Cini NewsMovie Review

ರೈತರ ಹಾಗೂ ಜಾತಿಯ ಬಗ್ಗೆ ಕಾಡುವ ಕಥೆ… ಕಾಟೇರ

ರೇಟಿಂಗ್ : 4/5
ಚಿತ್ರ : ಕಾಟೇರ
ನಿರ್ದೇಶಕ : ತರುಣ್ ಸುಧೀರ್ ನಿರ್ಮಾಪಕ : ರಾಕ್ ಲೈನ್ ವೆಂಕಟೇಶ್
ಸಂಗೀತ : ವಿ .ಹರಿಕೃಷ್ಣ ಛಾಯಾಗ್ರಹಕ :ಸುಧಾಕರ್ ತಾರಾಗಣ : ದರ್ಶನ್ ತೂಗುದೀಪ್ , ಆರಾಧನಾ ರಾಮ್, ಶೃತಿ , ಕುಮಾರ್ ಗೋವಿಂದ್, ಬಿರಾದರ್, ವಿನೋದ್ ಆಳ್ವ , ಮಾಸ್ಟರ್ ರೋಹಿತ್, ಜಗಪತಿ ಬಾಬು , ಅವಿನಾಶ್, ರವಿ ಚೇತನ್ ಹಾಗೂ ಮುಂತಾದವರು…

ಸಮಾಜದಲ್ಲಿ ಜಾತಿ ಸಂಘರ್ಷ , ಮೇಲು , ಕೀಳು, ಜೀತದ ಪದ್ಧತಿ, ದನಿಕಾ , ಬಡವ ಹೀಗೆ ಒಂದಷ್ಟು ಪರಿಪಾಠಲು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದನ್ನು ಎಳೆ ಎಳೆಯಾಗಿ ಒಂದು ಸೂಕ್ಷ್ಮ ರೀತಿಯಲ್ಲಿ ಶ್ರೀಮಂತರ ದಬ್ಬಾಳಿಕೆ, ಬಡವರ ನೋವು, ಅಸ್ಪೃಶ್ಯತೆಯ ಬದುಕು, ರೈತರ ಕಷ್ಟ , ಹಬ್ಬ , ಹರಿದಿನ , ಜಾತ್ರೆಯಲ್ಲಿ ಕೋಣ ಬಲಿ ಹೀಗೆ ಹಲವು ಸುಳಿಯ ನಡುವೆ ಜಾಗೃತಿ ಮೂಡಿಸುವ ಜೊತೆಗೆ ತಮ್ಮ ತಮ್ಮ ಕಸುಬನ್ನ ಗುರ್ತಿಸಿಕೊಳ್ಳೋಕೆ ಮಾಡಿರುವ ಈ ಜಾತಿ ವಿಚಾರ, ಭೂತಾಯಿ ಮಕ್ಕಳು ಉಳುವವನೇ ಒಡೆಯ ಎಂಬುವುದರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನದೊಂದಿಗೆ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಕಾಟೇರ”.

ತಾನಾಯಿತು ತನ್ನ ಕೆಲಸವಾಯಿತು ಎನ್ನುತ್ತಾ ಭೀಮನಹಳ್ಳಿಯಲ್ಲಿ ಕುಲುಮೆ ಮಾಡಿಕೊಂಡಿರುವ ಕಟ್ಟು ಮಸ್ತಿನ ಹೈದ ಕಾಟೇರ (ದರ್ಶನ್). ತಾಯಿ , ಅಕ್ಕ , ಭಾವ ಹಾಗೂ ತನ್ನೊಟ್ಟಿಗೆರುವ ಜನರು , ಯಾವುದೇ ಮುಚ್ಚು , ಕೊಡಲಿ ಬೇಕಿದ್ದರೂ ಕಾಟೇರನ ಕೈಯಲ್ಲಿ ಸಿದ್ಧವಾಗೋದು. ಊರಿನ ಜಮೀನ್ದಾರ ದೇವರಾಯ (ಜಗಪತಿ ಬಾಬು) ಹಳ್ಳಿ ಜನರ ಬದುಕನ್ನ ತನ್ನ ಮುಷ್ಠಿಯಲ್ಲಿ ಹಿಡಿದುಕೊಂಡು ಬಡವರ ಬೆಳೆಯಲ್ಲಿ ಬಹುತೇಕ ಪಾಲು ಕಸಿದುಕೊಂಡು ಮೆರೆಯುತ್ತಿರುತ್ತಾನೆ.

ಮತ್ತೊಂದೆಡೆ ಶಾನುಭೋಗರ ಮಗಳು ವಿದ್ಯಾವಂತೆ ಪ್ರಭ (ಆರಾಧನಾ ರಾಮ್). ಕಾಟೇರನ ಪ್ರೀತಿಯಲ್ಲಿ ಮುಳುಗಿರುತ್ತಾಳೆ. ಮೇಲು-ಕೀಳು , ದಬ್ಬಾಳಿಕೆ ಅಸ್ಪೃಶ್ಯತೆಯ ನಡುವೆಯೂ ಭೂಮಿ , ಬದುಕಿಗಾಗಿ ಹೋರಾಟ , ಬಡವರನ್ನ ಮಟ್ಟ ಹಾಕಲು ದನಿಕರ ಅರಸರ , ಇದರ ನಡುವೆ 1951ರಲ್ಲಿ ಕಾನೂನಿನಲ್ಲಿ ಆದಂತಹ ಕೆಲವೊಂದಷ್ಟು ತಿದ್ದುಪಡಿ ರೈತರ ಬದುಕಿಗೂ ಜೀವ ಬಂದಂತೆ ಆಗುತ್ತದೆ. ಇದರ ಹಿಂದೆಯೂ ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತಾ ಸಾಗಿದ್ದು, ಒಂದಷ್ಟು ಅವಘಡಗಳಿಗೆ ದಾರಿ ಮಾಡಿಕೊಟ್ಟು ರೋಚಕ ಘಟ್ಟಕ್ಕೆ ತಲುಪುತ್ತದೆ.
ಕಾಟೇರ ಎದುರಿಸುವ ಕಷ್ಟ ಏನು…
ಜಾತಿ ಸಂಘರ್ಷದ ಕಥೆ…
ಪ್ರಭಾ ಪ್ರೀತಿ ಏನಾಗುತ್ತೆ…
ರೈತರಿಗೆ ಭೂಮಿ ಸಿಗುತ್ತಾ…
ಈ ಎಲ್ಲಾ ವಿಚಾರ ತಿಳ್ಕೊಬೇಕಾದರೆ ಒಮ್ಮೆ ಕಾಟೇರ ಚಿತ್ರ ನೋಡಬೇಕು.

ಇಡೀ ಚಿತ್ರವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಆವರಿಸಿ ಕೊಂಡಿದ್ದಾರೆ. ಎರಡು ವಿಭಿನ್ನ ಗೆಟಪ್ ನಲ್ಲಿ ಗಮನ ಸೆಳೆದಿದ್ದು, ಅದರಲ್ಲೂ ವಯಸ್ಸಾದ ಪಾತ್ರವನ್ನು ನಿರ್ವಹಿಸಿರುವ ರೀತಿ ಅದ್ಭುತವಾಗಿದೆ. ಅವರ ಚಿತ್ರ ಪಯಣದ ಹಾದಿಯಲ್ಲಿ ಸದಾ ನೆನಪಿನಲ್ಲಿ ಉಳಿಯುವ ಚಿತ್ರ ಇದು ಒಂದಾಗಲಿದೆ. ಇಂತಹ ಒಂದು ಪಾತ್ರವನ್ನು ಆಯ್ಕೆ ಮಾಡಿಕೊಂಡಿರುವುದೇ ವಿಶೇಷ. ದಲಿತರು , ರೈತರ ಪರವಾಗಿ ಧ್ವನಿ ಎತ್ತಿ ಸಮಾಜದಲ್ಲಿ ಜಾತಿ ಪದ್ಧತಿ ನಿರ್ಮೂಲನೆಗೆ ಹೋರಾಡಿರುವ ರೀತಿ ಅದ್ಭುತವಾಗಿದ್ದು , ಆಕ್ಷನ್ ದೃಶ್ಯದಳಂತೂ ಒಂದಕ್ಕಿಂತ ಒಂದು ಅಬ್ಬರಿಸಿದ್ದಾರೆ. ಒಟ್ನಲ್ಲಿ ಡಿ ಬಾಸ್ ಫ್ಯಾನ್ಸ್ ಜೊತೆಗೆ ಎಲ್ಲರಿಗೂ ಇಷ್ಟವಾಗುವಂಥ ಪಾತವನ್ನು ನಿರ್ವಹಿಸಿ ಮನಸನ್ನ ಗೆದ್ದಿದ್ದಾರೆ.

ಇನ್ನು ನಾಯಕಿಯಾಗಿ ಅಭಿನಯಿಸಿರುವ ಆರಾಧನಾ ರಾಮ್ ಪ್ರಥಮ ಪ್ರಯತ್ನದಲ್ಲಿ ಬಹಳ ಶ್ರಮಪಟ್ಟು ಅಭಿನಯಿಸಿದ್ದಾರೆ. ಡಾನ್ಸ್ ಸ್ಟೆಪ್ಸ್ ಬಹಳ ಸರಾಗವಾಗಿ ಹಾಕಿರುವ ಈ ಪ್ರತಿಭೆ ಭವಿಷ್ಯದಲ್ಲಿ ಉತ್ತಮ ನಟಿಯಾಗುವ ಎಲ್ಲಾ ಲಕ್ಷಣವೂ ಕಾಣುತ್ತದೆ. ಇನ್ನು ವಿಶೇಷವಾಗಿ ನಟಿ ಶ್ರುತಿ ಹಾಗೂ ರವಿ ಚೇತನ್ ಅಭಿನಯದ ದೃಶ್ಯವೊಂದು ಮನ ಮಿಡಿಯುವಂತೆ ಮೂಡಿಬಂದಿದೆ.

ಇನ್ನು ತಮ್ಮ ಏರು ಧ್ವನಿಯ ಗತ್ತಿನಲ್ಲೇ ಅದ್ಭುತವಾಗಿ ನಟಿಸಿದ್ದಾರೆ ಜಗಪತಿ ಬಾಬು. ಇನ್ನುಳಿದಂತೆ ಅಭಿನಯಿಸಿರುವ ಕುಮಾರ್ ಗೋವಿಂದ್ , ವಿನೋದ್ ಆಳ್ವ, ಬಿರಾದಾರ್, ಮಾಸ್ಟರ್ ರೋಹಿತ್ , ಅವಿನಾಶ್ ಸೇರಿದಂತೆ ಎಲ್ಲರು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಇಂತಹ ಒಂದು ವಿಭಿನ್ನ ಚಿತ್ರವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಪ್ರಯತ್ನ ಮಾಡಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಸಾಹಸವನ್ನು ಮೆಚ್ಚಲೇಬೇಕು. ಇಡೀ ತಂಡವನ್ನು ಕಟ್ಟಿಕೊಂಡು ಒಂದಷ್ಟು ಸೂಕ್ಷ್ಮ ವಿಚಾರವನ್ನು ಎಲ್ಲರ ಗಮನಕ್ಕೆ ತರುವ ಹಾಗೆ ಬೆಳಕು ಚೆಲ್ಲಿರುವ ನಿರ್ದೇಶಕ ತರುಣ್ ಸುಧೀರ್ ರವರ ಸಾಹಸ ಅದ್ಭುತವಾಗಿದೆ. ಚಿತ್ರಕಥೆಯ ಜೊತೆಗೆ ಸಂಭಾಷಣೆ ಈ ಚಿತ್ರದಲ್ಲಿ ಹೈಲೆಟ್ ಆಗಿ ಕಾಣುತ್ತದೆ.

ಆಯ್ಕೆ ಮಾಡಿಕೊಂಡಿರುವ ಕಥೆ ಪ್ರಸ್ತುತ ಸಂದರ್ಭಕ್ಕೆ ಎಷ್ಟು ಸೂಕ್ತ ಅನಿಸಿದರು, ನೋಡುವಾಗ ಗಾಢವಾದ ಪರಿಣಾಮ ಬೀರದಂತಿದೆ. ಈ ಚಿತ್ರದ ಸಂಗೀತಕ್ಕಿಂತ ಹಿನ್ನೆಲೆ ಸಂಗೀತ ಹೆಚ್ಚು ಗಮನ ಸೆಳೆಯುತ್ತದೆ. ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿ ಮೂಡಿ ಬಂದಿದೆ. ಇನ್ನು ಕೆಲವು ಸೆಟ್ ಗಳ ವಿಚಾರ ಬಗ್ಗೆ ಹೆಚ್ಚು ಗಮನ ಹರಿಸಬೇಕಿತ್ತು , ಚಿತ್ರಕಥೆ ಹಾಗೂ ತಾಂತ್ರಿಕವಾಗಿ ಸಿನಿಮಾ ಉತ್ತಮವಾಗಿ ಮೂಡಿ ಬಂದಿದ್ದು , ಎಲ್ಲರೂ ಒಮ್ಮೆ ನೋಡುವಂತ ಚಿತ್ರವಾಗಿ ಹೊರಬಂದಿದೆ.

 

error: Content is protected !!