ರಾಮನವಮಿಯ ಸುಸಂದರ್ಭದಲ್ಲಿ “ಮಹರ್ಷಿ ವಾಲ್ಮಿಕಿ” ಕಿರುಚಿತ್ರದ ಅನಾವರಣ
ಬೇಡನಾಗಿದ್ದ ರತ್ನಕಾರ, ಋಷಿಗಳ ಉಪದೇಶದಿಂದ ಮಹರ್ಷಿ ವಾಲ್ಮೀಕಿಯಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಕ್ರೌಂಚ ಪಕ್ಷಿಯ ಸಾವನ್ನು ಕಣ್ಣಾರೆ ಕಂಡ ವಾಲ್ಮೀಕಿ ಮಹರ್ಷಿಗಳಿಗೆ ಆ ಘಟನೆ ರಾಮಾಯಣ ಬರೆಯಲು ಸ್ಪೂರ್ತಿಯಾಯಿತು. ಅದು ವಾಲ್ಮೀಕಿ ರಾಮಾಯಣ ಎಂದೇ ಪ್ರಸಿದ್ದವಾಯಿತು. ಅಂತಹ ವಾಲ್ಮೀಕಿ ಋಷಿಗಳ ಜೀವನ ಚರಿತ್ರೆಯನ್ನು ಕಿರುಚಿತ್ರದ ಮೂಲಕ ಹೊರತಂದಿದ್ದಾರೆ ನಿರ್ದೇಶಕ ಪ್ರವೀಣ್ ಶಿವಣ್ಣ . 21 ನಿಮಿಷಗಳಲ್ಲಿ ಅದ್ಭುತವಾಗಿ ಮೂಡಿಬಂದಿರುವ ಈ ಕಿರುಚಿತ್ರಕ್ಕೆ “ಮಹರ್ಷಿ ವಾಲ್ಮೀಕಿ” ಎಂದು ಹೆಸರಿಟ್ಟಿದ್ದಾರೆ.
ರತ್ನ ದಾಸ್ ಅವರ ನಿರ್ಮಾಣದ ಈ ಕಿರುಚಿತ್ರದ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನೆರವೇರಿತು. ರಾಮನವಮಿ ಸಂದರ್ಭದಲ್ಲೇ ಈ ಕಿರುಚಿತ್ರ ಅನಾವರಣವಾಗಿದ್ದು ವಿಶೇಷ. ಶ್ರೀರಿಷಿ ಅವಿರ್ಭವ ಗುರು ಪೂರ್ಣದೈತಿ, ರಾಷ್ಟ್ರಪ್ರಶಸ್ತಿ ವಿಜೇತ ಸಂಕಲನಕಾರ ಸುರೇಶ್ ಅರಸ್, ನಟ ಗಣೇಶ್ ರಾವ್ ಕೇಸರ್ಕರ್, ಪದ್ಮಶ್ರೀ ವೆಂಕಟೇಶ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರದ
ರ್ಶನದ ನಂತರ ತಂಡದ ಸದಸ್ಯರು ಹಾಗೂ ಗಣ್ಯರು ಮಾತನಾಡಿದರು.
ನಾನು ಸಂಕಲನಕಾರನಾಗಿ ಸಾಕಷ್ಟು ಚಿತ್ರಗಳಿಗೆ ಕಾರ್ಯ ನಿರ್ವಹಿಸಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಕಿರುಚಿತ್ರ. ನಿರ್ಮಾಪಕರ, ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ “ಮಹರ್ಷಿ ವಾಲ್ಮೀಕಿ” ಕಿರುಚಿತ್ರ ಉತ್ತಮವಾಗಿ ಮೂಡಿಬಂದಿದೆ. ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಈ ಕಿರುಚಿತ್ರ ಅನಾವರಣ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ಎಂದರು ನಿರ್ದೇಶಕ ಪ್ರವೀಣ್ ಶಿವಣ್ಣ.
ರಾಮ ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ಬಂದ ಹಾಗೆ. ನಾನು ಕೂಡ ನಟನೆ ಮಾಡಲು ಹದಿನಾಲ್ಕು ವರ್ಷಗಳು ಬೇಕಾಯಿತು. ಅದು ರಾಮಭಕ್ತ “ಮಹರ್ಷಿ ವಾಲ್ಮೀಕಿ” ಅವರ ಕಥೆಯ ಮೂಲಕವೇ ಆಗಿರುವುದು ಕಾಕತಾಳೀಯ. ನಾನು ವಾಲ್ಮೀಕಿ ಮಹರ್ಷಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಶಿವಮಣಿ ಅವರಂತಹ ಹಿರಿಯ ಕಲಾವಿದರ ಜೊತೆಗೆ ಅಭಿನಯಿಸಿದ್ದು ಖುಷಿಯಾಗಿದೆ ಎಂದರು ವಾಲ್ಮೀಕಿ ಪಾತ್ರಧಾರಿ ಸುಜಿತ್ ಶೆಟ್ಟಿ.
ಇಂತಹ ಕಿರುಚಿತ್ರದಲ್ಲಿ ಅಭಿನಯಿಸಿರುವುದಕ್ಕೆ ನಟಿ ರೂಪ ಮುತ್ತುರಾಯಪ್ಪ ಸಂತಸಪಟ್ಟರು. ಆಗಮಿಸಿದ ಗಣ್ಯರಿಗೆ ಹಾಗೂ ತಂಡದ ಸದಸ್ಯರಿಗೆ ನಿರ್ಮಾಪಕಿ ರತ್ನ ದಾಸ್ ಧನ್ಯವಾದ ಹೇಳಿದರು. ಛಾಯಾಗ್ರಾಹಕ ತನ್ವಿಕ್ ಹಾಗೂ ಸಂಗೀತ ನಿರ್ದೇಶಕ ರಾಮಾನುಜನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.