ವಿಧಿಯ ಆಟದ ಹಿಂದಿರುವ ನಿಗೂಢ ಮರ್ಮ “ಶಿಖಂಡಿ” । ಚಿತ್ರವಿಮರ್ಶೆ -ರೇಟಿಂಗ್ : 3.5 /5
ರೇಟಿಂಗ್ : 3.5 /5
ಚಿತ್ರ : ಶಿಖಂಡಿ
ನಿರ್ದೇಶಕ : ಗುರುಮೂರ್ತಿ ವಿ
ನಿರ್ಮಾಪಕ : ಪೋಲಾ ಪ್ರವೀಣ್ ಕುಮಾರ್
ಸಂಗೀತ : ಮಂಜು ಕವಿ
ಛಾಯಾಗ್ರಹಣ : ಸ್ವಾಮಿ
ತಾರಾಗಣ : ಯುವರಾಜ್ ಗೌಡ , ಖ್ಯಾತಿ , ನಿಖಿಲ್, ನಿಖಿತಸ್ವಾಮಿ, ದೀಪಕ್ ಶೆಟ್ಟಿ, ನೀತು ವನಜಾಕ್ಷಿ, ಚಾಂದಿನಿ, ರಾಘವೇಂದ್ರ , ವೇದ, ಬಲ ರಾಜ್ವಾಡಿ, ನಯನ, ವಿಜಯ್ ಚೆಂಡೂರ್ ಹಾಗೂ ಮುಂತಾದವರು…
ಮಹಾಭಾರತದಲ್ಲಿ ಬರುವ ಬಹಳಷ್ಟು ಪಾತ್ರಗಳು ಜನರ ಮನಸಿನಲ್ಲಿ ಉಳಿದಿದೆ. ಅದರಲ್ಲೂ “ಶಿಖಂಡಿ” ಪಾತ್ರ ಅತ್ಯಂತ ನಿರ್ಣಾಯಕ ಮತ್ತು ಕುತೂಹಲಕಾರಿಯಾದದ್ದು , ಅಂತದ್ದೇ ಪ್ರಮುಖ ಕಥಹಾಂದರದ ಮೂಲಕ ಪ್ರಸ್ತುತ ಕಾಲಘಟ್ಟದ ಯುವಕನ ಜನ್ಮದ ಹಿಂದಿರುವ ರಹಸ್ಯ , ಸಹದ್ಯೋಗಳ ಜೊತೆ ಕಟ್ಟಡ ನಿರ್ಮಾಣದ ಹಂತದಲ್ಲಿ ಸಿಗುವ ಸತ್ಯ , ಪ್ರೀತಿಯ ಸೆಳೆತ , ಗೆಳೆಯರ ಸಹಕಾರ , ಮಂಗಳ ಮುಖಿಯರ ನಂಟು , ದುಷ್ಟರ ಅಟ್ಟಹಾಸಕ್ಕೆ ಆತ್ಮಗಳ ಸಂಚಲನದ ಸುತ್ತ ಮೈ ರೋಮಾಂಚನ ಗೊಳಿಸುವಂತಹ ಅಂಶಗಳೊಂದಿಗೆ ತಾಯಿಯ ಪ್ರೀತಿ ಮಮಕಾರದ ಚಿತ್ರವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿದೆ.
ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಕಂಪನಿ ಒಂದರಲ್ಲಿ ಕೆಲಸ ಮಾಡುವ ಇಂಜಿನಿಯರ್ ಸೂರ್ಯ (ಯುವರಾಜ್ ಗೌಡ) ಹಾಗೂ ಆತನ ಗೆಳೆಯರು. ಇನ್ನೂ ತನೂರಲೆಂದು ಹಾಸ್ಪಿಟಲ್ ಕಟ್ಟಬೇಕೆಂದು ಆಸೆಪಡುವ ಸಂಗೀತ (ಖ್ಯಾತಿ)ಗೆ ತಂದೆ ಸತ್ಯ ಪ್ರಕಾಶ್ (ಪೋಲ ಪ್ರವೀಣ್ ಕುಮಾರ್) ಬೆಂಬಲ. ಈ ಕೆಲಸಕ್ಕೆ ಅಡ್ಡಗಾಲಾಗಿ ನಿಲ್ಲುವ ರಾಜೇಂದ್ರ (ರಾಜ್ ದೀಪಕ್ ಶೆಟ್ಟಿ).
ಇವರ ನಡುವೆ ಸಂಗೀತ ಕಂಡ ಕನಸು ನನಸು ಮಾಡಲು ಸೂರ್ಯ ಹಾಗೂ ತಂಡ ಸಾತ್ ನೀಡುತ್ತಾರೆ. ಆದರೆ ಒಂದಷ್ಟು ನಿಗೂಢತೆ , ಅನುಮಾನಗಳು ಕೆಲವರನ್ನ ಕಾಡುತ್ತಾ ಹೋಗುತ್ತದೆ. ಸತ್ಯ ಹುಡುಕಲು ಹೊರಟಾಗ ಫ್ಲ್ಯಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ. ಎಲ್ಲಮ್ಮ ದೇವಿಯ ಭಕ್ತರು ಏಳು ಜನ ಜೋಗತಿಯರ ಆಶೀರ್ವಾದದೊಂದಿಗೆ ದಂಪತಿಗಳಿಗೆ ಹುಟ್ಟುವ ಮಗು.
ಪ್ರೀತಿ , ಸಂತೋಷ , ಮಮಕಾರದಲ್ಲಿರುವಾಗಲೇ ಬದುಕಿನಲ್ಲಿ ಎದುರಾಗುವ ಏರುಪೇರುಗಳು, ಸಮಸ್ಯೆಗಳು ಒಂದಕ್ಕೊಂದು ಕೊಂಡಿಯಂತೆ ಬೇರೆಯದೆ ದಿಕ್ಕನ್ನ ಪಡೆದುಕೊಳ್ಳುತ್ತಾ ಆತ್ಮಗಳ ಸಂಚಲನ ಮೂಡುತ್ತದೆ. ದುಷ್ಟರ ಹುಡುಕಾಟದಲ್ಲಿ ಕಠೋರ ಸತ್ಯಗಳು ಹೊರ ಬರುತ್ತಾ ಹೋಗುತ್ತದೆ. ಅದು ಏನು… ಯಾರಿಂದ… ಸೂರ್ಯನ ಹಿನ್ನೆಲೆ ಏನು… ಸಂಗೀತ ಆಸೆ ಈಡೇರತ್ತ… ಆತ್ಮಗಳ ಪ್ರವೇಶ ಯಾಕೆ… ಇದೆಲ್ಲದಕ್ಕೂ ಒಮ್ಮೆ ಚಿತ್ರವನ್ನು ನೋಡಬೇಕು.
ಈ ಚಿತ್ರದ ಮೂಲಕ ನಿರ್ದೇಶಕ ಗುರುಮೂರ್ತಿ ವಿ ಬಹಳಷ್ಟು ವಿಚಾರವನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ವಿಧಿಯ ಆಟದ ಮುಂದೆ ಎಲ್ಲರೂ ತಲೆ ಬಾಗಲೇಬೇಕು. ದುಷ್ಟರ ಅಟ್ಟಹಾಸಕ್ಕೆ ಸಮಯ ಸಂದರ್ಭವೇ ತಕ್ಕ ಪಾಠವನ್ನು ಕಲಿಸುತ್ತೆ. ದೈವಶಕ್ತಿ , ಆತ್ಮಗಳ ಸಂಚಲನ , ಪ್ರೀತಿ , ವಾತ್ಸಲ್ಯ , ಮಮಕಾರಕ್ಕೆ ಬೆಲೆ ಕಟ್ಟಲಾಗದು ಎಂಬ ಸೂಕ್ಷ್ಮತೆಯನ್ನು ತೆರೆದಿಟ್ಟಿದ್ದಾರೆ.
ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಬಹುದಿತ್ತು. ಪಾತ್ರಗಳ ನಿರ್ವಹಣೆಯ ಬಗ್ಗೆ ಕೂಡ ಹೆಚ್ಚು ಗಮನ ವಹಿಸಬೇಕಿತ್ತು ಅನಿಸುತ್ತೆ , ಆದರೂ ಪ್ರಯತ್ನ ಗಮನ ಸೆಳೆಯುತ್ತದೆ. ಛಾಯಾಗ್ರಹಣ , ಸಂಗೀತ , ಸಂಕಲನ ತಕ್ಕಮಟ್ಟಿಗಿದೆ. ಹಿನ್ನೆಲೆ ಸಂಗೀತ ಚಿತ್ರವನ್ನು ಆವರಿಸಿಕೊಂಡಿದೆ. ಇನ್ನು ನಾಯಕನಾಗಿ ಅಭಿನಯಿಸಿರುವ ಯುವರಾಜ್ ಗೌಡ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿದ್ದು , ಯುವ ನಟಿ ಖ್ಯಾತಿ ಕೂಡ ಶ್ರಮಪಟ್ಟು ಅಭಿನಯಿಸಿದ್ದಾರೆ.
ಇನ್ನು ರಾಜ್ ದೀಪಕ್ ಶೆಟ್ಟಿ , ನಿಖಿಲ್ ಮಲಿಯಕ್ಕಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮನೆಯ ಸೇವಕನಾಗಿ ಪ್ರಮುಖ ತಿರುವಿಗೆ ಕಾರಣವಾದ ಪ್ರತಿಭೆ ಕೂಡ ಅದ್ಭುತವಾಗಿ ಅಭಿನಯಿಸಿದ್ದಾರೆ. ಇನ್ನು ಮಂಗಳಮುಖಿಯರಾಗಿ ಅಭಿನಯಿಸಿರುವ ನಿಖಿತಸ್ವಾಮಿ, ನೀತು ವನಜಾಕ್ಷಿ, ಚಾಂದಿನಿ, ರಾಘವೇಂದ್ರ ಸೇರಿದಂತೆ ಏಳು ಜನರು ಬಹಳ ಸೊಗಸಾಗಿ ಅಭಿನಯಿಸಿದ್ದಾರೆ. ಉಳಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದು, ಒಮ್ಮೆ ಈ ಶಿಖಂಡಿ ಚಿತ್ರವನ್ನು ಎಲ್ಲರೂ ನೋಡಬಹುದು.