ಅರವಿಂದ್ ವೆಂಕಟೇಶ್ ರೆಡ್ಡಿ ನೇತೃತ್ವದ “AVR CINE – MAX” ಓಟಿಟಿಗೆ ಚಾಲನೆ

Spread the love

AVR ಪ್ರೊಡಕ್ಷನ್ಸ್ ಮೂಲಕ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ಅರವಿಂದ್ ವೆಂಕಟೇಶ್ ರೆಡ್ಡಿ(AVR) ಅವರು ಈಗ “AVR CINE – MAX” ಎಂಬ ಕನ್ನಡ ಓಟಿಟಿಯನ್ನು ಆರಂಭಿಸಿದ್ದಾರೆ. ಹಿರಿಯ ನಟ ನರಸಿಂಹರಾಜು ಅವರ ಮೊಮ್ಮಗ ನಟ, ನಿರ್ದೇಶಕ ಅವಿನಾಶ್ ದಿವಾಕರ್ ಶೃಂಗೇರಿ ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಇತ್ತೀಚೆಗೆ “AVR CINE – MAX” ಓಟಿಟಿ ಅನಾವರಣ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ||ಜಯಮಾಲ, ನಿರ್ದೇಶಕರಾದ ಟಿ.ಎಸ್.ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಟಿ.ಎನ್ ಸೀತಾರಾಮ್, ಪಿ.ಶೇಷಾದ್ರಿ, ಶಶಾಂಕ್, ನಾಗಣ್ಣ, ನಟರಾದ ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ಮೋಹನ್, ಗುರುಕಿರಣ್, ಥ್ರಿಲ್ಲರ್ ಮಂಜು, ಶಿವಧ್ವಜ್, ನಟಿಯರಾದ ಗಿರಿಜಾ ಲೋಕೇಶ್, ಸುಧಾರಾಣಿ, ತಾರಾ ಅನುರಾಧ, ಹರ್ಷಿಕಾ ಪೂಣಚ್ಛ, ಪದ್ಮಜಾರಾವ್, ನಿರ್ಮಾಪಕ ಯೋಗೀಶ್ ದ್ವಾರಕೀಶ್, ಪತ್ರಕರ್ತ ಸದಾಶಿವ ಶೆಣೈ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

“AVR CINE – MAX” ಓಟಿಟಿಯನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ||ಜಯಮಾಲ, ಅರವಿಂದ್ ವೆಂಕಟೇಶ್ ರೆಡ್ಡಿ ಆರಂಭಿಸುತ್ತಿರುವ ಹಾಗೂ ನಟ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ದಿವಾಕರ್ ಅವರ ಉಸ್ತುವಾರಿಯಲ್ಲಿ ಬರುತ್ತಿರುವ ಈ ನೂತನ ಓಟಿಟಿಗೆ ಶುಭವಾಗಲಿ ಹಾಗೂ ಇದರಿಂದ ಕನ್ನಡ ನಿರ್ಮಾಪಕರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

“AVR CINE – MAX” ಕನ್ನಡಿಗರಿಂದ ಕನ್ನಡಿಗರಿಗಾಗಿಯೇ ಆರಂಭಿಸಿರುವ ಓಟಿಟಿ . ಕನ್ನಡ ಚಲನಚಿತ್ರ ಹಾಗೂ ಸೃಜನಾತ್ಮಕ ಮನರಂಜನಾ ವಿಷಯಗಳನ್ನು ವಿಶ್ವದಾದ್ಯಂತ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶದಿಂದ ರೂಪುಗೊಂಡಿರುವ ಓಟಿಟಿಯೂ ಹೌದು. ಈ ಓಟಿಟಿಯಲ್ಲಿ ಈಗಾಗಲೇ 750ಕ್ಕೂ ಹೆಚ್ಚು ಸಿ‌ನಿಮಾಗಳಿದೆ. ಕೇವಲ ಸಿನಿಮಾ ಮಾತ್ರವಲ್ಲದೇ ರಿಯಾಲಿಟಿ ಶೋ, ಕ್ರೀಡೆ, ಸಂಗೀತ, ನೇರ ಕಾರ್ಯಕ್ರಮಗಳು ಹೀಗೆ ಮೂಲ ಸೃಜನಾತ್ಮಕ ವಿಷಯಗಳಿಗೆ ಉತ್ತೇಜನ ನೀಡಿ ಅವುಗಳನ್ನು ವಿಶ್ವದ ಪ್ರೇಕ್ಷಕರಿಗೆ ತಲುಪಿಸುವ ಮನರಂಜನಾ ವೇದಿಕೆ ಇದಾಗಿದೆ.

ರವಿಶ್ರೀವತ್ಸ ಅವರ “ಗ್ಯಾಂಗ್ ಆಫ್ ಯುಕೆ” ಸಿನಿಮಾವನ್ನು ವೆಬ್ ಸಿರೀಸ್ ರೂಪದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಸೃಜನ್ ಲೋಕೇಶ್ ಅವರು “ಸೃಜಾ ಟಾಕೀಸ್” ಎಂಬ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ವಾರಾಂತ್ಯದಲ್ಲಿ ಸಂಗೀತದ ಕಾರ್ಯಕ್ರಮಗಳು ಇರುತ್ತದೆ. ಕ್ರಿಕೆಟ್ ಸೇರಿದಂತೆ ಯಾವುದೇ ಕ್ರೀಡೆಯನ್ನು ಇದರ ಮೂಲಕ ಆಸಕ್ತರು ನೇರಪ್ರಸಾರವನ್ನು ಮಾಡಬಹುದು.

ಸದ್ಯದಲ್ಲೇ ಮಲೇಷಿಯಾದಲ್ಲಿ ಅದ್ದೂರಿ ಕ್ರಿಕೆಟ್ ಟೂರ್ನಿಯನ್ನು ಸಹ ಆಯೋಜಿಸುತ್ತಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ತಿಳಿಸಿದ “AVR CINE – MAX” ಓಟಿಟಿ ಸ್ಥಾಪಕ ಅರವಿಂದ್ ವೆಂಕಟೇಶ್ ರೆಡ್ಡಿ, ಸಮಾರಂಭಕ್ಕೆ ಆಗಮಿಸಿದ ಗಣ್ಯರಿಗೆ ಧನ್ಯವಾದ ತಿಳಿಸಿದರು.

ಇತ್ತೀಚೆಗೆ ನಡೆದ ಕನ್ನಡ ಚಿತ್ರರಂಗ “ಅಂದು ಇಂದು ಮುಂದು” ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ||ಜಯಮಾಲ ಅವರು ಆಡಿದ ಮಾತು ನಾವು ಈ ಓಟಿಟಿ ಆರಂಭಿಸಲು ಸ್ಪೂರ್ತಿಯಾಯಿತು. ಈ ಹಿಂದೆ ಕೂಡ “ಕಟ್ಟೆ” ಎಂಬ ಓಟಿಟಿ ಮಾಡಿದ್ದೆವು. ಅದನ್ನು ಕಾರಣಾಂತರದಿಂದ ಮುಂದುವರೆಸಲು ಸಾಧ್ಯವಾಗಲಿಲ್ಲ. ಆನಂತರ “AVR CINE – MAX” ಓಟಿಟಿಯ ಬಗ್ಗೆ ಅರವಿಂದ್ ವೆಂಕಟೇಶ್ ರೆಡ್ಡಿ ಅವರ ಬಳಿ ನಾನು ಹೇಳಿದಾಗ ಅವರು ಸಂತೋಷದಿಂದ ಬಂಡವಾಳ ಹೂಡಲು ಮುಂದಾದರು. “AVR CINE – MAX” ಓಟಿಟಿ ವಿಶ್ವದಾದ್ಯಂತ ಇರುವ ಕನ್ನಡಿಗರಿಗೆ ಪರಿಶುದ್ಧ ಮನೋರಂಜನೆ ಒದಗಿಸಲಿದೆ ಎಂದು ನೂತನ ಓಟಿಟಿಯ ಉಸ್ತುವಾರಿ ಹಿರಿಯ ನಟ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ದಿವಾಕರ್ ಶೃಂಗೇರಿ ತಿಳಿಸಿದರು.

Visited 1 times, 1 visit(s) today
error: Content is protected !!