Cini NewsSandalwood

ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬದಂದು ಚಿತ್ರದ ಡಬಲ್ ಧಮಾಕ

ಕನ್ನಡದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅವರು ನಾಯಕಿಯಾಗಿ ನಟಿಸಿರುವ “ಭೈರಾದೇವಿ” ಚಿತ್ರದ ಟೀಸರ್ ಹಾಗೂ “ಅಜಾಗ್ರತ” ಚಿತ್ರದ ಪೋಸ್ಟರ್ ಬಿಡುಗಡೆಯಾಯಿತು. ರಾಧಿಕಾ ಕುಮಾರಸ್ವಾಮಿ ಸೇರಿದಂತೆ ಈ ಎರಡು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇಂದು ನನ್ನ ಹುಟ್ಟುಹಬ್ಬ. ನೀವೆಲ್ಲಾ ಬಂದಿರುವುದು ಖುಷಿಯಾಗಿದೆ. ತಮಗೆ ದೀಪಾವಳಿ ಹಬ್ಬದ ಶುಭಾಶಯ ಎಂದು ಮಾತನಾಡಿದ ರಾಧಿಕಾ ಕುಮಾರಸ್ವಾಮಿ, ಈ ಬಾರಿ ನನ್ನ ಹುಟ್ಟುಹಬ್ಬ ಮತ್ತಷ್ಟು ವಿಶೇಷ. ಏಕೆಂದರೆ ನನ್ನ ಅಭಿನಯದ “ಭೈರಾದೇವಿ” ಚಿತ್ರದ ಟೀಸರ್ ಬಿಡುಗಡೆ ಹಾಗೂ “ಅಜಾಗ್ರತ” ಪೋಸ್ಟರ್ ಬಿಡುಗಡೆ ಇಂದು ಆಗಿದೆ.

ಈ ಎರಡು ಚಿತ್ರಗಳು ಶಮಿಕಾ ಎಂಟರ್ ಪ್ರೈಸಸ್ ಮೂಲಕ ನಿರ್ಮಾಣವಾಗುತ್ತಿದೆ. “ಭೈರಾದೇವಿ” ನನ್ನ ಇಪ್ಪತ್ತು ವರ್ಷಗಳ ಸಿನಿಜರ್ನಿಯಲ್ಲೇ ವಿಭಿನ್ನವಾದ ಚಿತ್ರ. ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ‌. ನನಗೆ ಸ್ಮಶಾನ ಎಂದರೆ ಭಯ. ಈ ಚಿತ್ರದ ಚಿತ್ರೀಕರಣ ಹೆಚ್ಚಿನ ಭಾಗ ಸ್ಮಶಾನದಲ್ಲೇ ನಡೆದಿದೆ. ಈ ಚಿತ್ರಕ್ಕೆ ಪಟ್ಟಿರುವಷ್ಟು ಶ್ರಮ ನಾನು ಯಾವ ಚಿತ್ರಕ್ಕೂ ಪಟ್ಟಿಲ್ಲ. ಇಂದು ಟೀಸರ್ ನೋಡಿದಾಗ ತುಂಬಾ ಖುಷಿಯಾಯಿತು.

ನಿರ್ದೇಶಕ ಶ್ರೀಜೈ ಚಿತ್ರವನ್ನು ತುಂಬಾ ಚೆನ್ನಾಗಿ ನಿರ್ದೇಶಿಸಿದ್ದಾರೆ. “ಭೈರಾದೇವಿ” ತೆರೆಗೆ ಬರಲು ಸಿದ್ದವಾಗಿದ್ದು, ಸದ್ಯದಲ್ಲೇ ದಿನಾಂಕ ಘೋಷಣೆ ಮಾಡುತ್ತೇವೆ. ಇನ್ನು “ಅಜಾಗ್ರತ” ಚಿತ್ರ ಕೂಡ ಶಶಿಧರ್ ಅವರ ನಿರ್ದೇಶನದಲ್ಲಿ ಚೆನ್ನಾಗಿ ಮೂಡಿ ಬರುತ್ತಿದೆ. ಸಿನಿಮಾಗಳ ನಿರ್ವಹಣೆ ಜೊತೆಗೆ ನನ್ನ ಹುಟ್ಟುಹಬ್ಬವನ್ನು ಇಷ್ಟು ಅದ್ದೂರಿಯಾಗಿ ಆಯೋಜಿಸಿರುವ ನನ್ನ ಅಣ್ಣ ರವಿರಾಜ್ ಅವರಿಗೆ ಹಾಗೂ ಎರಡು ಚಿತ್ರತಂಡಕ್ಕೆ ಧನ್ಯವಾದ ಎಂದರು.

ಇಂದು “ಭೈರಾದೇವಿ” ಚಿತ್ರದ ಟೀಸರ್ ಹಾಗೂ “ಅಜಾಗ್ರತ” ಚಿತ್ರದ ಪೋಸ್ಟರ್ ಬಿಡುಗಡೆ ಜೊತೆಗೆ ನನ್ನ ತಂಗಿ ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆಯಾಗುತ್ತಿರುವುದು ಸಂತಸವಾಗಿದೆ. ಈ ಎರಡು ಚಿತ್ರಗಳಿಗೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ಹಾಗೂ ನಿರ್ಮಾಪಕ ರವಿರಾಜ್.

“ಭೈರಾದೇವಿ” ಚಿತ್ರ ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲಿ ಮೂಡಿಬಂದಿದೆ. ಮೂರು ಭಾಷೆಗಳಲ್ಲೂ ಪ್ರತ್ಯೇಕವಾಗಿ ಚಿತ್ರೀಕರಣ ಮಾಡಲಾಗಿದೆ. ಸಾಮಾನ್ಯವಾಗಿ ಹೆಣ್ಣು ಅಘೋರಿಗಳು ಕಾಣಿಸುವುದು ಕಷ್ಟ. ನಾನು ಆ ಬಗ್ಗೆ ಹೆಚ್ಚು ತಿಳಿದುಕೊಂಡು ಈ ಚಿತ್ರ ಮಾಡಿದ್ದೇನೆ. ರಾಧಿಕಾ ಕುಮಾರಸ್ವಾಮಿ ಅವರು ಹೆಣ್ಣು ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಜಕ್ಕೂ ಅವರು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದು “ಭೈರಾದೇವಿ” ಚಿತ್ರದ ನಿರ್ದೇಶಕ ಶ್ರೀಜೈ ತಿಳಿಸಿದರು.

“ಅಜಾಗ್ರತ”, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಪ್ರತ್ಯೇಕವಾಗಿ ಮೂಡಿಬರುತ್ತಿರುವ ಚಿತ್ರ. ಇದು ನನ್ನ ನಿರ್ದೇಶನದ ಎರಡನೇ ಚಿತ್ರ. ಪುಣೆಯಲ್ಲಿ ಎಂ.ಎಸ್.ಸಿ ಇನ್ ಫಿಲಂ ಮೇಕಿಂಗ್ ಮಾಡಿದ್ದೇನೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ನನ್ನ ಮೊದಲ ನಿರ್ದೇಶನದ “ಘಾರ್ಗ” ಚಿತ್ರದ ಚಿತ್ರೀಕರಣ ವೇಳೆ ರವಿರಾಜ್ ಹಾಗೂ ರಾಧಿಕಾ ಕುಮಾರಸ್ವಾಮಿ ಅವರ ಪರಿಚಯವಾಯಿತು.

ಆನಂತರ ನನಗೆ ಸಪ್ತಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ನೀಡಿದರು. ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಜಾನರ್ ನ ಈ ಚಿತ್ರದಲ್ಲಿ ಚಿತ್ರ ನಟಿಯಾಗಿಯೇ ರಾಧಿಕಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎಂದು “ಅಜಾಗ್ರತ” ಚಿತ್ರದ ನಿರ್ದೇಶಕ ಶಶಿಧರ್ ಹೇಳಿದರು.ರಾಧಿಕಾ ಕುಮಾರಸ್ವಾಮಿ ಅವರ ನಿವಾಸದ ಬಳಿ ಆಯೋಜಿಸಲಾಗಿದ್ದ ಹುಟ್ಟುಹಬ್ಬದ ಸಮಾರಂಭಕ್ಕೆ ಚಿತರಂಗದ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಆಗಮಿಸಿ ಶುಭ ಕೋರಿದರು.

error: Content is protected !!