Cini NewsMovie Review

‘ಪುರುಷೋತ್ತಮನ‌ ಪ್ರಸಂಗ’ದಲ್ಲಿ ದುಬೈ ಕನಸಿನ ಬದುಕು ಬವಣೆ(ಚಿತ್ರ ವಿಮರ್ಶೆ-ರೇಟಿಂಗ್ :3.5/5)

ರೇಟಿಂಗ್ :3.5/5
ಚಿತ್ರ : ಪುರುಷೋತ್ತಮನ‌ ಪ್ರಸಂಗ
ನಿರ್ದೇಶಕ : ದೇವದಾಸ್ ಕಾಪಿಕಾಡ್
ನಿರ್ಮಾಪಕರು : ವಿ. ರವಿ ಕುಮಾರ್ , ಶಂಶುದ್ದೀನ್
ಸಂಗೀತ : ನಕುಲ್ ಅಭ್ಯಂಕರ್
ಛಾಯಾಗ್ರಾಹಕ :ವಿಷ್ಣು ಪ್ರಸಾದ್
ತಾರಾಗಣ : ಅಜಯ್, ರಿಷಿಕಾ ನಾಯ್ಕ್ , ದೇವದಾಸ್ ಕಾಪಿಕಾಡ್, ವಿಜಯ್ ಶೋಬರಾಜ್ , ನವೀನ್. ಡಿ. ಪಡಿಲ್, ಅರವಿಂದ್ ಬೋಳಾರ್, ಸಾಯಿ ಕೃಷ್ಣ, ಭೋಜರಾಜ್ ಹಾಗೂ ಮುಂತಾದವರು…

ದೂರದ ಬೆಟ್ಟ ನುಣ್ಣಗೆ… ಹತ್ತಿರ ಹೋಗಿ ನೋಡಿದಾಗಲೇ ಅದರಲ್ಲಿರುವ ಕಲ್ಲು , ಮುಳ್ಳು ಕಾಣುವುದು ಎನ್ನುವಂತೆ ದುಬೈಗೆ ಹೋಗಿ ದುಡಿದು ತಂದೆ-ತಾಯಿ ಸಾಕಬೇಕು, ಅಕ್ಕನ ಮದುವೆ ಮಾಡಬೇಕು ,ಪ್ರೀತಿಯ ಗೆಳತಿಯ ಜೊತೆ ಸುಖವಾದ ಜೀವನ ನಡೆಸಬೇಕೆಂಬ ಕನಸನ್ನು ಹೊತ್ತಿರುವ ಯುವಕನ ಸುತ್ತ ಎದುರಾಗುವ ಅಡ್ಡಿ ಆತಂಕಗಳು , ಕಾಲೆಳೆಯುವ ವ್ಯಕ್ತಿಗಳು, ಕಷ್ಟ , ಸುಖದ ಕಥಾಹಂದರದ ಮೂಲಕ ಈ ವಾರ ಬೆಳ್ಳಿ ಪರದೆ ಮೇಲೆ ಬಂದಿರುವಂತಹ ಚಿತ್ರ “ಪುರುಷೋತ್ತಮನ ಪ್ರಸಂಗ”.

ತಂದೆ ,ತಾಯಿ , ಅಕ್ಕನ ಜೊತೆ ಪ್ರೀತಿ ವಾತ್ಸಲ್ಯದಲ್ಲಿರುವ ಪುರುಷೋತ್ತಮ (ಅಜಯ್ ಪೃಥ್ವಿ). ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು , ಅವನ ಜೀವನದ ಗುರಿ ದುಬೈಗೆ ಹೋಗುವುದು. ಈ ವಿಚಾರವಾಗಿ ಮನೆಯವರು , ಅಕ್ಕ ಪಕ್ಕದವರು , ದುಬೆಗೆ ಹೋಗಿಬಂದಂತಹ (ಅರವಿಂದ್ ಬೋಳಾರ್) ಸೇರಿದಂತೆ ಎಲ್ಲರೂ ಕಾಲೆಳೆಯುತ್ತಲೇ ಸಾಗುತ್ತಾರೆ.

ಇದರ ನಡುವೆ ಪುರುಷೋತ್ತಮನ ಬಾಲ್ಯದ ಗೆಳತಿ , ಪ್ರೇಯಸಿ ಆತ್ಮಿಕಾ (ರಿಷಿಕಾ ನಾಯ್ಕ್ ) ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಇಬ್ಬರು ಮದುವೆ ಆಗುವ ಆಲೋಚನೆ ಇದ್ದರು , ದುಬೈಗೆ ಹೋಗಿ ಹಣ ಸಂಪಾದನೆ ಮಾಡಿದ ನಂತರ ಮದುವೆ ಆಗುವ ಆಲೋಚನೆ ಪುರುಷೋತ್ತಮನುದು, ಇದರ ನಡುವೆಯೇ ಪುರುಷೋತ್ತಮನ ಗೆಳೆಯ ವರುಣ್ (ವಿಜಯ್ ಶೋಬರಾಜ್) ತನ್ನ ಚಿಕ್ಕಪ್ಪ ದುಬೈನಲ್ಲಿ ಇದ್ದಾರೆ ಕೆಲಸ ಸಿಗುತ್ತೆ ಎಂದು ಹೇಳಿ ಪುರುಷೋತ್ತಮನನ್ನು ದುಬೈಗೆ ಕಳಿಸಲು ಏಜೆಂಟ್ (ನವೀನ್. ಡಿ. ಪಡಿಲ್) ಮೂಲಕ ಪಾಸ್ಪೋರ್ಟ್, ವಿಸಾಗೆ ಸಹಕಾರಿಯಾಗಿ ನಿಲ್ಲುತ್ತಾನೆ.

ಏಜೆಂಟ್ ಗೆ ಏಳು ಲಕ್ಷ ಹಣ ಕೊಡಲು ಪರದಾಡುವಾಗ ಮಗಳ ಮದುವೆಗೆ ಇಟ್ಟಿದಂತಹ ದುಡ್ಡನ್ನು ತಂದೆ ಮಗನಿಗಾಗಿ ನೀಡುತ್ತಾನೆ. ತನ್ನ ಆಸೆಯಂತೆ ದುಡಿಮೆಗಾಗಿ ದುಬೈಗೆ ಹಾರುವ ಪುರುಷೋತ್ತಮನ ಬದುಕಿನಲ್ಲಿ ಎದುರಾಗುವ ರೋಚಕ ತಿರುವು ಹಲವು ಪಾಠವನ್ನು ಹೇಳಿಕೊಡುತ್ತದೆ.
ಪುರುಷಿ ದುಬೈ ಬದುಕು ಏನು..
ದುಡ್ಡು ಸಂಪಾದನೆ ಆಗುತ್ತಾ…
ಅಕ್ಕನ ಮದುವೆ ಮಾಡ್ತಾನಾ…
ಪ್ರೇಯಸಿ ಸಿಕ್ತಾಳಾ…
ಕ್ಲೈಮಾಕ್ಸ್ ಸಂದೇಶ ಏನು…
ಈ ವಿಚಾರ ತಿಳಿಯೋದಕ್ಕೆ ನೀವು ಈ ಸಿನಿಮಾ ನೋಡಬೇಕು.

ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಅಜಯ್ ಪೃಥ್ವಿ ಮಂಗಳೂರು ಭಾಷೆಯ ಸೊಗಡಿನಲ್ಲೇ ಪುರುಷೋತ್ತಮನ ಪಾತ್ರಕ್ಕೆ ನ್ಯಾಯ ಓದಿಗಿಸುವುದಕ್ಕೆ ಬಹಳಷ್ಟು ಶ್ರಮ ಪಟ್ಟಿದ್ದಾರೆ. ತಂದೆ ತಾಯಿಯ ಮುದ್ದಿನ ಮಗನಾಗಿ , ಬಾಂಧವ್ಯದ ನಂಟು , ಸ್ನೇಹದ ಸೇತುವೆ, ಗೆಳತಿಯ ಪ್ರೀತಿ ಒಡನಾಟಕ್ಕೆ ಜೀವ ತುಂಬಿ ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸಿದ್ದಾರೆ.

ಅದೇ ರೀತಿ ಮುದ್ದಾಗಿ ಕಾಣುವ ನಟಿ ರಿಷಿಕಾ ನಾಯ್ಕ್ ತಮಗೆ ಸಿಕ್ಕ ಅವಕಾಶ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅದೇ ರೀತಿ ತಂದೆ ,ತಾಯಿ, ಅಕ್ಕನ ಪಾತ್ರಧಾರಿ ಹಾಗೂ ಮಾತು ಬಾರದ ಪಾತ್ರಧಾರಿ ಪ್ರತಿಭೆ ಸೇರಿದಂತೆ ತಮ್ಮ ಮಾತಿನ ಶೈಲಿಯಲ್ಲಿ ನಗೆಯ ಚಟಾಕಿಯನ್ನು ಹಾರಿಸಿದಂತ ನವೀನ್. ಪಡಿಲ್ , ಅರವಿಂದ್ ಬೋಳಾರ್ , ದೇವದಾಸ್ ಕಾಫಿ ಕಾಡ್ , ಸಾಯಿ ಕೃಷ್ಣ ಹಾಗೂ ಗೆಳೆಯನ ಪಾತ್ರ ಮಾಡಿರುವ ವಿಜಯ್ ಶೋಬರಾಜ್ ಸೇರಿದಂತೆ ಎಲ್ಲರೂ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.

ಈ ಚಿತ್ರವನ್ನು ನಿರ್ದೇಶನ ಮಾಡಿರುವ ದೇವದಾಸ್ ಕಾಪಿಕಾಡ್ ದುಬೈ ಆಸೆ ಕಾಣುವ ಹುಡುಗನ ಬದುಕಲ್ಲಿ ಎದುರಾಗುವ ಸಂಕಷ್ಟಗಳು, ಸಂಬಂಧದ ನೋವು , ನಲಿವನ್ನ ಹಾಸ್ಯ ಮಿಶ್ರಣದೊಂದಿಗೆ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಮಾತಿನ ಭರಾಟೆಯಲ್ಲಿ ಸಾಗಿದ್ದು, ಇದ್ದಲ್ಲೇ ಗಿರಿಕಿ ಹೊಡೆದಂತಿದೆ. ಚಿತ್ರಕಥೆ ಇನ್ನಷ್ಟು ವೇಗ ಮಾಡಬಹುದಿತ್ತು. ವಿದೇಶಿ ಕನಸು ಕಂಡವರಿಗೆ ಸಂದೇಶ ಹೇಳಿರುವ ವಿಚಾರ ಗಮನ ಸೆಳೆಯುತ್ತದೆ. ಇನ್ನು ಸಂಗೀತಕ್ಕಿಂತ ಹಿನ್ನೆಲೆ ಸಂಗೀತ ಉತ್ತಮವಾಗಿದೆ. ಅದೇ ರೀತಿ ಛಾಯಾಗ್ರಹಕರ ಕೆಲಸ ಗಮನ ಸೆಳೆಯುತ್ತದೆ. ಒಟ್ಟಾರೆ ಇದೊಂದು ಹಾಸ್ಯ ಮಿಶ್ರಿತ ಕೌಟುಂಬಿಕ ಚಿತ್ರವಾಗಿದ್ದು , ಎಲ್ಲರೂ ಒಮ್ಮೆ ನೋಡಬಹುದು.

error: Content is protected !!