ಬೆಚ್ಚಿ ಬೀಳಿಸಲು ಬರುತ್ತಿದೆ “ಬಸ್ರಿಕಟ್ಟೆ”
ಸಾಮಾನ್ಯವಾಗಿ ಹಾರರ್ ಸಿನಿಮಾ ಎಂದಾಕ್ಷಣ ಕಾಡು, ಕತ್ತಲೆ, ದೆವ್ವ… ಹೀಗೆ ಅನೇಕ ಅಂಶಗಳು ಕಣ್ಮುಂದೆ ಬರುತ್ತವೆ. ಆದರೆ, ಬಸ್ರಿಕಟ್ಟೆ ಸಿನಿಮಾ ಕೊಂಚ ವಿಭಿನ್ನ. ಇದೂ ಸಸ್ಪೆನ್ಸ್- ಹಾರರ್ ಸಿನಿಮಾವಾದರೂ ರಿಯಲಿಸ್ಟಿಕ್ ಆಗಿ ಮೂಡಿಬಂದಿದೆ ಎಂಬುದು ಚಿತ್ರತಂಡದ ಅನಿಸಿಕೆ.
ಬಸ್ರಿಕಟ್ಟೆ ಸಿನಿಮಾಕ್ಕೆ ಯುವ ನಿರ್ದೇಶಕ ವೈಭವ್ ಎಂ ಆಕ್ಷನ್ ಕಟ್ ಹೇಳಿದ್ದಾರೆ. ಕರ್ನಾಟಕದಲ್ಲಿರುವ ಖ್ಯಾತ ಸ್ಥಳ ಬಸ್ರಿಕಟ್ಟೆಗೂ ಈ ಚಿತ್ರಕ್ಕೂ ಸಂಬಂಧವಿಲ್ಲ ಎಂಬುದನ್ನು ಮೊದಲೇ ಸ್ಪಷ್ಟಪಡಿಸುತ್ತಾರೆ ವೈಭವ್. “ಈ ಚಿತ್ರದಲ್ಲಿ ಸಿನಿಮ್ಯಾಟಿಕ್ ಫೀಲ್ ಗಿಂತ ನ್ಯಾಚುರಲ್ ಆಗಿ ಮೂಡಿ ಬರಲಿ ಎಂಬ ಕಾರಣಕ್ಕೆ ರಿಯಲಿಸ್ಟಿಕ್ ಆಗಿಯೇ ಶೂಟಿಂಗ್ ಮಾಡಿದ್ದೇವೆ. ಮಂಗಳೂರು, ಚಿಕ್ಕಮಗಳೂರು, ಮೂಡುಬಿದಿರೆ ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಮ್ಮ ಚಿತ್ರದ ಟ್ರೇಲರ್ ನೋಡಿದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಟೆಕ್ನಿಕಲ್ ಆಗಿಯೂ ಸಿನಿಮಾ ತುಂಬಾ ಸ್ಟ್ರಾಂಗ್ ಆಗಿದೆ” ಎಂಬುದು ವೈಭವ್ ಅನಿಸಿಕೆ.
ಕಳೆದ ಹತ್ತು ವರ್ಷಗಳಿಂದ ಹಲವು ನಿರ್ದೇಶಕರ ಬಳಿ ನಿರ್ದೇಶನದ ಪಟ್ಟುಗಳನ್ನು ಕಲಿತಿರುವ ವೈಭವ್, ಕೆಲವು ನಿರ್ಮಾಣ ಸಂಸ್ಥೆಗಳಲ್ಲಿ ಸಾಕಷ್ಟು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವಿದೆ. ನಂತರ ಕೆಲವು ಕಿರುಚಿತ್ರಗಳನ್ನೂ ತಯಾರು ಮಾಡಿದ್ದಾರೆ. ಇಷ್ಟೆಲ್ಲ ಅನುಭವವನ್ನು ಬೆನ್ನಿಗೆ ಕಟ್ಟಿಕೊಂಡು ಈಗ ಬಸ್ರಿಕಟ್ಟೆ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಕಥೆ, ನಾಟಕ ಮತ್ತು ಬರವಣಿಗೆಯ ಗೀಳು ಹಚ್ಚಿಕೊಂಡಿದ್ದ ವೈಭವ್, ಆಗಲೇ ನಿರ್ದೇಶಕನಾಗುವ ಕನಸು ಕಟ್ಟಿಕೊಂಡಿದ್ದರು. ಆ ಕನಸು ಈಗ ನೆರವೇರಿದೆ. ತನ್ನದೇ ಯುವ ಪ್ರತಿಭೆಗಳ ತಂಡ ಕಟ್ಟಿಕೊಂಡು, ಕಂಟೆಂಟ್ ಸಿನಿಮಾಗಳನ್ನು ಮಾಡುವ ಯೋಜನೆ ವೈಭವ್ ಅವರಿಗಿದೆ. ಅನಾವಶ್ಯಕವಾಗಿ ಖರ್ಚು ಮಾಡದೇ, ಕಡಿಮೆ ಸಮಯದಲ್ಲಿ ಸಿನಿಮಾ ಮಾಡುವ ಕಲೆಗಾರಿಕೆ ಅವರಿಗೆ ಸಿದ್ಧಿಸಿರುವುದರಿಂದ, ಮುಂದೆಯೂ ಅದೇ ರೀತಿಯಲ್ಲಿ ಮುಂದುವರಿಯುವ ಆಲೋಚನೆಯಲ್ಲಿದ್ದಾರೆ ವೈಭವ್.
ಐಟಿ ಕ್ಷೇತ್ರದ ಮಂದಿ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನಾನಾ ವರ್ಗದ ಜನರಿಗೆ ಟ್ರೇಲರ್ ಸಾಕಷ್ಟು ಇಷ್ಟವಾಗಿದ್ದು, ನವೆಂಬರ್ 3 ರಂದು ಸಿನಿಮಾ ತೆರೆ ಕಾಣಲಿದೆ. ಗೀತಾಂಜಲಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಎನ್ ಪೈ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕನ್ನಡದ ಕಿರಗೂರಿನ ಗಯ್ಯಾಳಿಗಳು, ಕಾಫಿ ತೋಟ ಸೇರಿದಂತೆ ಮಲಯಾಳಂನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ರಾಹುಲ್ ಮಾದೇವ್ ನಾಯಕ. ಮುಂದಿನ ನಿಲ್ದಾಣ ಸಿನಿಮಾ ಖ್ಯಾತಿಯ ಅನನ್ಯ ಕಶ್ಯಪ್ ನಾಯಕಿ. ಉಳಿದಂತೆ ಬಲರಾಜವಾಡಿ, ಕಿರಣ್ ನಾಯ್ಕ್, ಸಿದ್ಲಿಂಗು ಶ್ರೀಧರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಅಶ್ವಿನ್ ಕೆನಡಿ ಛಾಯಾಗ್ರಹಣ, ಕದ್ರಿ ಮಣಿಕಾಂತ್ ಸಂಗೀತ ಹಾಗೂ ಉಮೇಶ್ ಸಂಕಲನ ಬಸ್ರಿಕಟ್ಟೆ ಚಿತ್ರಕ್ಕಿದೆ.