Cini NewsMovie Review

ದುಷ್ಟರ ಸುಳಿಯಲ್ಲಿ ಪ್ರೇಮಿಗಳ ಪರದಾಟ (ಕೈವ ಚಿತ್ರವಿಮರ್ಶೆ- ರೇಟಿಂಗ್ : 3.5/5)

ರೇಟಿಂಗ್ : 3.5/5

ಚಿತ್ರ : ಕೈವ
ನಿರ್ದೇಶಕ : ಜಯತೀರ್ಥ
ನಿರ್ಮಾಪಕ : ರವೀಂದ್ರ ಕುಮಾರ್
ಸಂಗೀತ : ಅಜ್ಜನೀಶ್ ಲೋಕನಾಥ್
ಛಾಯಾಗ್ರಾಹಕಿ : ಶ್ವೇತ ಪ್ರಿಯ
ತಾರಾಗಣ : ಧನವೀರ್ ಗೌಡ, ಮೇಘ ಶೆಟ್ಟಿ , ಮಹಾಂತೇಶ್ , ರಮೇಶ್ ಇಂದಿರಾ, ಜಯರಾಮ್ ಕಾರ್ತಿಕ್, ದಿನಕರ್ ತೂಗುದೀಪ್, ನಂದ ಗೋಪಾಲ್ , ಉಗ್ರಂ ರವಿ , ರಾಘು ಶಿವಮೊಗ್ಗ , ಡಾ.ಜಾನ್ವಿ , ಶಿವಾಜಿ ರಾವ್ ಜಾದವ್, ಹಾಗೂ ಮುಂತಾದವರು…

ವಿಶ್ವ ವಿಖ್ಯಾತ ಬೆಂಗಳೂರು ಕರಗ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಚಾರವೇ. ತಿಗಳರ ಪೇಟೆಯಲ್ಲಿರುವ ದ್ರೌಪದಮ್ಮನ ಆರಾಧಕರು , ಕುಲಬಾಂಧವರು ತಮ್ಮದೇ ಶೈಲಿಯ ಆಚಾರ ವಿಚಾರವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲಿಯದೇ ಒಂದು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು 80ರ ದಶಕದಲ್ಲಿ ನಡೆದಂತಹ ಒಂದು ಕರಾಳ ಘಟನೆಗಳ ಸುತ್ತ ಭೂಗತ ದೊರೆಗಳ ಸಾಮ್ರಾಜ್ಯದಲ್ಲಿ ಪುಡಿ ರೌಡಿಗಳ ಅಟ್ಟಹಾಸದ ನಡುವೆ ಮುದ್ದಾದ ಪ್ರೇಮಿಗಳ ಬದುಕಿನಲ್ಲಿ ಎದುರಾಗುವ ದುರಂತ ಹಾದಿಯನ್ನ ಅಷ್ಟೇ ನೈಜವಾಗಿ ಕಟ್ಟಿಕೊಡುವ ಪ್ರಯತ್ನವಾಗಿ ಕಪಾಲಿ ಚಿತ್ರಮಂದಿರದ ಮೇಲೆ ಗಂಗಾರಾಮ್ ಬಿಲ್ಡಿಂಗ್ ಬಿದ್ದ ನೈಜ ದೃಶ್ಯಗಳ ಜೊತೆಗೆ ಕಥೆಗೆ ಪೂರಕವಾಗಿ ಅಳವಡಿಸಿಕೊಂಡು ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಕೈವ”. ತಂದೆ ತಾಯಿ ಇಲ್ಲದ ಅನಾಥ ಹುಡುಗ ಕೈವ (ಧನ್ವೀರ್ ಗೌಡ) ತನ್ನ ಗೆಳೆಯ (ಮಾಂತೇಶ್) ಜೊತೆ ವಾಸ ಮಾಡುತ್ತಾ ನೆಮ್ಮದಿ ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿರುವಾಗಲೇ ಧರ್ಮರಾಯನ ಸನ್ನಿಧಿಯಲ್ಲಿ ಅಚಾನಕ್ಕಾಗಿ ಕಾಣುವ ಮುದ್ದಾದ ಬೆಡಗಿ ಸಲ್ಮಾ ( ಮೇಘಾ ಶೆಟ್ಟಿ)ಳ ನೋಟಕ್ಕೆ ಮನಸೋತು ಆಕೆಯನ್ನು ಹಿಂಬಾಲಿಸುತ್ತಾನೆ.

ಸಲ್ಮಾ ತಂದೆಯ ಬಳಿ ಹಳೆಯ ರೇಡಿಯೋ ರಿಪೇರಿ ಮಾಡಿಸುವ ನೆಪದಲ್ಲಿ ಸಲ್ಮಾಳ ಸಂಪರ್ಕ ಪಡೆಯುವ ಕೈವ. ಮತ್ತೊಂದೆಡೆ ಮೂವರು ರೌಡಿ ಗೆಳೆಯರು (ನಂದಗೋಪಾಲ್ , ರಾಘು ಶಿವಮೊಗ್ಗ , ಉಗ್ರಂ ಮಂಜು) ಪೊಲೀಸಪ್ಪ ( ಶಿವಾಜಿ ರಾವ್ ಜಾದವ್) ಹಾಗೂ ( ಬಿ.ಎಂ.ಗಿರಿರಾಜ್) ನ ಸಹಾಯದೊಂದಿಗೆ ಡುಪ್ಲಿಕೇಟ್ ಟ್ರಾನ್ಸ್ಪೋರ್ಟ್ ಪರ್ಮಿಷನ್ , ಆಹಾರದಲ್ಲಿ ಕಲಬೆರಕೆ , ಕಳ್ಳ ಸಾಗಾಣಿಕೆಯಲ್ಲಿ ತೊಡಗಿಕೊಂಡು ಬಾರ್ ಗರ್ಲ್ ರೋಜಿಯನ್ನ ತನ್ನ ಕಪಿಮುಷ್ಠಿಯಲ್ಲಿ ಇಟ್ಟು ಕೊಂಡು ಹವಾ ಮೇಂಟೈನ್ ಮಾಡುತ್ತಿರುತ್ತಾರೆ.

ಆಗಿನ ಭೂಗತ ದೊರೆಗಳಾದ ರಾಮ ಲಾಲ್ (ದಿನಕರ್ ತೂಗುದೀಪ್) ಹಾಗೂ ದೇವರಾಜ್ (ಜಯರಾಮ್ ಕಾರ್ತಿಕ್) ಗೆ ಈ ರೌಡಿಗಳ ಆರ್ಭಟ ತಿಳಿದಿರುತ್ತದೆ. ಒಮ್ಮೆ ರಾಮ್ ಲಾಲ್ ಈ ಮೂವರಿಗೂ ಹಫ್ತಾ ನೀಡುವಂತೆ ವಾರ್ನಿಂಗ್ ಕೊಡುತ್ತಾನೆ. ಇದೇ ಸಮಯದಲ್ಲಿ ಮತ್ತೊಬ್ಬ ಡಾನ್ ಹಾಗೂ ಗರಡಿ ಮನೆ ಪೈಲ್ವಾನ್ (ರಮೇಶ್ ಇಂದಿರಾ) ಜೊತೆ ಗಲಾಟೆಯಾಗಿ ಜೈಲು ಶಿಕ್ಷೆ ಅನುಭವಿಸುವ ದೇವರಾಜ್. ಇದನ್ನೇ ಅಸ್ತ್ರವಾಗಿಸಿಕೊಂಡು ಈ ಮೂರು ಗೆಳೆಯರ ಗುಂಪು ಪೈಲ್ವಾನ್ ನನ್ನ ಹತ್ಯೆ ಮಾಡಲು ಸಂಚು ರೂಪಿಸುತ್ತಾರೆ.

ಮತ್ತೊಂದೆಡೆ ಈ ಮುದ್ದಾದ ಜೋಡಿ ಒಂದಷ್ಟು ಅಡೆತಡೆ ಇದ್ದರೂ ಪರಸ್ಪರ ಒಪ್ಪಿ ಮದುವೆ ಆಗಲು ನಿರ್ಧರಿಸಿ ತನ್ನ ಗೆಳೆಯನ ಮನೆಯಲ್ಲಿ ಜೊತೆಯಾಗಿ ಒಂದು ಫೋಟೋವನ್ನು ತೆಗೆಸಲು ಮುಂದಾಗುತ್ತಾರೆ. ಆಗಾಗ ಪೈಲ್ವಾನ್ ಕೂಡ ವಿಶ್ರಾಂತಿ ಪಡೆಯುತ್ತಾ ಮಸಾಜ್ ಮಾಡಿಸಿಕೊಳ್ಳಲು ಆ ಮನೆಗೆ ಬರುವುದು ವಾಡಿಕೆಯಾಗಿರುತ್ತದೆ. ಇದೇ ಸಮಯಕ್ಕೆ ಹೊಂಚು ಹಾಕಿ ಮೂವರು ದುಷ್ಟರು ಪೈಲ್ವಾನ್ ನನ್ನ ಹತ್ಯೆ ಮಾಡಲು ಮುಂದಾಗುತ್ತಾರೆ.

ಅದೇ ಸಮಯಕ್ಕೆ ಕಪಾಲಿ ಚಿತ್ರಮಂದಿರದ ಮೇಲೆ ಗಂಗಾರಾಮ್ ಬಿಲ್ಡಿಂಗ್ ಬಿದ್ದು ಜನರು ಸಾವು ನೋವಿನಲ್ಲಿ ನರಳುತ್ತಿರುತ್ತಾರೆ. ಸದಾ ಆಟೋ ಮೂಲಕ ಪ್ರಚಾರದಲ್ಲಿರುವ ಕೈವ ಗೆಳೆಯ ಈ ವಿಚಾರವನ್ನು ಪೈಲ್ವಾನ್ಗೆ ತಿಳಿಸಿ ಜನರಿಗೆ ಸಹಾಯ ಮಾಡಲು ಹೋಗುತ್ತಾರೆ. ಆದರೆ ಮನೆಯಲ್ಲಿರುವ ಮಾತು ಬಾರದ ಸಲ್ಮಾ ಈ ದುಷ್ಟರ ಕೈಗೆ ಸಿಗುತ್ತಾಳೆ , ಮುಂದೆ ಆಗುವ ದೊಡ್ಡ ದುರಂತ ಇಡೀ ಚಿತ್ರದ ಓಟದ ದಿಕ್ಕನೇ ಬದಲಿಸುತ್ತದೆ.
ಪೈಲ್ವಾನ್ ಕೊಲೆಯಾಗುತ್ತಾ… ಈ ಜೋಡಿ ಏನಾಗುತ್ತಾರೆ…
ಡಾನ್ ಗಳ ಕೈವಾಡ ಇದೆಯಾ..
ಮೂವರು ರೌಡಿಗಳು ಗತಿ… ಏನು ಎಂಬುದನ್ನ ತಿಳಿಯಬೇಕಾದರೆ ನೀವು ಕೈವ ಚಿತ್ರ ನೋಡಬೇಕು.

ನಿರ್ದೇಶಕ ಜಯತೀರ್ಥ ಒಂದು ನೈಜ್ಯ ಘಟನೆಯ ಸುತ್ತ ಎಣೆದಿರುವ ಕಥಾನಕ ರೋಚಕವಾಗಿದೆ. 80ರ ಕಾಲಘಟ್ಟ , ಆಗಿನ ವಾಸ್ತವತೆಗೆ ಪೂರಕವಾಗಿ ಕಂಡುಬರುವ ಪರಿಸರ, ನೈಜ ದೃಶ್ಯಾವಳಿಗಳ ಮೇಲೆ ಚೆಲ್ಲಿರುವ ಬೆಳಕು, ವೇಷಭೂಷಣ , ಮನಸ್ಥಿತಿಯ ರೂಪಕ ಗಮನ ಸೆಳೆಯುತ್ತದೆ. ಚಿತ್ರದ ಮೊದಲ ಭಾಗ ಪ್ರೀತಿ , ಧರ್ಮ , ರೌಡಿಗಳ ದುನಿಯಾ ಗಮನ ಸೆಳೆಯುವಂತಿದೆ. ಇನ್ನು ದ್ವಿತೀಯ ಭಾಗ ರಕ್ತದ ಮಡುವು , ನರಕ ದರ್ಶನ, ಸೇಡಿನ ತವಕ ತುಂಬಿಕೊಂಡು ಕ್ರೌರ್ಯವಾಗಿದೆ. ನಿರ್ದೇಶಕರ ಕಲ್ಪನೆಗೆ ಸೂಕ್ತ ಎನಿಸಿದರು ನೋಡಲು ಹಿಂಸೆ ಎನಿಸುತ್ತದೆ.

ಇಂತಹ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರ ಧೈರ್ಯವನ್ನು ಕೂಡ ಮೆಚ್ಚಲೇಬೇಕು. ಇನ್ನು ಚಿತ್ರದ ಹೈಲೈಟ್ ಅಂದರೆ ಮಹಿಳಾ ಛಾಯಾಗ್ರಹಾಕಿ ಶ್ವೇತಾಪ್ರಿಯ ರವರ ಕೈ ಚಳಕ ಸೊಗಸಾಗಿದೆ. ಅದೇ ರೀತಿ ಅಜಿನೀಶ್ ಲೋಕನಾಥ್ ಸಂಗೀತ , ಹಿನ್ನೆಲೆ ಸಂಗೀತ ಉತ್ತಮವಾಗಿದೆ. ಸೆಟ್ ವರ್ಕ್ ಸೇರಿದಂತೆ ತಾಂತ್ರಿಕ ಕೆಲಸವೂ ಕೂಡ ಗಮನ ಸೆಳೆಯುತ್ತದೆ.ನಾಯಕನಾಗಿ ಅಭಿನಯಿಸಿರುವ ಧನ್ವೀರ್ ಗೌಡ ಲುಕ್ ಖಡಕ್ ಆಗಿದ್ದು ಆಕ್ಷನ್ ದೃಶ್ಯವನ್ನು ಭರ್ಜರಿಯಾಗಿ ನಿರ್ವಹಿಸಿದ್ದಾರೆ. ಆದರೆ ಕೆಲವೊಂದು ಎಮೋಷನ್ ದೃಶ್ಯಗಳನ್ನ ನಿರ್ವಹಿಸಲು ಇನ್ನು ಶ್ರಮ ಪಡಬೇಕಿತ್ತು.

ಮುಂದಿನ ಚಿತ್ರಗಳಿಗೆ ಸರಿಪಡಿಸಿಕೊಂಡ್ರೆ ಉತ್ತಮ ನಟನಾಗಿ ನಿಲ್ಲಬಹುದು. ಇನ್ನು ನಾಯಕಿಯಾಗಿ ಅಭಿನಯಿಸಿರುವ ಮೇಘ ಶೆಟ್ಟಿ ಮಾತು ಬಾರದ ಮುಸ್ಲಿಂ ಹುಡುಗಿಯ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಇನ್ನು ಮೂವರು ಕಿರಾತಕರಾಗಿ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ ನಂದಗೋಪಾಲ್ , ಉಗ್ರಂ ಮಂಜು, ರಾಘು ಶಿವಮೊಗ್ಗ. ಅದೇ ರೀತಿ ನಾಯಕನ ಗೆಳೆಯನಾಗಿ ಮಾಂತೇಶ್ ಹಿರೇಮಠ ಕೂಡ ಗಮನ ಸೆಳೆಯುತ್ತಾರೆ. ಇನ್ನು ವಿಶೇಷವಾಗಿ ಭೂಗತ ದೊರೆಗಳ ಪಾತ್ರದಲ್ಲಿ ದಿನಕರ್ ತೂಗುದೀಪ್ ಹಾಗೂ ಜಯರಾಮ ಕಾರ್ತಿಕ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಅಷ್ಟೇ ಅದ್ಭುತವಾಗಿ ಪೈಲ್ವಾನ್ ಪಾತ್ರದಲ್ಲಿ ರಮೇಶ್ ಇಂದಿರಾ ಗಮನ ಸೆಳೆಯುತ್ತಾರೆ.

ಇನ್ನು ಬಾರ್ ಗರ್ಲ್ ರೋಸಿ ಪಾತ್ರಧಾರಿ ಡಾ. ಜಾನ್ವಿ , ಇನ್ಸ್ಪೆಕ್ಟರ್ ಪಾತ್ರಧಾರಿ ಅಶ್ವಿನ್ ಹಾಸನ್ ಕೂಡ ಸಿಕ್ಕ ಅವಕಾಶವನ್ನು ಅಚ್ಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಪೂರಕವಾಗಿ ಅಭಿನಯಿಸಿದ್ದಾರೆ. ಒಟ್ನಲ್ಲಿ ನೈಜ ಘಟನೆಗಳು , ಮಾಸ್ ಸಿನಿಮಾ ಪ್ರಿಯರಿಗೆ ಬಹುಬೇಗ ಇಷ್ಟವಾಗುವ ಈ ಚಿತ್ರವು ಮಕ್ಕಳು ಹೊರತುಪಡಿಸಿ ಎಲ್ಲರು ಒಮ್ಮೆ ನೋಡುವಂತಿದೆ.

 

error: Content is protected !!