Cini NewsSandalwood

ಯುವ ಪ್ರತಿಭೆಗಳ ವಿಭಿನ್ನ ಕಥೆಯ ಹಾರಾರ್ ಚಿತ್ರ “ಕಪ್ಪು ಬಿಳುಪಿನ ನಡುವೆ”.

ಕನ್ನಡದಲ್ಲಿ ಹೊಸ ಪ್ರಯತ್ನಗಳಿಗೆ ಕನ್ನಡಿಗರು ಬೆಂಬಲ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಹೊಸ ಹಾಗೂ ವಿಭಿನ್ನ ಕಥೆಯ ಹಾರಾರ್ ಚಿತ್ರ “ಕಪ್ಪು ಬಿಳುಪಿನ ನಡುವೆ”. ವೃತ್ತಿಯಲ್ಲಿ ಪಾರಂಪರಿಕ ಆಯುರ್ವೇದ ವೈದ್ಯರಾಗಿರುವ ಧರ್ಮೇಂದ್ರ ಅವರು ನಿರ್ಮಿಸಿರುವ ಹಾಗೂ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟಿರುವ ವಸಂತ್ ವಿಷ್ಣು ಮೊದಲ ಬಾರಿಗೆ ನಿರ್ದೇಶಿಸಿ, ನಾಯಕರಾಗೂ ನಟಿಸಿರುವ ಈ ಚಿತ್ರದ ಪತ್ರಿಕಾಗೋಷ್ಠಿ ಇತ್ತೀಚಿಗೆ ನಡೆಯಿತು. ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾಹಿತಿ ನೀಡಿದರು.

ನಿರ್ದೇಶಕನಾಗಿ ಇದು ಮೊದಲ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಹಾಗೂ ನಾಯಕ ವಸಂತ್ ವಿಷ್ಣು, ನಾನು ಈ ಹಿಂದೆ ನಾಲ್ಕು ಚಿತ್ರಗಳಲ್ಲಿ ಪ್ರಮುಖಪಾತ್ರದಲ್ಲಿ ನಟಿಸಿದ್ದೇನೆ. ನಿರ್ದೇಶನ ವಿಭಾಗದಲ್ಲೂ ಕಾರ್ಯ ನಿರ್ವಹಿಸಿದ್ದೇನೆ. ಸ್ವತಂತ್ರವಾಗಿ ನಿರ್ದೇಶಿಸಿರುವ ಪ್ರಥಮಚಿತ್ರವಿದು. “ಕಪ್ಪು ಬಿಳುಪಿನ ನಡುವೆ” ಚಿತ್ರದ ಕುರಿತು ಹೇಳಬೇಕೆಂದರೆ, “ಕಪ್ಪು ಬಿಳುಪನ್ನು” ಕತ್ತಲು, ಬೆಳುಕಿಗೆ ಹೋಲಿಸಬಹುದು.

ಪಾಸಿಟಿವ್ ಹಾಗೂ ನೆಗಟಿವ್ ಎನರ್ಜಿ ಅಂತಲೂ ಎನ್ನಬಹುದು. ಇದೊಂದು ಯೂಟ್ಯೂಬರ್ ಗಳ ಕುರಿತಾದ ಚಿತ್ರ. ಹಾರಾರ್ ಚಿತ್ರವೂ ಹೌದು. ಹಾಗಂತ ಇಲ್ಲಿ ಭಯ ಪಡಿಸುವ ದೆವ್ವಗಳಿಲ್ಲ. ಹಾರಾರ್ ಜಾನರ್ ನಲ್ಲೇ ಹೊಸಪ್ರಯತ್ನವಿದು. ಇನ್ನೂ ಕನಕಪುರದಿಂದ ಮೂವತ್ತು ಕಿಲೋಮೀಟರ್ ದೂರದ ದಟ್ಟ ಕಾನಾನದಲ್ಲಿ ಚಿತ್ರದ ಹೆಚ್ಚಿನ ಚಿತ್ರೀಕರಣವಾಗಿದೆ. ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಾಣವಾಗಿರುವ ಈ ಚಿತ್ರ ತೆರೆಗೆ ಬರಲು ಅಣಿಯಾಗಿದೆ. ಸದ್ಯದಲ್ಲೇ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ‌. ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ನಿರ್ಮಾಪಕರಿಗೆ ಹಾಗೂ ನನ್ನ ತಂಡಕ್ಕೆ ಧನ್ಯವಾದ ಎಂದರು.

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಪ್ರೇಕ್ಷಕರಿಗೆ ಉತ್ತಮ ಸಂದೇಶವಿರುವ ಚಿತ್ರ ಕೊಡುವ ಆಸೆಯಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಧರ್ಮೇಂದ್ರ.

ಚಿತ್ರದಲ್ಲಿ ಮೂರು ಹಾಡುಗಳಿದೆ. ಡಾ||ವಿ.ನಾಗೇಂದ್ರಪ್ರಸಾದ್ ಮೂರು ಹಾಡುಗಳನ್ನು ಬರೆದಿದ್ದಾರೆ. “ಕೆ.ಜಿ.ಎಫ್” ಖ್ಯಾತಿಯ ಸಂತೋಷ್ ವೆಂಕಿ ಹಾಗೂ ಶ್ರೀಧರ್ ಕಶ್ಯಪ್ ಹಾಡಿದ್ದಾರೆ. ಜೀ music ಸೌತ್ ಮೂಲಕ ಹಾಡುಗಳು ಬಿಡುಗಡೆಯಾಗಿದೆ ಎಂದರು ಸಂಗೀತ ನಿರ್ದೇಶಕ ರಿಶಾಲ್ ಸಾಯಿ.

ಚಿತ್ರದಲ್ಲಿ ನಟಿಸಿರುವ ಹಿರಿಯ ನಟ ಬಿರಾದಾರ್, ಹಾಸ್ಯ ನಟ ಹರೀಶ್, ನವೀನ್, ಮಾಹೀನ್ ಮತ್ತು ತೇಜಸ್ವಿನಿ ತಮ್ಮ ಪಾತ್ರಗಳ ಕುರಿತು ಮಾಹಿತಿ ನೀಡಿದರು. ಪ್ರಮುಖಪಾತ್ರದಲ್ಲಿ ಖ್ಯಾತ ನಟ ಶರತ್ ಲೋಹಿತಾಶ್ವ ಹಾಗೂ ನಾಯಕಿಯಾಗಿ ವಿದ್ಯಾಶ್ರೀ ಗೌಡ “ಕಪ್ಪು ಬಿಳುಪಿನ ನಡುವೆ” ಚಿತ್ರದಲ್ಲಿ ನಟಿಸಿದ್ದಾರೆ. ಲಿಂಗೇಗೌಡ ಹಾಗೂ ಶಣ್ಮಗಸುಂದರಂ ನಿರ್ಮಾಣದ ಉಸ್ತುವಾರಿ ಈ ಚಿತ್ರಕ್ಕಿದೆ.

error: Content is protected !!