ಐದು ಭಾಷೆಗಳಲ್ಲಿ  ಮೂಡಿಬರಲಿರುವ ‘ಆದಿ ರುದ್ರ’ ಫಸ್ಟ್ ಲುಕ್ ಅನಾವರಣ.

Spread the love

ದಸರಾ ಸಂದರ್ಭದಲ್ಲಿ ದೈವಿಕ ನಿಗೂಢ ಕಥಾಹಂದರ ಹೊಂದಿರುವ ಈ ಪ್ಯಾನ್ ಇಂಡಿಯಾ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಅನಾವರಣ. ಜನವರಿಯಲ್ಲಿ ಚಿತ್ರೀಕರಣ. ತ್ರಿಶೂಲ್ ಎಂಟರ್‌ಟೈನ್‌ಮೆಂಟ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಆದಿ ರುದ್ರ’ (AADI RUDRRA) ಚಿತ್ರವು ದೈವಿಕ ನಿಗೂಢತೆ ಹಾಗೂ ರೋಚಕ ಸನ್ನಿವೇಶಗಳನ್ನು ಒಳಗೊಂಡ ಪ್ಯಾನ್ ಇಂಡಿಯಾ ಚಿತ್ರವಾಗಿ ಮೂಡಿಬರಲಿದೆ. ಆದಿ ಸಾಯಿಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರ ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಮೂಡಿಬರುತ್ತಿದೆ.

ಪ್ರಶಾಂತ್ ಜಿ. ರುದ್ರಪ್ಪ ನಿರ್ಮಿಸುತ್ತಿರುವ ಈ ಚಿತ್ರವು ತ್ರಿಶೂಲ್ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯ ಮೂರನೇ ನಿರ್ಮಾಣವಾಗಿದೆ. ಈ ಹಿಂದೆ ‘ದಂಡುಪಾಳ್ಯ’ ಮತ್ತು ‘ಕೃಷ್ಣ ಪ್ರಣಯ ಸಖಿ’ ಎಂಬ ಎರಡು ಸೂಪರ್ ಹಿಟ್ ಚಿತ್ರಗಳನ್ನು ಪ್ರಶಾಂತ್ ಜಿ ರುದ್ರಪ್ಪ ಅವರು ನಿರ್ಮಾಣ ಮಾಡಿದ್ದಾರೆ. ನವರಸನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

1960ರಿಂದ 1990ರವರೆಗಿನ ಕಾಲಘಟ್ಟವನ್ನು ಹಿನ್ನೆಲೆಯಾಗಿಟ್ಟುಕೊಂಡು ಚಿತ್ರವನ್ನು ರೂಪಿಸಲಾಗುತ್ತಿದೆ. ಆ ಕಾಲದ ಜೀವನಶೈಲಿ, ವಾತಾವರಣ, ಪಾತ್ರಗಳು ಹಾಗೂ ದೃಶ್ಯ ವೈಭವ ಕಥೆಗೆ ವಿಶೇಷ ಮೆರುಗು ನೀಡಲಿವೆ. ದೈವತ್ವ, ನಂಬಿಕೆ, ಆಧ್ಯಾತ್ಮಿಕತೆ ಮತ್ತು ನಿಗೂಢ ರಹಸ್ಯಗಳ ಸುತ್ತ ಸಾಗುವ ಕಥೆಯು ಪ್ರೇಕ್ಷಕರಿಗೆ ವಿಭಿನ್ನ ಸಿನಿಮೀಯ ಅನುಭವ ನೀಡುವ ನಿರೀಕ್ಷೆಯಿದೆ.

‘ಕಾಂತಾರ’, ‘ವಿರೂಪಾಕ್ಷ’, ‘ಮಂಗಳವಾರಂ’ ಹಾಗೂ ತಮಿಳಿನ ‘ಮಹಾರಾಜ’ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಚಿತ್ರದ ಆಧ್ಯಾತ್ಮಿಕ ವಾತಾವರಣಕ್ಕೆ ಪೂರಕವಾದ ಸಂಗೀತ ಹಾಗೂ ಹಿನ್ನೆಲೆ ಸಂಗೀತವು ಪ್ರಮುಖ ಆಕರ್ಷಣೆಗಳಾಗಲಿವೆ.
ಆದಿ ಸಾಯಿಕುಮಾರ್ ಅವರ ಸಿನಿ ಪಯಣದಲ್ಲಿ ‘ಆದಿ ರುದ್ರ’ ವಿಭಿನ್ನ ಪ್ರಯತ್ನವಾಗಲಿದೆ. ಹೊಸ ಕಥಾಹಂದರ, ವಿಶಿಷ್ಟ ನಿರೂಪಣಾ ಶೈಲಿ, ಗಾಢ ಭಾವನೆಗಳು ಹಾಗೂ ರೋಚಕ ಸನ್ನಿವೇಶಗಳ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡ ಯೋಜನೆ ರೂಪಿಸಿದೆ.

ಚಿತ್ರದ ಚಿತ್ರೀಕರಣವನ್ನು ಮುಂಬರುವ ಜನವರಿಯಲ್ಲಿ ಆರಂಭಿಸಲು ನಿರ್ಮಾಪಕರು ಸಿದ್ಧತೆ ನಡೆಸಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿಯನ್ನು ಎ.ಜೆ. ಶೆಟ್ಟಿ ನಿರ್ವಹಿಸುತ್ತಿದ್ದಾರೆ. ಇತರ ಕಲಾವಿದರು, ತಾಂತ್ರಿಕ ತಂಡ ಹಾಗೂ ಚಿತ್ರೀಕರಣದ ವೇಳಾಪಟ್ಟಿಗೆ ಸಂಬಂಧಿಸಿದ ವಿವರಗಳನ್ನು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು.

ಚಿತ್ರದ ಕಥಾಹಂದರ ಮತ್ತು ಪ್ರಮುಖ ವಿವರಗಳನ್ನು ಸದ್ಯಕ್ಕೆ ಗೌಪ್ಯವಾಗಿರಿಸಿರುವ ಚಿತ್ರತಂಡ, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ಉದ್ದೇಶಿಸಿದೆ. ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಗಮನ ಸೆಳೆಯುವ ನಿರೀಕ್ಷೆಯನ್ನು ಚಿತ್ರತಂಡ ಹೊಂದಿದೆ.

Visited 1 times, 1 visit(s) today
error: Content is protected !!