ಮಾಸ್ ಆಕ್ಷನ್ ಅಬ್ಬರದ “ಶೇರ್” ಚಿತ್ರ ವಿಮರ್ಶೆ (ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಶೇರ್
ನಿರ್ದೇಶಕ : ಪ್ರಸಿದ್ಧ್
ನಿರ್ಮಾಪಕ : ಸುದರ್ಶನ್ ಸುಂದರರಾಜ್
ಸಂಗೀತ : ಗುಮ್ಮಿನೇನಿ ವಿಜಯ್
ಛಾಯಾಗ್ರಹಣ : ಕಿಟ್ಟಿ ಕೌಶಿಕ್
ತಾರಾಗಣ : ಕಿರಣ್ ರಾಜ್ , ಕ್ರಿಸ್(ಗಿಲ್ಲಿ) , ಸುರೇಖ, ತನೀಶಾ ಕುಪ್ಪಂಡ, ಯಶ್ ಶೆಟ್ಟಿ , ಶೋಭ್ ರಾಜ್, ಬಲ ರಾಜ್ವಾಡಿ, ವೀಣಾಸುಂದರ್ ಹಾಗೂ ಮುಂತಾದವರು…
ಜೀವನದಲ್ಲಿ ಹುಟ್ಟು ಸಾವು ಇದ್ದದ್ದೆ. ಇಲ್ಲಿ ಯಾರು ಅನಾಥರಲ್ಲ , ಭಗವಂತನ ಮಕ್ಕಳು ಎಲ್ಲರೂ ಎಂದೇ ಹೇಳಬಹುದು. ಪ್ರತಿಯೊಬ್ಬರ ಬದುಕು ಬವಣೆ ಒಂದೊಂದು ರೀತಿ ಇರುತ್ತದೆ. ಅಂತದೇ ಒಂದು ಅನಾಥ ಹುಡುಗರ ಮಾರ್ಕೆಟ್ ಮಂಡಿ ವ್ಯಾಪಾರದ ಜೀವನದ ಸುತ್ತ ಪುಡಿ ರೌಡಿಗಳ ಹಾವಳಿ , ಬದುಕು ನಡೆಸುವ ಹುಡುಗರು , ಪ್ರೀತಿಯ ಸೆಳೆತ , ದ್ವೇಷ ಕಿಚ್ಚು , ಕಾಣದ ಕೈಗಳ ಕೊಲೆಗಳ ಜಾಲ , ಲೀಡರ್ಗಳ ದರ್ಪ , ಪೊಲೀಸರ ಹುಡುಕಾಟದ ಸುತ್ತ ಬೆಸೆದುಕೊಂಡಿರುವ ಪಕ್ಕಾ ಆಕ್ಷನ್ , ಥ್ರಿಲ್ಲರ್ , ಮಾಸ್ ಕಂಟೆಂಟ್ ನೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಮೈನವಿರೇಳಿಸುವ ಸಾಹಸ ಚಿತ್ರ “ಶೇರ್”.
ದಿನನಿತ್ಯದ ವ್ಯಾಪಾರದ ಸ್ಥಳ ಮಾರ್ಕೆಟ್ ಮಂಡಿಯಲ್ಲಿ ಕೂಲಿ ಕೆಲಸ ಮಾಡುವ ಶಿವು (ಕಿರಣ್ ರಾಜ್) ಹಾಗೂ ಆತನ ಗೆಳೆಯರು , ಅದೇ ಸ್ಥಳದಲ್ಲಿ ಮತ್ತೊಂದು ರೌಡಿ ಗ್ಯಾಂಗ್ ಲೀಡರ್ ಗಿಲ್ಲಿ(ಕ್ರಿಸ್) ಕೂಲಿ ಕೆಲಸದ ಜೊತೆಗೆ ಜನರನ್ನ ಎದುರಿಸುತ್ತಾ ಕಾಣದ ವ್ಯಕ್ತಿಯ ಹೇಳುವ ಕೆಲಸವನ್ನು ಮಾಡುತ್ತಿರುತ್ತಾನೆ. ಇನ್ನು ಈ ಮಂಡಿಯ ಅಧ್ಯಕ್ಷ ಬಾಲರಾಜವಾಡಿ ಅನಾಥ ಹುಡುಗರನ್ನ ಬೆಳೆಸಿ ಕೆಲಸ ಕೊಡಿಸಿರುತ್ತಾನೆ.
ಶಿವು ಕೂಡ ಜನರ ಕಷ್ಟ ಸುಖಕ್ಕೆ ಸ್ಪಂದಿಸುತ್ತಾ ಹೋಗುತ್ತಾನೆ. ಯಾವುದೋ ಉದ್ದೇಶದೊಂದಿಗೆ ಮಾರ್ಕೆಟ್ ಮಂಡಿಗೆ ಬರುವ ಭುವನ (ಸುರೇಖಾ) ಅಲ್ಲಿಯ ಜನರ ಜೊತೆ ಬೆರೆತು ಶಿವು ನನ್ನ ಪ್ರೀತಿ ಮಾಡುತ್ತಾಳೆ. ಇದರ ನಡುವೆ ಕ್ರಿಸ್ ಗಿಲ್ಲಿಗೆ ಹೆಣ್ಣು ಮಕ್ಕಳ ಮೇಲೆ ಕಣ್ಣು, ಇದರ ನಡುವೆ ಆಗಾಗ ನಡೆಯುವ ಅಪಘಾತ , ಕೊಲೆಗಳಿಗೆ ಸಾತ್ ಇದ್ದರೂ ದುಷ್ಟ ವ್ಯಕ್ತಿಗಳ ಮಾರ್ಗದಂತೆ ಸಾಗುತ್ತಾನೆ. ಇದು ಪೊಲೀಸ್ ಇಲಾಖೆಗೂ ದೊಡ್ಡ ತಲೆ ನೋವಾಗಿ ದುಷ್ಟರನ್ನು ಸದೆಬಡಿಯಲು ಪೊಲೀಸ್ ಇನ್ಸ್ಪೆಕ್ಟರ್ (ತನಿಷಾ ಕುಪ್ಪಂಡ) ಮುಂದಾಗುತ್ತಾಳೆ.
ಮುಂದೆ ನಡೆಯುವ ಹಲವು ರೋಚಕ ಘಟನೆಗಳು ಬೇರೆ ರೂಪವನ್ನ ಪಡೆದುಕೊಳ್ಳುತ್ತಾ ಹೋಗುತ್ತದೆ. ಶಿವು ಯಾರು… ಭುವನ ಉದ್ದೇಶ ಏನು… ಕೊಲೆಗಳು ನಡೆಯಲು ಕಾರಣ… ಕಾಣದ ವ್ಯಕ್ತಿ ಯಾರು…. ಎಂಬ ಎಲ್ಲಾ ಮಾಹಿತಿಗಾಗಿ ಒಮ್ಮೆ ಶೇರ್ ಚಿತ್ರವನ್ನು ನೋಡಬೇಕು.
ಈ ಚಿತ್ರದ ನಿರ್ದೇಶಕ ಪ್ರಸಿದ್ಧ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಕುತೂಹಲಕಾರಿಯಾಗಿದೆ. ಕೆಲವು ಮಂಗಳಮುಖಿಯರನ್ನ ಮೂಲಕ ಕಾಣದ ದುಷ್ಟ ವ್ಯಕ್ತಿಗಳು ಮಾಡುತ್ತಿರುವ ಅಮೂಲ್ಯ ರಕ್ತ ಜಾಲದ ಕರಾಳ ದಂಧೆ, ಮನುಷ್ಯರ ಅಂಗಾಂಗ ಅಪಹರಣ, ದುಷ್ಟ ಡಾಕ್ಟರ್ ಗಳ ಸಾಥ್ , ವಟೆಪಾಡಿಗಾಗಿ ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಮಾಡುವವರ ಬದುಕು , ಅನಾಥರ ಜೀವನ , ಅಕ್ಕ ತಂಗಿಯರ ಬಾಂಧವ್ಯ , ಪ್ರೀತಿಯ ಸೆಳೆತ ಹೀಗೆ ಒಂದು ವಿಚಾರಗಳನ್ನ ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತ ಮಾಡಬಹುದಿತ್ತು , ಬಿಲ್ಡಪ್ ಜೊತೆ ಹೊಡಿ ಬಡಿ ಅಬ್ಬರವೇ ತುಂಬಿಕೊಂಡಿದೆ. ಸಂಗೀತ , ಛಾಯಾಗ್ರಹಣ , ಸಂಕಲನ ತಕ್ಕ ಮಟ್ಟಕ್ಕೆ ಇದ್ದು , ಸಾಹಸ ಸನ್ನಿವೇಶ ಅದ್ಭುತವಾಗಿ ಮೂಡಿ ಬಂದಿದೆ. ನಾಯಕನಾಗಿ ಕಿರಣ್ ರಾಜ್ ತಮ್ಮ ಪಾತ್ರಕ್ಕೆ ನ್ಯಾಯವನ್ನು ನೀಡಿದ್ದಾರೆ. ಬಿಲ್ಡಪ್ ಎಂಟ್ರಿಗಳ ಜೊತೆ ಸಾಹಸ ಸನ್ನಿವೇಶವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ.
ಮತ್ತೊಬ್ಬ ಪ್ರತಿಭೆ ಕ್ರಿಸ್ ಗಿಲ್ಲಿ ಖಳನಟನಾಗಿ ಗಮನ ಸೆಳೆಯುವಂತೆ ಆರ್ಭಟಿಸಿದ್ದಾರೆ. ದುನಿಯಾ ಚಿತ್ರದಲ್ಲಿ ಯೋಗಿಯ ಪಾತ್ರ ನೆನಪಿಸುವಂತಿದೆ. ಮುಂದೆ ಉತ್ತಮ ಭವಿಷ್ಯವಿದೆ. ಇನ್ನು ನಾಯಕಿಯಾಗಿ ಸುರೇಖಾ ಸಿಕ್ಕ ಅವಕಾಶವನ್ನು ನಿಭಾಯಿಸಲು ಶ್ರಮಪಟ್ಟಿದ್ದಾರೆ. ಇನ್ನು ಅಧ್ಯಕ್ಷರಾಗಿ ಎಲ್ಲರನ್ನ ಅಪ್ಪಿ ಎನ್ನುತ್ತಾ ಬಾಲರಾಜವಾಡಿ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಇನ್ಸ್ಪೆಕ್ಟರ್ ಪಾತ್ರದಲ್ಲಿ ತನಿಷಾ ಕುಪ್ಪಂಡ ಮಿಂಚಿದ್ದಾರೆ. ಯಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶೋಭ ರಾಜ್ , ವೀಣಾ ಸುಂದರ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದೆ. ಆಕ್ಷನ್ ಮಾಸ್ ಪ್ರಿಯರಿಗೆ ಇಷ್ಟವಾಗುವ ಈ ಚಿತ್ರ ಒಮ್ಮೆ ನೋಡುವಂತಿದೆ.