“ನೀ ನಂಗೆ ಅಲ್ಲವಾ” ಚಿತ್ರದ ಟೀಸರ್ ಬಿಡುಗಡೆ
ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ, ಮನೋಜ್ ಪಿ ನಡಲುಮನೆ ನಿರ್ದೇಶನದ ಹಾಗೂ ರಾಹುಲ್ ಆರ್ಕಟ್, ಕಾಶಿ ಮಾ ನಾಯಕ – ನಾಯಕಿಯಾಗಿ ನಟಿಸಿರುವ “ನೀ ನಂಗೆ ಅಲ್ಲವಾ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು. ಕ.ರಾ.ವೇ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಹಾಗೂ ಹೆಸರಾಂತ ನಿರ್ದೇಶಕ ಪವನ್ ಒಡೆಯರ್ ಟೀಸರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದರು. “ಸರಿಗಮಪ” ಯೂಟ್ಯೂಬ್ ಚಾನಲ್ ನಲ್ಲಿ ಈ ಟೀಸರ್ ಬಿಡುಗಡೆಯಾಗಿದ್ದು, ಮೆಚ್ಚುಗೆಯ ಜೊತೆಗೆ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಟೀಸರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
“ಆನ” ಚಿತ್ರದ ಮೂಲಕ ನನ್ನ ಸಿನಿಮಾ ಯಾನ ಶುರುವಾಯಿತು. ಇದು ನನ್ನ ನಿರ್ದೇಶನದ ಮೂರನೇ ಚಿತ್ರ. ಶೀರ್ಷಿಕೆಯಿಂದ ಇದೊಂದು ಪ್ರೇಮಕಥೆ ಎಂದು ತಿಳಿಯುತ್ತದೆ. ಆದರೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ಮಂಗಳೂರು, ಉಡುಪಿಯಲ್ಲಿ ಚಿತ್ರೀಕರಣ ನಡೆದಿದೆ. ರಾಹುಲ್ ಆರ್ಕಟ್ – ಕಾಶಿ ಮಾ ಅಭಿನಯ ಚೆನ್ನಾಗಿದೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಚಿತ್ರಕ್ಕೆ ಪೂರಕವಾಗಿದೆ. ಆಗಸ್ಟ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ಎಂದು ನಿರ್ದೇಶಕ ಮನೋಜ್ ಪಿ ನಡಲುಮನೆ ತಿಳಿಸಿದರು.
ಸುರಮ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾದ ಮೊದಲ ಚಿತ್ರ “ನಿದ್ರಾದೇವಿ ನೆಕ್ಸ್ಟ್ ಡೋರ್”. ಮೊದಲ ಚಿತ್ರದಿಂದಲೂ ನಮ್ಮ ಚಿತ್ರಕ್ಕೆ ನೀವು ನೀಡುತ್ತಿರುವ ಪ್ರೋತ್ಸಾಹಕ್ಕೆ ಚಿರ ಋಣಿ. ನಿರ್ದೇಶಕರು ಹೇಳಿದ ಈ ಚಿತ್ರದ ಕಥೆ ಬಹಳ ಇಷ್ಟವಾಯಿತು. ಜನರಿಗೂ ನಮ್ಮ ಚಿತ್ರ ಇಷ್ಟವಾಗುವ ಭರವಸೆ ಇದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ಎಂದು ನಿರ್ಮಾಪಕ ಜಯರಾಮ್ ದೇವಸಮುದ್ರ ಹೇಳಿದರು.
ಲಕ್ಕಿ ನನ್ನ ಪಾತ್ರದ ಹೆಸರು. ಪಾತ್ರ ಹಾಗೂ ಚಿತ್ರ ಎರಡು ಚೆನ್ನಾಗಿದೆ. ಅವಕಾಶ ನೀಡಿದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ. ನಟ ಶ್ರೀಮುರಳಿ ಅವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ ಎಂದರು ನಟ ರಾಹುಲ್ ಆರ್ಕಟ್.
ಖುಷಿ ನನ್ನ ಪಾತ್ರದ ಹೆಸರು. ಇದು ನನ್ನ ಮೊದಲ ಚಿತ್ರ ಎಂದು ನಾಯಕಿ ಕಾಶಿ ಮಾ ಹೇಳಿದರು. ಸಂಗೀತ ನಿರ್ದೇಶಕ ಸೂರಜ್ ಜೋಯಿಸ್ ಮುಂತಾದ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು. ಉದಯಲೀಲಾ ಅವರ ಛಾಯಾಗ್ರಹಣವಿರುವ “ನೀ ನಂಗೆ ಅಲ್ಲವಾ” ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಾಗೇಂದ್ರ ಉಜ್ಜನಿ ಅವರ ಸಂಕಲನವಿದೆ.
