ಸ್ನೇಹ- ಪ್ರೀತಿ- ಸಂಬಂಧ ನಡುವೆ ವಿಧಿಯ ಆಟ “ಲವ್ ಸೀಸನ್ಸ್” (ಚಿತ್ರವಿಮರ್ಶೆ -ರೇಟಿಂಗ್ : 4/5)

Spread the love

ರೇಟಿಂಗ್ : 4/5
ಚಿತ್ರ : ಲವ್ ಸೀಸನ್ಸ್
ನಿರ್ದೇಶನ : ಕೃತ್ವಿಕ್
ನಿರ್ಮಾಪಕ : ಮಂಜುನಾಥ (ನೀಲೇರಿ)
ಸಂಗೀತ : ವೀರ್ ಸಮರ್ಥ್
ಛಾಯಾಗ್ರಹಣ : ಅವಿನಾಶ ಶಾಸ್ತ್ರಿ
ತಾರಾಗಣ : ಮುಕುಂದ ರಾಮಸ್ವಾಮಿ, ದಿಯಾ ಕೀರ್ತಿ, ಶ್ವೇತಾ ಕೊಗ್ಲೂರು, ಚಂದನಾ ಗೌಡ, ಮಂಡ್ಯ ರಮೇಶ್, ಜಯತೀರ್ಥ, ಎನ್.ಆರ್ ಮಂಜುನಾಥ , ಚೇತನ್ ದುರ್ಗ, ಸದಾನಂದ, ಹುಲಿ ಕಾರ್ತಿಕ್, ಬೇಬಿ ರಿತುಸಿಂಗ್ ಹಾಗೂ ಮುಂತಾದವರು…

ಜೀವನವೇ ಒಂದು ಪಾಠ. ಮನುಷ್ಯನ ಜೀವಿತಾವಧಿಯಲ್ಲಿ ಬಾಲ್ಯ , ಪ್ರೌಢಾವಸ್ಥೆ ಮತ್ತು ಯೌವನವು ಪ್ರಮುಖ ಬೆಳವಣಿಗೆ ಆಗಿರುತ್ತದೆ. ಹುಟ್ಟಿನಿಂದ ಆರಂಭವಾಗಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಮೂಲಕ ವ್ಯಕ್ತಿಯನ್ನು ಪ್ರಬುದ್ಧತೆಯತ್ತ ಕೊಂಡೊಯ್ಯುತ್ತವೆ.

ಇಂತದ್ದೇ ವ್ಯಕ್ತಿ ಒಬ್ಬನ ಬದುಕಿನಲ್ಲಿ ಬರುವ ಮೂರು ಸ್ತ್ರೀಯರು ಒಂದೊಂದು ಕಾಲಘಟ್ಟದಲ್ಲಿ ಎದುರಾದಾಗ ಆಗುವ ಮನಸ್ಸಿನ ತಳಮಳ , ಆಸೆ , ಭಾವನೆ , ಪ್ರೀತಿ , ಕನಸು, ಪರದಾಟ , ನಂಬಿಕೆ ದ್ರೋಹ , ನೋವು ನಲುವಿನ ನಡುವೆ ತನ್ನ ಗುರಿಗೆ ದಿಕ್ಕು ತಪ್ಪಿದಂತದಾಗ ಹೇಗೆ ನಿಭಾಯಿಸುತ್ತಾನೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಪ್ರೇಮ ಕಥೆಯೊಂದಿಗೆ ಬದುಕಿನ ದಾರಿ ಕಾಣುವ ನಿಟ್ಟಿನಲ್ಲಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಲವ್ ಸೀಸನ್”.

ಬಹಳಷ್ಟು ಅನಾಥ ಮಕ್ಕಳನ್ನ ಬೆಳೆಸಿ , ವಿದ್ಯೆ ನೀಡಿ ಬದುಕಿಗೆ ಮಾರ್ಗ ತೋರುವವಂತಹ ಸಂಸ್ಥೆಯ ರೂವಾರಿ (ಮಂಡ್ಯ ರಮೇಶ್) ಆಶ್ರಯದಲ್ಲಿ ಬೆಳೆಯುವಂತಹ ಹುಡುಗ ರಾಮ್ (ಮುಕುಂದ ರಾಮಸ್ವಾಮಿ). ಶಾಲಾ ದಿನಗಳಲ್ಲಿ ಗೆಳೆಯರ ಜೊತೆ ಆಟ , ಪಾಠ , ತುಂಟಾಟದ ನಡುವೆ ಪವಿತ್ರ (ಚಂದನ ಗೌಡ) ಎನ್ನುವ ಸುಂದರಿಯನ್ನ ಪ್ರೀತಿಸಲು ಮುಂದಾಗುವ ರಾಮ್ ಗೆ ಪ್ರೀತಿಯ ಪಾರಿವಾಳ ಹಾರಿಹೋಗುತ್ತದೆ.

ಇನ್ನು ಕಾಲೇಜು ದಿನಗಳಲ್ಲಿ ಕಾಣುವ ಚಂದುಳ್ಳಿ ಚೆಲುವೆ ರಾಶಿಕ (ಶ್ವೇತಾ ಕೊಗ್ಲೂರು) ಗೆ ಟೈಮ್ ಪಾಸ್ ಗೆಳೆಯನಾಗಿ ಸಿಗುವ ರಾಮ್ ಕನಸು ಬಗ್ನವಾಗುತ್ತದೆ. ಪ್ರೀತಿ ಪ್ರೇಮದ ಹಿಂದೆ ಹೋದರೆ ಬದುಕುವ ನಶ್ವರ ಎನ್ನುವ ರಾಮ್, ತಾನೊಬ್ಬ ದೊಡ್ಡ ನಿರ್ದೇಶಕನಾಗಬೇಕೆಂಬ ಕನಸಿನ ಹಾದಿಯತ್ತ ಸಾಗಲು ಮುಂದಾಗುತ್ತಾನೆ.

ಇದಕ್ಕೆ ಗೆಳೆಯರ ಸಾತ್ ಕೂಡ ಸಿಗುತ್ತದೆ. ಇದರ ನಡುವೆ ಮತ್ತೊಮ್ಮೆ ಮೇರಿ (ದಿಯಾ ಕೀರ್ತಿ) ಯ ಮೋಹದ ಪಾಶ ರಾಮ್ ಕಡೆ ತಿರುಗುತ್ತದೆ. ಇಷ್ಟವಿಲ್ಲದಿದ್ದರೂ ನಾನು ಕಾರಣಗಳಿಂದ ಒಪ್ಪುವ ರಾಮ್ ಬದುಕಿನಲ್ಲಿ ದುರಂತ ಹಾದಿಯನ್ನ ತೋರುತ್ತದೆ. ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಸಾಗುವ ರಾಮ್ ಬದುಕಿನಲ್ಲಿ ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತಾ ಬೇರೆಯದೆ ದಾರಿಯನ್ನ ತೋರುತ್ತಾ ಹೋಗಿ ಕ್ಲೈಮ್ಯಾಕ್ಸ್ ಅಂತಕ್ಕೆ ಬಂದು ನಿಲ್ಲುತ್ತದೆ. ರಾಮ್ ಬದುಕು ಏನಾಗುತ್ತೆ… ಈ ಮೂವರ ನಾಯಕಿರ ಸ್ಥಿತಿ ಗತಿ ಏನು…
ಲವ್ ಸೀಸನ್ ಗಳು ಯಾವುದು… ಕೊನೆಗೆ ಸಿಗುವ ಉತ್ತರ ಏನು… ಇದಕ್ಕಾಗಿ ಒಮ್ಮೆ ಚಿತ್ರ ನೋಡಬೇಕು.

ಯುವ ನಿರ್ದೇಶಕ ಕೃತ್ವಿಕ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಗಮನ ಸೆಳೆದಿದ್ದು, ಚಿತ್ರಕಥೆ ವಿಭಿನ್ನವಾಗಿ ಮೂಡಿಬಂದಿದೆ. ಮೊದಲ ಭಾಗ ಒಂದಷ್ಟು ಕಡಿತ ಮಾಡಿದರೆ ಚೆನ್ನಾಗಿರುತ್ತಿತ್ತು. ದ್ವಿತೀಯ ಭಾಗ ಚಿತ್ರದ ಓಟಕ್ಕೆ ಪೂರಕವಾಗಿದೆ. ಸಂದರ್ಭಕ್ಕೆ ಅನುಗುಣವಾದ ಸಂಭಾಷಣೆ ಇಷ್ಟವಾಗುತ್ತದೆ. ಮೊದಲ ಪ್ರಯತ್ನದಲ್ಲಿ ತಮ್ಮ ಸಾಮರ್ಥ್ಯವನ್ನು ತೆರೆಯ ಮೇಲೆ ಹೊರ ಹಾಕಿರುವ ನಿರ್ದೇಶಕರಿಗೆ ಮುಂದೆ ಉತ್ತಮ ಭವಿಷ್ಯವಿದೆ.

ಇಂತಹ ವಿಭಿನ್ನ ಯುವ ಮನಸುಗಳ ಸೆಳೆಯುವಂತಹ ಚಿತ್ರವನ್ನ ನಿರ್ಮಿಸಿರುವ ನಿರ್ಮಾಪಕ ಮಂಜುನಾಥ್ ನೀಲೇರಿ ಧೈರ್ಯವನ್ನ ಕೂಡ ಮೆಚ್ಚಲೇಬೇಕು. ಇನ್ನು ಚಿತ್ರದ ಸಂಗೀತ , ಹಿನ್ನೆಲೆ ಸಂಗೀತ ಸೊಗಸಾಗಿದ್ದು , ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿ ಮೂಡಿಬಂದಿದೆ. ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಿರುವುದು ಕಾಣುತ್ತದೆ.

ನಾಯಕನಾಗಿ ಪ್ರವೇಶ ಮಾಡಿರುವ ಮುಕುಂದ ರಾಮಸ್ವಾಮಿ ತಮ್ಮ ಪಾತ್ರಕ್ಕೆ ಜೀವ ತುಂಬಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ತನ್ನ ನಟನಾ ಸಾಮರ್ಥ್ಯವನ್ನು ಬಂಧನ ಚಿತ್ರದ ಮೋನೋ ಆಕ್ಟಿಂಗ್ ಮೂಲಕ ತೆರೆದಿಟ್ಟಿರುವ ರೀತಿ ಗಮನ ಸೆಳೆಯುತ್ತದೆ. ಎಮೋಷನ್ , ಆಕ್ಷನ್ , ಲವ್ ಗೆ ಜೀವ ತುಂಬಿರುವ ಈ ಪ್ರತಿಭೆ ಚಂದನವನಕ್ಕೆ ಮತ್ತೊಬ್ಬ ನಟ ಸಿಕ್ಕಂತಾಗಿದೆ.

ಇನ್ನು ನಾಯಕಿಯರಾಗಿ ಅಭಿನಯಿಸಿರುವ ದಿಯಾ ಕೀರ್ತಿ , ಚಂದನ ಗೌಡ , ಶ್ವೇತ ಕೊಗ್ಲೂರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿ ಎಲ್ಲರೂ ಗಮನ ಸೆಳೆದಿದ್ದಾರೆ. ಇನ್ನು ಹಿರಿಯ ಕಲಾವಿದರಾದ ಮಂಡ್ಯ ರಮೇಶ್ , ರಾಜೇಶ್ ನಟರಂಗ , ಸಂಗೀತ ಅನಿಲ್ ಸೇರಿದಂತೆ ಚೇತನ್ ದುರ್ಗ , ಹುಲಿ ಕಾರ್ತಿಕ್ , ನಿರ್ದೇಶಕ ಜಯತೀರ್ಥ ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಒಟ್ಟಾರೆ ಪ್ರೀತಿಯ ಬದುಕಿನ ಪಾಠ ತಿಳಿಸುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.

Visited 1 times, 1 visit(s) today
error: Content is protected !!