Cini NewsSandalwood

ದಾಖಲೆ ಮೊತ್ತಕ್ಕೆ ಮಾರಾಟವಾದ ‘ಅನ್ಲಾಕ್ ರಾಘವ’ ಆಡಿಯೋ ರೈಟ್ಸ್

ಸ್ಯಾಂಡ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ ಚಿತ್ರಗಳಲ್ಲಿ “ಅನ್ಲಾಕ್ ರಾಘವ” ಕೂಡ ಒಂದು. ಚಿತ್ರ ಸೆಟ್ಟೇರಿದ ದಿನದಿಂದಲೂ ಹಲವಾರು ವಿಶೇಷತೆಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ “ಅನ್ಲಾಕ್ ರಾಘವ”. ಈಗ ಚಿತ್ರತಂಡದಿಂದ ಮತ್ತೊಂದು ಹೊಸ ಸುದ್ದಿ‌ ಬಂದಿದೆ. ಚಿತ್ರದ ಆಡಿಯೋ ರೈಟ್ಸ್ ಎ2 ಮ್ಯೂಸಿಕ್ ಪಾಲಾಗಿದೆ. ದಾಖಲೆ ಮೊತ್ತಕ್ಕೆ ಹೊಸ ನಾಯಕನಟನ ಚಿತ್ರದ ಆಡಿಯೋ ರೈಟ್ಸ್ ಮಾರಾಟವಾಗಿರುವುದು ವಿಶೇಷ. ದಾಖಲೆ ಮೊತ್ತಕ್ಕೆ ಮಾರಾಟವಾಗಿರುವ ವಿಷಯ ಮಾತ್ರ ತಿಳಿದು ಬಂದಿದ್ದು. ಹೆಚ್ಚಿನ ವಿವರಗಳನ್ನು ಚಿತ್ರತಂಡವಾಗಲಿ ಅಥವಾ ಎ2 ಮ್ಯೂಸಿಕ್ ಕಂಪೆನಿಯಾಗಲಿ ಬಹಿರಂಗಪಡಿಸಿಲ್ಲ.

ಇದಲ್ಲದೇ ಮತ್ತೊಂದು ವಿಶೇಷತೆಯನ್ನೂ ‘ಅನ್ಲಾಕ್ ರಾಘವ’ ಚಿತ್ರತಂಡ ಸಿನಿಪ್ರೇಕ್ಷಕರಿಗೆ ಹೊತ್ತುತಂದಿದೆ. ಅದೇ ‘ಮೂಡ್ಸ್ ಆಫ್ ರಾಘವ’ ಟೀಸರ್. ಶೀಘ್ರದಲ್ಲೇ ಬಿಡುಗಡೆಯಾಗುತ್ತಿರುವ ಈ ಟೀಸರ್ ಕೂಡ ವಿಭಿನ್ನ ಹೆಸರಿನಿಂದಲೇ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ. ಹೀಗೆ ವಿಶೇಷ ರಸದೌತಣಗಳನ್ನು ಒಂದರ ನಂತರ ಮತ್ತೊಂದರಂತೆ ಉಣಬಡಿಸುತ್ತಿರುವ ‘ಅನ್ಲಾಕ್ ರಾಘವ’ ಚಿತ್ರ ನೋಡಲು ಸ್ಯಾಂಡಲ್ವುಡ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

‘ಅನ್ ಲಾಕ್ ರಾಘವ’ ಚಿತ್ರವನ್ನು ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ನಡಿ ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದು, ದೀಪಕ್ ಮಧುವನಹಳ್ಳಿ ಅವರು ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದು, ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ.

ಧನಂಜಯ್ ಮಾಸ್ಟರ್ ಹಾಗೂ ಮುರಳಿ ಮಾಸ್ಟರ್ ನೃತ್ಯನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿದ್ದು, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಮಿಲಿಂದ್ ನಾಯಕನಾಗಿ ಹಾಗೂ ರೇಚಲ್ ಡೇವಿಡ್ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಮೂಗೂರು ಸುರೇಶ್ ಹಾಗೂ ಮತ್ತಿತರ ಕಲಾವಿದರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

error: Content is protected !!