ಮಹಿಳೆಯರ ಕುತ್ತಿಗೆ ಹಗ್ಗದ ಕುಣಿಕೆಗೆ (ಹಗ್ಗ – ಚಿತ್ರವಿಮರ್ಶೆ : ರೇಟಿಂಗ್ : 3 /5)
ಚಿತ್ರ : ಹಗ್ಗ
ನಿರ್ದೇಶಕ : ಅವಿನಾಶ್. ಎನ್
ನಿರ್ಮಾಪಕ : ರಾಜ್ ಭಾರದ್ವಾಜ್
ಸಂಗೀತ : ಮ್ಯಾಥ್ಯೂಸ್ ಮನು
ಛಾಯಾಗ್ರಹಣ : ಸಿನಿಟೆಕ್ ಸೂರಿ
ತಾರಾಗಣ : ಅನು ಪ್ರಭಾಕರ್ , ವೇಣು.ಸಿ , ಹರ್ಷಿಕಾ ಪೂಣಚ್ಚ , ಪ್ರಿಯ ಹೆಗಡೆ, ಅವಿನಾಶ್ , ತಬ್ಲಾ ನಾಣಿ , ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಸದಾನಂದ ಹಾಗೂ ಮುಂತಾದವರು…
ಸಸ್ಪೆನ್ಸ್ , ಥ್ರಿಲ್ಲರ್ , ಹಾರರ್ ಚಿತ್ರಗಳ ಕಥಾನಕದ ಹಿಂದೆ ಒಂದು ಕಾರಣ ಇದ್ದೇ ಇರುತ್ತದೆ. ಅದು ಇಡೀ ಓಟದ ಕೇಂದ್ರ ಬಿಂದುವಾಗಿ ಗಮನ ಸೆಳೆಯುತ್ತದೆ. ಅಂತದ್ದೇ ಒಂದು ತಲತಲಾಂತರಗಳ ಹಿಂದೆ ಹೆಣ್ಣಿನ ಕಠೋರ ಸಾವಿನ ಸುತ್ತ ಸಾಗುವ ಹಾದಿಯಲ್ಲಿ ಊರಿನ ಜನರು ಅನುಭವಿಸುವ ಕಷ್ಟಗಳ ನಡುವೆ ಪ್ರೀತಿ , ಹಾಸ್ಯ , ನೋವು , ನಲುವಿನ ಬೆಸುಗೆಯಲ್ಲಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಹಗ್ಗ”.
ದಟ್ಟ ಅರಣ್ಯದ ನಡುವೆ ನಾಗೇಕೊಪ್ಲು ಎಂಬ ಸುಂದರ ಊರು. ಆದರೆ ಆ ಊರಿನಲ್ಲಿ ಹೆಣ್ಣು ಮಗು ಹುಟ್ಟಿದರೆ ಮನೆಯ ಅತ್ತೆ ನೇಣು ಬಿಗಿದ ರೀತಿಯಲ್ಲಿ ಸುಟ್ಟು ಹೋಗಿರುತ್ತಾಳೆ. ಇದು ಊರಿಗೆ ದೊಡ್ಡ ಸಂಕಷ್ಟವನ್ನು ತಂದಿರುತ್ತದೆ. ಊರ ಗೌಡ (ಅವಿನಾಶ್) ಗ್ರಾಮಸ್ಥರ ನೋವಿಗೆ ಸ್ಪಂದಿಸುತ್ತಾ ಸೂಕ್ತ ಪರಿಹಾರಕ್ಕಾಗಿ ದಾರಿ ಹುಡುಕುತ್ತಿರುವಾಗ ಅವರ ಸುಪುತ್ರ ರಾಮ (ಸಿ .ವೇಣು) ಪಂಚಾಯತಿ ಸ್ಥಳಕ್ಕೆ ಬರುತ್ತಾನೆ. ಆದರೆ ಅವನ ಗಮನ ಊರಿನ ಸುಂದರಿ ಮಲ್ಲಿ (ಪ್ರಿಯ ಹೆಗಡೆ) ಮೇಲಿರುತ್ತದೆ.
ಇವರಿಬ್ಬರ ಪ್ರೀತಿ ತಿಳಿಯುವ ಮಲ್ಲಿ ತಾಯಿ ಊರು ಬಿಡುತ್ತಾಳೆ. ಮಲ್ಲಿ ಗುಂಗಿನಲ್ಲಿರುವ ರಾಮನನ್ನು ಸೋದರ ಮಾವ ಪಿಪಿ (ತಬಲ ನಾಣಿ) ಬಳಿ ತಾಯಿ ಕಳಿಸುತ್ತಾಳೆ. ಮಾವ ನೀಡುವ ಐಡಿಯಾದೊಂದಿಗೆ ತನ್ನೂರಿನ ಸಮಸ್ಯೆ ಹೇಳುವುದರ ಜೊತೆಗೆ ಹುಡುಗಿಯನ್ನ ಪಟಾಯಿಸಲು ಹೋಗಿ ಟಿವಿಯಲ್ಲಿ ಕೆಲಸ ಮಾಡುವ ರಿತಿಕಾ ( ಹರ್ಷಿಕಾ ಪೂಣಚ್ಚ ) ಭೇಟಿ ಮಾಡಿ ಅವಳ ನೋಟಕ್ಕೆ ಮನಸೋಲ್ಲುತ್ತಾನೆ.
ರಾಮನ ಜೊತೆ ಊರಿಗೆ ಬರುವ ರಿತಿಕಾ ಗ್ರಾಮಸ್ಥರಿಂದ ಮಾಹಿತಿ ಯನ್ನು ಪಡೆಯುತ್ತಾಳೆ. ಮಾಟ , ಮಂತ್ರದ ವಿಚಾರ ತಿಳಿದು ಸತ್ಯದ ಹಿಂದೆ ಬೆನ್ನಟ್ಟಿ ಹೋಗುವಾಗ ಕಾಡಿನೊಳಗೆ ಕ್ಷುದ್ರ ದೇವತೆಯ ಪೂಜೆಯ ನಡುವೆ ದುಷ್ಟ ಆತ್ಮಗಳ ಸೆರೆಯ ಹಿಂದಿರುವ ಕಠೋರ ಸತ್ಯ ಸಂಗತಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಜಮೀನ್ದಾರ್ ಕುಟುಂಬದ ಶ್ರೀಮಂತೆ ತ್ರಿಚಂಡಕೇಶ್ವರಿ ಆತನ ಮಗ ಹಾಗೂ ಸೊಸೆ ಹೀಗೆ ಇದರಿಂದ ಇರುವ ರೋಚಕ ತಿರುವುಗಳು ಮೈ ಜುಮ್ಮಿನಸುವ ಹಂತಕ್ಕೆ ತಂದು ನಿಲ್ಲಿಸುತ್ತದೆ.
ಹಗ್ಗದ ಹಿಂದಿರುವ ಸತ್ಯ ಏನು..
ಮಹಿಳೆಯರೇ ಬಲಿ ಯಾಕೆ…
ರಾಮ , ರಿತಿಕಾಗೆ ಸಿಗುವ ಸಾಕ್ಷಿ ಏನು..
ಹೆಣ್ಣಿನ ಶಕ್ತಿ ಏನು…
ಕ್ಲೈಮ್ಯಾಕ್ಸ್ ಉತ್ತರ…
ಇದೆಲ್ಲದಕ್ಕೂ ಉತ್ತರ ಒಮ್ಮೆ ಹಗ್ಗ ಚಿತ್ರ ನೋಡಬೇಕು.
ಈ ಚಿತ್ರದ ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ವಿಭಿನ್ನವಾಗಿದೆ. ಆದರೆ ಚಿತ್ರಕಥೆ ಶೈಲಿ ಇನ್ನು ಗಟ್ಟಿಗೊಳಿಸಬಹುದಿತ್ತು. ಮೊದಲ ಭಾಗಕ್ಕಿಂತ ದ್ವಿತೀಯ ಭಾಗ ಗಮನ ಸೆಳೆಯಲಿದ್ದು , ಅದರಲ್ಲೂ ಫ್ರೀ ಕ್ಲೈಮ್ಯಾಕ್ಸ್ ರೋಮಾಂಚಕಾರಿ ಯಾಗಿದೆ. ಲಾಜಿಕ್ ಇಲ್ಲದೆ ಮ್ಯಾಜಿಕ್ ಸುತ್ತ ಹೆಚ್ಚು ಸಾಗಿದ್ದಾರೆ. ಮೊದಲ ಪ್ರಯತ್ನದಲ್ಲೇ ವಿ.ಎಫ್.ಎಕ್ಸ್ ಕೆಲಸಗಳ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ.
ಇನ್ನಷ್ಟು ಪರಿಪಕ್ವತೆ ಮಾಡಿಕೊಂಡರೆ ಮುಂದಿನ ಚಿತ್ರಗಳಿಗೆ ಅನುಕೂಲ ವಾಗುತ್ತದೆ. ಇಂತಹ ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕರ ಧೈರ್ಯವನ್ನು ಕೂಡ ಮೆಚ್ಚಲೇಬೇಕು. ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ. ಅದೇ ರೀತಿ ಸಂಗೀತಕ್ಕಿಂತ ಹಿನ್ನೆಲೆ ಸಂಗೀತ ಅಬ್ಬರಿಸಿದೆ. ಗ್ರಾಫಿಕ್ಸ್ , ಸಂಕಲನ ಕೆಲಸ ಉತ್ತಮವಾಗಿ ಮೂಡಿ ಬಂದಿದೆ. ಹಾಗೆಯೇ ಮೇಕಪ್ , ವೇಷ ಭೂಷಣ , ಸೆಟ್ ಎಲ್ಲವೂ ಕಥೆಗೆ ಪೂರಕವಾಗಿ ಕಂಡಿದೆ. ನಟಿ ಅನುಪ್ರಭಾಕರ್ ಸಾವಿತ್ರಿ ಎಂಬ ಜಮೀನ್ದಾರ್ ಸೊಸೆಯ ಪಾತ್ರದ ಜೊತೆಗೆ ಮೈ ಜುಮ್ ಎನಿಸುವಂತೆ ಕಾಣಿಸಿಕೊಂಡಿದ್ದಾರೆ.
ಇನ್ನು ಹೆಚ್ಚಾಗಿ ಇವರ ಪಾತ್ರವನ್ನು ಬಳಸಿಕೊಳ್ಳಬಹುದಿತ್ತು. ಇನ್ನು ನಾಯಕನಾಗಿ ವೇಣು. ಸಿ ಮೊದಲ ಪ್ರಯತ್ನದಲ್ಲಿ ಶ್ರಮಪಟ್ಟು ಅಭಿನಯಿಸಿದ್ದು , ಆಕ್ಷನ್ ಸನ್ನಿವೇಶಕ್ಕೆ ಸೈ ಎನ್ನುವಂತೆ ನಿಭಾಯಿಸಿದ್ದಾರೆ. ಇನ್ನು ಇಡೀ ಚಿತ್ರದ ಹೈಲೆಟ್ ಅಂದರೆ ನಟಿ ಭವಾನಿ ಪ್ರಕಾಶ್ ಅಭಿನಯ. ಜಮೀನ್ದಾರ್ ಕುಟುಂಬದ ಅತ್ತೆಯಾಗಿ , ಆತ್ಮದ ಎದುರು ಮಾಟಗಾತಿಯಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ವೇಷಭೂಷಣ , ಮೇಕಪ್ ಗೆ ತಕ್ಕನಾದಂತಹ ಹಾವಭಾವ ಗಮನ ಸೆಳೆದಿದ್ದಾರೆ.
ಇನ್ನು ವಾಹಿನಿಯ ವರದಿಗಾರ್ತಿ ಯಾಗಿ ಹರ್ಷಿಕ ಹರ್ಷಿಕಾ ಪೂಣಚ್ಚ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮತ್ತೊಬ್ಬ ನಟಿ ಪ್ರಿಯಾ ಹೆಗ್ಡೆ ಕೂಡ ಲವಲವಿಕೆಯಿಂದ ನಟಿಸಿದ್ದಾರೆ. ಪಂಚಿಂಗ್ ಡೈಲಾಗ್ ಮೂಲಕ ಹಾಸ್ಯ ಸನ್ನಿವೇಶವನ್ನು ತಬಲ ನಾಣಿ ನಿಭಾಯಿಸಿದ್ದು , ಕೆಲವು ಸಂದರ್ಭವು ಅನಗತ್ಯ , ಅತಿರೇಕಾ ಅನಿಸುತ್ತದೆ. ನಾಯಕನ ತಂದೆಯಾಗಿ ಅವಿನಾಶ್ , ತಾಯಿಯಾಗಿ ಸುಧಾ ಬೆಳವಾಡಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಧಾರಿಗಳು ಓಟಕ್ಕೆ ಉತ್ತಮ ಸಾಥ್ ನೀಡಿದ್ದು, ಈ ಚಿತ್ರದಲ್ಲಿ ಹೆಣ್ಣು ಮಗು ಎಂಬ ತತ್ಸಾರ , ಧ್ವೇಷದ ಕುರಿತ ಎಳೆಯ ನಡುವೆ ಕುತೂಹಲ ಮೂಡಿಸುವ ಥ್ರಿಲ್ಲರ್ , ಹಾರರ್ , ಆಕ್ಷನ್ ಚಿತ್ರ ಇದಾಗಿದ್ದು , ಒಮ್ಮೆ ನೋಡುವಂತಿದೆ.