Cini NewsSandalwood

ಎಂಪಿ ಫಿಲಂಸ್ ಮೂಲಕ ಕೆ.ಮುನೀಂದ್ರ ನೂತನ ಪ್ರೊಡಕ್ಷನ್, ವಿತರಣಾ ಸಂಸ್ಥೆ ಉದ್ಘಾಟನೆ.

ಚಂದನವನದಲ್ಲಿ ಮತ್ತೊಂದು ನೂತನ ನಿರ್ಮಾಣ ಹಾಗೂ ವಿತರಣಾ ಸಂಸ್ಥೆ ಆರಂಭಗೊಂಡಿದೆ. ಈಗಾಗಲೇ ಚಿತ್ರರಂಗದಲ್ಲಿ ಒಬ್ಬ ನಿರ್ಮಾಪಕನಾಗಿ ಅಲ್ಲದೆ ನಿರ್ಮಾಣ ಹಂತದ ಬಹುತೇಕ ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಕೆ. ಮುನೀಂದ್ರ ಗಾಂಧಿನಗರದಲ್ಲಿ ಹೊಸ ಕಛೇರಿಯೊಂದನ್ನು ತೆರೆದಿದ್ದಾರೆ.

ಇತ್ತೀಚೆಗೆ ಕೆ.ಮುನೀಂದ್ರ ಅವರ ನೇತೃತ್ವದ ನೂತನ ವಿತರಣಾ ಸಂಸ್ಥೆ ಮಾಧ್ಯಮಾಂಬಿಕ ಎಂಟರ್‌ಪ್ರೈಸಸ್ ಹಾಗೂ ನಿರ್ಮಾಣ ಸಂಸ್ಥೆ ಎಂ.ಪಿ.ಫಿಲಂಸ್‌ನ ಉದ್ಘಾಟನಾ ಕಾರ್ಯಕ್ರಮ ನೆರವೇರಿದ್ದು , ಬೆಂಗಳೂರಿನ ‌ಮೆಜೆಸ್ಟಿಕ್ ಏರಿಯಾದ ಗಾಂಧಿನಗರದಲ್ಲಿರುವ ಮೋತಿಮಹಲ್ ಹೋಟೆಲ್ ಹಿಂಭಾಗದಲ್ಲಿ ಕೆ.ಮುನೀಂದ್ರ ಅವರು ತಮ್ಮ ನೂತನ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯ ಕಛೇರಿಯನ್ನು ಪ್ರಾರಂಭಿಸಿದರು.

ಈ ಸಂದರ್ಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎನ್.ಎಂ.ಸುರೇಶ್, ಶಾಸಕ ಎಂ.ಕೃಷ್ಣಪ್ಪ, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಫೈಟರ್ ನಿರ್ಮಾಪಕ ಸೋಮಣ್ಣ, ಬ್ರಹ್ಮ ನಿರ್ಮಾಪಕರಾದ ಬಾಬಣ್ಣ, ಆರ್.ಶ್ರೀನಿವಾಸ್, ಆರ್.ಎಸ್. ಗೌಡ, ನಿರ್ದೇಶಕರಾದ ಸಂತು, ಭರ್ಜರಿ ಚೇತನ್, ನಾಗೇಂದ್ರಅರಸ್, ಶಶಾಂಕ್ ಸೇರಿದಂತೆ ಕನ್ನಡ ಚಿತ್ರೋದ್ಯಮದ ಹಲವಾರು ಗಣ್ಯರು ಆಗಮಿಸಿ ಕೆ.ಮುನೀಂದ್ರ ಅವರ ನೂತನ ಪ್ರಯತ್ನಕ್ಕೆ ಶುಭ ಹಾರೈಸಿದರು.

ಮುನೀಂದ್ರ ಆಪ್ತ ಹಾಗೂ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ ಮುನೀಂದ್ರ ಸದಭಿರುಚಿಯ ನಿರ್ಮಾಪಕ, ಅವರೀಗ ನಿರ್ಮಾಣ ಸಂಸ್ಥೆಯ ಜೊತೆಗೆ ಮಾಧ್ಯಮಾಂಬಿಕ ಎಂಟರ್‌ಪ್ರೈಸಸ್ ಎಂಬ ಹೊಸ ವಿತರಣಾ ಸಂಸ್ಥೆಯನ್ನು ಸಹ ಪ್ರಾರಂಭಿಸಿದ್ದಾರೆ. ಇದರ ಮೂಲಕ ಹೊಸದಾಗಿ ಚಿತ್ರರಂಗಕ್ಕೆ ಬರುತ್ತಿರುವ ನಿರ್ಮಾಪಕರಿಗೆ ಮತ್ತಷ್ಟು ಅನುಕೂಲವಾಗಲಿ ಎಂದು ಹೇಳಿದರು. ಇನ್ನು ಈ ಸಂಸ್ಥೆಯ ಮೂಲಕ ಹಲವಾರು ಚಿತ್ರಗಳ ನಿರ್ಮಾಣ ಮಾಡುವುದರ ಜೊತೆಗೆ ನಿರ್ಮಾಪಕರಿಗೆ ಅನುಕೂಲವಾಗುವಂತೆ ವಿತರಣಾ ಕೆಲಸವನ್ನು ಕೂಡ ಬಹಳ ಅಚ್ಚುಕಟ್ಟಾಗಿ ಪಾರದರ್ಶಕವಾಗಿ ಮಾಡಲು ನಿರ್ಧರಿಸಿದ್ದಾರಂತೆ.

error: Content is protected !!