Cini NewsMovie Review

ಭಾವೈಕ್ಯತೆಯಲ್ಲಿ ತೆರೆದ ಮನಸುಗಳ ಉತ್ತರ ತೋತಾಪುರಿ- 2 (ಚಿತ್ರ ವಿಮರ್ಶೆ-ರೇಟಿಂಗ್ : 3.5/5)

ರೇಟಿಂಗ್ : 3.5/5

ಚಿತ್ರ : ತೋತಾಪುರಿ 2
ನಿರ್ದೇಶಕ : ವಿಜಯ ಪ್ರಸಾದ್ ನಿರ್ಮಾಪಕ : ಸುರೇಶ್ .ಕೆ. ಎ . ಸಂಗೀತ : ಅರುಣ್ ಆಂಡ್ರಿವ್
ಛಾಯಾಗ್ರಹಕ : ನಿರಂಜನ್ ಬಾಬು
ತಾರಾಗಣ : ಜಗ್ಗೇಶ್ , ಅದಿತಿ ಪ್ರಭುದೇವ್ , ಧನಂಜಯ, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್ , ಹೇಮಾ ದತ್, ವೆಂಕಟ್ ರಾವ್ ಹಾಗೂ ಮುಂತಾದವರು…

ಸಮಾಜದಲ್ಲಿ ನೆಮ್ಮದಿಯ ಸುಖ ಬಾಳ್ವೆಗೆ ಜಾತಿ , ಧರ್ಮ , ಸಂಘರ್ಷಗಳ ಹಾವಳಿಯೇ ಹೆಚ್ಚು. ಗಂಡು ಹೆಣ್ಣು ಎರಡು ಜಾತಿಗಳಿದ್ದರೆ ಸುಖವಾದ ಬದುಕಿಗೆ ದಾರಿ ಸಿಗುತ್ತದೆ ಎಂಬ ಅಂಶವನ್ನು ಹಾಸ್ಯ ಮಿಶ್ರಣದೊಂದಿಗೆ ದ್ವಂದ್ವಾರ್ಥ ಅನಿಸಿದರು, ವಯಸ್ಕರಿಗೆ ಅರ್ಥವಾಗುವ ರೀತಿಯಲ್ಲಿ ಸ್ನೇಹ , ಪ್ರೀತಿ , ಕಾಮ, ಸಂಬಂಧಗಳ ಮೌಲ್ಯದ ಬದುಕನ್ನ ಕಟ್ಟಿಕೊಳ್ಳುವ ಹಾದಿಗೆ ಉತ್ತರ ನೀಡುವ ಪಯಣ ಸಾಗಿದ್ದು, ತೋತಾಪುರಿ ಭಾಗ 1 ಒಂದರಲ್ಲಿ ಮೂಡಿದ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಈ ವಾರ ತೆರೆಯ ಮೇಲೆ ಬಂದಂತಹ ಚಿತ್ರವೇ “ತೋತಾಪುರಿ 2”.

ಚಿತ್ರದ ಮೊದಲ ಭಾಗ ನೋಡಿದವರಿಗೆ ಮುಂದುವರೆದ ಭಾಗ ಏನು ಎಂಬ ಪ್ರಶ್ನೆ ಕಾಡೋದು ಸರ್ವೇ ಸಾಮಾನ್ಯ, ಯಾಕೆಂದರೆ ಡಾಲಿ ಧನಂಜಯ ಪ್ರವೇಶ ಚಿತ್ರದ ಮತ್ತೊಂದು ತಿರುವು ತಿಳಿದುಕೊಳ್ಳುತ್ತದೆ. ಇನ್ನು ದ್ವಿತೀಯ ಭಾಗದಲ್ಲೂ ಈರೇಗೌಡ (ಜಗ್ಗೇಶ್) ತನ್ನ ತೋತಾಪುರಿ ಕಟ್ ಟೈಲರಿಂಗ್ ಕೆಲಸದ ನಡುವೆ ಶಕೀರಾ ಬಾನು (ಅದಿತಿ ಪ್ರಭುದೇವ್) ಗೆ ಪ್ರೇಮ ಪ್ರಸಂಗಗಳನ್ನು ಹೇಳುತ್ತಾ ಹಕ್ಕಿಗೆ ಕಾಳು ಹಾಕುತ್ತಿರುತ್ತಾನೆ.

ಇದರ ನಡುವೆ ಜಾತಿ ಧರ್ಮ ಒಡನಾಟದ ಜೊತೆಗೆ ದೋನೆ ರಂಗಮ್ಮನ ವರ್ಸೆ (ವೀಣಾ ಸುಂದರ್) , ನಂಜಮ್ಮನ(ಹೇಮಾ ದತ್) ಎಡವಟ್ಟುಗಳು, ರಾಯರು(ವೆಂಕಟ್ ರಾವ್) ಬುದ್ಧಿ ಮಾತು ಹೀಗೆ ಓಟಕ್ಕೆ ಪೂರಕವಾಗಿ ಸಾಗುವ ಹಾದಿಯಲ್ಲಿ ಮತ್ತೊಂದು ಲವ್ ಟ್ರ್ಯಾಕ್ ಅದುವೇ ಸಿಸ್ಟರ್ ವಿಕ್ಟೋರಿಯಾ (ಸುಮನ್ ರಂಗನಾಥ್) ಹಾಗೂ ನಾರಾಯಣ ಪಿಳ್ಳೆ (ಧನಂಜಯ) ಪ್ರೇಮ ಪ್ರಕರಣ ತೆರೆದುಕೊಳ್ಳುತ್ತಾ ಹೋಗುತ್ತದೆ.

ಇದರ ನಡುವೆ ಕೂಡ ಈರೇಗೌಡನ ಟ್ರ್ಯಾಕ್ ಕೂಡ ಸಾಗಿ ಬೇರೆ ಬೇರೆ ವಿಚಾರಗಳು ಹೊಸ ಹೊಸ ತಿರುವನ್ನ ಪಡೆಯುತ್ತದೆ. ಹಾಗೆಯೇ ಸಿಸ್ಟರ್ ಹಾಗೂ ನಾರಾಯಣ್ ಪಿಳ್ಳೆ ಇವರಿಬ್ಬರ ಬದುಕಿನಲ್ಲಿ ಹಲವು ಏರಿಳಿತಗಳು ಎದುರಾಗಿ ಸಮಸ್ಯೆ ಗೂಡಾಗಿ ತುಂಬಿಕೊಂಡು ಕ್ಲೈಮಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ.
ಈರೇಗೌಡನ ಲವ್ ಟ್ರ್ಯಾಕ್..?
ಸಿಸ್ಟರ್ ವಿಕ್ಟೋರಿಯಾ ಬದುಕು..?
ಧರ್ಮ ಜಾತಿಯ ವಿಚಾರ ಏನು…
ಪರಿಹಾರ ಸಿಗುತ್ತಾ ಇಲ್ವಾ…
ಈ ಎಲ್ಲಾ ವಿಚಾರದ ಬಗ್ಗೆ ತಿಳಿದುಕೊಳ್ಳಬೇಕಾದರೆ ಚಿತ್ರವನ್ನು ನೋಡಬೇಕು.

ಇನ್ನು ಈ ಚಿತ್ರದ ಕೇಂದ್ರ ಬಂದು ನವರಸ ನಾಯಕ ನಟ ಜಗ್ಗೇಶ್ ತಮ್ಮ ಮಾತಿನ ವರಸೆಯ ಮೂಲಕ ನಗಿಸುತ್ತಾ ದ್ವಂದ್ವಾರ್ಥ ಅನಿಸಿದರು ಒಂದು ಅರ್ಥಪೂರ್ಣ ಸಂದೇಶವನ್ನು ರವಾನೆ ಮಾಡುತ್ತಾ ಸಾಗುತ್ತಾರೆ. ಅದೇ ರೀತಿ ನಟಿ ಅದಿತಿ ಪ್ರಭುದೇವ್ ಕೂಡ ಜಾತಿ-ಧರ್ಮ ಮುಖ್ಯವಲ್ಲ, ಮನುಷ್ಯ ಸಂಬಂಧವಷ್ಟೇ ಮುಖ್ಯ ಎಂಬ ವಿಚಾರವನ್ನು ಬಹಳ ಸೂಕ್ಷ್ಮವಾಗಿ ತಮ್ಮ ಹಾವಭಾವದಲ್ಲಿ ತೆರೆದಿಟ್ಟಿದ್ದಾರೆ.

ಇನ್ನು ನಟ ಡಾಲಿ ಧನಂಜಯ್ ಕೂಡ ಒಬ್ಬ ಪ್ರೇಮಿಯಾಗಿ ಬಹಳ ನಿಜವಾಗಿ ತಮ್ಮ ಪಾತ್ರಕ್ಕೆ ಜೀವ ನೀಡಿದ್ದಾರೆ. ಹಾಗೆಯೇ ಸಿಸ್ಟರ್ ವಿಕ್ಟೋರಿಯಾ ಪಾತ್ರದಲ್ಲಿ ನಟಿ ಸುಮನ್ ರಂಗನಾಥ್ ಕಾಣಿಸಿಕೊಂಡರು ಕೆಲುವು ದೃಶ್ಯಗಳಲ್ಲಿ ಮುದ್ದಾದ ಬೆಡಗಿಯಾಗಿ ಕಣ್ಮನ ಸೆಳೆಯುತ್ತಾರೆ. ಇನ್ನು ಉಳಿದಂತೆ ಅಭಿನಯಿಸಿರುವ ವೀಣಾ ಸುಂದರ್ , ಹೇಮದತ್, ವೆಂಕಟರಾವ್, ದತ್ತಣ್ಣ ಸೇರಿದಂತೆ ಎಲ್ಲಾ ಪಾತ್ರದಾರಿಗಳು ಕೂಡ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.

ಇನ್ನು ಈ ಚಿತ್ರದ ನಿರ್ದೇಶಕ ವಿಜಯ ಪ್ರಸಾದ್ ಎಲ್ಲಾ ಕಾಲಘಟ್ಟಕ್ಕೂ ಹೊಂದಿಕೊಳ್ಳುವಂತಹ ಒಂದು ಉತ್ತಮ ಚಿತ್ರವನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ. ಸಾಂದರ್ಭಿಕ ಮತ್ತು ಸಾಮಾಜಿಕ ಸಂದೇಶ ಆಧಾರಿತ ಹಾಸ್ಯಮಯ ಚಿತ್ರವಾಗಿಸಿ ಸೆಂಟಿಮೆಂಟ್ , ಕಾಮಿಡಿ, ಭಾವನೆಗಳ ಏರಿಳಿತದ ಪಯಣ ಪಯಣವನ್ನು ಅಚ್ಚುಕಟ್ಟಾಗಿ ಪ್ರೇಕ್ಷಕರಿಗೆ ನೀಡಿದ್ದಾರೆ. ಆದರೆ ಕೆಲವು ದೃಶ್ಯಗಳು ಹಾಗೂ ಮಾತಿನ ವರಸೆ ನೋಡುವುದಕ್ಕೆ ಹಾಗೂ ಕೇಳುವುದಕ್ಕೆ ಮುಜುಗರವೆನಿಸುತ್ತದೆ.

ಇನ್ನು ಈ ಚಿತ್ರದ ಛಾಯಾಗ್ರಾಹಣ ಹಾಗೂ ಸಂಗೀತ ಗಮನ ಸೆಳೆಯುವಂತೆ ಮೂಡಿ ಬಂದಿದೆ. ಇಂತಹ ವಿಭಿನ್ನ ಚಿತ್ರವನ್ನು ಬಹಳ ಅಚ್ಚುಕಟ್ಟಾಗಿ ತೆರೆ ಮೇಲೆ ತಂದಿರುವಂತಹ ನಿರ್ಮಾಪಕ ಸುರೇಶ್ .ಕೆ .ಎ ಧೈರ್ಯವನ್ನು ಮೆಚ್ಚಲೇಬೇಕು. ಮನೋರಂಜನೆಯ ಜೊತೆಗೆ ಒಂದು ಅರ್ಥಪೂರ್ಣ ಸಂದೇಶವನ್ನು ನೀಡಿರುವ ಈ ಚಿತ್ರವು ಒಮ್ಮೆ ನೋಡುವಂತಿದೆ

error: Content is protected !!