ಸರಳ ಲೈಫ್ ನ – ವಿರಳ ಲವ್ ಸ್ಟೋರಿ… “ಸರಳ ಸುಬ್ಬರಾವ್” (ಚಿತ್ರವಿಮರ್ಶೆ-ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಸರಳ ಸುಬ್ಬರಾವ್
ನಿರ್ದೇಶಕ : ಮಂಜು ಸ್ವರಾಜ್
ನಿರ್ಮಾಪಕ : ಲೋಹಿತ್ ನಂಜುಂಡಯ್ಯ
ಸಂಗೀತ : ಅಜನೀಶ್ ಲೋಕನಾಥ್
ಛಾಯಾಗ್ರಹಣ : ಪ್ರದೀಪ್ ಪದ್ಮಕುಮಾರ್
ತಾರಾಗಣ : ಅಜೇಯ್ ರಾವ್, ಮಿಶಾ ನಾರಂಗ್, ರಂಗಾಯಣ ರಘು, ವೀಣಾ ಸುಂದರ್ , ನಟ ಶ್ರೀ, ಚಿತ್ಕಲಾ ಬಿರಾದಾರ್, ವಿಜಯ್ ಚಂಡೂರ್, ರಘು ರಾಮನಕೊಪ್ಪ ಹಾಗೂ ಮುಂತಾದವರು…
ಇಡೀ ದೇಶವೇ ಯುದ್ಧದ ಕಾರ್ಮೋಡದಲ್ಲಿ ಸಿಲುಕಿದಂತಹ ಸಮಯ , ಅದುವೇ ಡಿಸೆಂಬರ್ 1971 ರಂದು ಪಾಕಿಸ್ತಾನವು ಭಾರತದ ನೆಲೆಗಳ ಮೇಲೆ ವಾಯುದಾಳಿಗೆ ಅಧಿಕೃತವಾಗಿ ಸಿದ್ಧವಾದ ಸಂದರ್ಭ. ಬೆಳಕಿಲ್ಲದೆ ದೀಪದಲ್ಲಿ ರಾತ್ರಿಯನ್ನ ಕಳೆಯುವಂತಹ ಸಮಯ. ಆ ಕಾಲಘಟ್ಟದಲ್ಲಿ ನಡೆಯುವಂತಹ ಒಂದು ಸಂಪ್ರದಾಯಸ್ತ ಸುಂದರ ಕೌಟುಂಬಿಕ ಪ್ರೇಮ ಕಥಾನಕವಾಗಿ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಸರಳ ಸುಬ್ಬರಾವ್”.
ಮೈಸೂರಿನ ಮಹಾರಾಜ ಕಾಲೇಜಿನ ಶಿಸ್ತು ಬದ್ಧ , ಸ್ಮಾರ್ಟ್ಟೆಸ್ಟ್ ಇಂಗ್ಲಿಷ್ ಪ್ರೊಫೆಸರ್ ಸುಬ್ಬು ರಾವ್ (ಅಜಯ್ ರಾವ್). ಕಾಲೇಜಿನ ಪ್ರಿನ್ಸಿಪಲ್ ಸೇರಿದಂತೆ ಸಹ ಪ್ರಾಧ್ಯಾಪಕರ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ಸುಬ್ಬು ಮದುವೆಯ ಬಗ್ಗೆ ಆಲೋಚನೆ ಮಾಡುತ್ತಾನೆ. ಇದರ ನಡುವೆ ಹಾಸ್ಪಿಟಲ್ ನಲ್ಲಿ ಅಕ್ಕನ ಆರೋಗ್ಯ ವಿಚಾರಿಸುವ ಸುಬ್ಬು ಅಕ್ಕನ ಮಗಳು ದೇವಯಾನಿ ಬಗ್ಗೆ ಯೋಚಿಸದೆ ತಾನು ಇಷ್ಟ ಪಟ್ಟಂತಹ ಹುಡುಗಿಯ ಕಡೆ ಒಲವು ತೋರುತ್ತಾನೆ.
ಅದೇ ಸ್ಥಳದಲ್ಲಿ ಮುದ್ದಾದ ಸಂಪ್ರದಾಯಸ್ಥ ಕುಟುಂಬದ ಹುಡುಗಿ ಸರಳ (ಮಿಶಾ ನಾರಂಗ್) ಕೂಡ ತನ್ನ ಕುಟುಂಬದ ಆರೋಗ್ಯ ನೋಡಿಕೊಳ್ಳುತ್ತಿರುತ್ತಾಳೆ.
ಇದರ ನಡುವೆ ಸೋದರ ಮಾವ ರಾಜಗೋಪಾಲ್ (ಶ್ರೀ ಮಾದೇವ್) ಪೈಲೆಟ್ ಆದ ಕಾರಣ ಮದುವೆಯಾಗದೆ ದೂರ ಉಳಿಯುವ ಸರಳ ಕೂಡ ಸುಬ್ಬು ನನ್ನ ಇಷ್ಟ ಪಡುತ್ತಾಳೆ. ಇಬ್ಬರ ಮದುವೆಯು ನಡೆಯುತ್ತದೆ.
ಇನ್ನು ಸರಳ ಮುಗ್ಧತೆ , ಸರಸ ವಿರಸ , ತುಂಟತನದ ಮಾತು , ತರ್ಲೆ , ಮೋಹದ ನೋಟ ಎಲ್ಲವೂ ಸುಬ್ಬುವಿಗೆ ದೇವರು ಕೊಟ್ಟ ವರವಾಗಿರುತ್ತದೆ. ಇನ್ನು ಆಚಾರ ವಿಚಾರ ಸಂಪ್ರದಾಯದ ಹಾದಿಯಲ್ಲಿ ಸುಂದರ ಬದುಕನ್ನ ನಡೆಸುವ ಈ ಜೋಡಿಯ ಬಾಳಿನಲ್ಲಿ ಮುದ್ದಾದ ಜೀವ ಬರುವ ಸೂಚನೆ ಸಿಗುತ್ತದೆ. ಇನ್ನು ಜೀವನದ ಜೊತೆ ಜೀವದ ಮಹತ್ವವನ್ನು ಹೇಳುವ ನರಸಿಂಹ ಶಾಸ್ತ್ರಿ(ರಂಗಾಯಣ ರಘು) ದಂಪತಿಗಳಲ್ಲೂ ಮಗುವಿನ ಬರುವಿಕೆಗೆ ತವಕ ಮಿಡಿತ ತುಂಬಿರುತ್ತದೆ. ಇದರ ನಡುವೆ ಸಂತೋಷ , ಆರೈಕೆ , ಸಂಭ್ರಮ ಎರಡು ಕುಟುಂಬದಲ್ಲಿ ಕಾಣುತ್ತಿದ್ದಂತೆ ಒಂದಷ್ಟು ತಿರುವುಗಳು ಎದುರಾಗುತ್ತದೆ. ಇದರ ಹೊರತಾಗಿಯೂ ದೇಶ ಕಾಯುವ ಸೈನಿಕ ಗೆಲ್ಲಲು ಹೇಗೆ ಯುದ್ಧವನ್ನು ಎದುರಿಸುತ್ತಾನೋ… ಅದೇ ರೀತಿ ತಾಯಿ ಕೂಡ ಮಗುವಿಗೆ ಜನ್ಮ ನೀಡಲು ಎಷ್ಟು ಸಮಸ್ಯೆ ಎದುರಿಸುತ್ತಾಳೆ ಎಂಬ ಸೂಕ್ಷ್ಮತೆ ಒಳಗೊಂಡಿದೆ. 1971ರ ಕಾಲಘಟ್ಟ ಯಾಕೆ…
ಸುಬ್ಬು ಸರಳ ಬದುಕು ಏನಾಗುತ್ತೆ…ಬದುಕಿನ ಯುದ್ಧ…ದೇಶದ ಯುದ್ಧ… ಎಲ್ಲಾ ಮಾಹಿತಿಗಾಗಿ ಒಮ್ಮೆ ಚಿತ್ರ ನೋಡಿ.

ಒಂದು ಸುಂದರ ಕೌಟುಂಬಿಕ ಕಥಾನಕವನ್ನು 70ರ ಕಾಲಘಟ್ಟದ ಮೈಸೂರಿನ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿರುವ ನಿರ್ದೇಶಕರ ಆಲೋಚನೆ ಗಮನ ಸೆಳೆಯುತ್ತದೆ. ಇದು ಕಾದಂಬರಿ ಆಧಾರಿತವಾಗಿದ್ದು , ಆ ಕಾಲಘಟ್ಟದ ಯುದ್ಧದ ಸಂದರ್ಭ , ಆಗಿನ ಜನರ ನಡೆ-ನುಡಿ ಆಚಾರ-ವಿಚಾರ ಪದ್ಧತಿ , ಬದುಕು ನಡೆಸುವ ಮನಸ್ಥಿತಿ, ಪ್ರೀತಿ , ಒಡನಾಟ ಸೆಳೆಯುವಂತೆ ಇದ್ದರೂ ಚಿತ್ರಕಥೆ ಬಹಳ ಸರಳವಾಗಿ ಸಾಗಿ ನಿರ್ದೇಶಕರ ಹಿಡಿದ ದಿಕ್ಕು ತಪ್ಪಿದಂತಿದೆ. ಸಂಭಾಷಣೆ ಗಮನ ಸೆಳೆಯುವಂತಿದ್ದು , ಸಂಗೀತ ಮತ್ತಷ್ಟು ಸೊಗಸಾಗಿ ಮಾಡಬಹುದಿತ್ತು , ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ.
ಇನ್ನು ನಾಯಕ ಅಜಯ್ ರಾವ್ ಪಾತ್ರಕ್ಕೆ ನ್ಯಾಯವನ್ನು ಒದಗಿಸಲು ಶ್ರಮ ಪಟ್ಟಿದ್ದು , ವೇಷಭೂಷಣಗಳು ಗಮನ ಸೆಳೆಯುತ್ತದೆ. ನಾಯಕಿಯಾಗಿ ಮಿಶಾ ನಾರಂಗ್ ಸಿಕ್ಕ ಅವಕಾಶವನ್ನು ಲವಲವಿಕೆಯಿಂದ ಅಭಿನಯಿಸುತ್ತಾ ಪಾತ್ರಕ್ಕೆ ಜೀವ ನೀಡಿದ್ದಾರೆ. ಇನ್ನು ಬಹುತೇಕ ಈ ಜೋಡಿ ಮುತ್ತಿನ ಸರಿ ಮಳೆಯನ್ನೇ ಸುರಿಸಿದ್ದಾರೆ. ಇನ್ನು ಎಂದಿನಂತೆ ರಂಗಾಯಣ ರಘು ಅದ್ಭುತವಾಗಿ ಅಭಿನಯಿಸಿದ್ದು , ವಿಜಯ್ ಚೆಂಡೂರು , ಚಿತ್ಕಲಾ ಬಿರಾದರ್, ಶ್ರೀ ಮಹದೇವ್, ರಘು ರಾಮನಕೊಪ್ಪ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ ನೀಡಿದೆ. ಯಾವುದೇ ಅಬ್ಬರ , ಒಡಿ-ಬಡಿ ಇಲ್ಲದೆ ತಾಳ್ಮೆಯಿಂದ 70ರ ಕಾಲಘಟ್ಟದ ಸುಂದರ ದೃಶ್ಯಗಳನ್ನ ನೋಡುವಂತಹ ಒಂದು ಸರಳ ಪ್ರೇಮ ಕತೆ ಚಿತ್ರ ಇದಾಗಿದೆ.