Cini NewsSandalwood

ರಾಯರ ಸನ್ನಿಧಿಯಲ್ಲಿ “ಮೆಜೆಸ್ಟಿಕ್-2” ಗೆ ಚಾಲನೆ.

ಬೆಂಗಳೂರಿನ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಂದರೆ ಮೆಜೆಸ್ಟಿಕ್. ಈ ಮೆಜೆಸ್ಟಿಕ್ ಕುರಿತು ಒಂದು ಇತಿಹಾಸವನ್ನೇ ಬರೆಯಬಹುದು, ಅಲ್ಲಿ ಹಗಲಲ್ಲಿ ನಡೆಯುವ ಚಟುವಟಿಕೆಗಳದ್ದು ಒಂದು ಕಥೆಯಾದರೆ, ರಾತ್ರಿ ನಡೆಯುವ ಚಟುವಟಿಕೆಗಳದ್ದು ಮತ್ತೊಂದು ಕಥೆಯಾಗುತ್ತೆ.

ಈಗ ಆ ಮೆಜೆಸ್ಟಿಕ್ ಬಗ್ಗೆ ಮತ್ತೊಂದು ಚಿತ್ರ ನಿರ್ಮಾಣವಾಗುತ್ತಿದೆ. ಹಿಂದಿನ ಮೆಜೆಸ್ಟಿಕ್ ನಲ್ಲಿ ಆಗಿನ ಕಾಲದ ರೌಡಿಸಂ ಹೇಗೆ ನಡೆಯುತ್ತಿತ್ತೆಂದು ಹೇಳಿದರೆ, ಹೊಸ ಮೆಜೆಸ್ಟಿಕ್ ಈಗಿನ ಕಾಲದ ಮೆಜೆಸ್ಟಿಕ್‌ನಲ್ಲಿ ಏನೇನೆಲ್ಲ ಚಟುವಟಿಕೆಗಳು ನಡೆಯುತ್ತವೆ, ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂದು ನಿರ್ದೇಶಕ ರಾಮು ಹೇಳಲು ಹೊರಟಿದ್ದಾರೆ. ಆಗಿನ ಮೆಜೆಸ್ಟಿಕ್‌ಗೆ ರಾಮು ಅವರೇ ಕಥೆ ಬರೆದಿದ್ದರು.

ಈಗ ಮೆಜೆಸ್ಟಿಕ್ 2 ನಿರ್ದೇಶಿಸುತ್ತಿದ್ದಾರೆ, ಈ ಚಿತ್ರದ ಮುಹೂರ್ತ ಸಮಾರಂಭ ಭಾನುವಾರ ಬೆಳಿಗ್ಗೆ ಬುಲ್‌ಟೆಂಪಲ್ ರಸ್ತೆಯ ರಾಘವೇಂದ್ರ ಮಠದ ರಾಯರ ಸನ್ನಿಧಿಯಲ್ಲಿ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ಹಿರಿಯನಟಿ ಶೃತಿ ಕ್ಯಾಮೆರಾ ಚಾಲನೆ ಮಾಡಿದರೆ, ನಿರ್ಮಾಪಕ ಆನಂದಪ್ಪ ಅವರ ಶ್ರೀಮತಿ ನಿರ್ಮಲಾ ಅವರು ಕ್ಲಾಪ್ ಮಾಡಿದರು, ಈ ಚಿತ್ರದ ಮೂಲಕ ಹಿರಿಯ ನಿರ್ಮಾಪಕ ಹಾಗೂ ವಿತರಕ ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ.

ಅಮ್ಮಾ ಎಂಟರ್‌ ಪ್ರೈಸಸ್ ಮೂಲಕ ಚಿತ್ರದುರ್ಗದ ಟಿ.ಆನಂದಪ್ಪ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಂದರ್ಭಲ್ಲಿ ಮಾತನಾಡಿದ ನಿರ್ಮಾಪಕರು, ನಮ್ಮ ಸಂಸ್ಥೆಯಿಂದ ಈಗಾಗಲೇ ಪಿಂಕ್‌ನೋಟ್ ಚಿತ್ರವನ್ನು ನಿರ್ಮಿಸುತ್ತಿದ್ದು ಅದರ ಡಬ್ಬಿಂಗ್ ಕಾರ್ಯ ನಡೀತಿದೆ. ಇದು ಎರಡನೇ ಚಿತ್ರ. 2 ಹಂತಗಳಲ್ಲಿ ಶೂಟಿಂಗ್ ಮಾಡುತ್ತಿದ್ದೇವೆ, ಉತ್ತಮ ಚಿತ್ರವನ್ನು ಜನರಿಗೆ ನೀಡುತ್ತಿದ್ದೇವೆ ಎಂದು ಹೇಳಿದರು.

ನಂತರ ನಿರ್ದೇಶಕ ರಾಮು ಮಾತನಾಡಿ ಆರಂಭದಲ್ಲಿ ನಾನು ನಿರ್ದೇಶಕ ಪಿ.ಎನ್. ಸತ್ಯ, ಜೋಗಿ ಪ್ರೇಮ್ ಅವರ ಜೊತೆ ಕೆಲಸ ಮಾಡಿದ್ದೆ, ನಾನು ಬೆಂಗಳೂರಿಗೆ ಬಂದಾಗ ಮೆಜೆಸ್ಟಿಕ್‌ನಲ್ಲಿ ಏನೇನೆಲ್ಲ ಚಟುವಟಿಕೆಗಳು ನಡೀತಿದ್ವು ಎಂಬುದನ್ನು ಕಣ್ಣಾರೆ ನೋಡಿದ್ದೆ. ಆ ಘಟನೆಗಳನ್ನು ಇಟ್ಟುಕೊಂಡು ಮೆಜೆಸ್ಟಿಕ್ ಕಥೆ ಬರೆದಿದ್ದೆ, ಈಗಿನ ಕಾಲದಲ್ಲಿ ಅಲ್ಲಿ ರೌಡಿಸಂ ಹೇಗೆ ನಡೀತಿದೆ ಎಂದು ಈ ಚಿತ್ರದಲ್ಲಿ ಹೇಳುತ್ತಿದ್ದೇನೆ.

ರೌಡಿಸಂ ಹಾಗೂ ಆಕ್ಷನ್ ಬೇಸ್ ಕಥೆಯಿದು. ಹಿರಿಯನಟಿ ಶೃತಿ ಅವರು ಮರಿದಾಸನ ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಭರತ್ ರನ್ನು ಸೆಲೆಕ್ಟ್ ಮಾಡಿಕೊಂಡು ಆನಂದಪ್ಪ ಅವರಿಗೆ ಹೇಳಿದಾಗ ಅವರೂ ಒಪ್ಪಿದರು. ಅವತ್ತಿನ ಮೆಜೆಸ್ಟಿಕ್‌ನಲ್ಲಿ ಏನು ನೋಡಿದ್ದಿರೋ ಅದಕ್ಕಿಂತ ಹತ್ತು ಪಟ್ಟು ಈ ಸಿನಿಮಾದಲ್ಲಿ ನೋಡಬಹುದು. ಚಿತ್ರದ ಮೂಲಕ ಎಲ್ಲರ ಮನಸ್ಸನ್ನು ತಟ್ಟುತ್ತೇನೆ ಎನ್ನುವ ಧೈರ್ಯ ನನ್ನಲ್ಲಿದೆ ಎಂದು ಹೇಳಿದರು.

ನಾಯಕ ಭರತ್ ಮಾತನಾಡುತ್ತ ನನ್ನ ಮೊದಲ ಚಿತ್ರಕ್ಕೆ ಇಷ್ಟೊಂದು ಅತಿಥಿಗಳು ಬಂದಿರುವುದು ನೋಡಿ ಖುಷಿಯಾಯ್ತು. ಇಷ್ಟೆಲ್ಲ ಆಗಿರುವುದು ಈ ಟೈಟಲ್‌ನಿಂದ, ಚಿತ್ರದ ಮೇನ್ ಫೋಕಸ್ ಅಂದ್ರೆ ಮೆಜೆಸ್ಟಿಕ್ ಟೈಟಲ್, ಮೆಜೆಸ್ಟಿಕ್ ಅಂದಕೂಡಲೇ ನೆನಪಿಗೆ ಬರೋದು ನಮ್ಮ ಡಿಬಾಸ್, ನಾನು ದರ್ಶನ್ ಅವರ ಅಭಿಮಾನಿ.

ಚಿತ್ರದಲ್ಲಿ ಮರಿದಾಸ ಎನ್ನುವ ಕ್ಯಾರೆಕ್ಟರ್ ಪ್ಲೇ ಮಾಡುತ್ತಿದ್ದೇನೆ, ಪಾತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ.
ಈಗಿನ ಕಾಲದ ಮೆಜೆಸ್ಟಿಕ್‌ನಲ್ಲಿ ಏನೇನು ನಡೆಯುತ್ತೆ, ಈಗಲ್ಲಿ ರೌಡಿಸಂ ಹೇಗಿರುತ್ತೆ, ಅಲ್ಲಿ ವ್ಯವಹಾರ ಹೇಗೆಲ್ಲ ನಡೆಯುತ್ತೆ ಎಂದು ಚಿತ್ರದಲ್ಲಿ ಹೇಳುತ್ತಿದ್ದೇವೆ. ದರ್ಶನ್ ಅವರು ಯಶಸ್ಸಿನಲ್ಲಿ ಕೊಂಚವಾದರೂ ನಾವು ಮಾಡಿದರೆ ಅದೇ ನಮ್ಮಭಾಗ್ಯ ಅಂತ ತಿಳಿದುಕೊಳ್ಳುತ್ತೇನೆ ಎಂದು ಹೇಳಿದರು, ನಂತರ ನಾಯಕಿ ಸಂಹಿತಾ ವಿನ್ಯಾ ಮಾತನಾಡಿ ತನ್ನ ಪಾತ್ರದ ಕುರಿತಂತೆ ಹೇಳಿಕೊಂಡರು. ಈ ಚಿತ್ರಕ್ಕೆ ವಿನು ಮನಸು ಅವರ ಸಂಗೀತ ನಿರ್ದೇಶನವಿದ್ದು, ವೀನಸ್ ಮೂರ್ತಿ ಅವರು ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ

error: Content is protected !!