Cini NewsSandalwood

ಫ್ಯಾಮಿಲಿ ಕಥಾನಕ “ನಮೋ ವೆಂಕಟೇಶ” ಚಿತ್ರದ ಟ್ರೈಲರ್ ಬಿಡುಗಡೆ.

ಹಲವಾರು ವರ್ಷಗಳಿಂದ ಕಿರುತೆರೆ, ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ವಿಜಯ್ ಭಾರದ್ವಾಜ್ ನಾಯಕನಾಗಿ ನಟಿಸಿರುವ ಚಿತ್ರ ‘ನಮೋ ವೆಂಕಟೇಶ’. ಅವರೇ ಚಿತ್ರದ ನಿರ್ದೇಶಕ ಕೂಡ.

ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ನಮೋ ವೆಂಕಟೇಶ ಚಿತ್ರದ ಬಹುತೇಕ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಸದ್ಯ ಚಿತ್ರತಂಡ ಟ್ರೈಲರ್ ರಿಲೀಸ್ ಮಾಡುವ ಮೂಲಕ ಚಿತ್ರದ ಪ್ರೊಮೋಷನ್‌ಗೆ ಚಾಲನೆ ನೀಡಿದೆ, ಈ ಚಿತ್ರದ ಹೆಸರು ನಮೋ ವೆಂಕಟೇಶ ಆದರೂ, ಈ ಚಿತ್ರಕ್ಕೂ ತಿರುಪತಿಯ ಶ್ರೀನಿವಾಸ ದೇವನಿಗೂ ಯಾವುದೇ ಸಂಬಂಧವಿಲ್ಲ, ಇಂದಿನ ಕಾಲದಲ್ಲಿ ನಡೆಯೋ ಅಪ್ಪಟ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರ. ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ‘ನಮೋ ವೆಂಕಟೇಶ’ ಎಂಬ ಟೈಟಲ್ ಇಟ್ಟಿದೆ.

ನವಿರಾದ ಹಾಸ್ಯದ ಜೊತೆಗೊಂದು ಪ್ರೇಮಕಥೆಯನ್ನು ಹೇಳುವ ರೊಮ್ಯಾಂಟಿಕ್ ಕಾಮಿಡಿ ಚಿತ್ರವಿದು, ಆರುಶ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಶ್ರೀನಿವಾಸ ಗೆಜ್ಜಲಗೆರೆ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಟಿ.ಎನ್. ಸೀತಾರಾಮ್‌ರಂಥ ದಿಗ್ಗಜರೊಂದಿಗೆ ಪಳಗಿದ ಮೈಸೂರಿನ ವಿಜಯ್ ಭಾರದ್ವಾಜ್ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಜೊತೆಗೆ ಚಿತ್ರದ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ‘ಗಟ್ಟಿಮೇಳ’ ಧಾರಾವಾಹಿಯ ಆದ್ಯ ಪಾತ್ರದಿಂದ ಹೆಸರಾದ ಅನ್ವಿತಾ ಸಾಗರ್(ಪಾರ್ವತಿ) ‘ನಮೋ ವೆಂಕಟೇಶ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಶ್ಯಾಮ್ ಸುಂದರ್, ನಾಗರಾಜರಾವ್, ರವಿಕುಮಾರ್, ದೀಪಾ, ಮಂಜುನಾಥ್ ಹೆಗ್ಡೆ, ಸುಧಾ ಪ್ರಸನ್ನ ಹಾಗೂ ಇತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಕೆ.ವಿ. ಮಂಜಯ್ಯ, ನಾಗರಾಜರಾವ್, ಸುಧಾಪ್ರಸನ್ನ, ವಿ.ಮನೋಹರ್, ರವಿಕುಮಾರ್, ದೀಪ, ಪಾರ್ವತಿ ಮುಂತಾದವರು ನಿರ್ದೇಶಕರ ಜತೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡರು. ನಾಯಕಿ ಅನ್ವಿತಾ ಸಾಗರ ಮಾತನಾಡುತ್ತ ಈ ಚಿತ್ರದಲ್ಲಿ ನಾನು ರಶ್ಮಿ ಎಂಬ ಆರ್ಕಿಟೆಕ್ಟ್ ಸ್ಟೂಡೆಂಟ್ ಪಾತ್ರ ಮಾಡಿದ್ದೇನೆ. ಇನ್ನೋಸೆಂಟ್ ಅಷ್ಟೇ ಕೋಪಿಷ್ಠೆ ಕೂಡ, ತಂದೆಯ ಕಟ್ಟುಪಾಡುಗಳನ್ನು ಮೀರಿ ನಾನೊಬ್ಬ ಹುಡುಗನನ್ನು ಲವ್ ಮಾಡಿ, ನಂತರ ಆಯ್ಕೆ ಪ್ರಶ್ನೆ ಬಂದಾಗ ನಾನು ಫ್ಯಾಮಿಲಿಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ, ಆದರೆ ನಾಯಕ, ನನ್ನ ಕುಟುಂಬವನ್ನು ಹೇಗೆ ಒಪ್ಪಿಸಿ ಮದುವೆಯಾಗ್ತಾನೆ ಅನ್ನೋದೇ ಚಿತ್ರದ ಎಳೆ ಎಂದು ಹೇಳಿದರು.

ಚಿತ್ರದ ನಾಯಕ ವಿಜಯ್ ಭಾರದ್ವಾಜ್ ಮಾತನಾಡುತ್ತ ಈ ಚಿತ್ರದಲ್ಲಿ ನಾಯಕನ ಹೆಸರು ವೆಂಕಟೇಶ, ಆತ ಏಕೆ ನಮೋ ವೆಂಕಟೇಶ ಏಕೆ ಆದ ಅನ್ನೋದನ್ನು ಚಿತ್ರದಲ್ಲಿ ನೋಡಿಯೇ ತಿಳಿಯಬೇಕು. ಎರಡು ಬೇರೆ, ಬೇರೆ ಪೀಳಿಗೆಗೆ ಸೇರಿದ ಇಬ್ಬರು ವ್ಯಕ್ತಿಗಳ ಸುತ್ತ ಸುತ್ತುವ ಕಥೆ. ಒಂದು ಪೀಳಿಗೆಯ ವ್ಯಕ್ತಿಗಳ ಭಿನ್ನ, ವಿಭಿನ್ನ ಆಲೋಚನೆಗಳಿಂದ ಮತ್ತೊಂದು ಪೀಳಿಗೆಗೆ ಸೇರಿದ ವ್ಯಕ್ತಿಗಳ ಜೀವನದ ಮೇಲೆ ಬೀರುವ ಸೂಕ್ಷ್ಮ ಪ್ರಭಾವಗಳು, ಅದರಿಂದ ಅವರವವರ ಬದುಕು ಪಡೆದುಕೊಳ್ಳುವ ತಿರುವುಗಳು, ಆ ತಿರುವುಗಳಿಂದ ಕೆಲವೊಮ್ಮೆ ಸೃಷ್ಠಿಯಾಗುವ ಹೊಸ ದಾರಿಗಳ ಸುತ್ತ ನಡೆವ ಕಥೆಯಿದು, ಯಾವುದೇ ಲಾಂಗು, ಮಚ್ಚು, ಬ್ಲಡ್ ಇಲ್ಲದ ಸುಂದರ ದೃಶ್ಯಗಳ ಹೂರಣವೇ ನಮೋ ವೆಂಕಟೇಶ. ಚಿತ್ರ ರಿಲೀಸಿಗೆ ರೆಡಿಯಾಗಿದ್ದು ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರುತ್ತೇವೆ ಎಂದು ಹೇಳಿದರು.

ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಶರತ್ ಆರೋಹಣ ಅವರ ಸಂಗೀತ ಸಂಯೋಜನೆಯಿದೆ, ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಶೀರ್ಷಿಕೆ ಹಾಡನ್ನು ರಚಿಸಿದ್ದು, ಉಳಿದ ಮೂರು ಹಾಡುಗಳಿಗೆ ನಿರ್ಮಾಪಕ ಶ್ರೀನಿವಾಸ ಗೆಜ್ಜಲಗೆರೆ ಅವರೇ ಸಾಹಿತ್ಯ ರಚಿಸಿದ್ದಾರೆ, ಮತ್ತೊಂದು ಗೀತೆಗೆ ಗಣೇಶ್ ಪ್ರಸಾದ್ ಸಾಲುಗಳನ್ನು ಬರೆದು, ಹಾಡಿದ್ದಾರೆ. ನಿರಂಜನ್‌ದಾಸ್ ಮತ್ತು ವಿನೋದ್ ಲೋಕಣ್ಣನವರ್ ಛಾಯಾಗ್ರಹಣ, ಸಮೀರ್ ನಗರದ್ ಅವರ ಸಂಕಲನ ಈ ಚಿತ್ರಕ್ಕಿದೆ, ಮೈಸೂರು, ಚಿಕ್ಕಮಗಳೂರಿನ ಬಾಳೂರು, ಕೊಟ್ಟಿಗೆಹಾರ, ದೇವರಮನೆ, ಬಣಕಲ್, ದೇವರಮನೆ ಮುಂತಾದ ಸುಂದರ ತಾಣಗಳಲ್ಲಿ ನಮೋ ವೆಂಕಟೇಶ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

error: Content is protected !!