ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಆಡಿಯೋ ಹಕ್ಕು ಸರೆಗಮ ತೆಕ್ಕೆ..ಇದೇ 24ಕ್ಕೆ ಮೊದಲ ಹಾಡು ಅನಾವರಣ*
ಅಭಿನಯ ಚಕ್ರವರ್ತಿ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಸಿನಿಮಾದ ಮೂಲಕ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಪರಿಚಯವಾಗುತ್ತಿದ್ದಾರೆ. ವಿವೇಕ ಚೊಚ್ಚಲ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರ್ತಿದೆ. ಟೀಸರ್ ಮೂಲಕ ಈಗಾಗಲೇ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಹೆಚ್ಚು ಮಾಡಿರುವ ಮ್ಯಾಂಗೋ ಪಚ್ಚ ಸಿನಿಮಾದ ಆಡಿಯೋ ಹಕ್ಕು ಸರೆಗಮ ಪಾಲಾಗಿದೆ.
ಹೊಸ ಹೀರೋ, ಹೊಸ ಡೈರೆಕ್ಟರ್ ಮೊದಲ ಪ್ರಯತ್ನಕ್ಕೆ ಒಳ್ಳೆ ಬೇಡಿಕೆ ಕ್ರಿಯೇಟ್ ಆಗಿದೆ. ಮ್ಯಾಂಗೋ ಪಚ್ಚ ಸಿನಿಮಾದ ಆಡಿಯೋ ರೈಟ್ಸ್ ನ್ನು ಸರೆಗಮ ಒಂದೊಳ್ಳೆ ಮೊತ್ತಕ್ಕೆ ಕೊಂಡುಕೊಂಡಿದೆ. ಇದು ಇಡೀ ಚಿತ್ರ ತಂಡದ ಖುಷಿಗೆ ಕಾರಣವಾಗಿದೆ.
2001ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ‘ಮ್ಯಾಗೋ ಪಚ್ಚ’ ಸಿನಿಮಾದಲ್ಲಿವೆ. ಕ್ರೈಂ ಥ್ರಿಲ್ಲರ್ ಕಹಾನಿಯನ್ನು ಈ ಚಿತ್ರ ಹೊಂದಿದೆ. ಈ ಚಿತ್ರಕ್ಕೆ ಕೆಆರ್‌ಜಿ ಮತ್ತು ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ಬಂಡವಾಳ ಹೂಡಿವೆ. ಪ್ರಿಯಾ ಸುದೀಪ್, ಕಾರ್ತಿಕ್, ಯೋಗಿ ಜಿ. ರಾಜ್ ಅವರು ನಿರ್ಮಾಪಕರಾಗಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಒಳ್ಳೆ ಮೊತ್ತಕ್ಕೆ ಆಡಿಯೋ ಹಕ್ಕು ಸೇಲ್ ಆಗಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ನಿರ್ಮಾಪಕಿ ಪ್ರಿಯಾ ಸುದೀಪ್ ಅವರು, “ಸರೆಗಮ ಮ್ಯಾಂಗೋ ಪಚ್ಚ ಆಡಿಯೋ ಖರೀದಿಸಿರುವುದು ನಾವು ನಂಬಲಾಗದಷ್ಟು ಉತ್ಸುಕರಾಗಿದ್ದೇವೆ. ಚರಣ್ ರಾಜ್ ಅವರು ಸಂಯೋಜಿಸಿದ ಸಂಗೀತವು ಪ್ರೇಕ್ಷಕರನ್ನು ಪ್ರತಿಧ್ವನಿಸುತ್ತದೆ ಮತ್ತು ಚಿತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬುದು ಖಚಿತ. ಚರಣ್ ಅವರ ಸಾಮರ್ಥ್ಯದ ಮೇಲೆ ನಂಬಿಕೆ ಇದೆ. ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡುಗಳನ್ನು ಕೇಳಲು ಉತ್ಸುಕಳಾಗಿದ್ದೇನೆ” ಎಂದರು. ಮ್ಯಾಂಗೋ ಪಚ್ಚ ಸಿನಿಮಾದ ಮೊದಲ ಹಾಡನ್ನು ಇದೇ ತಿಂಗಳ 24ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.