Cini NewsSandalwood

ಲಾಕ್ ಡೌನ್ ಸಂಕಷ್ಟದ ಕಥೆಯ“ಫೋಟೋ” ಚಿತ್ರವನ್ನು ಪ್ರೆಸೆಂಟ್ ಮಾಡ್ತಿದ್ದಾರೆ ಪ್ರಕಾಶ್ ರಾಜ್

ಕನ್ನಡ ಸಿನಿಮಾರಂಗವೀಗ ಬೇರೆಯದ್ದೇ ದಿಕ್ಕಿಗೆ ಹೊರಳಿದೆ. ಸೋಲು ಗೆಲುವಿನಾಚೆ ಲೆಕ್ಕಚಾರ ಹಾಕಿದರೂ ಹೊಸ ಹುರುಪು, ಹೊಸ ಹರಿವು, ಹೊಸ ಆಲೋಚನೆಗಳಿಂದ ಬೇರೆಯದ್ದೇ ಆಯಾಮ ಪಡೆದಿದೆ. ಅದರ ಮುಂದುವರೆದ ಭಾಗವಾಗಿ ಗೋಚರಿಸುತ್ತಿರುವ ಚಿತ್ರ ಫೋಟೋ..ಕಳೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿದಲ್ಲಿ ಪ್ರೇಕ್ಷಕರಿಂದ ಲೈಕ್ ಪಡೆದ ಫೋಟೋ ಸಿನಿಮಾ ಸದ್ಯದಲ್ಲೇ ತೆರೆಗೆ ಬರ್ತಿದೆ. ಕೋವಿಡ್ ಸಮಯದ ಕಥೆಗೀಗ ಜೊತೆಯಾಗಿದ್ದಾರೆ ಬಹುಭಾಷಾ ಕಲಾವಿದ ಪ್ರಕಾಶ್ ರಾಜ್ .

ಫೋಟೋ ಸಿನಿಮಾವನ್ನು ನಿರ್ದಿಗಂತದ ಮೂಲಕ ಪ್ರಕಾಶ್ ರಾಜ್ ಪ್ರೆಸೆಂಟ್ ಮಾಡುತ್ತಿದ್ದಾರೆ. ಈ ಮೂಲಕ ಹೈದ್ರಾಬಾದ್ ಕರ್ನಾಟಕದ ಕಥೆಗೆ ನಿರ್ದಿಗಂತ ಜೊತೆಯಾಗಿ ನಿಂತಿದೆ. ರಾಯಚೂರು‌ ಮೂಲದ ಯುವ ಪ್ರತಿಭೆ ಉತ್ಸವ್ ಗೋನವಾರ ಚೊಚ್ಚಲ ಪ್ರಯತ್ನ ಫೋಟೋ. ಕಳೆದ ಏಳು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿರುವ ಅವರು ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ಸ್ವಾತಂತ್ರ್ಯ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ ನಡೆದ ಕಥೆ ಸುತ್ತ ಫೋಟೋ ಸಿನಿಮಾ ಸಾಗುತ್ತದೆ. ಅಪ್ಪ‌-ಮಗನ ಬಾಂಧವ್ಯ, ಭಾವನಾತ್ಮಕ ಎಳೆ ಇಟ್ಟುಕೊಂಡು ಹಲವು ವಿಷಯಗಳನ್ನು ಬಹಳ ನೈಜವಾಗಿ ಮನಸ್ಸಿಗೆ ನಾಟುವಂತೆ ಕಟ್ಟುಕೊಟ್ಟಿದ್ದಾರೆ ನಿರ್ದೇಶಕ ಉತ್ಸವ್.

ಮಸಾರಿ ಟಾಕೀಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಫೋಟೋ ಸಿನಿಮಾದಲ್ಲಿ ಮಹಾದೇವ ಹಡಪದ್, ಸಂಧ್ಯಾ ಅರಕೆರೆ, ಜಹಾಂಗೀರ್, ಮತ್ತು ವೀರೇಶ್ ಗೊನ್ವಾರ್ ನಟಿಸಿದ್ದಾರೆ. ಚಿತ್ರಕ್ಕೆ ದಿನೇಶ್ ದಿವಾಕರನ್ ಅವರ ಛಾಯಾಗ್ರಹಣ ಮತ್ತು ರವಿ ಹಿರೇಮಠ್ ಅವರ ಶಬ್ದ ವಿನ್ಯಾಸ, ಶಿವರಾಜ್ ಮೆಹೂ ಸಂಕಲನದ ಶ್ರಮ ಚಿತ್ರಕ್ಕಿದೆ.

error: Content is protected !!