Cini NewsSandalwood

`ಬಿಳಿಚುಕ್ಕಿ ಹಳ್ಳಿಹಕ್ಕಿ’ ತಂಡಕ್ಕೆ ಕಾಜಲ್ ಕುಂದರ್ ಎಂಟ್ರಿ.

ಈ ಹಿಂದೆ ಪೋಸ್ಟರ್ ಒಂದರ ಮೂಲಕ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿದ್ದ ಚಿತ್ರ `ಬಿಳಿಚುಕ್ಕಿ ಹಳ್ಳಿಹಕ್ಕಿ’. ಮಹೇಶ್ ಗೌಡ ಅವರು ನಟಿಸಿ, ನಿರ್ಮಾಣ ಮಾಡಿ, ನಿರ್ದೇಶಿಸಿರುವ ಈ ಸಿನಿಮಾ vitiligo ಬಗೆಗಿನ ಕಥಾ ಹಂದರವನ್ನೊಳಗೊಂಡಿದೆ. vitiligo ಸುತ್ತಾ ಜರುಗುವ, ಪಕ್ಕಾ ಕಮರ್ಶಿಯಲ್ ಧಾಟಿಯ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಮೊದಲೆಂಬ ಹೆಗ್ಗಳಿಕೆಯನ್ನೂ ಹೊಂದಿದೆ.

ಇದೀಗ ಈ ಸಿನಿಮಾ ನಾಯಕಿಯಾಗಿರುವ ಮಂಗಳೂರು ಹುಡುಗಿ ಕಾಜಲ್ ಕುಂದರ್ ಅವರ ಪೋಸ್ಟರ್ ಅನ್ನು ಚಿತ್ಚರತಂಡ ಬಿಡುಗಡೆಗೊಳಿಸಿದೆ. ಇದರೊಂದಿಗೆ ನಾಯಕಿ ಪಾತ್ರದ ಚಹರೆ ಜಾಹೀರಾದಂತಾಗಿದೆ.

ಕಾಜಲ್ ಕುಂದರ್ ಈ ಚಿತ್ರದ ನಾಯಕಿ ಕವಿತಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮೂಲತಃ ಮಂಗಳೂರಿನವರಾದ ಕಾಜಲ್ ಮುಂಬೈನಲ್ಲಿಯೇ ನೆಲೆ ಹೊಂದಿದ್ದರೂ ಕನ್ನಡ ಭಾಷೆಯಲ್ಲಿ ಹಿಡಿತ ಹೊಂದಿದ್ದಾರೆ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಕಾಜಲ್ ಪಾಲಿಗಿದು ಮೈಲಿಗಲ್ಲಿನಂಥಾ ಸಿನಿಮಾ ಎಂಬುದರಲ್ಲಿ ಸಂದೇಹವೇನಿಲ್ಲ.

ರಂಗಭೂಮಿ ಕಲಾವಿದೆಯಾಗಿ ಪಳಗಿಕೊಂಡಿರುವ ಕಾಜಲ್ ಆಡಿಷನ್ ಮೂಲಕವೇ ಕವಿತಾ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಈ ಪಾತ್ರಕ್ಕೆ ಹೇಳಿ ಮಾಡಿಸಿದಂತಿರೋ ಈಕೆ, ಬಹುಮುಖ ಪ್ರತಿಭೆಯೂ ಹೌದು. ಕವಿತಾ ಎಂಬುದು ಒಂದಿಡೀ ಕಥೆಯಲ್ಲಿ ಮಹತ್ವದ್ದಾದ, ಸೂಕ್ಷ್ಮ ಪಾತ್ರ. ಅದಕ್ಕೆ ಕಾಜಲ್ ಲೀಲಾಜಾಲವಾಗಿ ಜೀವ ತುಂಬಿದ್ದಾರಂತೆ. ಇಂಥಾ ನಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಬೇಕು, ಇನ್ನೂ ಒಂದಷ್ಟು ಸವಾಲಿನ ಪಾತ್ರಗಳಿಗೆ ಜೀವ ತುಂಬಬೇಕೆಂಬ ಆಶಯ ನಿರ್ದೇಶಕರದ್ದು.

ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಒಂದೊಳ್ಳೆ ಕಂಟೆಂಟು ಹೊಂದಿರೋ ಬಿಳಿಚುಕ್ಕಿ ಹಳ್ಳಿಹಕ್ಕಿ ರಿಲೀಸ್ ಡೇಟ್ ಅನ್ನು ಅತೀ ಶೀಘ್ರವಾಗಿ ಘೋಶಿಸಲು ಚಿತ್ರತಂಡ ಅಣಿಗೊಳ್ಳುತ್ತಿದೆ.

vitiligo ಎಂಬ ಸಮಸ್ಯೆ ಲಕ್ಷಾಂತರ ಜನರನ್ನು ಕಾಡುತ್ತಿದೆ. ಇದಕ್ಕೆ ತುತ್ತಾದವರ ಮಾನಸಿಕ ತೊಳಲಾಟಗಳನ್ನು ಬೇರೆಯವರು ಸಲೀಸಾಗಿ ಅಂದಾಜಿಸೋದು ಕಷ್ಟ. ಅದರ ಸುತ್ತ ಜರುಗುವ ಬೆರಗಿನ, ಸೂಕ್ಷ್ಮ ಕಥನದೊಂದಿಗೆ ಮಹೇಶ್ ಗೌಡ ಅವರು ಈ ಚಿತ್ರವನ್ನು ರೂಪಿಸಿದ್ದಾರಂತೆ.

ಇಂಥಾ ಕಥೆಯನ್ನು ಪಕ್ಕಾ ಮನೋರಂಜನೆಯ, ಕಮರ್ಶಿಯಲ್ ಧಾಟಿಯಲ್ಲಿ ದೃಶ್ಯೀಕರಿಸಲಾಗಿದೆಯಂತೆ. ಒಟ್ಟಾರೆ ಸಿನಿಮಾದ ಇನ್ನೊಂದಷ್ಟು ಅಚ್ಚರಿಗಳು ಹಂತ ಹಂತವಾಗಿ ಪ್ರೇಕ್ಷಕರನ್ನು ತಲುಪಿಕೊಳ್ಳಲಿವೆ. ಅದರ ಜೊತೆ ಜೊತೆಗೇ ಬಿಡುಗಡೆ ದಿನಾಂಕವೂ ನಿಕ್ಕಿಯಾಗಲಿದೆ.

error: Content is protected !!