ವಸ್ತು ವ್ಯಾಮೋಹದ ನಡುವೆ ವಿಧಿಯ ಆಟ…”ಶಬರಿ” (ಚಿತ್ರವಿಮರ್ಶೆ- ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಶಬರಿ
ನಿರ್ದೇಶಕ : ಒರಟ ಶ್ರೀ
ನಿರ್ಮಾಪಕರು : ರಮೇಶ್, ಸುಧಾಕರ್ ರೆಡ್ಡಿ , ವಿಷ್ಣುಕಾಂತ್
ಸಂಗೀತ : ಹೇಮಂತ್ ಕುಮಾರ್
ಛಾಯಾಗ್ರಹಣ :ನಾಗರಾಜ್
ತಾರಾಗಣ : ಸಮರ್ಥ್, ಕೃತಿಕಾ ಗೌಡ , ಬಾಲನಟಿ ಧನ್ವಿ , ನೀನಾಸಂ ಅಶ್ವತ್, ಎಂ.ಕೆ ಮಠ, ಸೀತಾ ಹರ್ಷವರ್ಧನ್, ಯೋಗೇಶ್ ವೀರ್, ಮಂಡ್ಯ ಸಿದ್ದು ಹಾಗೂ ಮುಂತಾದವರು…
ಜೀವನದಲ್ಲಿ ಬಯಸಿದ್ದೆಲ್ಲ ಸಿಕ್ಕರೆ , ಬದುಕು ಬಲು ಸೊಗಸು… ಆದರೆ ವಿಧಿಯ ಆಟದಂತೆ ಕಾಲಕಾಲಕ್ಕೆ ಏನೇನು ಸಿಗಬೇಕು , ಏನೆಲ್ಲ ನಡೆಯಬೇಕು ಅದು ಮನುಷ್ಯರ ಬಾಳಲ್ಲಿ ನಡೆಯುತ್ತಲೇ ಇರುತ್ತೆ. ಅಂತದೇ ಒಂದಷ್ಟು ವಿಚಾರಗಳ ಜೊತೆಗೆ ಕೌಟುಂಬಿಕ ಬದುಕು , ಬಾಂಧವ್ಯ , ಅಪರಿಚಿತರ ಒಡನಾಟ , ಗೆಳೆತನ , ಪ್ರೀತಿ , ದ್ವೇಷ , ಸಹಕಾರ ನಡುವೆ ಜೀಪ್ ವ್ಯಾಮೋಹದ ಸುಳಿಯಲ್ಲಿ ಎದುರಾಗುವ ಸಂಕಷ್ಟಗಳ ಸರಮಾಲೆ ತೋರುವ ದಿಕ್ಕೆ ಮನಸನ್ನ ಸೆಳೆಯುವಂತಹ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಶಬರಿ”.

ಊರಿನ ಶ್ರೀಮಂತ ವ್ಯಕ್ತಿಗೆ ಬೇಟೆ ಮಾದಪ್ಪ (ನೀನಾಸಂ ಅಶ್ವತ್) ಮಾಡಿದ ಸಹಾಯದ ಸಲುವಾಗಿ ಉಡುಗೊರೆ ರೂಪದಲ್ಲಿ ಜೀಪ್ ಪಡೆಯುತ್ತಾನೆ. ಕಾರಣ ತನ್ನ ಮಗ ರಾಮ (ಸಮರ್ಥ) ನಿಗೆ ಜೀಪ್ ಎಂದರೆ ಪಂಚಪ್ರಾಣ. ಮಗನ ಆಸೆ ಕ್ಷಣಿಕವಾಗಿ ತನ್ನ ಕಾಯಿಲೆಯ ಕಾರಣ ಜೀಪ್ ಜಮೀನ್ದಾರ್ ಪಾಲಾಗುವ ಹಂತಕ್ಕೆ ಬರುತ್ತದೆ. ತಂದೆ ತಾಯಿ ಇಲ್ಲದೆ ಬೆಳೆಯುವ ರಾಮ ಜೀಪ್ ವಿಚಾರವಾಗಿ ಹಲವು ಬಾರಿ ಜಮೀನ್ದಾರ್ ಜೊತೆ ಜಗಳ ಮಾಡುತ್ತಾನೆ. ಅವನ ಒಬ್ಬಳೇ ಮಗಳು ಸೀತಾ (ಕೃತಿಕಾ ಗೌಡ) ಕೂಡ ರಾಮನನ್ನ ದ್ವೇಷಿಸುವಂತೆ ನಟಿಸಿ ಅವನನ್ನ ಪ್ರೀತಿಸುತ್ತಾಳೆ. ಇನ್ನು ಗೆಳೆಯರ ಮಾತನ್ನು ಕೇಳುವ ರಾಮ ಜೀಪ್ ಸಿಗುವ ಆಸೆಯಿಂದ ಸೀತಾಳನ್ನ ಮದುವೆಯಾಗುತ್ತಾನೆ. ಆದರೆ ಮದುವೆಗಾಗಿ ಜೀಪ್ ಅಡ ಇಟ್ಟ ವಿಚಾರ ತಿಳಿಯುವ ರಾಮು ಸೀತಾಳನ್ನು ದ್ವೇಷಿಸುತ್ತಾನೆ.
ಇದರ ಹಿಂದೆ ಒಂದು ನಿಗೂಢ ಪ್ರೀತಿಯ ಸತ್ಯ ಅಡಗಿರುತ್ತೆ. ಮುಂದೆ ಎದುರಾಗುವ ದುರಂತದಿಂದ ಊರು ಬಿಡುವ ರಾಮನ ಬದುಕಿಗೆ ಕಿಡ್ನಾಪ್ ಆಗಿರುವ ಶಬರಿ (ಬಾಲ ನಟಿ ಧನ್ವಿ) ರಾಮನ ಜೀಪಿನೊಳಗೆ ಸೇರುತ್ತಾಳೆ. ಹಿಂದಿ ಭಾಷೆ ಬರೆದ ರಾಮ ಕನ್ನಡ ಮಾತನಾಡಲು ಬರದ ಶಬರಿಯ ಗೊಂದಲದ ಮಾತಿನ ನಡುವೆ ಒಂದಷ್ಟು ಘಟನೆಗಳು ಎದುರಾಗುತ್ತದೆ. ಶಬರಿಯನ್ನ ಬಿಟ್ಟು ಹೋಗಲು ರಾಮ ನಿರ್ಧರಿಸಿದರು ಸಮಯ , ಸಂದರ್ಭ ಬೇರೆ ದಾರಿಯನ್ನ ತೋರಿಸುತ್ತಾ ಕ್ಲೈಮಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ.
ಜೀಪ್ ನಿಂದ ಎದುರಾಗುವ ಸಮಸ್ಯೆ ಏನು…
ರಾಮ ಸೀತೆ ಬದುಕು ಏನಾಗುತ್ತೆ…
ಶಬರಿ ಯಾರು…
ಕ್ಲೈಮಾಕ್ಸ್ ಹೇಳುವ ಉತ್ತರ ಏನು…ಸಸ್ಪೆನ್ಸ್ , ಥ್ರಿಲ್ಲರ್, ಮಿಸ್ಟ್ರಿ , ಕೌಟುಂಬಿಕ ಪ್ರೀತಿ, ಭಾವನಾತ್ಮಕ ಸೆಳೆತ ಹೊಂದಿರುವ ಈ ಚಿತ್ರ ಒಮ್ಮೆ ನೋಡುವಂತಿದೆ.
ನಿರ್ದೇಶಕ ಒರಟ ಶ್ರೀ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಮನ ಮುಟ್ಟುವಂತಿದೆ. ಸಂಬಂಧಗಳ ಮೌಲ್ಯ , ತಂದೆ ತಾಯಿಯ ಪ್ರೀತಿ , ಗೆಳೆಯರ ಒಡನಾಟ , ಪ್ರೀತಿಯ ಸೆಳೆತ , ಅಪರಿಚಿತ ಮಗುವಿನ ಮಮಕಾರ , ಇಷ್ಟವೇ ಬದುಕಿಗೆ ಕಷ್ಟವಾದಂತ ಪರಿಸ್ಥಿತಿ ಎದುರಾದಾಗ ಏನಾಗುತ್ತದೆ ಎಂಬುದನ್ನು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಆದರೆ ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಬಹುದಿತ್ತು. ಆದರೆ ನಿರ್ದೇಶಕರ ಪ್ರಯತ್ನ ಗಮನ ಸೆಳೆಯುತ್ತದೆ.
ಇನ್ನು ಛಾಯಾಗ್ರಹಕರ ಕೈಚಳಕ , ಸಂಗೀತ ಹಾಗೂ ಹಿನ್ನೆಲೆ ಸಂಗೀತ ಸೊಗಸಾಗಿದ್ದು , ಸಂಕಲನದ ಕೆಲಸ ಸೇರಿದಂತೆ ತಾಂತ್ರಿಕವಾಗಿ ಚಿತ್ರ ಉತ್ತಮವಾಗಿದೆ. ಇನ್ನು ನಾಯಕನಾಗಿ ಅಭಿನಯಿಸಿರುವ ಸಮರ್ಥ್ ಸಿಕ್ಕಾಪತ್ರಕ್ಕೆ ನ್ಯಾಯ ಒದಿಗಿಸಲು ಬಹಳಷ್ಟು ಶ್ರಮ ಪಟ್ಟಿದ್ದಾರೆ. ನಟಿ ಕೃತಿಕಾ ಗೌಡ ಪಾತ್ರ ಚಿಕ್ಕದಾದರೂ ಜೀವ ತುಂಬಿ ಗಮನ ಸೆಳೆಯುವಂತೆ ನಟಿಸಿದ್ದಾರೆ. ಇನ್ನು ಚಿತ್ರದ ಕೇಂದ್ರ ಬಿಂದುವಾಗಿ ಬಾಲ ನಟಿ ಧನ್ವಿ ಕೂಡ ಬಹಳ ಮುದ್ದು ಮುದ್ದಾಗಿ ಸೊಗಸಾಗಿ ಅಭಿನಯಿಸಿದ್ದಾಳೆ.
ಮುಂದೆ ಉತ್ತಮ ಭವಿಷ್ಯವಿರುವ ಪ್ರತಿಭೆಯಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳು ಕಾಣುತ್ತದೆ. ಈ ಚಿತ್ರದಲ್ಲಿ ಜೀಪ್ ಕೂಡ ಒಂದು ಪ್ರಮುಖ ಪಾತ್ರವಾಗಿ ಚಿತ್ರದುದ್ದಕ್ಕೂ ಗಮನ ಸೆಳೆಯುತ್ತದೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದೆ. ಒಟ್ಟಾರೆ ಯಾವುದೇ ಮುಜುಗರವಿಲ್ಲದೆ ಕುಟುಂಬ ಸಮೇತ ಕುಳಿತು ನೋಡುವಂತ ಚಿತ್ರ ಇದಾಗಿದೆ.