ಆಟೋ ಚಾಲಕನ ಸಿನಿಮಾ ಕನಸು ನನಸು…ದೊಡ್ಮನ್ಸ
ರೇಟಿಂಗ್ : 4/5
ಚಿತ್ರ : ದೊಡ್ಮನ್ಸ
ನಿರ್ಮಾಣ : ವೇದಿಕ್ ಕಾಸ್ಮೋಸ್
ನಿರ್ದೇಶನ : ಶರತ್ ಕೃಷ್ಣ
ಸಂಗೀತ : ಶ್ರೀಧರ್ ಕಶ್ಯಪ್, ಪೌಲ್ ಅಲೆಕ್ಸ್
ಛಾಯಾಗ್ರಹಣ : ಆನಂದ್ ಇಳಿಯರಾಜ
ತಾರಾಗಣ : ಶರತ್ ಕೃಷ್ಣ, ರೇಷ್ಮಾ ಲಿಂಗರಾಜಪ್ಪ , ಶಿಲ್ಪಾ ಶಿವಕುಮಾರ್ , ಬಾಲ ರಾಜ್ವಾಡಿ, ಹುಲಿ ಕಾರ್ತಿಕ್
ಹಾಗೂ ಮುಂತಾದವರು…
*ದುಡ್ಡಿದ್ದೋರಲ್ಲ ಗುರು ದೊಡ್ಮನ್ಸ… ದೊಡ್ಡ ಮನಸ್ಸಿದ್ದೋನೆ ದೊಡ್ಮನ್ಸ…* ಎನ್ನುವ ಹೀರೋ ಸಂಭಾಷಣೆ ಇಡೀ ಚಿತ್ರದ ಮುಖ್ಯ ಎಳೆಯಾಗಿ ಎಲ್ಲರ ಗಮನ ಸೆಳೆಯೋ ಜೊತೆಗೆ ಚಿತ್ರದ ಕಥಾ ಸಾರಾಂಶವನ್ನು ತಿಳಿಸುತ್ತದೆ.
ಒಂದು ರೀತಿ ಸಿನಿಮಾದಲ್ಲೊಂದು ಸಿನಿಮಾ ಬದುಕಿನ ಕನಸು ಕಾಣುವ ಯುವಕ ಯುವತಿಯರ ಬದುಕು ಬವಣೆಯ ಕಥೆಯಾಗಿದ್ದು , ಸ್ನೇಹ , ಪ್ರೀತಿ , ನಂಬಿಕೆ , ಗೆಳೆತನ , ಸಹಕಾರ , ಸಮಸ್ಯೆಗೆ ಸ್ಪಂದಿಸುವ ಆಟೋ ಚಾಲಕರ ಮನಸುಗಳ ಸುತ್ತ ಬೆಸೆದುಕೊಂಡು ಮಧ್ಯಮ ವರ್ಗದವರ ಸ್ಥಿತಿಗತಿಯನ್ನ ನೈಜಕ್ಕೆ ಪೂರಕ ಎನ್ನುವ ಹಾಗೆ ಹೇಳುವುದರ ಜೊತೆಗೆ ಸಿನಿಮಾರಂಗದ ಕೆಲವು ಒಳ ಮರ್ಮವನ್ನು ಹೇಳುವ ಪ್ರಯತ್ನವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ದೊಡ್ಮನ್ಸ”. ತಂದೆ ತಾಯಿಯ ಆಸರೆ ಇಲ್ಲದಂತೆ ಬೆಳೆದಂತಹ ಹುಡುಗ ಶಿವು (ಶರತ್ ಕೃಷ್ಣ) ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಾನೆ. ಇನ್ನು ಗೆಳೆಯ (ಹುಲಿ ಕಾರ್ತಿಕ್) ಹಾಗೂ ನಿರ್ದೇಶಕನಾಗಲು ಶ್ರಮಪಡುವ ದೇವ್ ಹಾಗೂ ಆತನ ಸ್ನೇಹಿತರ ಜೊತೆ ಒಡನಾಟದ ಬದುಕು. ಬಡ ಕುಟುಂಬದ ಹುಡುಗಿ ಸ್ನೇಹ ( ಸಿನಿಮಾ ನಟಿಯಾಗಲು ಹೋಗಿ ಎದುರಿಸುವ ಸಮಸ್ಯೆಯಿಂದ ಕಂಗಾಲಾಗುತ್ತಾಳೆ. ಚಾಲಕ ಶಿವು ಆಟೋದಲ್ಲಿ ಸ್ನೇಹ ಕಣ್ಣೀರು ಕಂಡು ಕಷ್ಟಕ್ಕೆ ಸ್ಪಂದಿಸಿ ಆಕೆ ನಟಿಯಾಗಲು ಸಹಕರಿಸುವುದಕ್ಕೆ ಮುಂದಾಗುತ್ತಾನೆ. ಇನ್ನು ಸ್ನೇಹ ಪ್ರೀತಿಯ ಕಡೆ ತಿರುಗಿ ಒಂದಷ್ಟು ಗೊಂದಲ ತಳಮಳ ಎದುರಾಗುತ್ತದೆ. ತನ್ನ ನಿರ್ದೇಶಕ ಗೆಳೆಯ ನಿರ್ಮಾಪಕರಿಗಾಗಿ ಹುಡುಕಾಟದಲ್ಲಿರುವಾಗಲೇ ತನ್ನ ಗೆಳತಿಗೆ ನಟಿಯಾಗುವ ಅವಕಾಶ ಕೊಡಿಸಲು ಮುಂದಾಗುತ್ತಾನೆ. ಇದರ ನಡುವೆ ಹಲವಾರು ಗೆಳೆಯರು , ಆತ್ಮೀಯರಿಗೆ ಸಹಕಾರ ಮಾಡುವ ಶಿವು ಅವರ ಕಷ್ಟಕ್ಕೆ ಸ್ಪಂದಿಸುತ್ತಾನೆ. ಇನ್ನು ನಿರ್ದೇಶಕ ದೇವ್ ಗೆ
ನಿರ್ಮಾಪಕ (ಬಾಲ ರಾಜ್ವಾಡಿ) ಸಿಗುತ್ತಿದ್ದಂತೆ ತನ್ನ ಗೆಳೆಯ ಶಿವು ಹೀರೋ ಹಾಗೂ ಆತನ ಪ್ರೇಯಸಿ ನಾಯಕಿಯಾಗಿ ಪಾದಾರ್ಪಣೆ ಮಾಡಿಸುವುದಕ್ಕೆ ನಿರ್ಧರಿಸುತ್ತಾನೆ. ಆದರೆ ನಿರ್ಮಾಪಕರಿಗೆ ಈ ನಿರ್ಧಾರ ಒಪ್ಪುವುದಿಲ್ಲ. ಇದರ ಹಿಂದೆ ಶಿವು ಫ್ಲಾಶ್ ಬ್ಯಾಕ್ ಕತೆಯು ತೆರೆದುಕೊಳ್ಳುತ್ತದೆ. ಮುಂದೆ ಎದುರಾಗುವ ಈ ಆಟೋ ಡ್ರೈವರ್ ಶಿವು ಬದುಕಿನ ಒಂದಷ್ಟು ಘಟನೆಗಳು ಬೇರೆ ಬೇರೆ ದಿಕ್ಕಿನತ್ತ ಸಾಗಿ ಬಂದು ನಿಲ್ಲುತ್ತದೆ. ಶಿವು ಯಾರು… ಅವನ ಕನಸು ಏನು…
ಸ್ನೇಹ ಹೀರೋಯಿನ್ ಆಗ್ತಾಳ…
ನಿರ್ದೇಶಕ ಸಿನಿಮಾ ಮಾಡ್ತಾನ….
ಕ್ಲೈಮಾಕ್ಸ್ ಉತ್ತರ ಏನು…
ಇದೆಲ್ಲದಕ್ಕೂ ಉತ್ತರ ಒಮ್ಮೆ ನೀವು ಚಿತ್ರ ನೋಡಬೇಕು.

ಈ ಬಣ್ಣದ ಬದುಕು ಎಲ್ಲರನ್ನ ಕೈಬೀಸಿ ಕರೆಯುತ್ತಿದೆ. ಆದರೆ ಕೆಲವರನ್ನು ಅಷ್ಟೇ ಆಯ್ಕೆ ಮಾಡಿಕೊಳ್ಳುತ್ತದೆ. ಅಂತಹ ಕನಸುಗಳನ್ನು ಕಟ್ಟಿಕೊಂಡು ಬಂದಂತಹ ಹುಡುಗ , ಹುಡುಗಿಯರ ಬದುಕುವ ಏನು ಎಂಬುದನ್ನು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಹಾಗೂ ನಟ ಶರತ್ ಕೃಷ್ಣ. ಮಾಸ್ ಎಂಟ್ರಿ , ಅತಿರೇಕದ ಸಂಭಾಷಣೆ ನಡುವೆ ಮಧ್ಯಮ ವರ್ಗದವರ ಸಿನಿಮಾರಂಗದ ಕನಸು ನನಸು ತೆರೆದಿಟ್ಟಿರುವ ರೀತಿ ಗಮನಸೆಳೆಯುತ್ತದೆ. ಚಿತ್ರಕಥೆ ಇನ್ನೆಷ್ಟು ಹಿಡಿತ ಮಾಡಬೇಕಿತ್ತು ಅನಿಸುತ್ತದೆ.
ನಟನಾಗಿ ಪಾತ್ರಕ್ಕೆ ಜೀವ ನೀಡುವುದರ ಜೊತೆಗೆ ಪ್ರಥಮ ನಿರ್ದೇಶನದಲ್ಲೇ ಬಹಳಷ್ಟು ಶ್ರಮಪಟ್ಟಿದ್ದಾರೆ. ಇನ್ನು ನಾಯಕನಷ್ಟೇ ಸಮನಾದ ಪಾತ್ರವನ್ನು ಹುಲಿ ಕಾರ್ತಿಕ್ ನಿಭಾಯಿಸಿದ್ದಾರೆ. ನಾಯಕಿಯಾಗಿ ರೇಷ್ಮಾ ಕೂಡ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಅದೇ ರೀತಿ ಇನ್ನೊಬ್ಬ ನಟಿ ಶಿಲ್ಪ ಕೂಡ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ನಿರ್ದೇಶಕನಾಗಲು ಶ್ರಮಪಡುವಂತಹ ಪಾತ್ರಧಾರಿ ಸೇರಿದಂತೆ ಜೊತೆಗಾರರ ಪಾತ್ರವು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದೆ. ಅದೇ ರೀತಿ ಸಿನಿಮಾ ನಿರ್ಮಾಪಕನಾಗಿ ಬಾಲ ರಾಜ್ವಾಡಿ ಕೂಡ ತಮ್ಮ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರಕ್ಕೆ ಉತ್ತಮ ಬೆಂಬಲ ನೀಡಿದ್ದು , ಚಿತ್ರದ ಸಂಗೀತ ಗಮನ ಸೆಳೆಯುತ್ತದೆ. ಅದೇ ರೀತಿ ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ. ಸಂಕಲನ ಸೇರಿದಂತೆ ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಿದ್ದು , ಆಟೋ ಚಾಲಕನ ಬದುಕಿನ ಕಥೆಯ ಜೊತೆಗೆ ಸಿನಿಮಾ ನಂಟಿನ ಬೆಸುಗೆ ಇರುವ ಈ ಸಿನಿಮಾವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.