆ ಏನು…
ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರಕ್ಕೆ ಅಯೋಗ್ಯ 2 ಚಿತ್ರ ನೋಡಬೇಕು.

ನಿರ್ದೇಶಕ ಎಸ್ .ಮಹೇಶ್ ಕುಮಾರ್ ಈ ಹಿಂದೆ ಮಾಡಿದಂತಹ ಅಯೋಗ್ಯ ಚಿತ್ರದ ಮುಂದುವರೆದ ಭಾಗದ ವಿಚಾರವನ್ನು ಬಹಳ ಸೊಗಸಾಗಿ ತೆರೆಯ ಮೇಲೆ ತಂದಿದ್ದು , ಸದಸ್ಯನ ಅಧ್ಯಕ್ಷಗಿರಿ ಕನಸಿನ ಹಾದಿಗೆ ಸಾಗುವ ಮಧ್ಯ ಎದುರಾಗುವ ಸಂಕಷ್ಟ , ಸ್ನೇಹ , ಪ್ರೀತಿ , ನೋವು , ನಲಿವು , ಅವಮಾನದ ನಡುವೆ ರೋಚಕ ಹಾದಿಯಲ್ಲಿ ಸಾಗಿದ್ದು , ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಬಹುದಿತ್ತು.

ಸಂಭಾಷಣೆ ಹಾಗೂ ಹಾಸ್ಯ ಸನ್ನಿವೇಶ ಜನರನ್ನ ಆಕರ್ಷಿಸುತ್ತದೆ. ಹಾಡುಗಳು ಕೂಡ ಚಿತ್ರಕ್ಕೆ ಪೂರಕವಾಗಿದ್ದು , ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ. ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮಪಟ್ಟಿದ್ದು , ನಿರ್ಮಾಪಕ ಎಂ. ಮುನೇಗೌಡ ಅದ್ದೂರಿತನ ತೆರೆಯ ಮೇಲೆ ಕಾಣುತ್ತದೆ. ಚಿತ್ರದ ನಾಯಕ ನೀನಾಸಂ ಸತೀಶ್ ಬಹಳ ನೈಜ್ಯವಾಗಿ ಪಾತ್ರಕ್ಕೆ ಜೀವ ತುಂಬಿದ್ದು , ಪ್ರೀತಿ ಹಾಗೂ ಗತ್ತು ಎರಡನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಆಕ್ಷನ್ ಹಾಗೂ ಡ್ಯಾನ್ಸ್ ಗೆ ಜೈ ಎಂದಿದ್ದಾರೆ.

ಅದೇ ರೀತಿ ನಟಿ ರಚಿತರಾಮ್ ತೆರೆಯ ಮೇಲೆ ಮುದ್ದಾಗಿ ಕಾಣಿಸುತ್ತಾ , ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ , ಸಂಸಾರದ ಮೌಲ್ಯವನ್ನು ಅಚ್ಚುಕಟ್ಟಾಗಿ ಹೇಳುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಗೆಳೆಯರಾಗಿ ಬೆಣ್ಣೆ ಮಟನ್ ಕಾಂಬಿನೇಷನ್ ಮಜಾ ನೀಡುತ್ತದೆ. ಎಂದಿನಂತೆ ನಟ ರವಿಶಂಕರ್ ತಮ್ಮ ಆರ್ಭಟದ ಮುಂದುವರಿಸಿದ್ದು , ಪಾತ್ರಕ್ಕೆ ನ್ಯಾಯ ನೀಡಿದ್ದಾರೆ.

ಉಳಿದಂತೆ ಬರುವ ಎಲ್ಲಾ ಪಾತ್ರಧಾರಿಗಳ ಜೊತೆಗೆ ವಿಶೇಷವಾಗಿ ಕಾಣಿಸಿಕೊಳ್ಳುವ ಹಿರಿಯ ನಟರಾದ ದೇವರಾಜ್ , ರವಿಚಂದ್ರನ್ ಪಾತ್ರಗಳು ಎಲ್ಲರ ಗಮನ ಸೆಳೆಯುತ್ತವೆ. ಒಟ್ಟಾರೆ ಮನೋರಂಜನೆಯ ದೃಷ್ಟಿಯಿಂದ , ಒಂದು ಹಳ್ಳಿ ಸೊಗಡಿನ ವಾತಾವರಣದ ಚಿತ್ರವಾಗಿ ಪ್ರೇಕ್ಷಕರ ಮುಂದೆ ಬಂದಿರುವಂತಹ ಈ ಚಿತ್ರವನ್ನು ಎಲ್ಲರೂ ನೋಡುವಂತಿದೆ.

Visited 1 times, 1 visit(s) today
error: Content is protected !!