Cini NewsSandalwood

”ಸಿಸಿಎಲ್” ಟೂರ್ನಮೆಂಟ್ ಅಲ್ಲ ಅದೊಂದು ಭಾವನೆ…ಸಿಸಿಎಲ್ ಆಡಲು ಅಭಿಮಾನಿಗಳಿಗೂ ಕಿಚ್ಚ ಆಹ್ವಾನ

Spread the love

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2026ರ ಮಹಾ ಸಮರದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು ಬರೋಬ್ಬರಿ 12 ವರ್ಷಗಳ ನಂತರ, ಮೂರನೇ ಬಾರಿಗೆ ಐತಿಹಾಸಿಕ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಚಾಂಪಿಯನ್ಸ್ ಟ್ರೋಫಿಯನ್ನು ತಾಯ್ನಾಡಿಗೆ ಹೊತ್ತು ತಂದಿದೆ.

ಈ ಸಂಬಂಧ ಬೆಂಗಳೂರಿನಲ್ಲಿ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದ ನಾಯಕ ಕಿಚ್ಚ ಸುದೀಪ್, “ನಾನು ಯಾವಾಗಲೂ ಹೇಳುವಂತೆ, ನಮಗೆ ಇದು ಕೇವಲ ಒಂದು ಟೂರ್ನಮೆಂಟ್ ಅಲ್ಲ, ಇದೊಂದು ಭಾವನೆ. ಅದ್ಭುತ ಆಟಗಾರರ ಈ ತಂಡವನ್ನು ಮುನ್ನಡೆಸಿ, ದಶಕದ ನಂತರ ಕಪ್ ಅನ್ನು ಮನೆಗೆ ತರುತ್ತಿರುವುದು ಪದಗಳಲ್ಲಿ ವಿವರಿಸಲಾಗದ ಅನುಭವ. ಒತ್ತಡದ ನಡುವೆಯೂ ತಂಡವು ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದ ರೀತಿ ಅದ್ಭುತವಾಗಿತ್ತು. ಈ ಗೆಲುವು ಕಷ್ಟದ ದಿನಗಳಲ್ಲೂ ನಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಅರ್ಪಣೆ. ಈ ಸಲ ಕಪ್ ನಮ್ದೆ ಎಂಬ ಘೋಷಣೆ ಈಗ ಕೇವಲ ಮಾತಲ್ಲಅದು ವಾಸ್ತವ” ಎಂದು ಖುಷಿಪಟ್ಟರು

ಅಭಿಮಾನಿಗಳಿಗೂ ಸಿಸಿಎಲ್ ತಂಡ ಸೇರುವ ಅವಕಾಶ
“ಸಿಸಿಎಲ್ ಎಂದರೆ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲ. ಚೆನ್ನಾಗಿ ಕ್ರಿಕೆಟ್ ಆಡುವ ಅಭಿಮಾನಿಗಳಿಗೂ ನಮ್ಮ ತಂಡದಲ್ಲಿ ಅವಕಾಶವಿದೆ. ಯಾರಲ್ಲಿ ನಿಜವಾದ ಪ್ರತಿಭೆ ಇದೆಯೋ ಅವರು ಬಂದು ಸೇರಿಕೊಳ್ಳಬಹುದು” ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಕ್ರಿಕೆಟ್ ಆಡುವ ಅವಕಾಶದ ಬಗ್ಗೆ ಮಾಹಿತಿ ನೀಡಿದರು.

ಕಳೆದ ಭಾನುವಾರ(ಫೆಬ್ರವರಿ 1) ಕೊಯಂಬತ್ತೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಗೆದ್ದು ಕಿಚ್ಚನ ಪಡೆ ಟ್ರೋಫಿ ಎತ್ತಿ ಹಿಡಿದಿತ್ತು 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಬುಲ್ಡೋಜರ್ಸ್ ಇತಿಹಾಸ ನಿರ್ಮಿಸಿತು.

ಸುದೀಪ್ ನೇತೃತ್ವದ ಪ್ರದೀಪ್, ಜೆಕೆ, ಕೃಷ್ಣ, ಚಂದನ್, ರಾಜೀವ್, ನಿರೂಪ್, ಪ್ರತಾಪ್, ಅರ್ಜುನ್, ಸಚಿನ್, ಕರಣ್, ಮಂಜುನಾಥ್ ಮತ್ತು ಬಚ್ಚನ್ ಅವರನ್ನೊಳಗೊಂಡ ತಂಡವು ಅಮೋಘ ಪ್ರದರ್ಶನ ನೀಡಿತು. 130 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬುಲ್ಡೋಜರ್ಸ್ ಪರ ಸ್ಟಾರ್ ಬ್ಯಾಟ್ಸ್‌ಮನ್ ರಾಜೀವ್ ಹನು ಕೇವಲ 35 ಎಸೆತಗಳಲ್ಲಿ 69 ರನ್ ಸಿಡಿಸಿ ‘ಪಂದ್ಯ ಪುರುಷ’ ಪ್ರಶಸ್ತಿ ಪಡೆದರು. ಬೌಲಿಂಗ್‌ನಲ್ಲಿ ಎದುರಾಳಿಗಳನ್ನು ಕಟ್ಟಿಹಾಕಿದ ಪ್ರತಾಪ್ ‘ಅತ್ಯುತ್ತಮ ಬೌಲರ್’ ಗೌರವಕ್ಕೆ ಪಾತ್ರರಾದರು.

Visited 1 times, 1 visit(s) today
error: Content is protected !!