ಅರ್ಜುನ್ ಯೋಗಿ ನಟನೆಯ “ವರ್ಣ” ಚಿತ್ರದ ಟೀಸರ್ ರೀಲಿಸ್
ಈಗಾಗಲೇ ನಾಲ್ಕು ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ, ಧಾರಾವಾಹಿಗಳಲ್ಲೂ ಅಭಿನಯಿಸಿರುವ ಅರ್ಜುನ್ ಯೋಗಿ ನಾಯಕನಾಗಿ ನಟಿಸಿರುವ, ದೇವ ಶರ್ಮ ನಿರ್ದೇಶಿಸಿರುವ ಹಾಗೂ ಮಲ್ಲಿನೇನಿ ನವೀನ್ ಚೌಧರಿ ನಿರ್ಮಿಸಿರುವ “ವರ್ಣ” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ನಿರ್ಮಾಪಕರ ಪುತ್ರ ವರ್ಷನ್ ಚೌಧರಿ ಟೀಸರ್ ಅನಾವರಣ ಮಾಡಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ “ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ” ಎಂಬ ಮಾತೇ ಈ ಚಿತ್ರದ ಕಥೆಗೆ ಸ್ಪೂರ್ತಿ ಎಂದು ಮಾತನಾಡಿದ ನಿರ್ದೇಶಕ ದೇವ ಶರ್ಮ, ಮೊದಲು ಇದನ್ನು ಕಿರುಚಿತ್ರ ಮಾಡಲು ಹೊರಟಿದ್ದೆವು. ಆದರೆ ಕಥೆ ಕೇಳಿದ ನಿರ್ಮಾಪಕ ಮಲ್ಲೇನೇನಿ ನವೀನ್ ಚೌಧರಿ, ಕಥೆ ಚೆನ್ನಾಗಿದೆ. ಕಿರುಚಿತ್ರ ಬೇಡ. ಎಲ್ಲಾ ಸಿನಿಮಾಗಳಂತೆಯೇ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡೋಣ ಎಂದು ನಮ್ಮ ಬೆನ್ನೆಲುಬಾಗಿ ನಿಂತರು.
ಅವರಿಲ್ಲದೆ ಈ ಸಿನಿಮಾ ಸಾಧ್ಯವಾಗುತ್ತಿರಲಿಲ್ಲ. ನಾಯಕನಾಗಿ ಅರ್ಜುನ್ ಯೋಗಿ, ನಾಯಕಿಯಾಗಿ ಭವ್ಯ ಗೌಡ, ವಿಲನ್ ಪಾತ್ರದಲ್ಲಿ ಲಂಕೇಶ್ ರಾವಣ ನಟಿಸಿದ್ದಾರೆ. ಅನೇಕ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ರಮೇಶ್ ಕೃಷ್ಣ ಸಂಗೀತ ನಿರ್ದೇಶನ, ಗೌರಿ ವೆಂಕಟೇಶ್ ಛಾಯಾಗ್ರಹಣ, ಸುಜಿತ್ ನಾಯಕ್ ಸಂಕಲನ, ಚಿನ್ನಯ್ಯ ಮಾಸ್ಟರ್ – ಸಾಗರ್ ಮಾಸ್ಟರ್ ಸಾಹಸ ನಿರ್ದೇಶನ ಹಾಗೂ ಹೈಟ್ ಮಂಜು, ಗೀತಾ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಈಗ ಟೀಸರ್ ಅನಾವರಣವಾಗಿದೆ. ಸದ್ಯದಲ್ಲೇ ಹಾಡುಗಳು ಹಾಗೂ ಟ್ರೇಲರ್ ಸಹ ಬರಲಿದೆ ಎಂದರು.
ನಾನು ಪಾವಗಡದವನು. ಉದ್ಯಮಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ. ಎಲ್ಲಾ ಜವಾಬ್ದಾರಿಯನ್ನು ನಿರ್ದೇಶಕ ದೇವ ಶರ್ಮ ಅವರಿಗೆ ವಹಿಸಿದ್ದೇನೆ. ಚಿತ್ರ ಚೆನ್ನಾಗಿ ಬರಬೇಕೆಂದಷ್ಟೇ ಹೇಳಿದ್ದೇನೆ. “ವರ್ಣ” ಎಲ್ಲರಿಗೂ ಹಿಡಿಸುವ ಚಿತ್ರವಾಗುವ ಭರವಸೆಯಿದೆ ಎಂದು ನಿರ್ಮಾಪಕ ಮಲ್ಲೇನೇನಿ ನವೀನ್ ಚೌಧರಿ ತಿಳಿಸಿದರು.
ಹತ್ತು ವರ್ಷಗಳ ಹಿಂದೆ ತೆರೆಕಂಡ “ಸಂಜೆಯಲ್ಲಿ ಅರಳಿದ ಹೂವು” ನಾನು ನಾಯಕನಾಗಿ ನಟಿಸಿದ ಮೊದಲ ಚಿತ್ರ. ಇದು ಐದನೇ ಚಿತ್ರ. ನಿರ್ದೇಶಕ ದೇವ ಶರ್ಮ ಅವರು ನಾಲ್ಕು ವರ್ಷಗಳ ಹಿಂದೆ ಈ ಚಿತ್ರದ ಕಥೆ ಹೇಳಿದ್ದರು. ಕಾರಣಾಂತರದಿಂದ ಚಿತ್ರ ಆಗ ಆರಂಭವಾಗಿರಲಿಲ್ಲ. ಕಳೆದ ವರ್ಷದ ನವೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಯಿತು. ಸರಿಯಾಗಿ ಒಂದು ವರ್ಷಕ್ಕೆ ನಮ್ಮ ಚಿತ್ರ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಚಿತ್ರದಲ್ಲಿ ನನ್ನ ಪಾತ್ರದ ಹೆಸರು “ವರ್ಣ”. ತಪ್ಪನ್ನು ಸಹಿಸದ, ತಪ್ಪು ಮಾಡಿದವರನ್ನು ಬಿಡದ ಹಳ್ಳಿ ಹುಡುಗನಾಗಿ ಅಭಿನಯಿಸಿದ್ದೇನೆ. ಇದೊಂದು ಹಳ್ಳಿ ಸೊಗಡಿನ ಕಥೆ ಎಂದು ನಾಯಕ ಅರ್ಜುನ್ ಯೋಗಿ ಹೇಳಿದರು.
ತಮ್ಮ ಪಾತ್ರದ ಬಗ್ಗೆ ನಾಯಕಿ ಭವ್ಯಗೌಡ ಹೇಳಿದರು. ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ರಮೇಶ್ ಕೃಷ್ಣ ಮಾಹಿತಿ ನೀಡಿದರು. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಂಕೇಶ್ ರಾವಣ, ನಟಿಯರಾದ ಅಮೃತ, ಶಿವಾನಿ, ನಟರಾದ ಪ್ರಣಯ್ ಮೂರ್ತಿ, ಮಂಡ್ಯ ಸಿದ್ದು, ಛಾಯಾಗ್ರಾಹಕ ಗೌರಿ ವೆಂಕಟೇಶ್, ನೃತ್ಯ ನಿರ್ದೇಶಕರಾದ ಹೈಟ್ ಮಂಜು, ಗೀತಾ ಹಾಗೂ ಸಾಹಸ ನಿರ್ದೇಶಕ ಚಿನ್ನಯ್ಯ ಮುಂತಾದವರು ” ವರ್ಣ” ಚಿತ್ರದ ಕುರಿತು ಮಾತನಾಡಿದರು.
